ಜ| ಜ.ರಾವತ್ ಸಮರ್ಥನೆ ಸರಿಯಲ್ಲ

Update: 2017-06-08 04:04 GMT

ಈ ದೇಶದಲ್ಲಿ ಈಗ ರಾಷ್ಟ್ರಭಕ್ತಿಯ ಹೆಸರಿನಲ್ಲಿ ನಡೆಯಬಾರದ ಚಟುವಟಿಕೆಗಳೆಲ್ಲ ನಡೆಯುತ್ತಿವೆ. ಯಾರೂ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವ ಸನ್ನಿವೇಶ ಈಗ ಇಲ್ಲ. ಅಧಿಕಾರದಲ್ಲಿರುವವರನ್ನು ಪ್ರಶ್ನಿಸಿದರೆ ರಾಷ್ಟ್ರದ್ರೋಹಿ ಎಂಬ ಬಿರುದನ್ನು ಪಡೆಯಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯ ವ್ಯಕ್ತಿ ಪೂಜೆ ಅತಿರೇಕಕ್ಕೆ ತಲುಪಿದೆ.

ಮೋದಿ ಸರಕಾರದ ನೀತಿಧೋರಣೆಗಳನ್ನು ಯಾರಾದರೂ ಪ್ರಶ್ನಿಸಿದರೆ ಅವರನ್ನು ದೇಶದ್ರೋಹಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ವ್ಯಕ್ತಿಪೂಜೆ ಮತ್ತು ದೇಶಭಕ್ತಿಯ ಹೆಸರಿನಲ್ಲಿ ಈಗ ಕಂಡುಬರುತ್ತಿರುವ ಜನಾಂಗದ್ವೇಷ ಈ ದೇಶದಲ್ಲಿ ಹಿಂದೆಂದೂ ಇರಲಿಲ್ಲ. ಈ ಅಸಹಿಷ್ಣುತೆ ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ ಬುಧವಾರ ದಿಲ್ಲಿಯ ಪತ್ರಿಕಾಗೋಷ್ಠಿಯೊಂದರಲ್ಲಿ ಕಮ್ಯುನಿಸ್ಟ್ ನಾಯಕ ಸೀತಾರಾಂ ಯೆಚೂರಿ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಿಂದೂ ಸೇನೆಯ ಕೆಲ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಉಳಿಯಲಾರದು.

ಕಾಶ್ಮೀರವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಅಲ್ಲಿ ಭಾರತೀಯ ಸೇನಾ ಪಡೆಗಳ ಯೋಧರಿಂದ ಅತಿರೇಕಗಳು ನಡೆಯುತ್ತಿವೆ ಎಂದು ಹೇಳಿದರೆ ಸಾಕು, ನಕಲಿ ದೇಶಭಕ್ತರು ಆಕ್ರೋಶಿತರಾಗಿ ದಾಳಿಗೆ ಮುಂದಾಗುತ್ತಾರೆ. ಕಾಶ್ಮೀರದಲ್ಲಿ ಸೇನಾ ಪಡೆಗಳ ಮೇಲೆ ಕಲ್ಲೆಸೆಯುವವರ ವಿರುದ್ಧ ಮಾನವ ಗುರಾಣಿಯನ್ನು ಬಳಸಿದ ಸೇನೆಯ ಕ್ರಮದ ಕುರಿತು ಸಾಕಷ್ಟು ವಿವಾದ ಉಂಟಾಗಿರುವಾಗಲೇ ಸೇನಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಈ ಕ್ರಮವನ್ನು ಸಮರ್ಥಿಸಿಕೊಂಡಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿದೆ. ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಹಾಗೂ ಇತರ ಮಾನವಹಕ್ಕು ಸಂಘಟನೆಗಳು ರಾವತ್ ಅವರ ಕ್ರಮವನ್ನು ಖಂಡಿಸಿವೆ.

ಕಾಶ್ಮೀರದ ಜನತೆಯ ಭಾವನೆಗಳನ್ನು ಹತ್ತಿಕ್ಕುವ ಮತ್ತು ಅವರ ನೋವು, ಸಂಕಟಗಳನ್ನು ತುಳಿಯುವ ಮೋದಿ ಸರಕಾರದ ನಿಲುವಿಗೆ ಪೂರಕವಾಗಿ ರಾವತ್ ಮಾತನಾಡಿದ್ದಾರೆ ಎಂದು ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಟೀಕಿಸಿದ್ದಾರೆ. ಬಂಗಾಳಿ ಚಿಂತಕ ಪಾರ್ಥ ಚಟರ್ಜಿ ಅವರು ಇತ್ತೀಚೆಗೆ ಜನರಲ್ ರಾವತ್ ಅವರನ್ನು ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ರೂವಾರಿ, ಕುಖ್ಯಾತ ಬ್ರಿಟಿಶ್ ಸೈನ್ಯಾಧಿಕಾರಿ ಜನರಲ್ ಡಯರ್‌ಗೆ ಹೋಲಿಸಿ ಟೀಕಿಸಿದ್ದರು. ತಮ್ಮ ನಾಗರಿಕ ಹಕ್ಕುಗಳಿಗಾಗಿ ಪ್ರತಿಭಟಿಸುತ್ತಿರುವ ಕಾಶ್ಮೀರ ಕಣಿವೆಯ ಜನತೆಯ ವಿರುದ್ಧ ಸೇನಾ ಪಡೆಗಳು ಮತ್ತು ಗಡಿಭದ್ರತಾ ಪಡೆಗಳು ದೌರ್ಜನ್ಯ ನಡೆಸಿರುವುದು ಮತ್ತು ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರಿಂದ ರೋಸಿ ಹೋದ ಅಲ್ಲಿನ ಜನ ಕಲ್ಲೆಸೆದರೆ ಅವರ ವಿರುದ್ಧ ಸೇನೆ ಕಾನೂನಿಗೆ ವಿರುದ್ಧವಾಗಿ ಪ್ರತೀಕಾರ ತೀರಿಸಿಕೊಳ್ಳುವುದು ಸರಿಯಲ್ಲ. ಇದರಿಂದ ಕಲ್ಲೆಸೆಯುವವರಿಗೂ ಮತ್ತು ಸೇನೆಗೂ ಯಾವುದೇ ವ್ಯತ್ಯಾಸವಿರುವುದಿಲ್ಲ.

ಜೀವರಕ್ಷಣೆಗಾಗಿ ಕಲ್ಲುತೂರಾಟ ಮಾಡಿದ ತಂಡದ ಮುಖ್ಯಸ್ಥನನ್ನು ಗುರಾಣಿಯಾಗಿ ಬಳಸಿ, ಆತನನ್ನು ಸೇನಾ ಜೀಪಿಗೆ ಕಟ್ಟಿ ಮೆರವಣಿಗೆ ಮಾಡಿದ ಕ್ರಮವನ್ನು ಸೇನಾ ಮುಖ್ಯಸ್ಥರಾದ ಜ ಬಿಪಿನ್ ರಾವತ್ ಸಮರ್ಥಿಸಿಕೊಳ್ಳಬಾರದಿತ್ತು. ಕಾಶ್ಮೀರ ಜನತೆಯ ನೋವು ಮತ್ತು ಸಂಕಟಗಳಿಗೆ ಹಲವಾರು ದಶಕಗಳ ಇತಿಹಾಸವಿದೆ. ಆ ನೋವು, ಸಂಕಟಗಳನ್ನು ಅರ್ಥಮಾಡಿಕೊಳ್ಳದೆ ಶಂಕಿತ ಕಲ್ಲುತೂರಾಟಗಾರನೊಬ್ಬನನ್ನು ಸೇನಾಧಿಕಾರಿ ಮೆ ಮಿಥುನ್ ಗೊಗೊಯ್ ಜೀಪಿಗೆ ಕಟ್ಟಿ ಮಾನವ ಗುರಾಣಿಯನ್ನಾಗಿ ಮಾಡಿಕೊಂಡಿದ್ದರು. ಇದನ್ನು ಜ ರಾವತ್ ಸಮರ್ಥಿಸಿಕೊಂಡಿದ್ದರು. ಇಂತಹ ಕೃತ್ಯವನ್ನು ಸಮರ್ಥಿಸಿಕೊಳ್ಳುವುದು ಸೇನಾಧಿಕಾರಿಗಳಿಗೆ ಘನತೆಯನ್ನು ತರುವುದಿಲ್ಲ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಯಿಸುತ್ತದೆ.

ಕಾಶ್ಮೀರದಲ್ಲಿ ಬಿಕ್ಕಟ್ಟಿನ ಸನ್ನಿವೇಶ ನಿರ್ಮಾಣವಾಗಿದೆ ಎಂಬುದೇನೋ ನಿಜ. ಆದರೆ, ಅಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣವಾಗಿಲ್ಲ. ಕಾಶ್ಮೀರದಲ್ಲಿ ಪ್ರತಿಭಟಿಸುತ್ತಿರುವ ಜನ ನಮ್ಮ ದೇಶದ ಶತ್ರುಗಳಲ್ಲ. ಶತ್ರುದೇಶದ ಸೈನಿಕರಲ್ಲ. ಅವರು ತಮ್ಮ ಕೈಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದಿಲ್ಲ. ನಮ್ಮ ಸೇನಾ ಪಡೆಯ ಕೆಲ ಯೋಧರು ಕೆಲ ಮನೆಗಳಿಗೆ ನುಗ್ಗಿ ಅತಿರೇಕದಿಂದ ವರ್ತಿಸಿರುವುದನ್ನು ಪ್ರತಿಭಟಿಸಿದರೆ ಅದನ್ನು ಅಪರಾಧ ಎಂದು ಪರಿಗಣಿಸಬೇಕಾಗಿಲ್ಲ. ಕಲ್ಲು ತೂರುವವರ ಪೈಕಿ ಒಬ್ಬನನ್ನು ಹಿಡಿದು ಸೇನಾಪಡೆಯ ಜೀಪಿಗೆ ಕಟ್ಟಿ ಮೆರವಣಿಗೆ ಮಾಡುವುದು ದೇಶಭಕ್ತಿಯಲ್ಲ. ಸೇನಾಪಡೆಗಳಿಗೆ ಅವುಗಳದ್ದೇ ಆದ ಹೊಣೆಗಾರಿಕೆ ಇದೆ. ದೇಶದ ನಾಗರಿಕರ ಪ್ರತಿಭಟನೆಗಳನ್ನು ಹತ್ತಿಕ್ಕಲು ಅವರ ವಿರುದ್ಧ ಸೇನಾಪಡೆಗಳನ್ನು ಬಳಸುವುದು ಸರಿಯಾದ ಕ್ರಮವಲ್ಲ.

ಅಲ್ಲಿನ ಜನರನ್ನು ವೈರಿಗಳು ಎಂಬಂತೆ ನಮ್ಮ ಸೇನೆ ಪರಿಗಣಿಸಬಾರದು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನು ಓಲೈಸಲು ಸೇನಾಪಡೆಯ ಉನ್ನತ ಅಧಿಕಾರಿಗಳು ಇಂತಹ ಸಮರ್ಥನೆಗೆ ಇಳಿದಿರುವುದು ಅವರಿಗೆ ಶೋಭೆ ತರುವುದಿಲ್ಲ. ಕಾಶ್ಮೀರ ಜನತೆಗೆ ದೇಶಭಕ್ತಿಯನ್ನು ಯಾರೂ ಕಲಿಸಬೇಕಾಗಿಲ್ಲ. ದೇಶ ವಿಭಜನೆಯಾಗುವ ಸಂದರ್ಭದಲ್ಲಿ ಕಾಶ್ಮೀರದ ಜನತೆ ಶೇಖ್ ಅಬ್ದುಲ್ಲಾ ನೇತೃತ್ವದಲ್ಲಿ ತಾವೇ ಇಷ್ಟಪಟ್ಟು ಭಾರತದಲ್ಲಿ ವಿಲೀನಗೊಂಡರು. ಆದರೆ, ಆನಂತರ ಅಮೆರಿಕ ಮತ್ತು ಪಾಕಿಸ್ತಾನದ ಪ್ರಚೋದನೆಯಿಂದ ಅಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆದು ಪರಿಸ್ಥಿತಿ ಹದಗೆಡುತ್ತಾ ಬಂತು. ಪಾಕಿಸ್ತಾನ ಮತ್ತು ಭಾರತದಲ್ಲಿನ ಆಳುವ ವರ್ಗಗಳು ಈ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಾಮಾಣಿಕವಾಗಿ ಯತ್ನಿಸಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ. ಎರಡು ದೇಶಗಳ ಜನತೆಗೂ ಯುದ್ಧ ಬೇಕಾಗಿಲ್ಲ. ಆದರೆ, ಕೆಲ ಪಟ್ಟಭದ್ರರಿಗೆ ತಮ್ಮ ಹಿತಾಸಕ್ತಿಗಳ ರಕ್ಷಣೆಗೆ ಯುದ್ಧ ಬೇಕಾಗಿದೆ.

ಅಮೆರಿಕದ ಸಾಮ್ರಾಜ್ಯಶಾಹಿ ಮುಂಚಿನಿಂದಲೂ ಕಾಶ್ಮೀರವನ್ನು ದಾಳವಾಗಿ ಬಳಸಿಕೊಂಡು ಭಾರತದ ಉಪಖಂಡದಲ್ಲಿ ಯುದ್ಧದ ವಾತಾವರಣವನ್ನು ನಿರ್ಮಿಸಲು ಯತ್ನಿಸುತ್ತಿದೆ. ಭಾರತ ಸರಕಾರ ಅನೇಕ ಬಾರಿ ಶಾಂತಿಯ ಇಂಗಿತ ವ್ಯಕ್ತಪಡಿಸಿ ಸ್ನೇಹಹಸ್ತ ಚಾಚಿದರೂ ಅಮೆರಿಕದ ಪ್ರಚೋದನೆಯಿಂದಾಗಿ ಪಾಕಿಸ್ತಾನ ಕಾಲುಕೆರೆದು ಜಗಳ ಮಾಡುತ್ತಲೇ ಬಂದಿದೆ. ಪಾಕಿಸ್ತಾನದ ಈ ತಪ್ಪಿಗೆ ಅಮಾಯಕ ಕಾಶ್ಮೀರಿಗಳನ್ನು ಬಲಿಪಶು ಮಾಡುವುದು ಸರಿಯಲ್ಲ. ಸೇನಾಧಿಕಾರಿಗಳು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಭಾವನಾತ್ಮಕ ಇಲ್ಲವೇ ಜನಪ್ರಿಯ ಹೇಳಿಕೆ ನೀಡುವ ಚಾಳಿಯನ್ನು ಅವರು ಕೈಬಿಡಬೇಕು. ಗಡಿಯಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಮಚಿತ್ತದಿಂದ ವರ್ತಿಸಬೇಕು.

ಕಾಶ್ಮೀರದಲ್ಲಿರುವ ಭಾರತೀಯ ಸೇನಾ ಪಡೆ ಗಡಿಯಾಚೆಯಿಂದ ನಡೆಸಲಾಗುತ್ತಿರುವ ಪಾಕಿಸ್ತಾನದ ದಾಳಿಯನ್ನು ಎದುರಿಸಲು ಸಜ್ಜಾಗಬೇಕು. ಅದರ ಬದಲಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ಕಾಶ್ಮೀರಿಗಳನ್ನು ಹತ್ತಿಕ್ಕುವ ಕೃತ್ಯಕ್ಕೆ ಕೈಹಾಕಬಾರದು. ಭಾರತ ಹಾಗೂ ಪಾಕಿಸ್ತಾನದ ಸೇನೆಗಳು ಹತ್ಯೆ ಮಾಡುವ ಬಹುತೇಕ ಜನ ಅವರವರ ದೇಶದವರೇ ಆಗಿರುತ್ತಾರೆ. ಭಾರತದಲ್ಲಿ ಈ ಹತ್ಯೆಗಳು ಮಿಲಿಟರಿ ಹಾಗೂ ಅರೆ ಸೇನಾ ಪಡೆಗಳಿಂದ ನಡೆಯುತ್ತದೆ. ಈಶಾನ್ಯ ರಾಜ್ಯಗಳಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ ಆದಿವಾಸಿಗಳು ಅಧಿಕಸಂಖ್ಯೆಯಲ್ಲಿರುವ ಛತ್ತೀಸ್‌ಗಡದಂತಹ ಪ್ರದೇಶಗಳಲ್ಲಿ ಈ ರೀತಿ ಜನತೆಯ ಹಕ್ಕುಗಳ ದಮನ ನಿರಂತರವಾಗಿ ನಡೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಸರಕಾರದ ಜೊತೆ ಒಂದು ಒಪ್ಪಂದವನ್ನು ಮಾಡಿಕೊಂಡಿರುತ್ತಾರೆ. ಹಿಂಸಾಚಾರವನ್ನು ಹತ್ತಿಕ್ಕುವ ಪೂರ್ಣ ಅಧಿಕಾರವನ್ನು ಪ್ರಜೆಗಳು ಸರಕಾರಕ್ಕೆ ನೀಡಿರುತ್ತಾರೆ.

ಅದೇ ರೀತಿ ಪ್ರಭುತ್ವವು ಕೂಡಾ ತನ್ನ ಪ್ರಜೆಗಳನ್ನು ರಕ್ಷಿಸುವ ಹೊಣೆಯನ್ನು ನಿಭಾಯಿಸಬೇಕಾಗುತ್ತದೆ. ಈಶಾನ್ಯ ರಾಜ್ಯಗಳಲ್ಲಿ ವಿಶೇಷ ಶಸ್ತ್ರಾಸ್ತ್ರ ಕಾಯ್ದೆ ದುರುಪಯೋಗದ ವಿರುದ್ಧ ಮಣಿಪುರದ ಮಹಿಳೆಯರು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದು ಎಲ್ಲರಿಗೂ ಗೊತ್ತಿದೆ. ಛತ್ತೀಸ್‌ಗಡದಲ್ಲಿ ಅಮೂಲ್ಯವಾದ ಖನಿಜ ಸಂಪತ್ತನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರಲು ಒಪ್ಪಂದ ಮಾಡಿಕೊಂಡಿರುವ ಸರಕಾರ ಅದಕ್ಕೆ ಅಡ್ಡಿಯಾಗಿರುವ ಆದಿವಾಸಿಗಳನ್ನು ಎತ್ತಂಗಡಿ ಮಾಡಲು ಅರೆಸೇನಾ ಪಡೆಗಳ ಮೂಲಕ ದಬ್ಬಾಳಿಕೆ ನಡೆಸುತ್ತಿದೆ. ಹೀಗೆ ಕಾಶ್ಮೀರ ಮಾತ್ರವಲ್ಲ, ದೇಶದ ಆದಿವಾಸಿ ಪ್ರದೇಶಗಳಲ್ಲಿ, ಈಶಾನ್ಯ ರಾಜ್ಯಗಳಲ್ಲಿ ಸೇನಾಪಡೆಗಳು ಮತ್ತು ಪೊಲೀಸರ ಅತಿರೇಕದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ಸೇನಾಧಿಕಾರಿಗಳು ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದಲ್ಲಿ ದೇಶದಲ್ಲಿ ಇನ್ನಷ್ಟು ಆಂತರಿಕ ಗಲಭೆಗಳು ಭುಗಿಲೇಳುವ ಅಪಾಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News