20 ವರ್ಷಗಳಷ್ಟು ಹಳೆಯ ಭೂವಿವಾದವನ್ನು ಕೇವಲ ಆರು ದಿನಗಳಲ್ಲಿ ಬಗೆಹರಿಸಿದ ಮಹಿಳೆ

Update: 2017-06-16 09:22 GMT

ಗಯಾ,ಜೂ.16: ಬಿಹಾರದ ಗಯಾ ಜಿಲ್ಲೆಯ ವಾರಿ ಪಂಚಾಯತ್‌ನ ಸರಪಂಚೆ ಪುಷ್ಪಾಂಜಲಿ ಸಿಂಗ್ 20 ವರ್ಷಗಳಷ್ಟು ಹಳೆಯ ಭೂವಿವಾದವನ್ನು ಕೇವಲ ಆರು ದಿನಗಳಲ್ಲಿ ಬಗೆಹರಿಸಿದ್ದಾರೆ.

 ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಾಗ ವಿವಾದಿತ ಭೂಮಿಯ ಹಕ್ಕು ಕೋರಿದ್ದ ಯಾವುದೇ ಕಕ್ಷಿದಾರನಿಗೂ ಅನ್ಯಾಯವಾಗದಂತೆ ಪುಷ್ಪಾಂಜಲಿ(50) ನೋಡಿಕೊಂಡಿದ್ದಾರೆ. ವಾರಿ ಪಂಚಾಯತ್ ದೋಭಿ ಪೊಲೀಸ್ ಠಾಣಾ ವ್ಯಾಪ್ತಿಯ 18 ಗ್ರಾಮಗಳು ಮತ್ತು 15 ವಾರ್ಡ್‌ಗಳನ್ನು ಒಳಗೊಂಡಿದೆ.

ವಿವಿಧ ಸ್ವರೂಪಗಳ ವಿವಾದಗಳನ್ನು ಚಾಣಾಕ್ಷತೆಯಿಂದ ನಿಭಾಯಿಸುವಲ್ಲಿ ಹೆಸರಾಗಿರುವ ಪುಷ್ಪಾಂಜಲಿ 2016,ಜೂನ್‌ನಲ್ಲಿ ಪಂಚಾಯತ್ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿ ಕೊಂಡ ನಂತರ ಈಗಾಗಲೇ 52 ಸಿವಿಲ್ ಮತ್ತು 30 ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ.

ಪಿದಾಸಿನ್ ಗ್ರಾಮದ ರಾಮಾಶಿಷ್ ಸಿಂಗ್(79) ಉದ್ಯೋಗ ನಿಮಿತ್ತ ಪರವೂರಿನ ಲ್ಲಿದ್ದು, ಗ್ರಾಮದಲ್ಲಿಯ ಕುಟುಂಬದ ಜಮೀನನ್ನು ಸೋದರ ಸಂಬಂಧಿಗಳಾದ ಸಿಧಿ ಮತ್ತು ರಾಧೇಶ್ಯಾಮ ಅವರು ನೋಡಿಕೊಳ್ಳುತ್ತಿದ್ದರು. 1997ರಲ್ಲಿ ನಿವೃತ್ತಿಯ ಬಳಿಕ ಸಿಂಗ್ ಸ್ವಗ್ರಾಮಕ್ಕೆ ಮರಳಿದಾಗ ಪಿತ್ರಾರ್ಜಿತವಾಗಿ ಅವರ ಪಾಲಿಗೆ ಬಂದಿದ್ದ 5.89 ಎಕರೆ ಜಮೀನನ್ನು ಅವರಿಗೆ ನೀಡಲು ಸಿಧಿ ಮತ್ತು ರಾಧೇಶ್ಯಾಮ ನಿರಾಕರಿಸಿದ್ದರು.  ರಾಧೇಶ್ಯಾಮ 1999ರಲ್ಲಿ ನಿಧನನಾಗಿದ್ದು, ಮಕ್ಕಳಿಲ್ಲದ ಆತನ ಪತ್ನಿ ಚಂದ್ರಾವತಿದೇವಿ ತನ್ನ ಪಾಲಿನ ಜಮೀನನ್ನು ಸಿಧಿಯ ಮೊಮ್ಮಗರಲ್ಲೋರ್ವನ ಪತ್ನಿ ಸುನಯನಾ ಸಿಂಗ್‌ಗೆ ಉಡುಗೊರೆಯಾಗಿ ನೀಡಿದ್ದಳು. ತನ್ನ ಪಾಲಿನ ಜಮೀನನ್ನು ಪಡೆಯಲು ಸಿಂಗ್ ಗ್ರಾಮಸ್ಥರ ನೆರವು ಕೋರಿದ್ದರು, ಪೊಲೀಸರ ಮೊರೆಯನ್ನೂ ಹೋಗಿದ್ದರು. ಯಾವುದೂ ಫಲಿಸದಿದ್ದಾಗ 2006ರಲ್ಲಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದರು. ರಾಮಾಶಿಷ್ ಮತ್ತು ಸುನಯನಾ ದೋಭಿ ಪೊಲೀಸ್ ಠಾಣೆಯಲ್ಲಿ ಪರಸ್ಪರರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನೂ ದಾಖಲಿಸಿದ್ದರು. ತನ್ಮಧ್ಯೆ 2017,ಫೆಬ್ರವರಿಯಲ್ಲಿ ಸಿಧಿಯೂ ತೀರಿ ಕೊಂಡಿದ್ದ.

ತನ್ನ ಪಾಲಿನ ಜಮೀನನ್ನು ಕೊಡಿಸುವಂತೆ ಸಿಂಗ್ ಈ ವರ್ಷದ ಮೇ 20ರಂದು ಪುಷ್ಪಾಂಜಲಿ ಬಳಿ ಮೊರೆಯಿಟ್ಟಿದ್ದ. ಪ್ರಕರಣದ ಜಟಿಲತೆಯನ್ನು ಮನಗಂಡ ಆಕೆ ಜೂ.7ರಂದು ವಿವಾದದ ಮೂವರು ಕಕ್ಷಿದಾರರಾದ ರಾಮಾಶಿಷ್,ಸಿಧಿಯ ಪುತ್ರ ಸ್ವದೇಶ್ ಮತ್ತು ಸುನಯನಾಳ ಪತಿ ರಂಜಯ್‌ರನ್ನು ಪಂಚಾಯತ್ ಕಚೇರಿಗೆ ಕರೆಸಿದ್ದರು. ಪುಷ್ಪಾಂಜಲಿಯ ಸಲಹೆಯ ಬಳಿಕ ಪರಸ್ಪರರ ವಿರುದ್ಧದ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಕಕ್ಷಿದಾರರು ಒಪ್ಪಿದಾಗ ಅರ್ಧ ಗೆಲುವು ಸಿಕ್ಕಿತ್ತು. ವಿವಾದಿತ ಆಸ್ತಿಯ ಅಷ್ಟೂ ದಾಖಲೆಗಳನ್ನು ತೆಗೆಸಿದ ಆಕೆ ಪತಿ ಸಂಜಯ್ ಸಿಂಗ್ ನೆರವಿನಿಂದ ಅದನ್ನು ಅಳತೆ ಮಾಡಿಸಿದ್ದರು. ಜೂ.12 ರಂದು ತಮ್ಮ ಪಾಲಿನ ಜಮೀನುಗಳನ್ನು ಪಡೆಯಲು ಎಲ್ಲ ಕಕ್ಷಿದಾರರು ಬೇಷರತ್ ಆಗಿ ಒಪ್ಪಿಕೊಂಡಿದ್ದರು ಮತ್ತು ಚೀಟಿಗಳನ್ನೆತ್ತುವ ಮೂಲಕ ಅವರಿಗೆ ಜಮೀನು ಹಂಚಿಕೆ ಮಾಡಲಾಗಿತ್ತು. ಹೀಗೆ 20 ವರ್ಷಗಳ ವಿವಾದ ಕೇವಲ ಆರೇ ದಿನಗಳಲ್ಲಿ ಬಗೆಹರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News