ಮುಸಲಧಾರೆ ಅರಳಿಸುವ ಮನೋಭಾವಗಳು

Update: 2023-06-30 06:16 GMT

ಮಳೆಗಾಲ ಬಂತೆಂದರೆ ರಸಗ್ರಾಹಿ ಮನುಷ್ಯ ನಾಲಗೆಗೆ ಬಹು ಬಯಕೆಗಳು ಗರಿಗೆದರುತ್ತವೆ. ಇಲ್ಲಿಯತನಕ ಅವೆಲ್ಲಿ ಬಚ್ಚಿಟ್ಟುಕೊಂಡಿದ್ದವೋ, ಪಾಪ ಅದೆಷ್ಟು ಕಾಲ ಅಭಾವದಲ್ಲಿ ಪರಿತಪಿಸಿದವೋ ಎನ್ನುವಷ್ಟು ಅವುಗಳ ಹುಚ್ಚಾಟ; ಆಯಾ ಪ್ರದೇಶಕ್ಕೆ ಸರಿದೂಗುವಂತೆ ವೈವಿಧ್ಯ. ಫೈವ್ ಸ್ಟಾರ್ ಹೊಟೇಲುಗಳಲ್ಲಿ ಸಿಗುವ ದ್ರವರೂಪಿ ಬಿಸಿ ಬಿಸಿ ಚಾಕಲೆಟ್, ಚಾಟ್ ಅಂಗಡಿಯ ಸುಡು ಸುಡು ಸೂಪು, ಬೀದಿ ಬದಿಯ ಬಾಣಲೆಯಿಂದ ನಾಲಗೆ ಎಂಬ ಬೆಂಕಿಗೆ ಬಿದ್ದು ಧ್ವಂಸಗೊಳ್ಳುವ ಬಜ್ಜಿ, ಬೋಂಡ, ಆಂಬೊಡೆ, ಗೋಳಿಬಜೆ, ಮದ್ದೂರ ವಡೆ ವಗೈರೆ ವಗೈರೆ. ಎಣ್ಣೆ ಸೋಕಿದೊಡನೆ ಮೈದಾನದಗಳ ಅರಳುವ ಹಪ್ಪಳ, ಹಬೆಯಾಡುವ ಕಬಾಬ್, ಸೀಕಲು ಸವಿಯ ಬಾರ್ಬೆಕ್ಯೂ, ಕುದ್ದು ಕುದ್ದು ಹದಗೊಂಡ ಸ್ಟ್ಯೂ (ಮಾಂಸರಸ)...ಪಟ್ಟಿ ಕೊನೆಗೊಳಿಸುವುದು ಸದ್ಯಕ್ಕೆ ಅಸಾಧ್ಯ.

ಶ್ರದ್ಧೆ, ಏಕಾಗ್ರತೆಗಳಿಂದ ಸೀಸನ್ ಉದ್ದಕ್ಕೂ ಸಕಲ ಬಯಕೆ ಪೂರೈಸಿಕೊಂಡು ಬೀಗುವ ರಸಿಕಾಗ್ರಣಿಗಳಿಗೆ ಕೊರತೆಯೇನಿಲ್ಲ. ಆದರೆ ಇಂತಹ ಐಂದ್ರಿಕಸುಖದ ಉಪಾಸನೆಗೆ-ಇದನ್ನು ಅನುಸರಿಸು ವವರನ್ನು ಇಂಗ್ಲಿಷಿನಲ್ಲಿ ಹೆಡಾನಿಸ್ಟ್ಸ್ ಎನ್ನುತ್ತಾರೆ-ಮಿಗಿಲಾದದ್ದನ್ನೂ ಮಳೆ ಉದ್ದೀಪಿಸಬಹುದು; ನಿಶ್ಶಬ್ದ ಹಗಲಿನಲ್ಲಿ, ತಾರುಮಾರಿಲ್ಲದೆ ಶ್ರುತಿ ಹಿಡಿದಂತೆ ಮೊರೆವ ಅದರ ನಾದ ಮನಸ್ಸಿನ ವಟವಟವನ್ನು ಫಟ್ಟನೆ ತಟಸ್ಥಗೊಳಿಸಿದರೆ, ನೀರವ ರಾತ್ರಿಯಲ್ಲಿ ಅದೇ ಜೋಗುಳವಾಗಿ ಸುಷುಪ್ತಿಗೆ ದೂಡುವುದು ಅನೇಕರಿಗೆ ಅನುಭವವಾಗಿರುತ್ತದೆ. ಹ್ಞಾಂ! ಇದೆಲ್ಲ ಬೆಚ್ಚಗೆ, ಮನೆ ಅಥವಾ ಇನ್ಯಾವುದಾದರೂ ಗೂಡಿನಲ್ಲಿ ಇದ್ದಾಗ ಎಂಬುದನ್ನು ಸೇರಿಸಬೇಕು. ಬಟಾಬಯಲಿನಲ್ಲಿ, ಯಾವುದೇ ರಕ್ಷಣೆ ಇಲ್ಲದೆ ಭೋರ್ಗರೆಯುತ್ತಿರುವ ಆಕಾಶಕ್ಕೆ ಎದುರಾದಾಗ ಮೊಳೆಯುವುದು ಮಾತ್ರ ಅಜ್ಞಾತ ಭಯ, ಆದಿಮ ಭಯ!

* ಕನ್ನಡನಾಡಿನ ಕಾರ್ಗಾಲದ ವೈಭವ ಕವಿನುಡಿಯಲ್ಲಿ ದಾಖಲಾಗಿದ್ದರೆ, ವಂಗನಾಡಿನ ವರುಣ ದೇವರನ್ನು ಕಾದಂಬರಿಯಲ್ಲಿ ಕಂಡರಿಸಿದ್ದಾರೆ, ‘ಪಥೇರ್ ಪಾಂಚಾಲಿ’ ಲೇಖಕ, ವಿಭೂತಿ ಭೂಷಣ ಬಂದ್ಯೋಪಾಧ್ಯಾಯ. ಕಾದಂಬರಿಯ ಮುಖ್ಯ ಪಾತ್ರಗಳಾದ ದುರ್ಗಾ ಹಾಗೂ ಅಪೂ ಒಂದು ಭರ್ಜರಿ ಮಳೆಯಲ್ಲಿ ಸಿಕ್ಕಿಬಿದ್ದಾಗ-
‘‘ಫಡ್-ಫಡ್-ಫಡಾರ್! ಪ್ರಕಾಂಡವಾದ ಕಾಡು, ತೋಟಗಳ ಅಂಧಕಾರ ಕ್ಷಣ ಮಾತ್ರ ಆ ದಿಕ್ಕಿನಿಂದ ಈ ದಿಕ್ಕಿನವರೆಗೂ ಕರಗಿಹೋದಂತೆ, ಕಣ್ಣು ರೆಪ್ಪೆಮುಚ್ಚುವ ಅವಧಿಯೊಳಗೆ ನಾಲ್ಕೂ ದಿಕ್ಕು ಬೆಳಕಾಗಿ ಪುನಃ ಮಾಯವಾಯಿತು.

ಕತ್ತಲರಾಜ್ಯ ಪುನರುತ್ಥಾನವಾಯಿತು. ಗಿಡಮರಗಳೆಲ್ಲ ಸ್ವಾಧೀನ ತಪ್ಪಿದಂತೆ ಬಿರುಗಾಳಿಗೆ ಶರಣಾಗತರಾಗಿ ಪ್ರತಿಭಟನೆಯೇ ಇಲ್ಲದೆ ಅಲ್ಲಾಡುತ್ತಿದ್ದವು. ಅಪೂ, ದುರ್ಗಾಳನ್ನು ಅಪ್ಪಿಹಿಡಿದುಕೊಂಡು ಭಯದಿಂದ ‘ಲೇ ಅಕ್ಕಾ’ ಎಂದು ಅತ್ತನು...ಆಗ ‘ಗುಮ್-ಗುಮ್-ಗುಮ್-ಮ್-ಮ್’ ಎಂಬ ಅರ್ಧಂಬರ್ಧ ಗಂಭೀರ ಶಬ್ದ; ಯಾವುದೋ ಒಂದು ವಿಶಾಲವಾದ ಲೋಹದ ಸಲಾಕೆಯನ್ನು, ಯಾರೋ ಆಕಾಶದ ಲೋಹದ ನೆಲದ ಮೇಲೆ, ಈ ದಿಕ್ಕಿನಿಂದ ಆ ದಿಕ್ಕಿನವರೆಗೆ ಎಳೆದುಕೊಂಡು ತಿರುಗುತ್ತಿದ್ದಂತೆ.’’

‘‘ನಾಲ್ಕೂ ಕಡೆ ಒಂದೇ ಸಮನೆ ಸುರಿಯುತ್ತಿದ್ದ ಮುಸಲಧಾರೆಯ ಜೋರೋ ಎಂಬ ಏಕತಾನ, ಮಧ್ಯೆ ಮಧ್ಯೆ ಗಾಳಿಯೊತ್ತಡದ ಸೋಂ-ಓ-ಓ, ಬೋಂ-ಓ-ಓ-ಓ ಶಬ್ದ, ಮರಗಿಡಗಳ ರೆಂಬೆಗಳು ಸ್ವಲ್ಪವೂ ಸಂಯಮವಿಲ್ಲದೆ ಸ್ವೇಚ್ಛೆಯಿಂದ ಅಲ್ಲಾಡುವ ಶಬ್ದ, ಮೋಡಗಳ ಗರ್ಜನೆ ಇವೆಲ್ಲವೂ ಸೇರಿ ಕಿವಿಯನ್ನು ಕಿವುಡು ಮಾಡುತ್ತಿವೆ...ದುರ್ಗಾಳ ಮನಸ್ಸಿಗೆ ಕಾಡು ತೋಟಗಳೆಲ್ಲಾ ಬಿರುಗಾಳಿ, ಮಳೆಗೆ ಸಿಕ್ಕಿ ಒಡೆದು ತಲೆಕೆಳಗಾಗಿ ಬಿದ್ದುಹೋಗಿರುವಂತೆ ಅನಿಸಿತು’’

ಈ ಕಡೆ, ಮನೆಯಲ್ಲಿ, ಮಳೆ ಶುರುವಾದ ತಕ್ಷಣ ಮಕ್ಕಳಿಗೆ ಕೂಗುಹಾಕಿದ್ದಾಳೆ ತಾಯಿ ಸರ್ವಜಯಾ. ಓಗೊಟ್ಟು ಅವರು ಮನೆ ಸೇರಿಕೊಂಡಿಲ್ಲ. ಅಂದರೆ ಅವರು ಆಸುಪಾಸಿನಲ್ಲಿ ಇಲ್ಲ ಎಂದೇ ಅರ್ಥ. ಸ್ವಲ್ಪವೇ ಸ್ವಲ್ಪಹೊತ್ತು ಮಳೆ ನಿಂತಂತೆ ಆದಾಗ ಹೊರಬಾಗಿಲಿಗೆ ಬಂದು ನಿಂತಿದ್ದಾಳೆ. ಚಪ್ ಚಪ್ ಎಂದು ಕಾಲುಹಾಕುತ್ತಾ ಕೊಳದ ಕಡೆ ಹೊರಟಿದ್ದ ನೆರೆಯ ರಾಜಕೃಷ್ಣ ಪಾಲಿತರ ಮಗಳು ಆಶಾಲತಾಳನ್ನು ‘ಏನೇ ಅಮ್ಮಾ, ದುರ್ಗಾ, ಅಪೂ ಇವರನ್ನು ಎಲ್ಲಾದರೂ ನೋಡಿದಿಯೇನೇ’ ಎಂದು ಕೇಳಿದರೆ, ‘ಇಲ್ಲ ಅತ್ತೆ, ನಾನು ನೋಡಿಲ್ಲ’ ಎಂದವಳು, ಸ್ವಲ್ಪ ನಕ್ಕು, ಮಳೆ ದೇವತೆ ಏನಾದರೂ ಎತ್ತಿಕೊಂಡು ಹೋದಳೇನೋ ಅತ್ತೆ ಎಂದುಬಿಡಬೇಕೆ? ಸರ್ವಜಯಾ ಉದ್ವಿಗ್ನಚಿತ್ತಳಾಗಿ ಮನೆಯೊಳಗೆ ಹೋಗುತ್ತಾಳೆ...

* ನಿಗೂಢವನ್ನು ಭಯದ ಕಸಿನ್ ಎಂದೇ ಕರೆಯಬಹುದು. ಮಾಮೂಲಿ ಪುಸ್ತಕದ ಅರ್ಧ ಆಕಾರದಲ್ಲಿ ಪ್ರಕಟವಾಗಿದ್ದ ಪೂರ್ಣಚಂದ್ರ ತೇಜಸ್ವಿಯವರ ಕಿರು ಕಾದಂಬರಿ ‘ನಿಗೂಢ ಮನುಷ್ಯರು’ ಅನ್ನು, ಬೊಗಸೆಯಲ್ಲಿ ಹಿಡಿದು ಓದುತ್ತ ಓದುತ್ತ, ಅದರ ನಿಗೂಢತೆ ಅನುಭವಿಸಲು ಪುಸ್ತಕ ಮುಚ್ಚಿ ಕಣ್ಣುತೆರೆದೇ ಭ್ರಮಿಷ್ಠರಾಗಬಹುದಿತ್ತು. ಮೋಟಾರು ವಾಹನ ಕೆಟ್ಟು ಅನಿರೀಕ್ಷಿತವಾಗಿ ಒಂದು ಮನೆಯಲ್ಲಿ ಆಶ್ರಯ ಪಡೆಯುವ ನಿರೂಪಕನಿಗೆ, ಹೊರಗಡೆ ಮೋಡ ಕವಿದ ಒಂದು ಬಗೆಯ ವಿಚಿತ್ರ ವಾತಾವರಣ. ಭೂಮಿಯೆಲ್ಲ ಕೊಳೆತಂತೆ ಮೆತ್ತಗಾಗಿರುವ ಕೆಸರು. ಅದುರುವ, ಜುಂಯ್ಯಿಗುಡುವ ನೆಲ. ಮಳೆಯ ತೀವ್ರತೆಗೆ ಮನೆಯ ಎದುರೇ ಏಳುತ್ತಿರುವ ಚಿಲುಮೆ ಮತ್ತು ಒರತೆಗಳು. ವಿಶ್ವದ ಯಾವುದೋ ಒಂದು ಪ್ರಾಚೀನ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಂತೆ ಅನಿಸುತ್ತದೆ.

ನಮ್ಮವನ್ನೂ ಸೇರಿಸಿದಂತೆ, ವಿಶ್ವದ ಹಾರರ್ ಸಿನೆಮಾಗಳು ಬೆನ್ನಹುರಿಗುಂಟ ಚಳಿ ಚಲಿಸುವಂತೆ ಮಾಡಲು ಮಳೆರಾತ್ರಿ- ‘ಬರಸಾತ್ ಕಿ ರಾತ್’ ಅನ್ನೇ ಆಯ್ದುಕೊಳ್ಳುವುದು ಸಾಮಾನ್ಯ. ಮುಗಿಲು ಹರಿದುಕೊಂಡು ಬೀಳುತ್ತಿರುವ ಮಳೆಯಲ್ಲಿ ಏಕಾಂಗಿಯಾಗಿ ಕಾರು ಓಡಿಸುತ್ತಿರುವ ನಾಯಕ/ನಾಯಕಿ. ಕತ್ತಲ ದಾರಿಯಲ್ಲಿ ಕೈ ತೋರಿಸಿ ವಾಹನ ನಿಲ್ಲಿಸುವ ಆಕೃತಿ. ಮಾನವೀಯತೆಯಿಂದ ಸ್ಪಂದಿಸಿ, ಕಾರು ನಿಲ್ಲಿಸಿ, ಆತ/ಆಕೆಯನ್ನು ಹತ್ತಿಸಿಕೊಳ್ಳುವ ವೇಳೆ ಏನೋ ಎಡವಟ್ಟಾಯಿತು ಎಂದು ಭಾಸವಾಗುವಂತೆ ಮಾಡುವ ಮುಖಚಹರೆ, ಕಣ್ಣೋಟ, ವಿಚಿತ್ರ ಮಾತು. ಪ್ರೇಕ್ಷಕ ಸೀಟಿನ ತುದಿಗೆ ಸರಿದು ಅದು ಅತಿ ಮಾನುಷವಾದದ್ದೇ ಎಂದು ನಿರ್ಧರಿಸುತ್ತಿರುವಾಗ, ಏನೂ ಘಟಿಸದೆ ಅವರು ಇಳಿದುಹೋಗುವುದು.

ಇನ್ನೊಂದು ಆಕೃತಿಗೆ ಕಾಯುವಂತೆ ಮಾಡುವ ಚತುರ ನಿರ್ದೇಶಕರ ಟ್ರಿಕ್ ಅದು...ನೋಡಿ ನೋಡಿ ಮಾಸಲಾದರೂ, ಅನುಭವಿಸುವಾಗ ಥ್ರಿಲ್ ಉಳಿದಿರುತ್ತದೆ. ಹಾಗೆ, ಇವೂ ಕೂಡ ‘ಝಿಂದಗೀ ಭರ್ ನಹೀ ಭೂಲೇಗೀ’ ಟೈಪೇ. * ಭಯ, ಉದ್ವೇಗ, ಕ್ಷಣಾರ್ಧದಲ್ಲಿ ಪಾರಾಗುವ ರೋಮಾಂಚನ ತರಿಸುವ ಭಯಾನಕ ಸಿನೆಮಾಗಳನ್ನು ಅವು ಸುಳ್ಳು ಎಂದು ಮನಸ್ಸಿನಾಳದಲ್ಲಿ ಗೊತ್ತಿರುವುದರಿಂದಲೇ ಅಷ್ಟು ಚೆನ್ನಾಗಿ ಸವಿಯಲು ಸಾಧ್ಯ ಎಂಬುದು ಸ್ವಾರಸ್ಯಕರ. ಆದರೆ ನಿಜ ಜೀವನದಲ್ಲಿಯೂ ಅಸಾಮಾನ್ಯ ಮಳೆಯನ್ನು ಸಾಕಷ್ಟು ಪೂರ್ವತಯಾರಿಯೊಂದಿಗೆ ಸವಾಲಿನಂತೆ ಎದುರಿಸುವುದು, ಕೂದಲು ಕೊಂಕದಂತೆ ಅದರಿಂದ ಪಾರಾಗಿ ಮನೆ ತಲುಪಿ, ಬಿಸಿನೀರಿನ ಶವರ್ ತೆಗೆದುಕೊಂಡು ಕಡು ಕಾಫಿ ಗುಟಕರಿಸುವುದು ಸಾಹಸ ಪ್ರಿಯರಿಗೆ ವಿಲಕ್ಷಣ ಖುಷಿ. ರಾಕ್ಷಸ ಮಳೆಗಾಳಿಗಳ ಚಂಡಮಾರುತ ಸನಿಹದಲ್ಲಿದ್ದಾಗ ರಾತ್ರೋರಾತ್ರಿ ಸುತ್ತಮುತ್ತಲಿನ ಜನರನ್ನು ತೆರವುಗೊಳಿಸಿ ಕಾಪಾಡಿದಾಗಲೂ ಇಂತಹುದೇ ಸಾರ್ಥಕ ಭಾವ ಸಂಬಂಧಪಟ್ಟ ಎಲ್ಲರಲ್ಲಿ ಮನೆ ಮಾಡುತ್ತದೆ. *

ಸ್ಮತಿಯ ಖಾನೆಗಳು ಪಡಪಡನೇ ತೆರೆದುಕೊಂಡು ಸ್ಪಷ್ಟವಾಗಿ ಗೋಚರಿಸುವುದು ಸಹ ಮಳೆ ತರುವ ಒಂದು ಮನೋವ್ಯಾಪಾರ: ಮತ್ತೆ ಮಳೆ ಹೊಯ್ಯುತ್ತಿದೆ, ಎಲ್ಲ ನೆನಪಾಗುತಿದೆ! ಅನೇಕ ಮಳೆಯ ಸನ್ನಿವೇಶಗಳು, ಅದಕ್ಕೆ ಹೆಣೆದುಕೊಂಡ ಸ್ವಂತ ಬದುಕಿನ ಘಟನೆಗಳು ಒಂದರೊಳಗೊಂದು ಕಲೆತು ವಾಸ್ತವ, ಉದ್‌ವಾಸ್ತವದ (ಸರ್ರಿಯಲಿಸ್ಟಿಕ್ ) ಅಂಚಿಗೆ ಸರಿಯುತ್ತದೆ. ನೆನಪಲ್ಲಿ ಅಚ್ಚಾದ ಒಂದು ಮಳೆಯ ಚಿತ್ರವನ್ನು ಸದ್ಯ ನೋಡುತ್ತಿರುವ ಮಳೆ ತುಂಬ ಹೋಲುತ್ತಿದೆಯಲ್ಲ ಎಂಬ ಲಹರಿ ಮೂಡುತ್ತದೆ. ಸೋನೆ ಮಳೆಯ ಸಿಂಚನದ ತೆಳುಪರದೆ ಹೊದ್ದು ಓಡಿಯಾಡುತ್ತಿರುವ ಮಾನವಾಕೃತಿಗಳು ಯಾವ ಲೋಕದವೋ ತಿಳಿಯದಲ್ಲ ಎಂಬ ಮೈಮರೆವು ಉಂಟಾಗುತ್ತದೆ.

* ಉತ್ಕೃಷ್ಟ ಗಾಯನ ಆಲಿಸಿದಾಗ ಮಳೆಯಲ್ಲಿ ತೋಯ್ದು ತೊಪ್ಪಡಿಯಾದಂತೆ ಅನಿಸುವುದು ಸಂಗೀತ ಹಾಗೂ ಮಳೆಗೆ ಇರುವ ಅವಿನಾಭಾವ ಸಂಬಂಧಕ್ಕೆ ಸಾಕ್ಷಿ. ‘‘ಸುರ್ ಕೀ ನದಿಯಾಂ ಹರ್ ದಿಶಾ ಸೆ ಬೆಹಕೆ ಸಾಗರ್ ಮೇ ಮಿಲೇಂ/ ಬಾದಲೋಂ ಕಾ ರೂಪ್ ಲೇಕೆ ಬರಸ್ ಹಲ್ಕೆ ಹಲ್ಕೆ.’’ ಒಂದು ‘ಮಾಹೋಲ್’ (ಲಾಲಿತ್ಯಪೂರ್ಣ ಆವರಣ) ಸೃಷ್ಟಿಸಿ ಶೋತೃಗಳನ್ನು ಆ ಚಾದರದಡಿ ಸೇರಿಸುತ್ತಿದ್ದ ಖ್ಯಾತಿಯ ಮೇರು ಗಾಯಕ ಉಸ್ತಾದ್ ಫಯಾಝ್ ಖಾನ್ ಹಾಡಿದ ಮೇಘ ಮಲ್ಹಾರ್ ಆಲಿಸಿ ತಮಗೆ ಉಂಟಾದ ಅನುಭೂತಿಯನ್ನು ಮತ್ತೊಬ್ಬ ಗಾಯಕ ಫಿರೋಝ್ ದಸ್ತೂರ್ ಹೀಗೆ ಬಣ್ಣಿಸುತ್ತಾರೆ:

‘‘ನೇಪಾಳದ ರಾಜನ ಗೌರವಾರ್ಥ ಐವತ್ತು ವರ್ಷಕ್ಕೂ ಹಿಂದೆ ಅವರು ನೀಡಿದ ಕಛೇರಿ ನನಗೆ ಇಂದಿಗೂ ರೋಮಾಂಚನ ತರಿಸುತ್ತದೆ. ಖಾನ್ ಸಾಹೇಬರ ಸ್ವರ ಮಂದ್ರ ತಲುಪಿದಾಗ ಅಲೆ ಮೇಲೆ ತೇಲುತ್ತ ಸಾಗರಗರ್ಭಕ್ಕಿಳಿದ ಅನುಭವ ಆಯಿತು...ಧೃತ್ ಜೋಡ್ ಎತ್ತಿಕೊಂಡು ಲಯಬದ್ಧ ರಂಗುರಂಗಿನ ಜಾಲರಿ ವಿನ್ಯಾಸವನ್ನು ಆಲಾಪ್‌ನಲ್ಲಿ ನಿರ್ಮಿಸಿ ಶರಧಿಯಂತೆ ಗಮಕದಲ್ಲಿ ಭೋರ್ಗರೆದಾಗ ಒಂದು ದೈತ್ಯ ಸುಂಟರಗಾಳಿಗೆ ಸಿಕ್ಕಂತೆ. ಕ್ರಮೇಣ ಅದು ಲಯವಾದಾಗ ನಾನು ಸಾಕು ಇನ್ನೇನೂ ಬೇಡ ಎಂಬ ತುರೀಯಾವಸ್ಥೆಯಲ್ಲಿದ್ದೆ. ಸುತ್ತಲಿನ ಹವೆಯಲ್ಲಿ ಮಳೆಯ ಗಂಧ ಬೆರೆತಿತ್ತು.’’ (ಕುಮಾರ್ ಪ್ರಸಾದ್ ಮುಖರ್ಜಿಯವರ ‘ದಿ ಲಾಸ್ಟ್ ವರ್ಲ್ಡ್ ಆಫ್ ಹಿಂದೂಸ್ಥಾನಿ ಮ್ಯೂಸಿಕ್’ ಪುಸ್ತಕದಲ್ಲಿ).
 
* ಪಾತ್ರಗಳ ಮನೋವ್ಯಾಪಾರ ಹಾಗೂ ಅವರ ಬದುಕಿನ ಸಂದರ್ಭಗಳ ಮಾಹೋಲ್ ನಿರ್ಮಿಸಲು, ಅದರೊಂದಿಗೆ ಪ್ರೇಕ್ಷಕರ ಮೌನತಾದಾತ್ಮ್ಯ ಸಾಧಿಸಲು ಸಹ ಮಳೆ ಸಹಾಯಕ. ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಪ್ರಥಮ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ಸ್ವಯಂವರಂ’ ಒಂದು ಉದಾಹರಣೆ. ಮನ ಮೆಚ್ಚಿದವನನ್ನು, ಮನೆ ಮಾರು ಬಿಟ್ಟುಬಂದು ಮದುವೆಯಾದ ಏಕೈಕ ತಪ್ಪಿಗೆ(?!) ಸೀತೆಯಷ್ಟೇ ಕಷ್ಟ ಕೋಟಲೆ ಅನುಭವಿಸುವ ಅದೇ ಹೆಸರಿನ ನಾಯಕಿ. ಪತಿ ಕಾಯಿಲೆಯಲ್ಲಿ ತೀರಿಕೊಳ್ಳುತ್ತಾನೆ.

ಅವರ ಅಲ್ಪಾವಧಿಯ ದಾಂಪತ್ಯದ ಫಲವಾದ ಹಸುಳೆಯೊಂದಿಗೆ ಸೀತೆ ಈಗ ಏಕಾಂಗಿ. ಸುತ್ತಲ ಪ್ರಪಂಚವನ್ನು ಎದುರಿಸಲು ಏನೂ, ಯಾರೂ ಅವಳ ಸಹಾಯಕ್ಕೆ ಇಲ್ಲ. ಅದರ ದೃಶ್ಯ ರೂಪಕದಂತಿರುವ ಅಂತಿಮ ಚಿತ್ರಿಕೆ ನೋಡುಗರನ್ನು ಕರುಣಾರ್ದ್ರಗೊಳಿಸುವ ಪರಿ ಅನನ್ಯ: ಪುಟ್ಟ ಬಿಡಾರದಲ್ಲಿ ಮಗುವಿಗೆ ಹಾಲು ಕುಡಿಸಿ ಮಲಗಿಸುತ್ತಿದ್ದಾಳೆ.

ಆಕೆಯ ಕಾರ್ಪಣ್ಯಕ್ಕೆ, ದಯನೀಯ ಸ್ಥಿತಿಗೆ ತನ್ನದೂ ಕಾಣಿಕೆ ಸಲ್ಲಿಸುವಂತೆ ರುದ್ರ ಭಯಂಕರವಾಗಿ ಹೊರಗಡೆ ಮಳೆ, ಹೊರಬಾಗಿಲ ಲಡಕಾಸಿ ಚಿಲಕ ಯಾವಾಗ ಬೇಕಾದರೂ ಕಳಚಿ ಬೀಳುತ್ತೇನೆಂದು ಬಿಟ್ಟೂ ಬಿಡದೆ ಹೆದರಿಸುತ್ತಿದೆ...ಆ ಎರಡು ಜೀವ-ಜೀವನಗಳ ಅನಿಶ್ಚಿತತೆ ಅಲ್ಲಿ ಹೆಪ್ಪುಗಟ್ಟಿದೆ. * ಮೂರನೆಯವರ ಇರುವಿಕೆ ಬಯಸದ ಮುಚ್ಚಟೆಯಾದ, ಖಾಸಗಿಯಾದ ಒಂದು ಮೌನ ಸಾಂಗತ್ಯವನ್ನು ಸಹ ಮಳೆ ಕಲ್ಪಿಸಬಹುದೆ? ಪ್ರತಿಭಾ ನಂದಕುಮಾರರ ‘ನಾನು, ಪುಟ್ಟಿ ಮಳೆ ನೋಡಿದ್ದು’ ಪದ್ಯ ಹೌದೆನ್ನುತ್ತದೆ. ತಾಯಿ ಮತ್ತು ಮಗಳು ಕಿಟಕಿಯಲ್ಲಿ ಮುಖ ಇಟ್ಟು ಮಳೆ ನೋಡಿದ ನವಿರು ಅನುಭೂತಿ ಮಾತಾಗುತ್ತ ಆಗುತ್ತ ಪದ್ಯ ಅಚಾನಕ್ಕಾಗಿ ಹೀಗೆ ಕೊನೆಗೊಳ್ಳುತ್ತದೆ: ‘‘ಆವರಿಸದೆ ದೂರ ನಿಂತು ನಗುವ ತಂದೆಯ ನೆರಳು.’’  

Writer - ವೆಂಕಟಲಕ್ಷ್ಮಿ ವಿ.ಎನ್

contributor

Editor - ವೆಂಕಟಲಕ್ಷ್ಮಿ ವಿ.ಎನ್

contributor

Similar News