ಶಿವಪ್ರಕಾಶರಿಗೆ ‘ಕುಸುಮಾಗ್ರಜ’

Update: 2017-06-17 18:26 GMT

ಮರಾಠಿಯ ಮಹಾನ್ ಸಾಹಿತಿ ಕುಸುಮಾಗ್ರಜರಿಗೆ ಸ್ಮಾರಕವಾಗಿ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಯಶವಂತ ರಾವ್ ಚೌಹಾಣ್ ಮುಕ್ತ ವಿಶ್ವವಿದ್ಯಾನಿಲಯ ಅಧ್ಯಯನ ಪೀಠವೊಂದನ್ನು ಸ್ಥಾಪಿಸಿದ್ದು, ಪ್ರತಿ ವರ್ಷ ಕುಸುಮಾಗ್ರಜ ರಾಷ್ಟ್ರೀಯ ಪುರಸ್ಕಾರ ನೀಡುತ್ತಿದೆ. ಒಂದು ಲಕ್ಷ ರೂ. ಮೊತ್ತದ ಹಮ್ಮಿಣಿ ಮತ್ತು ಫಲಕವನ್ನೊಳಗೊಂಡ ಈ ಪ್ರಶಸ್ತಿಯನ್ನು ಪ್ರತೀ ವರ್ಷ ವಿವಿಧ ಭಾರತೀಯ ಭಾಷೆಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಹಿತಿಗಳಿಗೆ ನೀಡಲಾಗುತ್ತಿದೆ. ಈ ವರ್ಷ ಕನ್ನಡದ ಖ್ಯಾತ ಕವಿ, ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ಈ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿರುವುದು ಕನ್ನಡಿಗರಿಗೆ ಹೆಮ್ಮೆಯ, ಸಂತೋಷದ ಸಂಗತಿ.

ಯಾವುದೇ ಒಂದು ಪಂಥ, ಆಂದೋಲನಗಳ, ಪಕ್ಷಗಳ, ಸಿದ್ಧಾಂತಗಳ ಜೊತೆ ಗುರುತಿಸಿಕೊಳ್ಳದೆ ಭಾವ-ಅನುಭಾವಗಳಲ್ಲಿ ಬದುಕಿನ ಅನ್ವೇಷಣೆಯ ಸೃಜನಶೀಲತೆಗೆ ಬದ್ಧರಾಗಿರುವ ಎಚ್.ಎಸ್.ಶಿವಪ್ರಕಾಶ್ ಕನ್ನಡದ ಪ್ರಮುಖ ಕವಿ, ನಾಟಕಕಾರರು. ಸದ್ದುಗದ್ದಲ ಮಾಡದೆ ಕಾವ್ಯ ಮತ್ತು ನಾಟಕಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ತಮ್ಮ ಸೃಜನಶೀಲ ಅಸ್ಮಿತೆಯನ್ನು ಛಾಪಿಸುತ್ತಾ ಬಂದಿರುವ ಶಿವಪ್ರಕಾಶ್ ಕನ್ನಡ ನೆಲದಲ್ಲಿ ಇದ್ದ ಕಾಲಕ್ಕಿಂತ ಹೆಚ್ಚಾಗಿ ಕರ್ನಾಟಕದ ಸೀಮೋಲ್ಲಂಘನ ಮಾಡಿದ ನಂತರ ಸಾಹಿತ್ಯಕ ಕಾರಣಗಳಿಂದಾಗಿ ಅಗಾಗ್ಗೆ ಸುದ್ದಿಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಪ್ರತ್ತುತ ಅವರು ‘ಕುಸುಮಾಗ್ರಜ’ ರಾಷ್ಟ್ರೀಯ ಪುರಸ್ಕಾರ ಪಡೆದು ಸುದ್ದಿಯಲ್ಲಿದ್ದಾರೆ.

ಯಾರು ಈ ಕುಸುಮಾಗ್ರಜ? ಏನೀ ಕುಸುಮಾಗ್ರಜ ಪ್ರಶಸ್ತಿ?

ಕುಸುಮಾಗ್ರಜರು(1912-1999) ಮರಾಠಿಯ ಸುಪ್ರಸಿದ್ಧ ಕವಿ ಮತ್ತು ನಾಟಕಕಾರರು, ಪತ್ರಕರ್ತರು. ಮರಾಠಿ ನವೋದಯ ಸಾಹಿತ್ಯದ ಮಾರ್ಗಪ್ರವರ್ತಕ ಸಾಹಿತಿಗಳಲ್ಲಿ ಪ್ರಮುಖರು. ‘ಕುಸುಮಾಗ್ರಜ’ ಕಾವ್ಯನಾಮದ ವಿಷ್ಣು ವಾಮನ ಶಿರ್ವಾಡ್‌ಕರ್ ಕವಿಯಾಗಿ, ನಾಟಕಕಾರರಾಗಿ ಮರಾಠಿ ಸಾಹಿತ್ಯಕ್ಕೆ ಹೊಸದಿಗಂತಗಳನ್ನು ಅನಾವರಣಗೊಳಿಸಿದವರು. ಮರಾಠಿಗೆ ಜ್ಞಾನಪೀಠ ಪ್ರಶಸ್ತಿಯ ಗೌರವ ತಂದುಕೊಟ್ಟ ಮತ್ತೊಬ್ಬ ಮಹಾನ್ ಲೇಖಕರು. ಕುಸುಮಾಗ್ರಜರ ಮೊದಲ ಕವನ ಸಂಕಲನ ‘ಜೀವನ ಲಹರಿ’(1933). ‘ವಿಶಾಖ’ ಎರಡನೆಯ ಕವನ ಸಂಕಲನ (1942). ಹದಿಮೂರು ಕವನ ಸಂಕಲನಗಳು, ಹತ್ತು ನಾಟಕಗಳು, ಆರು ಕಥಾ ಸಂಕಲನಗಳು, ಮೂರು ಕಾದಂಬರಿಗಳು, ಆತ್ಮಕಥಾನಕ ಲೇಖನಗಳು ಹೀಗೆ ಸಾಗುತ್ತದೆ ಕುಸುಮಾಗ್ರಜರ ವಿಪುಲ ಸಾಹಿತ್ಯ ಸೃಷ್ಟಿ. ಮರಾಠಿ ರಂಗಭೂಮಿಯ ಪರಂಪರೆ ಮತ್ತು ಅವನತಿಯನ್ನು ಚಿತ್ರಿಸಿರುವ ‘ನಟ ಸಾಮ್ರಾಟ್’ ಅವರ ಅತ್ಯಂತ ಪ್ರಸಿದ್ಧ ನಾಟಕ. ‘ವಿಶಾಖ’ ಕವನ ಸಂಕಲನವನ್ನು ಪ್ರಕಟಿಸಿದ, ಮರಾಠಿ ಸಾಹಿತ್ಯದ ಪಿತೃಸದೃಶ ಮೂರ್ತಿಯಾದ ವಿ. ಸ. ಖಾಂಡೇಕರ್, ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ: ‘‘ಸಾಮಾಜಿಕ ಅಸಮಾನತೆಯ ಜ್ವಾಲಾಮುಖಿ ಒಳಗೇ ಕುದಿಯುತ್ತಾ ನಿಲ್ಲದೆ ಈ ಕವಿತೆಗಳ ಮೂಲಕ ಅಗ್ನಿರಸ ವರ್ಷವಾಗಿ ಹೊರಹೊಮ್ಮಿದೆ...ಕವಿತೆ ಕೊಳಲಾಗಿ ಉಲಿಯದೆ ಖಡ್ಗವಾಗಿ ಮಿಂಚಿದೆ.’’ ಖಾಂಡೇಕರರ ಈ ಮಾತುಗಳು ಕುಸುಮಾಗ್ರಜರ ಸಮಗ್ರ ಸಾಹಿತ್ಯಕ್ಕೆ ಬರೆದ ಭಾಷ್ಯದಂತಿದೆ ಎನ್ನುವುದು ಸಾಹಿತ್ಯ ಚರಿತ್ರೆಕಾರರ ಮಾತು. ಖಾಂಡೇಕರ್ ಸ್ವತ: ಪ್ರಕಟಿಸಿದ ‘ವಿಶಾಖಾ’ ಕವನ ಸಂಕಲನ ಅದ್ಭುತ ಯಶಸ್ಸು ಪಡೆಯಿತು. ರಾತ್ರಿ ಬೆಳಗಾಗುವುದರಲ್ಲಿ ಕವಿ ಕುಸುಮಾಗ್ರಜರು ಮಹಾರಾಷ್ಟ್ರದ ಮನೆಮಾತಾದರು.

ಮರಾಠಿ ಭಾಷೆಗೆ 1974ರಲ್ಲಿ ಪ್ರಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿ ದೊರೆಯಿತು. ತಮ್ಮ ಭಾಷೆಗೆ ಈ ಗೌರವವನ್ನು ತಂದುಕೊಟ್ಟವರು ವಿ. ಸ. ಖಾಂಡೇಕರ್. ಆಗ ಸಂದರ್ಶಕರೊಬ್ಬರು, ಮರಾಠಿ ಭಾಷೆಗೆ ಇನ್ನೊಮ್ಮೆ ಜ್ಞಾನಪೀಠ ಪ್ರಶಸ್ತಿ ಬರುವುದಾದರೆ ಯಾರಿಗೆ ಬರುತ್ತದೆಂದು ನಿಮ್ಮ ಅಭಿಪ್ರಾಯ ಎಂದು ಕೇಳಿದರಂತೆ. ಖಾಂಡೇಕರರು ಹಿಂದುಮುಂದೆ ನೋಡದೆ, ‘‘ಇನ್ಯಾರಿಗೆ, ಕುಸುಮಾಗ್ರಜರಿಗೆ’’ ಎಂದರಂತೆ. ಖಾಂಡೇಕರರ ಮಾತು ಹುಸಿಯಾಗಲಿಲ್ಲ. ಮರಾಠಿ ಮತ್ತೊಂದು ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಲು ಹದಿನಾಲ್ಕು ವರ್ಷ ಕಾಯಬೇಕಾಯಿತು. ಕುಸುಮಾಗ್ರಜರು 1988ರಲ್ಲಿ 1987ನೆ ಸಾಲಿನ ಜ್ಞಾನಪೀಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು. ಮರಾಠಿಯ ಮಹಾನ್ ಸಾಹಿತಿ ಕುಸುಮಾಗ್ರಜರಿಗೆ ಸ್ಮಾರಕವಾಗಿ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಯಶವಂತ ರಾವ್ ಚೌಹಾಣ್ ಮುಕ್ತ ವಿಶ್ವವಿದ್ಯಾನಿಲಯ ಅಧ್ಯಯನ ಪೀಠವೊಂದನ್ನು ಸ್ಥಾಪಿಸಿದ್ದು, ಪ್ರತೀ ವರ್ಷ ಕುಸುಮಾಗ್ರಜ ರಾಷ್ಟ್ರೀಯ ಪುರಸ್ಕಾರ ನೀಡುತ್ತಿದೆ. ಒಂದು ಲಕ್ಷ ರೂ. ಮೊತ್ತದ ಹಮ್ಮಿಣಿ ಮತ್ತು ಫಲಕವನ್ನೊಳಗೊಂಡ ಈ ಪ್ರಶಸ್ತಿಯನ್ನು ಪ್ರತೀ ವರ್ಷ ವಿವಿಧ ಭಾರತೀಯ ಭಾಷೆಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಹಿತಿಗಳಿಗೆ ನೀಡಲಾಗುತ್ತಿದೆ. ಈ ವರ್ಷ ಕನ್ನಡದ ಖ್ಯಾತ ಕವಿ, ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ಈ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿರುವುದು ಕನ್ನಡಿಗರಿಗೆ ಹೆಮ್ಮೆಯ, ಸಂತೋಷದ ಸಂಗತಿ.

ಎಚ್.ಎಸ್.ಶಿವಪ್ರಕಾಶ್ ಹುಟ್ಟಿದ್ದು ಬೆಂಗಳೂರಿನಲ್ಲಿ, 1954ರ ಜೂನ್ ತಿಂಗಳಲ್ಲಿ. ತಂದೆ ಬಿ. ಶಿವಮೂರ್ತಿ ಶಾಸ್ತ್ರಿಗಳು, ವೀರಶೈವ ಸಾಹಿತ್ಯದಲ್ಲಿ ಘನ ವಿದ್ವಾಂಸರೆನಿಸಿಕೊಂಡವರು. ಹಲವು ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನುಡಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸಾಹಿತ್ಯದಲ್ಲಿ ಎಂ.ಎ., ಸ್ನಾತಕೋತ್ತರ ಪದವಿ ಪಡೆದ ಶಿವಪ್ರಕಾಶ್ ಜೀವನ ನಿರ್ವಹಣೆಗಾಗಿ ಆಯ್ಕೆಮಾಡಿಕೊಂಡದ್ದು ಅಧ್ಯಾಪನ ವೃತ್ತಿಯನ್ನು. ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಬೋಧಿಸಿದರು. ಈ ಮಧ್ಯೆ ಕಾವ್ಯ-ನಾಟಕಗಳ ರಚನೆ ಅವರ ಸೃಜನಶೀಲಪ್ರತಿಭೆಗೆ ಒಲಿದು ಬಂದಿದ್ದವು. ಕರ್ನಾಟಕದ ಗಡಿ ದಾಟಿ ಪ್ರೊಫೆಸರರಾಗಿ ಹೊಸದಿಲ್ಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ಸೇರಿದರು. ಶಿವಪ್ರಕಾಶರ ಸೃಜನಶೀಲ ಸಾಹಿತ್ಯಕ್ಕೆ ಮತ್ತು ಅವರ ಸಾಹಿತ್ಯಕ ಚಟುವಟಿಕೆಗಳಿಗೆ ಹೊಸ ವಾತಾಯನಗಳು ತೆರೆದುಕೊಂಡಂತಾಯಿತು. ಹೊಸ ನೋಟ, ದೃಷ್ಟಿದರ್ಶನಗಳು ಲಭ್ಯವಾದವು. ಕೇಂದ್ರ ಸಾಹಿತ್ಯ ಅಕಾಡಮಿಯ ‘ಇಂಡಿಯನ್ ಲಾಂಗ್ವೇಜಸ್’ ದ್ವೈಮಾಸಿಕದ ಸಂಪಾದಕರಾದರು. ಅಯೋವಾ ವಿಶ್ವವಿದ್ಯಾನಿಲಯ ಫೆಲೋಶಿಪ್ ಅವರನ್ನರಸಿ ಬಂತು. ಸದ್ಯ ಶಿವಪ್ರಕಾಶ್ ಜರ್ಮನಿಯ ಬರ್ಲಿನ್ ನಗರದಲ್ಲಿರುವ ರವೀಂದ್ರನಾಥ ಠಾಕೂರ್ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದಾರೆ.

ಶಿವಪ್ರಕಾಶರ ನಿಶಿತಮತಿಯ ವಿಚಾರವಂತಿಕೆ ಮತ್ತು ಸೃಜನಶೀಲ ಪ್ರತಿಭೆಯ ಶಕ್ತಿಸಾಮರ್ಥ್ಯಗಳ ವಿಸ್ಮಯಕಾರಕ ಅಭಿವ್ಯಕ್ತಿಯನ್ನು ನಾವು ಅವರ ಕಾವ್ಯ ಮತ್ತು ನಾಟಕಗಳಲ್ಲಿ ಕಾಣಬಹುದಾಗಿದೆ.ಹದಿನೈದಕ್ಕೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿರುವ ಶಿವಪ್ರಕಾಶರ ಮೊದಲ ಸಂಕಲನ ‘ಮಿಲರೇಪ’. ಶಿವಪ್ರಕಾಶರ ಕಾವ್ಯ ಇಂದಿನ ವಾಸ್ತವಿಕತೆ ಮತ್ತು ಅನುಭಾವಿಕತೆಯ ಒಂದು ಅಪೂರ್ವ ಸಂಯೋಗ. ಅನುಭಾವಿಕತೆಯೊಂದಿಗೆ ಇಂದಿನ ಜಗತ್ತಿನ ಕಟುವಾಸ್ತವಿಕತೆಗಳನ್ನು ಸಂಯೋಜಿಸಿ ಅವರು ನಡೆಸುವ ಹೊಸ ಮೌಲ್ಯದ ಹುಡುಕಾಟ, ಅವರೇ ವರ್ಣಿಸಿರುವಂತೆ, ‘ಹೊಸ ಪವಿತ್ರತೆಯ ಹುಡುಕಾಟ’. ‘‘ಮೌಲ್ಯಗಳು ಮಾಯವಾಗುತ್ತಿರುವ ಯಾಂತ್ರಿಕ ಬದುಕಿನ ಇವತ್ತಿನ ದಿನಗಳಲ್ಲಿ ಶಿವಪ್ರಕಾಶರು ಧಾರ್ಮಿಕ ಪರಂಪರೆಯಲ್ಲಿ ಶಕ್ತಿಯನ್ನು ಕಂಡುಕೊಳ್ಳುವ ಅತ್ಯಂತ ಕುತೂಹಲಕಾರಿಯಾದ ಪ್ರಯತ್ನಗಳನ್ನು ಕಾವ್ಯದಲ್ಲಿ ಮಾಡಿದ್ದಾರೆ’’ ಎನ್ನುತ್ತಾರೆ ಖ್ಯಾತ ವಿಮರ್ಶಕರಾದ ಎಲ್.ಎಸ್.ಶೇಷಗಿರಿ ರಾಯರು. ವಚನ ಸಾಹಿತ್ಯ, ಭಕ್ತಿ ಚಳವಳಿ, ಸೂಫಿ ಸಾಹಿತ್ಯ ಮೊದಲಾಗಿ ಅನುಭಾವ ಸಾಹಿತ್ಯದಲ್ಲಿ ಅಧಿಕಾರಯುತವಾಗಿ ಮಾತನಾಡಬಲ್ಲಷ್ಟು ಅಧ್ಯಯನ ನಡೆಸಿದವರು ಶಿವಪ್ರಕಾಶ್. ಈ ಬಗೆಯ ಕಾವ್ಯ ಪ್ರಯೋಗದಲ್ಲಿ ಮತ್ತು ಹುಡುಕಾಟದಲ್ಲಿ ಕನ್ನಡದ ಅನುಭಾವ ಸಾಹಿತ್ಯ ಪರಂಪರೆ,ವಚನ ಸಾಹಿತ್ಯ, ಭಕ್ತಿ ಸಾಹಿತ್ಯ ಹಾಗೂ ಸೂಫಿ ಸಾಹಿತ್ಯಗಳ ಆಳವಾದ ಅಧ್ಯಯನ ಅವರ ನೆರವಿಗೆ ಬಂದಿದೆ. ಶಿವಪ್ರಕಾಶಕರ ‘ಸಿಂಗಿರಾಜ ಸಂಪಾದನೆ’, ‘ಸಾಮಗಾರ ಭೀಮವ್ವ’, ‘ವಾಸವದತ್ತೆ’ ಕನ್ನಡ ವಿಮರ್ಶೆಯ ಗಮನ ಸೆಳೆದಿರುವ ಮೂರು ಪ್ರಮುಖ ಕಥನ ಕವನಗಳು. ಶಿವಪ್ರಕಾಶರ ಕಾವ್ಯದ ಕಳಕಳಿ ಮತ್ತು ಪ್ರಯೋಗಶೀಲತೆಗೆ ನಿದರ್ಶನವಾಗಿ ‘ಸಾಮಗಾರ ಭೀಮವ್ವ’ ಕವನವನ್ನು ಗಮನಿಸಬಹುದು. ಸಾಮಗಾರ ಭೀಮವ್ವ ಈ ನೆಲದ, ಮಣ್ಣಿನ, ಜೀವಶಕ್ತಿಯ ಪ್ರತೀಕವಾಗಿದ್ದಾಳೆ. ಶೋಷಣೆಗೆ ಗುರಿಯಾದ ಜನರ ಪ್ರತಿನಿಧಿಯಾಗಿಯೂ ಜಗತ್ತನ್ನು ಪೊರೆವ ಮಾತೃಶಕ್ತಿಯ ಪ್ರತಿನಿಧಿಯಾಗಿಯೂ ನಮ್ಮ ಹೃದಯಕ್ಕೆ ಹತ್ತಿರವಾಗುತ್ತಾಳೆ. ಇದೊಂದು ಅದ್ಭುತ ಕಥನ ಕಾವ್ಯ. ‘ಐ ಕೀಪ್ ವಿಜಿಲ್ ಆಫ್ ರುದ’್ರ ಹಾಗೂ ‘ಆಟ್ಮನ್ ವೇಸ್’ ಶಿವಪ್ರಕಾಶರ ಇಂಗ್ಲಿಷ್ ಕವನ ಸಂಕಲನಗಳು. ‘ಇನ್ ಕ್ರೆಡಿಬಲ್ ಇಂಡಿಯನ್ ಟ್ರೆಡಿಷನಲ್ ಥಿಯೇಟರ್’ ಭಾರತೀಯ ರಂಗಭೂಮಿಯನ್ನು ಕುರಿತ ಕೃತಿ. ‘ಎವೆರಿ ಡೇ ಯೋಗಿ’, ಮತ್ತೊಂದು ಆಂಗ್ಲ ಕೃತಿ. ಶಿವಪ್ರಕಾಶ್ ಕನ್ನಡದ ಮಹತ್ವದ ಕವಿಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ. ಅಂತೆಯೇ ಯೂರೋಪ್, ದಕ್ಷಿಣ ಅಮೆರಿಕ, ಆಫ್ರಿಕಾ ದೇಶಗಳ ಹಲವಾರು ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಶಿವಪ್ರಕಾಶರ ಕಾವ್ಯ ಇಂಗ್ಲಿಷ್, ಫ್ರೆಂಚ್, ಜರ್ಮನ್, ಸ್ಪಾನಿಶ್, ಪೋಲಿಶ್, ಇಟಾಲಿಯನ್ ಭಾಷೆಗಳಿಗೆ ಅನುವಾದಗೊಂಡಿವೆ.

ಶಿವಪ್ರಸಾದ್ ಹದಿನೈದಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಪ್ರದರ್ಶನ ಮತ್ತು ಅನಗತ್ಯ ವಿವಾದಗಳಿಂದಾಗಿ ಹೆಚ್ಚು ಜನಪ್ರಿಯವಾದದ್ದು ‘ಮಹಾಚೈತ್ರ’. ಜನಪ್ರಿಯತೆಯ ಮಾನದಂಡವೊಂದರಿಂದಲೇ ಅಲ್ಲದೆ ಸಾಹಿತ್ಯಕ ಮಾನದಂಡಗಳಿಂದಲೂ ‘ಮಹಾಚೈತ್ರ’ ಕನ್ನಡದ ಅತ್ಯುತ್ತಮ ನಾಟಕಗಳ ಪಂಕ್ತಿಯಲ್ಲಿ ಸರಿಗಟ್ಟಿನಿಲ್ಲುವಂಥ ನಾಟಕ. ಹನ್ನೆರಡನೆಯ ಶತಮಾನದ ಶರಣ ಚಳವಳಿಯ ಸಂದರ್ಭದಲ್ಲಿ ಕೆಳಜಾತಿಗಳು ತಮ್ಮ ಅಸ್ತಿತ್ವಕ್ಕಾಗಿ ನಡೆಸಿದ ಹೋರಾಟವನ್ನು ಚಿತ್ರಿಸುವ ‘ಮಹಾಚೈತ್ರ’ ಒಂದು ಪ್ರಸಿದ್ಧ ನಾಟಕ. ವಸ್ತುವಿನ ಪ್ರಸ್ತುತತೆ ಹಾಗೂ ಸಮಕಾಲೀನ ಸ್ಪಂದನಗಳಿಂದಾಗಿ ‘ಮಹಾಚೈತ್ರ’ ಯುವಜನಾಂಗವನ್ನು ಆಕರ್ಷಿಸಿದಂತೆಯೇ ಧಾರ್ಮಿಕ ವಲಯಗಳಲ್ಲಿ ವಾದವಿವಾದಗಳ ಬಿರುಗಾಳಿಯನ್ನೆಬ್ಬಿಸಿತು. ಸಿ.ಜಿ.ಕೃಷ್ಣಸ್ವಾಮಿಯವರ ಸಮರ್ಥ ನಿರ್ದೇಶನದಲ್ಲಿ ಯಶಸ್ವಿಯಾಗಿ ಅಭಿನಯಗೊಂಡು ಹೆಚ್ಚು ಜನಮನವನ್ನು ಕಲಕಿತು. ಕರ್ನಾಟಕದ ಮೂರು ವಿಶ್ವವಿದ್ಯಾನಿಲಯಗಳಲ್ಲಿ ವಿದಾರ್ಥಿಗಳು ಓದಬೇಕಾದ ಪಠ್ಯವಾಯಿತು. ಜೊತೆಗೆ ವಿವಾದವೂ ಶುರುವಾಯಿತು. ಬಸವಣ್ಣನವರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಪಟ್ಟಭದ್ರಹಿತಗಳು ತಕರಾರು ಎತ್ತಿದವು. ಕೋರ್ಟಿನ ಮೆಟ್ಟಿಲು ಹತ್ತಿದವು. ಕೊನೆಗೆ ಕಲ್ಬುರ್ಗಿ ವಿಶ್ವವಿದ್ಯಾನಿಲಯ ‘ಮಹಾಚೈತ್ರ’ವನ್ನು ಪಠ್ಯಕ್ರಮದಿಂದ ತೆಗೆದುಹಾಕಿತು. ಈ ವಿವಾದ ವ್ಯಾಪಕ ಚರ್ಚೆಯ ವಸ್ತುವಾಯಿತು. ಹಲವು ಲೇಖಕರ ಮೇಲೆ ಪರಿಣಾಮ ಬೀರಿತು. ‘ಮಹಾ ಚೈತ್ರ’ದ ವಿವಾದ ಭಾರತೀಯ ಇಂಗ್ಲಿಷ್ ಕಾದಂಬರಿಕಾರ್ತಿ ಗೀತಾ ಹರಿಹರನ್ ಅವರ ‘ಟೈಮ್ಸ್ ಆಫ್ ಸೀಜ್’ ಕಾದಂಬರಿಗೆ ಪ್ರೇರಣೆಯನ್ನೊದಗಿಸಿತೆಂದು ಹೇಳಲಾಗಿದೆ. ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊಫೆಸರೊಬ್ಬರು ಬಸವಣ್ಣನನ್ನು ಕುರಿತು ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಪಠ್ಯ ಲೇಖನವೊಂದನ್ನು ಬರೆದು ವಿವಾದದ ಸುಳಿಯಲ್ಲಿ ಸಿಕ್ಕಿ ಬೆಂದು ಬಸವಳಿಯುವುದು ಈ ಕಾದಂಬರಿಯ ವಸ್ತು. ಈ ಕಾದಂಬರಿಯ ನಾಯಕ ಯಾರನ್ನು ಹೋಲುತ್ತಾನೆಂಬುದು ಊಹೆಗೆ ಸುಲಭವಾಗಿ ಎಟುಕುವಂಥಾದ್ದು. ‘ಸುಲ್ತಾನ ಟಿಪ್ಪೂ’ ಶಿವಪ್ರಕಾಶ್ ಅವರ ಇನ್ನೊಂದು ಮಹತ್ವದ ನಾಟಕ. ಈ ನಾಟಕದಲ್ಲಿ ಟಿಪ್ಪುವಿಗೆ ಪ್ರತಿನಾಯಕನಾಗಿ, ಅವನಿಗೆ ಘೋರ ದ್ರೋಹ ಬಗೆದ ಮಂತ್ರಿ ಮೀರ್‌ಸಾಧಕನ ಒಳಸಂಚು, ಕಾರಾಸ್ಥಾನಗಳ ಚಿತ್ರಣ ಉಜ್ವಲವಾಗಿ ಬಂದಿದೆಯೆಂದು ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಸಾಹಿತ್ಯ ಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಶೇಕ್ಸ್‌ಪಿಯರನ ‘ಸ್ವಪ್ನ ನೌಕೆ’, ‘ಸತಿ’, ‘ಕಸಾಂದ್ರಾ’, ‘ಮದುವೆಯ ಹೆಣ್ಣು’, ‘ಮಾಳವಿಕಾ ಮತ್ತು ನಟ್ಟಿರುಳಾಟ-ಇನ್ನೊಂದು ಮ್ಯಾಕ್ಬೆತ್’, ಜಾನಪದ ಸತ್ತ್ವದ ‘ಮಂಟೇಸ್ವಾಮಿ ಕಥಾ ಪ್ರಸಂಗ’, ‘ಮಾದಾರಿ ಮಾದಯ್ಯ’ ಕನ್ನಡ ವಿಮರ್ಶೆಯ ಗಮನ ಸೆಳೆದಿರುವ ಶಿವಪ್ರಕಾಶರ ಇತರ ಮುಖ್ಯ ನಾಟಕಗಳು.

ಪ್ರಶಸ್ತಿ, ಪುರಸ್ಕಾರಗಳು ಶಿವಪ್ರಕಾಶರಿಗೆ ಚಿರಪರಿಚಿತವಾದವು. ಅವರ ನಾಲ್ಕು ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡಮಿಯ ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಪಾತ್ರವಾಗಿವೆ. ಅಲ್ಲದೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ(2006), ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ(2012), ಕುವೆಂಪು ಭಾಷಾ ಭಾರತಿ ಪ್ರಶಸ್ತಿ(2012) ಹೀಗೆ ಹಲವಾರು ಪ್ರಶಸ್ತಿಗಳನ್ನು ಅವರು ಮುಡಿಗೇರಿಸಿಕೊಂಡಿದ್ದಾರೆ.

ಇತ್ತೀಚೆಗೆ ಪುಣೆಯಲ್ಲಿ ನಡೆದ ತೊಂಬತ್ತನೆ ಆಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಕುಸುಮಾಗ್ರಜ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಶಿವಪ್ರಕಾಶರನ್ನು ಸನ್ಮಾನಿಸಲಾಯಿತು. ಶಿವಪ್ರಕಾಶರಿಗೆ ಅಭಿನಂದನೆಗಳು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News