ಸುಗ್ರಿವಾಜ್ಞೆ ಹೊರಡಿಸಲು ಆಗ್ರಹಿಸಿ ಪರಿಶಿಷ್ಟ ನೌಕರರಿಂದ ಪೋಸ್ಟ್‌ಕಾರ್ಡ್ ಚಳವಳಿ

Update: 2017-06-05 06:09 GMT

ಬೆಂಗಳೂರು, ಜೂ. 5: ಪರಿಶಿಷ್ಟರ ಭಡ್ತಿ ಮೀಸಲಾತಿ ಸಂರಕ್ಷಣೆಗಾಗಿ ರಾಜ್ಯ ಸರಕಾರ ಕೂಡಲೇ ಸುಗ್ರಿವಾಜ್ಞೆ ಹೊರಡಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಪೋಸ್ಟ್ ಕಾರ್ಡ್ ಚಳವಳಿ ಹಮ್ಮಿಕೊಳ್ಳಲು ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ತೀರ್ಮಾನಿಸಿದೆ.

ಇಲ್ಲಿನ ಸ್ವಾತಂತ್ರ ಉದ್ಯಾನವನದಲ್ಲಿ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್ ಅಧ್ಯಕ್ಷತೆಯಲ್ಲಿ ನಡೆದ ನೌಕರರ ಕೇಂದ್ರ ಸಮನ್ವಯ ಸಮಿತಿ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ, ಭಡ್ತಿ ಮೀಸಲಾತಿ ಸಂರಕ್ಷಣೆಗಾಗಿ ಸುಗ್ರವಾಜ್ಞೆ ಹೊರಡಿಸಲು ಆಗ್ರಹಿಸಿ ಜಿಲ್ಲಾ-ತಾಲೂಕು ಮಟ್ಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಪರ ಮುಖ್ಯ ಕಾರ್ಯದರ್ಶಿ ರತ್ನಪ್ರಭ ನೇತೃತ್ವದ ಭಡ್ತಿ ಮೀಸಲಾತಿ ಪರಿಶೀಲನಾ ಸಮಿತಿ ಸದಸ್ಯ ಶಿವರುದ್ರಪ್ಪ ಮಾತನಾಡಿ, ಸರಕಾರದ ಬೇಜವಾಬ್ದಾರಿಯಿಂದ ಭಡ್ತಿ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿ ಬಂದಿದೆ. ಪರಿಶಿಷ್ಟ ನೌಕರರ ಹಿಂಭಡ್ತಿಗೆ ಕೋರ್ಟ್ ನಿರ್ದೇಶನ ನೀಡಿಲ್ಲ. ಆದರೆ, ಕೆಲ ಜಾತಿವಾದಿಗಳು ಪರಿಶಿಷ್ಟರ ನೌಕರರ ಹಿಂಭಡ್ತಿಗೆ ಆಗ್ರಹಿಸುತ್ತಿದ್ದಾರೆಂದು ಹೇಳಿದರು.

ಪರಿಶಿಷ್ಟರಿಗೆ ಅನ್ಯಾಯವಾಗಿದೆ ಎಂದು ಸರಕಾರಿ ಭಡ್ತಿ ಮೀಸಲಾತಿ ಸೌಲಭ್ಯ ಕಲ್ಪಿಸಿತ್ತು. ಇದೀಗ ಕೋರ್ಟ್ ತೀರ್ಪಿನ ನೆಪದಲ್ಲಿ ಅದನ್ನು ಕಸಿದುಕೊಳ್ಳಲು ಮುಂದಾಗಿದ್ದು, ದಲಿತರ ನೌಕರರಿಗೆ ದಂಡಿಸಲು ಹೊರಟಿಸಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಕೋರ್ಟ್ ತೀರ್ಪಿನ ನೆಪದಲಿ ಸರಕಾರ ಹಿಂಭಡ್ತಿ ಮೂಲಕ ದಲಿತ ನೌಕರರನ್ನು ಅವಮಾನಿಸಲು ಮುಂದಾಗಬಾರದು. ಒಂದು ವೇಳೆ ಆ ಕೆಲಸಕ್ಕೆ ಕೈಹಾಕಿದರೆ ಅದರ ವಿರುದ್ಧ ಭಡ್ತಿ ಮೀಸಲಾತಿ ಪಡೆದ ನೌಕರರು ಸ್ವಯಂ ಹಿಂಭಡ್ತಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಶಿವರುದ್ರಪ್ಪ ಎಚ್ಚರಿಕೆ ನೀಡಿದರು.

ದನ ಮತ್ತು ದನದ ಮಾಂಸದ ವಿಷಯ ಇಂದು ರಾಷ್ಟ್ರೀಯ ಸಮಸ್ಯೆಯಾಗಿದೆ. ಆದರೆ, ಈ ದೇಶದ ದಲಿತರು, ಶೋಷಿತರು ಮತ್ತವರ ಸಮಸ್ಯೆಗಳು ಎಂದಿಗೂ ಸಮಸ್ಯೆಯಾಗಿ ಕಾಣುತ್ತಿಲ್ಲ. ಇದರ ಹಿಂದಿನ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಶೋಷಣೆಯ ಸುಳಿಗೆ ಸಿಲುಕಿರುವ ಪರಿಶಿಷ್ಟರನ್ನು ರಾಜಕೀಯ ಸ್ವಾರ್ಥಕ್ಕಾಗಿ ಹಿಂದೂಗಳೆಂದು ಗುರುತಿಸಲಾಗುತ್ತಿದೆ. ಆದರೆ, ಜಾತಿ ಹೆಸರಿನಲ್ಲಿ ತುಳಿಯುತ್ತಿರುವ ಹಿಂದೂಧರ್ಮದ ಗೊಡವೆಯೇ ನಮಗೆ ಬೇಡವೆಂದು ಡಾ.ಅಂಬೇಡ್ಕರ್ ಬೌದ್ಧದಮ್ಮಕ್ಕೆ ಮತಾಂತರವಾದರು. ಅವರ ದಾರಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕೆಂದು ಕರೆ ನೀಡಿದರು.

ಸಮನ್ವಯ ಸಮಿತಿಯ ಡಾ.ಎಸ್.ವಿಜಯಕುಮಾರ್, ದೇವಿರಮ್ಮ, ಭಾಗ್ಯ, ಮಂಜುಳಾ, ಎ.ಎಲ್.ಸತ್ಯ ನಾರಾಯಣ, ಆರ್.ಮೋಹನ್, ವೆಂಕಟೇಶ ಮೂರ್ತಿ, ರಾಹುಲ್ ಮೈತ್ರಿ, ಶಿವಕುಮಾರ್, ಭಂತೇಜಿ ದಮ್ಮನಾಳ್, ಹನುಮಂತ ರಾಯಪ್ಪ, ಶ್ರೀನಿವಾಸ್ ಸೇರಿ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News