ಉತ್ತರ ಪ್ರದೇಶ ಬಿಟ್ಟು ಆಂಧ್ರ ಪ್ರದೇಶಕ್ಕೆ ಅಖಿಲೇಶ್ ಯಾದವ್ ?

Update: 2017-06-05 07:24 GMT

ಗುಂಟೂರು, ಜೂ.5: ಆಂಧ್ರ ಪ್ರದೇಶದ ಗುಂಟೂರಿಗೆ ರವಿವಾರ ಭೇಟಿ ನೀಡಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಲ್ಲಿ ಅವರಿಗೆ ಜನರು ತೋರಿಸಿದ ಪ್ರೀತಿ ಮತ್ತು ಅಭಿಮಾನಕ್ಕೆ ಸಂಪೂರ್ಣವಾಗಿ ಮನಸೋತಿದ್ದು, ತಾವು ಉತ್ತರ ಪ್ರದೇಶ ಬಿಟ್ಟು ಆಂಧ್ರ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬಹುದು ಎಂದು ತಮಾಷೆಯಾಗಿ ಹೇಳಿದ್ದಾರೆ.

‘‘ಆಂಧ್ರ ಪ್ರದೇಶಕ್ಕೆ ಇದು ನನ್ನ ಪ್ರಥಮ ಭೇಟಿಯಾಗಿದ್ದರೂ ಜನರು ನನ್ನನ್ನು ಚೆನ್ನಾಗಿ ಗುರುತಿಸಿದ್ದಾರೆ ಹಾಗೂ ಪ್ರೀತಿ ಅಭಿಮಾನ ತೋರಿಸಿದ್ದಾರೆ. ಉತ್ತರ ಪ್ರದೇಶ ತ್ಯಜಿಸಿ ಆಂಧ್ರ ಪ್ರದೇಶಕ್ಕೆ ನಾನು ಬರಬೇಕಾಗಿದೆಯೇನೋ,’’ ಎಂದು ಗುಂಟೂರಿನಲ್ಲಿ ಕಾಂಗ್ರೆಸ್ ರವಿವಾರ ಸಂಜೆ ಆಯೋಜಿಸಿದ್ದ ಪ್ರತ್ಯೇಕ ಹೊಡ ಭರೋಸ ಸಭಾ ಉದ್ದೇಶಿಸಿ ಮಾತನಾಡುತ್ತಾ ಅಖಿಲೇಶ್ ಹೇಳಿದರು.

‘‘ನಿಮ್ಮ ಪ್ರೀತಿಯನ್ನು ನಾನು ಮರೆಯುವುದಿಲ್ಲ. ನಾನು ಮತ್ತು ರಾಹುಲ್ ಜಿ ನಿಮ್ಮ ಕಲ್ಯಾಣಕ್ಕಾಗಿಯೇ ಇಲ್ಲಿಗೆ ಆಗಮಿಸಿದ್ದೇವೆ. ದೇಶಕ್ಕೆ ಅಚ್ಛೇ ದಿನ್ ಭರವಸೆ ನೀಡಿದವರಿಂದ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ನಾವು ಆಗ್ರಹಿಸುತ್ತೇವೆ,’’ ಎಂದರು.

‘‘ಮೋದೀ ಜಿ ನೀವು ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಕ್ಲೀನ್ ಇಂಡಿಯಾ ಎಂದು ಹೇಳುತ್ತೀರಿ. ಆದರೆ ಆಂಧ್ರ ರಾಜ್ಯವನ್ನು ಯಾವಾಗ ಅಭಿವೃದ್ಧಿಗೊಳಿಸುತ್ತೀರಿ ?’’ ಎಂದು ಅವರು ಪ್ರಶ್ನಿಸಿದರು.

ರಾಜ್ಯದ ಆಡಳಿತ ಟಿಡಿಪಿಯ ಚುನಾವಣಾ ಚಿಹ್ನೆಯೂ ಸೈಕಲ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ನಾಯಕ, ‘‘ರಾಹುಲ್ ಮತ್ತು ತಾವು ಮಾತ್ರ ಸೈಕಲನ್ನು ವೇಗವಾಗಿ ಓಡಿಸಬಲ್ಲೆವು,’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News