ವಕೀಲ ವೃತ್ತಿಯಿಂದ ರಾಷ್ಟ್ರಪತಿ ಅಭ್ಯರ್ಥಿಯವರೆಗೆ...

Update: 2017-06-19 13:22 GMT

ಹೊಸದಿಲ್ಲಿ, ಜೂ.19: ಬಿಹಾರದ ಗವರ್ನರ್ ರಾಮ್‌ನಾಥ್ ಕೋವಿಂದ್ ಅವರ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಆಡಳಿತಾರೂಢ ಬಿಜೆಪಿ ಘೋಷಿಸಿದೆ. ನಿರೀಕ್ಷಿಸಿದಂತೆ ಕೋವಿಂದ್ ಅವರು ವಿಪಕ್ಷಗಳ ಬೆಂಬಲ ಪಡೆದು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ದೇಶದ ದ್ವಿತೀಯ ದಲಿತ ರಾಷ್ಟ್ರಪತಿ ಎನಿಸಿಕೊಳ್ಳಲಿದ್ದಾರೆ. ಕೆ.ಆರ್.ನಾರಾಯಣನ್ ಅವರು ಭಾರತ ಪ್ರಪ್ರಥಮ ದಲಿತ ರಾಷ್ಟ್ರಪತಿಯಾಗಿದ್ದಾರೆ. ಇದೀಗ ರಾಷ್ಟ್ರಪತಿಯಾಗಿ ಕೋವಿಂದ್ ಅವರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ತನ್ನ ಪ್ರಯತ್ನ ತೀವ್ರಗೊಳಿಸಿದ್ದು ವಿಪಕ್ಷಗಳ ಜೊತೆ ಸತತ ಸಂಪರ್ಕದಲ್ಲಿದೆ. ಕೋವಿಂದ್ ಅವರ ಸಂಕ್ಷಿಪ್ತ ಪರಿಚಯ ಹೀಗಿದೆ.

* ಕಾನ್ಪುರದ ಪರಾಂಕ್ ಗ್ರಾಮದಲ್ಲಿ 1945ರ ಅಕ್ಟೋಬರ್ 1ರಂದು ಜನನ.

  * ಕಾನ್ಪುರ ಕಾಲೇಜಿನಿಂದ ಕಾನೂನು ಪದವಿ ಪಡೆದ ಬಳಿಕ ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಲು ಕೋವಿಂದ್ ದಿಲ್ಲಿಗೆ ತೆರಳಿದರು. ಎರಡು ಬಾರಿ ವಿಫಲರಾದರೂ ಮೂರನೇ ಬಾರಿ ತೇರ್ಗಡೆಯಾದರು. ಆದರೆ ಐಎಎಸ್ ಸೇವೆಗೆ ಸೇರುವ ನಿರ್ಧಾರ ಬದಲಿಸಿ ವಕೀಲ ವೃತ್ತಿಯನ್ನು ಆರಿಸಿಕೊಂಡರು.

*ದಿಲ್ಲಿ ಹೈಕೋರ್ಟ್‌ನಲ್ಲಿ ಕೇಂದ್ರ ಸರಕಾರದ ವಕೀಲರಾಗಿ 1977ರಿಂದ 79ರವರೆಗೆ ಕಾರ್ಯ ನಿರ್ವಹಿಸಿದ್ದರು. 16 ವರ್ಷ ದಿಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿದ್ದರು.

  * ಬಿಜೆಪಿ ದಲಿತ ಮೋರ್ಚಾದ ಮಾಜಿ ಅಧ್ಯಕ್ಷ: ಕಾನ್ಪುರ ಮೂಲದ ರಾಮ್‌ನಾಥ್ ಕೋವಿಂದ್ ಅವರು ಬಿಜೆಪಿ ದಲಿತ ಮೋರ್ಚಾದ ಅಧ್ಯಕ್ಷರಾಗಿ 1988ರಿಂದ 2002ರವರೆಗೆ ಕಾರ್ಯ ನಿರ್ವಹಿಸಿದ್ದರು. ಅಖಿಲ ಭಾರತ ಕೋಲಿ ಸಮಾಜದ ಅಧ್ಯಕ್ಷರಾಗಿಯೂ ಹಾಗೂ ಐಐಎಂ ಕೋಲ್ಕತಾದಲ್ಲಿ ಎಸ್‌ಸಿ/ಎಸ್‌ಟಿ ಪ್ರತಿನಿಧಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

   *ರಾಜ್ಯಸಭೆಗೆ ಆಯ್ಕೆ: 1994ರಿಂದ 2000, 2000ದಿಂದ 2006 ಹೀಗೆ ಎರಡು ಅವಧಿಗೆ ಉತ್ತರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿರುವ ಕೋವಿಂದ್ 2002ರ ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಷಣ ಮಾಡಿದ್ದರು.

* ಕಾನ್ಪುರದ ಬಳಿ ಇರುವ ತನ್ನ ಪಿತ್ರಾರ್ಜಿತ ಮನೆಯನ್ನು ಸಮುದಾಯ ಭವನವನ್ನಾಗಿಸಲು ದಾನ ನೀಡಿದ್ದಾರೆ.

* ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೊದಲು , 1977ರಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿಯವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

     * ಉತ್ತರಪ್ರದೇಶದಲ್ಲಿ ದಲಿತ ನಾಯಕಿ ಎಂದು ಗುರುತಿಸಿಕೊಂಡಿರುವ ಬಿಎಸ್ಪಿ ನಾಯಕಿ ಮಾಯಾವತಿ ಪ್ರಭಾವವನ್ನು ಸರಿದೂಗಿಸುವ ಸಮರ್ಥ ದಲಿತ ಮುಖಂಡನೆಂದು ಕೋವಿಂದ್ ಅವರನ್ನು ಬಿಜೆಪಿ ಪರಿಗಣಿಸಿದೆ. 2012ರ ಉ.ಪ್ರದೇಶ ಚುನಾವಣೆಯಲ್ಲಿ ರಾಜನಾಥ್ ಸಿಂಗ್ ಅವರು ದಲಿತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಮಾಡುವ ಸಂದರ್ಭದಲ್ಲಿ ಕೋವಿಂದ್ ಅವರನ್ನು ನೆಚ್ಚಿಕೊಂಡಿದ್ದರು.

  * ಬಿಹಾರದ ರಾಜ್ಯಪಾಲರನ್ನಾಗಿ ಕೋವಿಂದ್ ಅವರನ್ನು ನೇಮಿಸಿರುವ ಕ್ರಮವು ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ದಲಿತರ ವಿಶ್ವಾಸ ಪಡೆದುಕೊಳ್ಳುವ ಪ್ರಯತ್ನವಾಗಿದೆ ಎಂದು ವಿಶ್ಲೇಷಿಸಲಾಗಿದೆ.

* 2015ರಲ್ಲಿ ಬಿಹಾರ ಸರಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಲಾಲೂಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್‌ಪ್ರತಾಪ್ ಯಾದವ್ ‘ಅಪೇಕ್ಷಿತ್’ ಎಂಬ ಪದವನ್ನು ‘ಉಪೇಕ್ಷಿತ್’ ಎಂದು ತಪ್ಪಾಗಿ ಉಚ್ಚರಿಸಿದ್ದರು. ರಾಜ್ಯಪಾಲರಾಗಿ ಪ್ರಮಾಣ ವಚನ ಬೋಧಿಸುತ್ತಿದ್ದ ಕೋವಿಂದ್, ತಕ್ಷಣ ಅದನ್ನು ಗುರುತಿಸಿ, ಮತ್ತೊಮ್ಮೆ ಆ ಪದವನ್ನು ಸ್ಪಷ್ಟವಾಗಿ ಉಚ್ಚರಿಸುವಂತೆ ಯಾದವ್‌ಗೆ ಸೂಚಿಸಿದ್ದರು.

      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News