ಭಡ್ತಿ ಮೀಸಲಾತಿ ಮುಂದುವರೆಸಲು ಸುಗ್ರೀವಾಜ್ಞೆಗೆ ಒತ್ತಾಯ

Update: 2017-06-13 15:45 GMT

 ಬೆಂಗಳೂರು, ಜೂ.13: ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿಗೆ ತಡೆವೊಡ್ಡಿರುವ ಸುಪ್ರೀಂ ಕೋರ್ಟ್ ತೀರ್ಪಿನ ದುಷ್ಪರಿಣಾಮಗಳನ್ನು ತಡೆಯಲು ರಾಜ್ಯ ಸರಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಭಡ್ತಿ ಮೀಸಲಾತಿಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿ ನಗರದ ಟೌನ್‌ಹಾಲ್ ಮುಂದೆ ರಾಜ್ಯ ದಲಿತ ಸಂಘಟನೆಗಳ ಸಮನ್ವಯ ಸಮಿತಿಯು ಬೃಹತ್ ಧರಣಿ ನಡೆಸಿತು.

ಭಡ್ತಿ ಮೀಸಲಾತಿಗೆ ತಡೆವೊಡ್ಡಿರುವ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದಾಗಿ ರಾಜ್ಯದಲ್ಲಿ ಸುಮಾರು 16 ಸಾವಿರಕ್ಕೂ ಹೆಚ್ಚು ಎಂಜಿನಿಯರ್‌ಗಳು ಸೇರಿದಂತೆ ಇನ್ನುಳಿದ ಸಾವಿರಾರು ಮಂದಿ ದಲಿತ ನೌಕರರು ಹಿಂಬಡ್ತಿ ಪಡೆಯುವ ಸಾಧ್ಯತೆಗಳಿವೆ. ಇದಕ್ಕೆ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡದೆ ಶೀಘ್ರವಾಗಿ ಸುಗ್ರೀವಾಜ್ಞೆ ಜಾರಿ ಮಾಡಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ಈ ವೇಳೆ ರಾಜ್ಯ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸಂಯೋಜಕ ಎನ್.ಮುನಿಸ್ವಾಮಿ ಮಾತನಾಡಿ, ಸುಪ್ರೀಂ ಕೋರ್ಟ್ 1992ರಲ್ಲಿಯೂ ಭಡ್ತಿ ಮೀಸಲಾತಿ ರದ್ದುಗೊಳಿಸಿತ್ತು. ಆ ಸಂದರ್ಭದಲ್ಲಿ ದಲಿತ ಸಂಘಟನೆಗಳ ಹೋರಾಟದ ಫಲವಾಗಿ ಆಗಿನ ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಭಡ್ತಿ ಮೀಸಲಾತಿಯನ್ನು ಮುಂದುವರೆಸಿತು. ಈಗ ಮತ್ತೆ ಸುಪ್ರೀಂ ಕೋರ್ಟ್ ಭಡ್ತಿ ಮೀಸಲಾತಿಗೆ ತಡೆವೊಡ್ಡಿದೆ. ಈ ಆದೇಶದ ವಿರುದ್ಧ ರಾಜ್ಯ ಸರಕಾರ ಸುಗ್ರೀವಾಜ್ಞೆ ಜಾರಿ ಮಾಡಿ ಜನಪರವಾದ ನಿಲುವನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.

ಸುಪ್ರೀಂ ಕೋರ್ಟ್ ಹಾಗೂ ವಿವಿಧ ರಾಜ್ಯಗಳ ಹೈ ಕೋರ್ಟ್‌ಗಳು ಆಧಾರರಹಿತವಾಗಿ ಭಡ್ತಿ ಮೀಸಲಾತಿ ವಿರುದ್ಧ ತೀರ್ಪುಗಳನ್ನು ನೀಡುತ್ತಿವೆ. ಹೀಗಾಗಿ ಭಡ್ತಿ ಮೀಸಲಾತಿ ಪರವಾಗಿ ಸಮರ್ಥವಾಗಿ ವಾದ ಮಂಡಿಸುವಂತಹ ನುರಿತ ವಕೀಲರನ್ನು ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರಕಾರ ಕೂಡಲೆ ನೇಮಿಸಬೇಕು ಎಂದು ಅವರು ಆಗ್ರಹಿಸಿದರು.

ಎಸ್ಪಿಪಿ-ಟಿಎಸ್ಪಿ ಕಾಯ್ದೆಯಡಿ ದಲಿತ ಸಮುದಾಯಕ್ಕೆ ಮೀಸಲಾಗಿರುವ ಹಣವನ್ನು ಇತರ ಯೋಜನೆಗಳಿಗೆ ಬಳಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಇದರಿಂದ ಕೆಲವು ಪಟ್ಟಭದ್ರರು ಎಸ್ಪಿಪಿ-ಟಿಎಸ್ಪಿ ಹಣ ಶೇ.10ರಿಂದ 20ರಷ್ಟು ದಲಿತ ಸಮುದಾಯಕ್ಕೆ ವಿನಿಯೋಗಿಸಿ ಉಳಿದ ಶೇ.80ರಷ್ಟು ಹಣವನ್ನು ಇತರ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಿದ್ದಾರೆ. ಹೀಗಾಗಿ ಕೂಡಲೆ ಕಾನೂನಿನಲ್ಲಿ ತಿದ್ದುಪಡಿ ತಂದು ಸಂಪೂರ್ಣ ಹಣವನ್ನು ದಲಿತ ಸಮುದಾಯಕ್ಕೆ ಮಾತ್ರ ಮೀಸಲಿಡಬೇಕೆಂದು ಅವರು ಮನವಿ ಮಾಡಿದರು.

 ರೈತ ಮುಖಂಡ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ಭಡ್ತಿ ಮೀಸಲಾತಿ ಜಾರಿಯಾದರೆ ಅರ್ಹತೆ ಇರುವವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕೆಲವು ಪಟ್ಟಭದ್ರರು ಜನಸಾಮಾನ್ಯರಲ್ಲಿ ವಿಷಬೀಜವನ್ನು ಬಿತ್ತುತ್ತಿದ್ದಾರೆ. ಶತಮಾನಗಳ ಕಾಲ ದೇಶವನ್ನಾಳಿದ ಅರ್ಹರೆನಿಸಿಕೊಳ್ಳುತ್ತಿರುವ ಜಾತಿವಾದಿಗಳು ಸಮಾಜವನ್ನು ಯಾವ ಸ್ಥಿತಿಯಲ್ಲಿಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಭಡ್ತಿ ಮೀಸಲಾತಿಯಿಂದ ಮಾತ್ರ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಸರಿದೂಗಿಸಲು ಸಾಧ್ಯವೆಂದು ಸಮರ್ಥಿಸಿಕೊಂಡರು.

ಧರಣಿಯಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಯೋಜಕ ಸಿ.ಎಂ. ಮುನಿಯಪ್ಪ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಮಾವಳ್ಳಿ ಶಂಕರ್, ಡಿ.ಜಿ. ಸಾಗರ್, ಗುರುಪ್ರಸಾದ್ ಕೆರೆಗೋಡು, ಲಕ್ಷ್ಮಿನಾರಾಯಣ ನಾಗವಾರ, ಜಿಗಣಿ ಶಂಕರ್, ಎಂ. ವೆಂಕಟಸ್ವಾಮಿ, ಎಂ. ಗುರುಮೂರ್ತಿ, ಅಣ್ಣಯ್ಯ, ಎಂ. ಜಯಣ್ಣ, ಕೆ.ಇ.ಬಿ. ಪರಿಶಿಷ್ಟ ಜಾತಿ ಪಂಗಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ದಾಸ್ ಪ್ರಕಾಶ್ ಮತ್ತಿತರು ಪಾಲ್ಗೊಂಡಿದ್ದರು.

ಒಗ್ಗಟ್ಟಿನ ಹೋರಾಟಕ್ಕೆ ಸಂಘ ಸಿದ್ಧ

 ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ದಲಿತ ಸಂಘಟನೆಗಳು ಒಂದಾಗಿರುವುದು ಆಶಾದಾಯಕ ಬೆಳವಣಿಗೆ. ದಲಿತ ಸಂಘಟನೆಗಳು ಒಂದಾಗಿರುವುದು ತುಂಬಾ ಸಂತಸ ತಂದಿದೆ. ಇದು ಹೀಗೆಯೇ ಮುಂದುವರಿಯಬೇಕು. ಆ ಮೂಲಕ ದಲಿತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಹೋರಾಟ ಹಮ್ಮಿಕೊಳ್ಳಬೇಕಾಗಿದೆ. ಇದಕ್ಕೆ ಬೇಕಾದ ಎಲ್ಲ ರೀತಿಯ ನೆರವನ್ನು ನೀಡಲು ರಾಜ್ಯ ಕೆಇಬಿ ಎಸ್ಸಿಎಸ್ಟಿ ನೌಕರರ ಸಂಘ ಸಿದ್ಧವಿದೆ.

-ದಾಸ್ ಪ್ರಕಾಶ್ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಪರಿಶಿಷ್ಟ ನೌಕರರ ಹಿತ ಕಾಪಾಡಲು ಸರಕಾರ ಬದ್ಧ ಪರಿಶಿಷ್ಟ ಜಾತಿ ಹಾಗೂ ಪಂಗಡದ ನೌಕರರ ಹಿತಾಸಕ್ತಿ ಕಾಪಾಡಲು ಸರಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರಾಜ್ಯ ಸರಕಾರ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ರಿವ್ಯೆ ಪಿಟಿಷನ್ ಸಲ್ಲಿಸಿದೆ. ಈ ನಿಟ್ಟಿನಲ್ಲಿ ದಲಿತ ಮುಖಂಡರು ನೀಡಿರುವ ಮನವಿಯನ್ನು ಸ್ವೀಕರಿಸಿದ್ದು ಮುಖ್ಯಮಂತ್ರಿಗಳ ಗಮನಕ್ಕೆ ವಿಷಯದ ಗಂಭೀರತೆಯನ್ನು ತರುತ್ತೇನೆ. ಸಂಸತ್‌ನಲ್ಲೂ ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಕಾನೂನು ರಚನೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೂಡಾ ಕಾರ್ಯತತ್ಪರವಾಗಬೇಕು.

-ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News