​ಸ್ಪೀಡ್‌ ಬ್ರೇಕರ್ ಪಡೆಯುವ ಬಲಿ ಎಷ್ಟು ಗೊತ್ತೇ?

Update: 2017-06-19 03:48 GMT

ಹೊಸದಿಲ್ಲಿ, ಜೂ.19: ಅತಿವೇಗ ನಿಯಂತ್ರಿಸಲು ಹಾಗೂ ಜೀವ ರಕ್ಷಣೆಯ ಉದ್ದೇಶದಿಂದ ನಿರ್ಮಿಸಿರುವ ಸ್ಪೀಡ್‌ಬ್ರೇಕರ್‌ಗಳು, ಜೀವರಕ್ಷಣೆಗಿಂತ ಹೆಚ್ಚಾಗಿ ಜೀವ ಬಲಿ ಪಡೆಯುತ್ತಿರುವ ಅಂಶ ಬೆಳಕಿಗೆ ಬಂದಿದೆ. ಸ್ಪೀಡ್‌ಬ್ರೇಕರ್‌ಗಳಿಂದಾಗಿ ದೇಶದಲ್ಲಿ ದಿನಕ್ಕೆ ಸರಾಸರಿ 30 ಅಪಘಾತಗಳು ಸಂಭವಿಸುತ್ತಿದ್ದು, ಒಂಬತ್ತು ಮಂದಿ ಬಲಿಯಾಗುತ್ತಿದ್ದಾರೆ!

ಎರಡು ವರ್ಷಗಳಿಂದ ಸ್ಪೀಡ್‌ಬ್ರೇಕರ್‌ಗಳಿಂದಾಗುವ ಅಪಘಾತದ ಮಾಹಿತಿಯನ್ನು ದಾಖಲಿಸುವ ವ್ಯವಸ್ಥೆಯನ್ನು ಸರ್ಕಾರ ಆರಂಭಿಸಿದ್ದು, ಇದರ ಅಂಕಿಅಂಶಗಳನ್ನು ವಿಶ್ಲೇಷಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಈ ಅಂಕಿ ಅಂಶವನ್ನು ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಸ್ಪೀಡ್‌ಬ್ರೇಕರ್‌ಗಳು 2015ರಲ್ಲಿ 3,409 ಜೀವಗಳನ್ನು ಬಲಿ ಪಡೆದಿವೆ. ಇದು ಅಸ್ಟ್ರೇಲಿಯಾದಲ್ಲಿ ಇಡೀ ವರ್ಷದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆಗಿಂತಲೂ ಅಧಿಕ. ವಿನ್ಯಾಸದಲ್ಲಿ ದೋಷ, ರಸ್ತೆ ಉಬ್ಬುಗಳನ್ನು ನಿರ್ಮಿಸಲು ಕಳಪೆ ವಸ್ತುಗಳನ್ನು ಬಳಸುವುದು ಹಾಗೂ ರಸ್ತೆ ಉಬ್ಬುಗಳ ಬಗ್ಗೆ ಸೂಚನಾ ಫಲಕಗಳು ಇಲ್ಲದಿರುವುದು ಈ ಅಪಾಯಕ್ಕೆ ಮುಖ್ಯ ಕಾರಣ.

"ಈ ಪಿಡುಗು ದೇಶಾದ್ಯಂತ ಇದೆ. ನಮ್ಮಲ್ಲಿ ಎಲ್ಲ ರಸ್ತೆಗಳಲ್ಲೂ ಸ್ಪೀಡ್‌ಬ್ರೇಕರ್‌ಗಳಿವೆ. ಆದರೆ ಇವು ವಾಸ್ತವವಾಗಿ ನಿಮ್ಮ ಎಲುಬು ಮುರಿಯುವ ಹಾಗೂ ವಾಹನಗಳಿಗೆ ಹಾನಿ ಮಾಡುವ ವ್ಯವಸ್ಥೆಯಾಗಿ ಪರಿಣಮಿಸಿದೆ" ಎಂದು ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಒಪ್ಪಿಕೊಂಡಿದ್ದಾರೆ. ಇಂಥ ರಸ್ತೆ ಉಬ್ಬುಗಳ ನಿರ್ಮಾಣಕ್ಕೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಂತೂ ಪ್ರತೀ 100 ಮೀಟರ್‌ಗಳಿಗೆ ಒಂದರಂತೆ ಸ್ಪೀಡ್‌ಬ್ರೇಕರ್‌ಗಳು ಇರುವುದು ಪತ್ತೆಯಾಗಿದೆ. ವಸತಿ ಪ್ರದೇಶಗಳ ಪಕ್ಕದಲ್ಲಿ ಜನ ಇಟ್ಟಿಗೆಯಿಂದ ರಸ್ತೆ ಉಬ್ಬುಗಳನ್ನು ನಿರ್ಮಿಸಿರುವ ನಿದರ್ಶನಗಳೂ ಇವೆ. ಇವೆಲ್ಲಕ್ಕೆ ಕಡಿವಾಣ ಹಾಕಿ ಸೂಕ್ತ ತಪಾಸಣೆ ಬಳಿಕವೇ ರಸ್ತೆ ಉಬ್ಬು ನಿರ್ಮಿಸುವ ಬಗ್ಗೆ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News