​ಜಿಎಸ್‌ಟಿ ಜಾರಿಗೆ ಮುನ್ನ ಮನೆಖರೀದಿ ಬೇಡ ಏಕೆ?

Update: 2017-06-16 04:18 GMT

ಹೊಸದಿಲ್ಲಿ, ಜೂ.16: ನೀವು ಮನೆ ಖರೀದಿಸುವ ಯೋಚನೆಯಲ್ಲಿದ್ದೀರಾ? ಸ್ವಲ್ಪ ತಾಳಿ. ಸರ್ಕಾರ ಜಿಎಸ್‌ಟಿ ವ್ಯವಸ್ಥೆ ಜಾರಿಗೊಳಿಸುವವರೆಗೂ ನಿಮ್ಮ ನಿರ್ಧಾರಕ್ಕೆ ಬ್ರೇಕ್ ಹಾಕಿ. ಏಕೆಂದರೆ ಬಹುಶಃ ಜುಲೈ ಒಂದರಿಂದ ಆರಂಭವಾಗುವ ಹೊಸ ತೆರಿಗೆ ವ್ಯವಸ್ಥೆಯಲ್ಲಿ, ದೊಡ್ಡ ಪ್ರಮಾಣದ ತೆರಿಗೆ ಹಣವನ್ನು ನೀವು ಉಳಿಸಬಹುದು.

ಕಡಿಮೆ ತೆರಿಗೆ ಹೊರೆಯ ಪ್ರಯೋಜನವನ್ನು ಕಟ್ಟಡ ನಿರ್ಮಾಣ ಸಂಸ್ಥೆಗಳು ಗ್ರಾಹಕರಿಗೆ ನೇರವಾಗಿ ವರ್ಗಾಯಿಸಬೇಕು ಎಂಬ ಸ್ಪಷ್ಟನೆಯನ್ನು ಹಣಕಾಸು ಸಚಿವಾಲಯ ಈಗಾಗಲೇ ಎಲ್ಲ ನಿರ್ಮಾಣ ಸಂಸ್ಥೆಗಳಿಗೆ ನೀಡಿದೆ. ಇದಕ್ಕಾಗಿಯೇ ಕಡಿಮೆ ಬೆಲೆ ಹಾಗೂ ಕಂತು ನಿಗದಿಪಡಿಸುವಂತೆ ಸಲಹೆ ಮಾಡಿದೆ. ಇಲ್ಲದಿದ್ದರೆ ಜಿಎಸ್‌ಟಿ ಕಾನೂನಿನ ಸೆಕ್ಷನ್ 171ರ ಅನ್ವಯ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.

ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ನಿರ್ಮಾಣ ಸಂಸ್ಥೆಗಳು, ಉಳಿದ ಬಾಕಿ ಮೊತ್ತವನ್ನು ಜುಲೈ ಒಂದರೊಳಗೆ ಪಾವತಿಸುವಂತೆ ಕಡ್ಡಾಯ ಮಾಡುತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ ಹಿಂದೆ ಇದ್ದ ಕೇಂದ್ರ ಹಾಗೂ ರಾಜ್ಯ ತೆರಿಗೆಗಳಿಗಿಂತ ಕಡಿಮೆ ತೆರಿಗೆಯನ್ನು ನಿರ್ಮಾಣ ವಲಯಕ್ಕೆ ನಿಗದಿಪಡಿಸಲಾಗಿದೆ. ಪ್ರಸ್ತುತ ಕಟ್ಟಡ ನಿರ್ಮಾಣ ಸಲಕರಣೆಗಳ ಮೇಲೆ ಶೇಕಡ 12.5ರಷ್ಟು ಅಥವಾ ಅಧಿಕ ಎಕ್ಸೈಸ್ ಸುಂಕ ವಿಧಿಸಲಾಗುತ್ತದೆ. ಇದರ ಜತೆಗೆ ರಾಜ್ಯಗಳು ವ್ಯಾಟ್ ಹಾಗೂ ಪ್ರವೇಶ ತೆರಿಗೆ ಸೇರಿ 12.5ರಿಂದ ಶೇಕಡ 14.5ರಷ್ಟು ಇತರ ತೆರಿಗೆ ವಿಧಿಸುತ್ತಿವೆ. ಉದಾಹರಣೆಗೆ ಪ್ರಸ್ತುತ 10 ಲಕ್ಷ ರೂಪಾಯಿ ಮೌಲ್ಯದ ಒಂದು ಕಟ್ಟಡ ಖರೀದಿಗೆ ಪರಿಕರಗಳ ಮೇಲಿನ 32 ಸಾವಿರ ರೂಪಾಯಿ ತೆರಿಗೆ ಹಾಗೂ ಅಂತಿಮವಾಗಿ ಪಾವತಿಸುವ 1 ಲಕ್ಷ ರೂಪಾಯಿ ತೆರಿಗೆ ಸೇರಿ ಒಟ್ಟು 1.32 ಲಕ್ಷ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ ಜಿಎಸ್‌ಟಿ ವ್ಯವಸ್ಥೆಯಲ್ಲಿ ಇದು 68 ಸಾವಿರ ರೂ. ಆಗುತ್ತದೆ. ಈ ಉಳಿಕೆ ತೆರಿಗೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಹಣಕಾಸು ಸಚಿವಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News