ಅಘೋಷಿತ ತುರ್ತುಪರಿಸ್ಥಿತಿ

Update: 2017-06-06 04:11 GMT

ಚೂರಾಗಿ ಬಿದ್ದಿದ್ದ ಹುಲಿಯ ಎಲುಬುಗಳನ್ನು ಜೋಡಿಸಿ, ಬಳಿಕ ಅದೇ ಹುಲಿಗೆ ಬಲಿಯಾದ ಬುದ್ಧಿವಂತ ಪಂಡಿತರ ಕತೆಯನ್ನು ನಾವು ಬಾಲ್ಯದಿಂದಲೇ ಓದುತ್ತಾ ಬಂದಿದ್ದೇವೆ. ಇಂದು ಆ ಕತೆ ಭಾರತದ ವರ್ತಮಾನವಾಗಿ ನಮ್ಮನ್ನು ನುಂಗಲು ಬಾಯಿ ತೆರೆದು ನಿಂತಿದೆ. ಮನುಚಿಂತನೆ ಮತ್ತು ಸರ್ವಾಧಿಕಾರ ಒಂದೇ ನಾಣ್ಯದ ಎರಡು ಮುಖಗಳು. ಈ ದೇಶ ಸ್ವಾತಂತ್ರ ಪಡೆದದ್ದು ಬರೇ ಬ್ರಿಟಿಷರಿಂದ ಮಾತ್ರವಲ್ಲ, ತಲೆತಲಾಂತರಗಳಿಂದ ದೇಶವನ್ನು ಆಳುತ್ತಿದ್ದ ಮನುಚಿಂತನೆಯಿಂದಲೂ ಬಿಡುಗಡೆಯನ್ನು ಪಡೆದು, ಸಂವಿಧಾನದ ಮೂಲಕ ತನಗೆ ತಾನೇ ದೊರೆ ಎಂದೆನಿಸಿಕೊಂಡಿತು. ಬ್ರಿಟಿಷರು ಬರುವ ಮೊದಲೇ ಈ ದೇಶದಲ್ಲಿ ಬೀಡು ಬಿಟ್ಟಿದ್ದ ಜಾತೀಯತೆಯ, ಸರ್ವಾಧಿಕಾರದ ಹುಲಿಯನ್ನು ಕೊಂದು ಅಲ್ಲಿ ನಮ್ಮ ಹಿರಿಯರು ಪ್ರಜಾಪ್ರಭುತ್ವವನ್ನು ಸ್ಥಾಪಿಸಿಸಿದರು. ಆದರೆ ಇದೀಗ ಪ್ರಜಾಪ್ರಭುತ್ವ ನಮಗೆ ಕೊಟ್ಟಿರುವುದೇನು ಎನ್ನುವುದರ ಕಿಂಚಿತ್ತೂ ಅರಿವಿಲ್ಲದ ಒಂದು ಹೊಸ ತಲೆಮಾರು ಹುಟ್ಟಿಕೊಂಡಿದೆ. ಅವರು ‘ಈ ದೇಶಕ್ಕೆ ಮಿಲಿಟರಿ ಆಡಳಿತ ಬೇಕು’ ‘ಸೌದಿಯ ಕಾನೂನು ಬೇಕು’ ‘ಗಾಂಧಿ ಪಾಕಿಸ್ತಾನ ಮಾಡಿದರು’ ‘ನೆಹರೂ ದೇಶಕ್ಕೆ ಏನು ಮಾಡಿದರು?’ ಎಂದು ಸುಲಭವಾಗಿ ಬೀದಿಯಲ್ಲಿ ನಿಂತು ಟೀಕಿಸುವ ಸಮುದಾಯ ಇದು. ಇವರೇ ‘ಭಾರತ ಹಿಂದೂ ರಾಷ್ಟ್ರವಾಗಬೇಕು’ ಎಂದು ಸಾರ್ವಜನಿಕವಾಗಿ ಘೋಷಿಸುತ್ತಾರೆ.

‘ಮನುವಾದಿ ಗೋಡ್ಸೆಗೆ ಜೈ’ ಎನ್ನುತ್ತಾರೆ. ಮನುಶಾಸ್ತ್ರ ಪರಿಣತರಿಂದ ಬ್ರೈನ್‌ವಾಶ್‌ಗೆ ಒಳಗಾಗಿರುವ ಬಲಿಪಶುಗಳು ಇವರು. ತನ್ನ ಹಿರಿಯರು ಅನುಭವಿಸಿದ ಅಸ್ಪಶ್ಯತೆಯ ಅರಿವು ಇವರಿಗಿಲ್ಲ. ಮಾನ ಮುಚ್ಚಲು ರವಿಕೆ ಹಾಕುವ ಹಕ್ಕೂ ತನ್ನ ತಾಯಂದಿರಿಗೆ ‘ಮನು ಚಿಂತನೆ’ ನೀಡಿರಲಿಲ್ಲ ಎನ್ನುವುದು ಗೊತ್ತಿಲ್ಲ. ಕೆರೆಯ ನೀರನ್ನು ಮುಟ್ಟುವ ಅಧಿಕಾರವಿರಲಿಲ್ಲ, ಶಿಕ್ಷಣ ಕಲಿಯುವ ಹಕ್ಕಿರಲಿಲ್ಲ, ಬಟ್ಟಲಲ್ಲಿ ಮನುಷ್ಯರಂತೆ ಆಹಾರ ಉಣ್ಣುವ ಅವಕಾಶವೂ ಇರಲಿಲ್ಲ ಎನ್ನುವುದು ಇವರಿಗೆ ಗೊತ್ತಿಲ್ಲ. ಇಂದು ಹೊಸ ತಲೆಮಾರು ಸ್ವಾಭಿಮಾನದಿಂದ ತಲೆಯೆತ್ತಿ ನಿಂತಿದ್ದರೆ, ಮೇಲ್ಜಾತಿಯ ಜನರು ಗೌರವವನ್ನು ನೀಡುತ್ತಿದ್ದರೆ, ಶಾಲೆಗಳಲ್ಲಿ ಕಲಿಯುವ ಹಕ್ಕು ಸಿಕ್ಕಿದ್ದರೆ, ಸ್ವಂತ ಜಮೀನು ಹೊಂದಿದ್ದರೆ ಅದಕ್ಕೆ ಕಾರಣ ಸಂವಿಧಾನ ಎನ್ನುವುದು ಇವರ ತಲೆಯಲ್ಲಿಲ್ಲ. ಹೊಸ ತಲೆಮಾರಿನ ಈ ಅರೆ ಬುದ್ಧಿವಂತರೇ, ಸತ್ತು ಹೋಗಿರುವ ಮನುಸಿದ್ಧಾಂತದ ಹುಲಿಯ ಎಲುಬುಗಳನ್ನು ಜೋಡಿಸಿದ್ದಾರೆ ಮತ್ತು ಭಾಗಶಃ ಅದಕ್ಕೆ ಜೀವ ಕೊಟ್ಟಿದ್ದಾರೆ. ಇದೀಗ ದೇಶ ಅದರ ಪರಿಣಾಮನ್ನು ಒಂದೊಂದಾಗಿ ಅನುಭವಿಸುತ್ತಿದೆ.

ನರೇಂದ್ರ ಮೋದಿ ಎನ್ನುವ ಸರ್ವಾಧಿಕಾರಿ ಹುಲಿಯ ಎಲುಬುಗಳನ್ನು ಜೋಡಿಸಿ ಅದಕ್ಕೆ ಜೀವಕೊಟ್ಟ ಬುದ್ಧಿವಂತರಲ್ಲಿ ಅಗ್ರಸ್ಥಾನವನ್ನು ನಾವು ಮಾಧ್ಯಮಗಳ ಮಂದಿಗೇ ನೀಡಬೇಕು. ಆದುದರಿಂದಲೇ ಅದರ ಪರಿಣಾಮಗಳನ್ನು ಮಾಧ್ಯಮಗಳೇ ಅನುಭವಿಸಬೇಕಾದಂತಹ ಸ್ಥಿತಿಯಿದೆ. ಒಂದು ಕಾಲದಲ್ಲಿ ರಾಜಕೀಯ ಅದೆಷ್ಟೇ ಕೆಟ್ಟಿರಲಿ, ಅದರ ವಿರುದ್ಧ ಮಾಧ್ಯಮಗಳು ಧೈರ್ಯದಿಂದ ಮಾತನಾಡುವ ಹಕ್ಕಿಗೆ ಯಾವ ಧಕ್ಕೆಯೂ ಬಂದಿರಲಿಲ್ಲ. ಅದೆಷ್ಟೇ ಭ್ರಷ್ಟ ರಾಜಕಾರಣಿಗೂ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಿಯಂತ್ರಣ ಹೇರುವ ಧೈರ್ಯವಿರುತ್ತಿರಲಿಲ್ಲ. ಆದರೆ ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸರಕಾರವೊಂದು ತನ್ನ ವಿರುದ್ಧ ಮಾತನಾಡುವ ಮಾಧ್ಯಮಗಳಿಗೆ ನೇರವಾಗಿ ಮೂಗುದಾರ ಹಾಕಲು ಹೊರಟಿದೆ. ಅದರ ಮೊದಲ ಬಲಿಪಶುವಾಗಿ ಎನ್‌ಡಿ ಟಿವಿ ನಮ್ಮ ಮುಂದಿದೆ. ಈ ಹಿಂದೆ ಪಠಾಣ್‌ಕೋಟ್ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಪಟ್ಟು ವರದಿ ಮಾಡಿರುವುದಕ್ಕಾಗಿ ಟಿವಿಗೆ ಒಂದು ದಿನದ ನಿಷೇಧವನ್ನು ಹೇರಲು ಹೊರಟಿತು. ಆದರೆ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮದಿಂದ ಹಿಂಜರಿಯಿತು. ಇಂದು ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಮೆದು ಧ್ವನಿಯಲ್ಲಾದರೂ ಆಕ್ಷೇಪ ಎತ್ತುತ್ತಿರುವುದು ಎನ್‌ಡಿಟಿವಿ ಮಾತ್ರ. ದೇಶದ ಬಹುತೇಕ ಮಾಧ್ಯಮಗಳನ್ನು ಕೇಂದ್ರ ಸರಕಾರ ಹಣದ ಮೂಲಕ ಕೊಂಡುಕೊಂಡಿದೆ.

ನೋಟು ನಿಷೇಧದ ಸಂದರ್ಭದಲ್ಲಿ ಇಡೀ ದೇಶ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿದ್ದಾಗ ಯಾವ ಟಿವಿ ಮಾಧ್ಯಮಗಳೂ ಅದರ ವಿರುದ್ಧ ಮಾತನಾಡಲಿಲ್ಲ. ಈ ಸಂದರ್ಭದಲ್ಲಿ ಒಂದಿಷ್ಟಾದಾರೂ ಜನರ ಸಂಕಟಗಳ ಮೇಲೆ ಬೆಳಕು ಚೆಲ್ಲಿರುವುದು ಎನ್‌ಡಿಟಿವಿ. ಇದೀಗ ಈ ಟಿವಿ ಮಾಧ್ಯಮದ ಬಾಯಿ ಮುಚ್ಚಿಸುವ ದಾರಿಯನ್ನು ಕೇಂದ್ರ ಸರಕಾರ ಹುಡುಕುತ್ತಿದೆ. ನೇರವಾಗಿ ಟಿವಿಯನ್ನು ನಿಷೇಧಮಾಡಲು ಹೋಗಿ ಕೈ ಸುಟ್ಟುಕೊಂಡ ಕಾರಣ, ಅದು ಹಿಂಬಾಗಿಲಿನ ದಾರಿಯನ್ನು ಹುಡುಕಿದೆ. ಅದಕ್ಕಾಗಿ ಸಿಬಿಐಯನ್ನು ಬಳಸಿಕೊಂಡಿದೆ. ಎನ್‌ಡಿಟಿವಿಯ ಮುಖ್ಯಸ್ಥರ ನಿವಾಸಗಳು ಮತ್ತು ಕಚೇರಿಯ ಮೇಲೆ ಸಿಬಿಐ ದಾಳಿ ನಡೆದಿದ್ದು, ಇದು ಆ ಚಾನೆಲ್‌ಗೆ ಸರಕಾರ ನೀಡಿರುವ ನೇರ ಎಚ್ಚರಿಕೆಯಾಗಿದೆ.

ಸರಕಾರ ಈಗಾಗಲೇ ತನ್ನ ವಿರೋಧಿ ರಾಜಕಾರಣಿಗಳ ವಿರುದ್ಧ ಸಿಬಿಐ ಮತ್ತು ಐಟಿ ಅಧಿಕಾರಿಗಳನ್ನು ಬಳಸುತ್ತಿರುವುದನ್ನು ಮಾಧ್ಯಮಗಳಲ್ಲಿ ಓದಿದ್ದೇವೆ. ಆದರೆ ದೇಶದ ಪ್ರಮುಖ ಪತ್ರಿಕೋದ್ಯಮಿಯನ್ನು ಸಿಬಿಐ ಅಧಿಕಾರಿಗಳ ಮೂಲಕ ಬೆದರಿಸಲು ಹೊರಟಿರುವುದು ಇದೇ ಮೊದಲ ಬಾರಿಯಾಗಿದೆ. ಇದು ಕೇವಲ ಎನ್‌ಡಿ ಟಿವಿಗೆ ಮಾತ್ರವಲ್ಲ, ಎಲ್ಲ ಟಿವಿ ಚಾನೆಲ್ ಮತ್ತು ಪತ್ರಿಕೆಗಳಿಗೆ ಸರಕಾರ ನೀಡಿರುವ ಎಚ್ಚರಿಕೆಯಾಗಿದೆ. ಸರಕಾರ ಚೆಲ್ಲುವ ಎಂಜಲು ಹಣಕ್ಕಾಗಿ ಬಾಯಿ ತೆರೆದು ಕೂತಿರುವ ಟಿವಿ ಚಾನೆಲ್‌ಗಳು ‘ನಾವು ಭದ್ರ. ನಮಗೇನೂ ಅಪಾಯವಿಲ್ಲ’ ಎಂದು ಸುಮ್ಮನಿರುವಂತಹ ಸಮಯ ಇದು ಖಂಡಿತ ಅಲ್ಲ. ಇಂದು ಎನ್‌ಡಿ ಟಿವಿಯನ್ನು ಬೆದರಿಸಲು ಹೊರಟವರು, ಅದರಲ್ಲಿ ಯಶಸ್ವಿಯಾದರೆ ನಾಳೆ ಇತರೆಲ್ಲ ಮಾಧ್ಯಮಗಳನ್ನೂ ಇದೇ ದಾರಿಯಲ್ಲಿ ಮಣಿಸುತ್ತಾರೆ. ತನ್ನ ವಿರುದ್ಧ ಬರೆಯುವವರನ್ನೂ, ತನ್ನ ಪರವಾಗಿ ಬರೆಯದಿರುವವರನ್ನು ಬಗ್ಗು ಬಡಿಯಲು ಒಂದು ಸರಕಾರಕ್ಕೆ ಸಾವಿರ ದಾರಿಗಳಿವೆ. ಆದರೆ ಮಾಧ್ಯಮ ತನ್ನ ಸುತ್ತ ಉಳಿಸಿಕೊಂಡಿರುವ ಪ್ರಭಾವಳಿಯಿಂದಾಗಿ ಸರಕಾರ ಈ ವರೆಗೆ ಹಿಂದೇಟು ಹಾಕಿದೆ. ಎನ್‌ಡಿ ಟಿವಿ ವಿಷಯದಲ್ಲಿ ಅದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಎಲ್ಲ ಮಾಧ್ಯಮಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಇಂದು ಉಳಿದೆಲ್ಲ ಮಾಧ್ಯಮಗಳು ಎನ್‌ಡಿಟಿವಿಯ ಜೊತೆಗೆ ನಿಲ್ಲದೇ ಇದ್ದರೆ, ನಾಳೆ ಅವುಗಳಿಗೆ ಧಕ್ಕೆಯಾದಾ ಜೊತೆ ನಿಲ್ಲಲು ಯಾರೂ ಇರುವುದಿಲ್ಲ.

ತನ್ನ ವಿರುದ್ಧ ಟೀಕೆ, ವಿಮರ್ಶೆಗಳನ್ನು ಸಹಿಸದ ಮತ್ತು ಅವುಗಳನ್ನು ತನ್ನ ಅಧಿಕಾರ ಬಳಸಿ ನೇರವಾಗಿ ಬಗ್ಗು ಬಡಿಯಲು ಯತ್ನಿಸುತ್ತಿರುವ ಮೊದಲ ಸರಕಾರ ಇದು. ವಿದ್ಯಾರ್ಥಿಗಳು ಸರಕಾರದ ವಿರುದ್ಧ ಘೋಷಣೆ ಕೂಗಿದರೆ ಅದನ್ನು ‘ದೇಶದ್ರೋಹ’ ಎಂದು ಕರೆದು ಅವರ ಮೇಲೆ ಮೊಕದ್ದಮೆ ದಾಖಲಿಸುವುದು, ಟಿವಿಗಳು ಸರಕಾರದ ವೈಫಲ್ಯಗಳು ಹೇಳಿದರೆ ಅವುಗಳ ವಿರುದ್ಧ ಬಲಪ್ರಯೋಗ ಮಾಡಿ ಧ್ವನಿ ಅಡಗಿಸುವುದು, ರಾತ್ರೋ ರಾತ್ರಿ ನೋಟು ನಿಷೇಧಗಳನ್ನು ಮಾಡಿ ಜನರನ್ನು ಬೀದಿಯಲ್ಲಿ ನಿಲ್ಲಿಸುವುದು ಮತ್ತು ಜನರ ಸಂಕಟಗಳು ಮಾಧ್ಯಮಗಳಲ್ಲಿ ವರದಿಯಾಗದಂತೆ ನೋಡಿಕೊಳ್ಳುವುದು, ತಾವು ಸಾಕಿ ಬೆಳೆಸಿದ ದನಕರುಗಳನ್ನು ಮಾರಾಟ ಮಾಡದಂತೆ ರೈತರ ಕೈಗಳನ್ನು ಕಟ್ಟಿ ಹಾಕಿ ಹೈನೋದ್ಯಮ ಮಾಡಿ ಬದುಕುತ್ತಿರುವ ಗ್ರಾಮೀಣ ರೈತರನ್ನು ಬೀದಿ ಪಾಲು ಮಾಡುವುದು, ಗೂಂಡಾಗಳು ಗೋರಕ್ಷಕರ ವೇಷಧರಿಸಿ ಜನರ ಮೇಲೆ ಎರಗಿದರೆ ಪೊಲೀಸರು ಗೂಂಡಾಗಳಿಗೆ ರಕ್ಷಣೆ ನೀಡಿ ಹಲ್ಲೆಗೀಡಾದವರ ಮೇಲೆಯೇ ಮೊಕದ್ದಮೆ ದಾಖಲಿಸುವುದು ಇವೆಲ್ಲವೂ ಈ ದೇಶದಲ್ಲಿ ‘ತುರ್ತು ಪರಿಸ್ಥಿತಿ’ ಘೋಷಣೆಯಾಗಿರುವ ಸೂಚನೆಗಳಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News