ಬೆಂಕಿ ದುರಂತದಲ್ಲಿ ಎಂಟು ಮಂದಿಯನ್ನು ರಕ್ಷಿಸಿ ಪ್ರಾಣ ಬಿಟ್ಟ ಸತ್ಬೀರ್

Update: 2017-06-09 09:35 GMT

ಹೊಸದಿಲ್ಲಿ,ಜೂ.9 : ವಾಯುವ್ಯ ದಿಲ್ಲಿಯ ತ್ರಿನಗರದಲ್ಲಿರುವ ಖಾಸಗಿ ಡಯಾಗ್ನಸ್ಟಿಕ್ ಕೇಂದ್ರವೊಂದರ ತಳ ಅಂತಸ್ತಿನಲ್ಲಿ ಮಂಗಳವಾರ ಮುಂಜಾವು ಸುಮಾರು 2.10ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಾಗ ನೆರೆಮನೆಯಲ್ಲಿ ಗಾಢ ನಿದ್ದೆಯಲ್ಲಿದ್ದ ಸತ್ಬೀರ್ ಸಂಚಲ್ ಕಿರುಚಾಟಗಳಿಂದ ಎಚ್ಚರಗೊಂಡು ಸಹಾಯಕ್ಕೆ ಧಾವಿಸಿ ಒಂದೇ ಕುಟುಂಬದ ಎಂಟು ಮಂದಿಯ ಪ್ರಾಣ ರಕ್ಷಿಸಿದರಲ್ಲದೆ ಈ ಬೆಂಕಿಯ ವಿರುದ್ಧದ ಸೆಣಸಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಬೆಂಕಿ ಕಾಣಿಸಿಕೊಂಡ ಕೂಡಲೇ ಕಟ್ಟಡದ ಮಾಲಕ ರಾಜೇಶ್ ಗುಪ್ತಾ ತಮ್ಮ ಕುಟುಂಬವನ್ನು ಮೇಲಿನ ಮಹಡಿಗೆ ಸ್ಥಳಾಂತರಿಸಿ ಅಗ್ನಿ ಶಾಮಕ ದಳಕ್ಕೆ ಫೋನಾಯಿಸಿದ್ದರಾದರೆ ಅಗ್ನಿಶಾಮಕ ವಾಹನಗಳು ಬರಲು ತಡವಾಗಿತ್ತು. ಬೆಂಕಿ ನಂದಿಸುವ ಉತ್ಪನ್ನಗಳ ಅಂಗಡಿ ಹೊಂದಿದ್ದ ಸಂಚಲ್ ತಡ ಮಾಡದೆ ತಮ್ಮ ಗೋಡೌನಿನಿಂದ ನಾಲ್ಕು ಬೆಂಕಿ ನಂದಿಸುವ ಸಾಧನಗಳನ್ನು ತಂದು ತಮ್ಮ ಪುತ್ರ ಅಕ್ಷಯ್ ನೊಂದಿಗೆ ಸ್ಥಳಕ್ಕೆ ಧಾವಿಸಿದ್ದರು. ಅಗ್ನಿಶಾಮಕ ವಾಹನ ಬರಲು ಮತ್ತಷ್ಟು ತಡವಾದಾಗ ಅಕ್ಷಯ್ ಇನ್ನೂ ಎಂಟು ಸಾಧನಗಳನ್ನು ಅಲ್ಲಿಗೆ ತಂದರು. ಹೀಗೆ ಸಂಚಲ್ ಮತ್ತು ಅವರ ಪುತ್ರ ಬೆಂಕಿ ನಂದಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾಗ ಆ ಐದು ಅಂತಸ್ತಿನ ಕಟ್ಟಡದಲ್ಲಿದ್ದ ಸಿಲಿಂಡರ್ ಒಂದು ಸ್ಫೋಟಗೊಂಡ ಪರಿಣಾಮ ಸಂಚಲ್ ಸಾವಿಗೀಡಾದರು.

ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ ಅವರಿಗೆ ಬೆಳಿಗ್ಗೆ 2.37ಕ್ಕೆ ಕರೆ ಬಂದಿತ್ತು ಹಾಗೂ ಅವರು ಸ್ಥಳಕ್ಕೆ 10ರಿಂದ 15 ನಿಮಿಷಗಳಲ್ಲಿ ತಲುಪಿದ್ದರು. ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮೃತ ಸಂಚಲ್ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News