ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ ಹತ್ತಿಕ್ಕುವ ಷಡ್ಯಂತ್ರ: ದಿನೇಶ್ ಅಮೀನ್ ಮಟ್ಟು

Update: 2017-06-06 13:06 GMT

ಬೆಂಗಳೂರು, ಜೂ.6: ರಾಷ್ಟ್ರೀಯ ಸುದ್ದಿವಾಹಿನಿ ಎನ್‌ಡಿ ಟಿವಿ ವಾಹಿನಿಯ ಸಹ ಸ್ಥಾಪಕ ಪ್ರಣಯ್ ರಾಯ್ ಅವರ ನಿವಾಸದ ಮೇಲೆ ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ಸಿಬಿಐ ದಾಳಿ ನಡೆಸಿದೆ ಎಂದು ಆರೋಪಿಸಿ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಕರ್ತರು ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ಪ್ರೆಸ್‌ಕ್ಲಬ್ ಆವರಣದಲ್ಲಿ ಪತ್ರಕರ್ತರ ಅಧ್ಯಯನ ಕೇಂದ್ರ(ಬೆಂ) ಸದಸ್ಯರು, ಬರಹಗಾರರು, ಪತ್ರಕರ್ತರು ಒಗ್ಗೂಡಿ ಮಾಧ್ಯಮದ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು, ಮಾಧ್ಯಮದ ಮೇಲೆ ಸಿಬಿಐ ದಾಳಿ ನಡೆದಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು. ಅಲ್ಲದೆ, ಬಿಜೆಪಿ ವಕ್ತಾರರೊಂದಿಗೆ ಎನ್‌ಡಿಟಿವಿ ನಡೆಸಿದ ಸಂವಾದದಲ್ಲಿ ಕೇಂದ್ರದ ವಿರುದ್ಧ ಮಾತನಾಡಿದ್ದಕ್ಕೆ ಈ ಎನ್‌ಡಿ ಟಿವಿಯನ್ನು ಗುರಿಯನ್ನಾಗಿಸಲಾಗಿದೆ. ಖಾಸಗಿ ಬ್ಯಾಂಕ್ ವ್ಯವಹಾರದಲ್ಲಿ ಗೊಂದಲಗಳಿದ್ದರೆ ನ್ಯಾಯಾಲಯದಲ್ಲಿ ತೀರ್ಮಾನ ಮಾಡಬೇಕಾಗಿತ್ತು. ಆದರೆ, 2008ರಲ್ಲಿ ನಡೆದಿರುವ ಖಾಸಗಿ ಬ್ಯಾಂಕ್ ವ್ಯವಹಾರವನ್ನು ಆಧಾರವನ್ನಾಗಿರಿಸಿಕೊಂಡು ಈಗ ದಾಳಿ ನಡೆಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಈ ದಾಳಿ ಕೇಂದ್ರದ ವಿರುದ್ಧ ಮಾತನಾಡುವ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ ಹತ್ತಿಕ್ಕುವ ಉದಾಹರಣೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಈ ಬೆಳವಣಿಗೆ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.

ಮಹಿಳಾ ಹೋರಾಟಗಾರ್ತಿ ಜ್ಯೋತಿ ಮಾತನಾಡಿ, ದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲಾಗುತ್ತಿದೆ. ದೇಶದ ಪ್ರಜ್ಞಾವಂತ ಜನ ಇದಕ್ಕೆ ಅವಕಾಶ ನೀಡಬಾರದು. ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಿಲ್ಲದಿದ್ದಾಗ ಈ ರೀತಿಯ ದಾಳಿಯ ಮೂಲಕ ಸದೆ ಬಡಿಯಲಾಗುತ್ತಿದೆ ಎಂದು ಕಿಡಿಕಾರಿದರು.

ಲೇಖಕ ಶ್ರೀಪಾದ ಭಟ್, ಮಾಧ್ಯಮಗಳ ಮೇಲೆ ಈ ರೀತಿ ದಾಳಿ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಒಂದು ಮಾಧ್ಯಮ ಸಂಸ್ಥೆಯ ಮೇಲೆ ದಾಳಿ ನಡೆದಾಗ ಇತರೆ ಮಾಧ್ಯಮ ಸಂಸ್ಥೆಗಳು ಒಂದಾಗಬೇಕು. ಆದರೆ, ಈ ಪ್ರಕರಣದಲ್ಲಿ ಆಗಾಗುತ್ತಿಲ್ಲ. ಇದು ಅತ್ಯಂತ ಕೆಟ್ಟ ಬೆಳವಣಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜ ಸೇವಕಿ ವಿದ್ಯಾ ದಿನಕರ್ ಮಾತನಾಡಿ, ಪ್ರತಿಯೊಬ್ಬ ಪ್ರಜೆಗೂ ಸಾರ್ವಜನಿಕ ಹಕ್ಕು ಇರಬೇಕು. ಎನ್‌ಡಿಟಿವಿ ಮೇಲಿನ ದಾಳಿ ಸಮಾಜದಲ್ಲಿ ಆತಂಕ ಸೃಷ್ಟಿಸುವಂತಿದೆ. ಮಾಧ್ಯಮ ಸಂಸ್ಥೆ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಮಾಧ್ಯಮ ಸಂಸ್ಥೆಗಳು ವೌನಕ್ಕೆ ಶರಣಾಗುವುದು ಆಘಾತಕಾರಿ ಸಂಗತಿ. ಕೇಂದ್ರ ಸರಕಾರದ ವಿರುದ್ಧ ಮಾತನಾಡಿದವರ ವಿರುದ್ಧ ಸಿಬಿಐ ಹಾಗೂ ಇಡಿಯವರಿಂದ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ವಕೀಲರಾದ ಬಾಲನ್, ಅನಂತ ನಾಯ್ಕ, ಪತ್ರಕರ್ತ ನವೀನ್ ಸೂರಿಂಜೆ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News