ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ?

Update: 2017-06-07 09:35 GMT

ಮುಂಬೈ,ಜೂ.7: ಸಾಲ ಮನ್ನಾ ಬೇಡಿಕೆಯನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸುತ್ತಿರುವ ರೈತರಿಂದ ಒತ್ತಡಕ್ಕೆ ಸಿಲುಕಿರುವ ಹಾಗೂ ಶಿವಸೇನೆಯ ಸರಕಾರ ವಿರೋಧಿ ನಿಲುವಿನಿಂದ ಕೆರಳಿರುವ ಬಿಜೆಪಿಯು ರಾಜ್ಯದಲ್ಲಿ ಮಧ್ಯಂತರ ಚುನಾವಣೆಯನ್ನು ಎದುರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಮುಖ್ಯವಾಗಿ,ರಾಜ್ಯ ಸರಕಾರದ ಪಾಲುದಾರನಾಗಿದ್ದರೂ ಸ್ವಾಭಿಮಾನಿ ಶೇತಕರಿ ಸಂಘಟನಾ ಮತ್ತು ಪ್ರಹಾರ ಸಂಘಟನಾ ಜೊತೆಗೆ ರಾಜ್ಯವ್ಯಾಪಿ ಮುಷ್ಕರದ ನೇತೃತ್ವ ವಹಿಸಿರುವ ಕಿಸಾನ್ ಕ್ರಾಂತಿ ಮೋರ್ಚಾದೊಂದಿಗೆ ಕೈಜೋಡಿಸಿರುವ ಶಿವಸೇನೆಯಿಂದ ಕಳಚಿಕೊಳ್ಳುವ ಉದ್ದೇಶದಿಂದ ರಾಜ್ಯದಲ್ಲಿ ಮಧ್ಯಂತರ ಚುನಾವಣೆಯನ್ನು ನಡೆಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತೀವ್ರ ಆಸಕ್ತಿ ಹೊಂದಿದ್ದಾರೆ. ಸರಕಾರವನ್ನು ಹಣಿಯಲು ಶಿವಸೇನೆಗೆ ಇನ್ನೂ ಅವಕಾಶ ನೀಡಲು ತಾನು ಸಿದ್ಧನಿಲ್ಲ ಎಂದು ಫಡ್ನವೀಸ್ ಪಕ್ಷದಲ್ಲಿಯ ತನ್ನ ಕೆಲವು ಆಪ್ತರ ಮುಂದೆ ಹೇಳಿಕೊಂಡಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಜೂ.17ರಂದು ಮುಂಬೈಗೆ ಮೂರು ದಿನಗಳ ಭೇಟಿ ನೀಡಲಿದ್ದು, ರಾಜ್ಯ ಬಿಜೆಪಿಯ ಹಿರಿಯ ಪದಾಧಿಕಾರಿಗಳು ಈ ವಿಷಯವನ್ನು ಅವರೊಂದಿಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಮ್ಮೆದುರು ಈಗ ಎರಡು ಆಯ್ಕೆಗಳಿವೆ. ನಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಕಾಂಗ್ರೆಸ್-ಎನ್‌ಸಿಪಿ ಅಥವಾ ಶಿವಸೇನೆಯಲ್ಲಿ ಬಿರುಕು ಮೂಡಿಸುವುದು ಇಲ್ಲವೇ ಮಧ್ಯ್ಯಂತರ ಚುನಾವಣೆಯನ್ನು ಎದುರಿಸುವುದು. ಪಕ್ಷದ ಗಣನೀಯ ವರ್ಗವು ಮಧ್ಯಂತರ ಚುನಾವಣೆಯ ಬಗ್ಗೆ ಒಲವು ವ್ಯಕ್ತಪಡಿಸಿದೆ ಎಂದು ರಾಜ್ಯದ ಪ್ರಮುಖ ಬಿಜೆಪಿ ಪದಾಧಿಕಾರಿಯೋರ್ವರು ತಿಳಿಸಿದರು. 123 ಶಾಸಕರನ್ನು ಹೊಂದಿರುವ ಬಿಜೆಪಿ ಸರಕಾರವನ್ನುಳಿಸಿಕೊಳ್ಳಲು ತನ್ನ ಇಚ್ಛೆಗೆ ವಿರುದ್ಧವಾಗಿ ಶಿವಸೇನೆಯ 63 ಶಾಸಕರನ್ನು ಅವಲಂಬಿಸಿಕೊಂಡಿದೆ.

ಆದರೆ ಇತ್ತೀಚಿನ ಜನಾಭಿಪ್ರಾಯ ಸಂಗ್ರಹವೊಂದು ರಾಜ್ಯದಲ್ಲಿ ಹೊಸದಾಗಿ ಚುನಾವಣೆ ನಡೆಸುವ ಬಗ್ಗೆ ಬಿಜೆಪಿಯಲ್ಲಿ ವಿಶ್ವಾಸವನ್ನು ಹೆಚ್ಚಿಸಿದೆ. ಈ ವರ್ಷದ ನವಂಬರ್ ಅಥವಾ ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆದರೆ 288 ಸದಸ್ಯಬಲದ ಸದನದಲ್ಲಿ ಬಿಜೆಪಿ 140ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಈ ಸಮೀಕ್ಷೆಯು ಹೇಳಿದೆ. ಆದರೆ ರೈತರ ಮುಷ್ಕರ ಈ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಕೆಲವು ಅನುಮಾನವಾದಿಗಳು ಹೇಳಿದ್ದಾರೆ.

 ಇತ್ತ ಬುಧವಾರ ಏಳನೇ ದಿನವನ್ನು ಪ್ರವೇಶಿಸಿರುವ ರೈತರ ಮುಷ್ಕರವು ರಾಜ್ಯ ಬಿಜೆಪಿಯಲ್ಲಿ ಆಂತರಿಕ ಸಂಘರ್ಷವನ್ನು ಬಹಿರಂಗಗೊಳಿಸಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲೋ ಇಲ್ಲೋ ಒಂದಿಬ್ಬರು ಸಚಿವರ ಬಾಯಿಮಾತಿನ ಹೇಳಿಕೆಗಳನ್ನು ಹೊರತುಪಡಿಸಿದರೆ ಈ ಸಂಕಷ್ಟದ ಸಮಯದಲ್ಲಿ ಫಡ್ನವೀಸ್ ಅವರಿಗೆ ಗಟ್ಟಿಯಾದ ಬೆಂಬಲವನ್ನು ನೀಡಲು ರಾಜ್ಯ ಬಿಜೆಪಿ ಅಥವಾ ರಾಜ್ಯ ಸಂಪುಟದಿಂದ ಸಂಘಟಿತ ಪ್ರಯತ್ನಗಳು ನಡೆದಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಮುಖ್ಯಮಂತ್ರಿಗಳು ಏಕಾಂಗಿಯಾಗಿ ಹೋರಾಡುತ್ತಿರುವಂತಿದೆ ಎಂದು ಹಿರಿಯ ಅಧಿಕಾರಿಯೋರ್ವರು ಹೇಳಿದರು.

ಅಲ್ಲದೆ, ಭಾಗಶಃ ಸಾಲಮನ್ನಾವನ್ನು ಪ್ರಕಟಿಸುವ ಮೂಲಕ ಮುಷ್ಕರನಿರತ ರೈತರ ಸಮನ್ವಯ ಸಮಿತಿಯೊಂದಿಗೆ ಶಾಂತಿಸಂಧಾನ ಮಾಡಿಕೊಳ್ಳಲು ಮುಂದಾಗಿದ್ದ ಫಡ್ನವೀಸ್ ಅವರ ಕ್ರಮವು ತಿರುಗುಬಾಣವಾಗಿ ಪರಿಣಮಿಸಿದೆ. ಪರಿಣಾಮವಾಗಿ ಪ್ರತಿಪಕ್ಷಗಳು ಈಗಾಗಲೇ ಸಂಕಷ್ಟದಲ್ಲಿರುವ ಫಡ್ನವೀಸ್ ವಿರುದ್ಧ ಹೊಸದಾಗಿ ದಾಳಿ ನಡೆಸಲು ಸಜ್ಜಾಗಿವೆ.

ಮುಷ್ಕರದ ನೇತೃತ್ವವನ್ನು ವಹಿಸಿರುವ ರೈತರ 40ಕ್ಕೂ ಅಧಿಕ ಸಂಘಟನೆಗಳು ಫಡ್ನವೀಸ್ ಅವರ ಭಾಗಶಃ ಸಾಲಮನ್ನಾ ಕೊಡುಗೆಯನ್ನು ತಿರಸ್ಕರಿಸಿವೆ. ಈ ಕೊಡುಗೆ ಕಾರ್ಯಗತ ಗೊಂಡರೆ ರಾಜ್ಯದ ಬೊಕ್ಕಸಕ್ಕೆ 30,000 ಕೋ.ರೂ.ಗಳ ಹೆಚ್ಚುವರಿ ಹೊರೆ ಬೀಳಲಿದೆ. ತೀವ್ರ ಆರ್ಥಿಕ ನಷ್ಟವನ್ನು ಅನುಭವಿಸಿರುವ ರಾಜ್ಯದ 31ಲಕ್ಷ ಸಾಲಗಾರ ರೈತರಿಗೆ ಭಾಗಶಃ ಸಾಲಮನ್ನಾದಿಂದ ಅನುಕೂಲವಾಗುವ ಸಾಧ್ಯತೆಗಳಿಲ್ಲ ಎನ್ನುವುದು ತಜ್ಞರ ಅಭಿಮತ.

ಶಿವಸೇನೆಯು ಮುಷ್ಕರನಿರತ ರೈತರನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಿರುವುದು ಫಡ್ನವೀಸ್ ಅವರನ್ನು ತೀವ್ರ ಕಳವಳಕ್ಕೆ ತಳ್ಳಿದೆ. ಪೊಳ್ಳು ಭರವಸೆಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ ಎಂದು ತನ್ನ ಮುಖವಾಣಿ ‘ಸಾಮನಾ’ದಲ್ಲಿ ಎಚ್ಚರಿಕೆ ನೀಡಿರುವ ಶಿವಸೇನೆ, ಸಂಪೂರ್ಣ ಸಾಲ ಮನ್ನಾ ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕೆಂಬ ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಸರಕಾರವನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News