12ನೇ ತರಗತಿಯಲ್ಲಿ ಶೇ 99.9 ಅಂಕ ಗಳಿಸಿದ ಬಾಲಕ ಈಗ ಜೈನ ಸನ್ಯಾಸಿಯಾಗಲು ಸಜ್ಜು

Update: 2017-06-06 12:35 GMT

ಅಹ್ಮದಾಬಾದ್,ಜೂ.6: 12ನೆಯ ತರಗತಿಯಲ್ಲಿ ಶೇ.99.9ರಷ್ಟು ಅಂಕಗಳಿಕೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶದ ಜೊತೆಗೆ ಭವಿಷ್ಯದ ಸುಖಿ ವೃತ್ತಿಜೀವನಕ್ಕೂ ಸುಭದ್ರ ಬುನಾದಿಯಾಗುತ್ತದೆ. ಆದರೆ ಅಹ್ಮದಾಬಾದ್‌ನ ಮಧ್ಯಮ ವರ್ಗಕ್ಕೆ ಸೇರಿದ ಕುಟುಂಬದ ವರ್ಷಿಲ್ ಶಾ(17) ಇಷ್ಟು ಅಂಕಗಳನ್ನೂ ಗಳಿಸಿಯೂ ವಿಭಿನ್ನ ಪಥವನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಆತ ಜೈನ ಸನ್ಯಾಸಿಯಾಗಲು ಲೌಕಿಕ ಸುಖಗಳ ತ್ಯಾಗಕ್ಕೆ ಸಜ್ಜಾಗಿದ್ದಾನೆ. ಜೂ.8ರಂದು ಗಾಂಧಿನಗರದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ ದಲ್ಲಿ ಈ ಬಾಲಕ ಜೈನ ಸನ್ಯಾಸಿಯಾಗಿ ದೀಕ್ಷೆಯನ್ನು ಸ್ವೀಕರಿಸಲಿದ್ದಾನೆ.

  ಗುಜರಾತ್ ಪ್ರೌಢ ಶಿಕ್ಷಣ ಮಂಡಳಿಯು 12ನೇ ತರಗತಿಯ ಪರೀಕ್ಷಾ ಫಲಿತಾಂಶಗಳನ್ನು ಮೇ 27ರಂದು ಪ್ರಕಟಿಸಿದ್ದು, ವರ್ಷಿಲ್ ಅಗ್ರಸ್ಥಾನಿಗಳಲ್ಲಿ ಓರ್ವನಾಗಿ ದ್ದಾನೆ. ವರ್ಷಿಲ್‌ಗೆ ಶೇ.99.9 ಅಂಕಗಳು ದೊರಕಿದ್ದರೂ ಎಲೆಮರೆಯ ಕಾಯಿಯಂತಿರಲು ಬಯಸುವ ಆತ ಮತ್ತು ಆತನ ಕುಟುಂಬ ವಿಜಯೋತ್ಸವದಿಂದ ದೂರವೇ ಇದ್ದರು. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆತನ ಸೋದರಮಾವ ನಯನಭಾಯಿ ಸುತಾರಿ, ಫಲಿತಾಂಶವೇನೋ ನಿರೀಕ್ಷೆಯಂತೆ ಬಂದಿದೆ, ಆದರೆ ಶಾಂತಿಯನ್ನು ಪಡೆಯಲು ಮತ್ತು ಅದನ್ನು ಉಳಿಸಿಕೊಳ್ಳಲಿ ಲೌಕಿಕ ಸುಖವನ್ನು ತ್ಯಾಗ ಮಾಡುವುದೊಂದೇ ಏಕೈಕ ಮಾರ್ಗ ವಾಗಿದೆ ಎಂದು ವರ್ಷಿಲ್ ಭಾವಿಸಿದ್ದಾನೆ ಎಂದರು.

ಜೈನ ಧರ್ಮೀಯರಾಗಿರುವ ವರ್ಷಿಲ್‌ನ ತಂದೆ, ಆದಾಯ ತೆರಿಗೆ ಅಧಿಕಾರಿಯಾಗಿ ರುವ ಜಿಗರ್‌ಭಾಯಿ ಶಾ ಮತ್ತು ತಾಯಿ ಅಮಿಬೆನ್ ಶಾ ಅವರಿಗೆ ತಮ್ಮ ಮಗ ಆಯ್ಕೆ ಮಾಡಿಕೊಂಡಿರುವ ದಾರಿ ಸಂತಸವನ್ನುಂಟು ಮಾಡಿದೆ. ಈ ದಂಪತಿಗೆ ವರ್ಷಿಲ್ ಮತ್ತು ಆತನಿಗಿಂತ ಹಿರಿಯವಳಾದ ಜೈನಿನಿ ಇಬ್ಬರೇ ಮಕ್ಕಳಾಗಿದ್ದು, ಅವರನ್ನು ಅತ್ಯಂತ ಸರಳತೆಯೊಂದಿಗೆ ಬೆಳೆಸಿದ್ದಾರೆ. ಜೀವದಯಾ ಅಥವಾ ಎಲ್ಲ ಪ್ರಾಣಿಗಳಲ್ಲಿಯೂ ಅನುಕಂಪವಿರಬೇಕು ಎಂಬ ಜೈನ ಸಿದ್ಧಾಂತವನ್ನು ಈ ಕುಟುಂಬವು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ.

ಶಾ ಅವರ ಮನೆಯಲ್ಲಿ ವಿದ್ಯುತ್ ಬಳಕೆಗೂ ಕಟ್ಟುಪಾಡುಗಳಿವೆ. ವಿದ್ಯುತ್ ಉತ್ಪಾದನೆ ಯಾಗುವಾಗ ಹಲವಾರು ಜಲಚರಗಳು ಕೊಲ್ಲಲ್ಪಡುತ್ತವೆ, ಆದ್ದರಿಂದ ಇದು ಜೈನಧರ್ಮದ ಅಹಿಂಸಾ ತತ್ತ್ವಗಳಿಗೆ ವಿರುದ್ಧವಾಗಿದೆ ಎನ್ನುವುದು ಕುಟುಂಬದ ನಂಬಿಕೆಯಾಗಿದೆ. ಶಾ ಅವರ ಮನೆಯಲ್ಲಿ ಟಿವಿ ಆಥವಾ ರೆಫ್ರಿಜರೇಟರ ಇಲ್ಲ. ಅಗತ್ಯವಿದ್ದಾಗ...ಅದೂ ರಾತ್ರಿಯ ವೇಳೆ ಮಕ್ಕಳ ಓದಿನ ಸಮಯದಲ್ಲಿ ಮಾತ್ರ ವಿದ್ಯುತ್‌ನ್ನು ಬಳಸುತ್ತಾರೆ.

 ತನಗೆ ಬಂದಿರುವ ಅಂಕಗಳು ವರ್ಷಿಲ್‌ಗೆ ಅಚ್ಚರಿಯನ್ನುಂಟು ಮಾಡಿಲ್ಲ. ಯಶಸ್ಸು ಸಾಧಿಸಲು ಇತರ ಅಗ್ರಸ್ಥಾನಿ ವಿದ್ಯಾರ್ಥಿಗಳಿಗಿಂತ ಭಿನ್ನವಾದ ಮಾರ್ಗವನ್ನು ಆತ ಅನುಸರಿ ಸಿದ್ದ. ಆತನ ಪಾಲಿಗೆ ಕಠಿಣ ಶ್ರಮಕ್ಕಿಂತ ಶಾಂತಪೂರ್ಣ ಮನಸ್ಸು ಉತ್ತಮ ಫಲ ನೀಡಿದೆ. 2016ನೇ ಶೈಕ್ಷಣಿಕ ವರ್ಷದ ಆರಂಭಕ್ಕೆ ಮುನ್ನ ಆತ ಜೈನ ಸನ್ಯಾಸಿಗಳ ಗುಂಪೊಂದನ್ನು ಭೇಟಿಯಾಗಿದ್ದು, ಅವರು ಆತ ಓದಿನಲ್ಲಿ ಮನಸ್ಸನ್ನು ಕೇಂದ್ರಿಕರಿಸಿ ಹೆಚ್ಚು ಅಂಕಗಳನ್ನು ಗಳಿಸುವಂತಾಗಲು ನೆರವಾಗಿದ್ದರು. ವರ್ಷಿಲ್ ಮೂರು ವರ್ಷಗಳ ಹಿಂದೆಯೇ ಅಧ್ಯಾತ್ಮ ದತ್ತ ಆಕರ್ಷಿತನಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News