ನಾವು ಜನರ ಕ್ಷಮೆಯಾಚಿಸಬೇಕು: ಕಾಗೋಡು ತಿಮ್ಮಪ್ಪ

Update: 2017-06-19 16:16 GMT

ಬೆಂಗಳೂರು, ಜೂ.19: ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಫಲರಾಗಿರುವ ಆಡಳಿತ ನಡೆಸಿರುವವರು ತಮ್ಮ ತಪ್ಪಿಗಾಗಿ ಜನತೆಯ ಕ್ಷಮೆಯಾಚಿಸಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ 2017-18ನೆ ಸಾಲಿನ ಕಂದಾಯ ಇಲಾಖೆಯ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ವಿವಿಧ ಕಾನೂನು ಗಳಡಿಯಲ್ಲಿ ಬಡವರಿಗೆ ಮಂಜೂರಾಗಿರುವ ಭೂಮಿಯ ಬಹುಪಾಲು ಅರಣ್ಯಕ್ಕೆ ಸೇರಿಸಿಬಿಟ್ಟಿದ್ದಾರೆ. ಅದನ್ನು ಮತ್ತೆ ಬಡವರಿಗೆ ನೀಡುವ ನಿಟ್ಟಿನಲ್ಲಿ ಆ ಭೂಮಿಯನ್ನು ಹಿಂದಿರುಗಿಸಿಕೊಡಿ ಎಂದು ಎಲ್ಲ ಸಚಿವರಿಗೆ ಕೈ ಮುಗಿದು ಮನವಿ ಮಾಡುತ್ತೇನೆ ಎಂದರು.

ಮಲೆನಾಡು ಪ್ರದೇಶದಿಂದ ಬಂದವರು ನಾವು ಘರ್ಜನೆ ಮಾಡದಿದ್ದರೆ, ನಮ್ಮ ಸಮಸ್ಯೆಗಳು ಎಲ್ಲರಿಗೆ ಹೇಗೆ ಗೊತ್ತಾಗಬೇಕು. ಇನಾಮತಿ ಕಾಯ್ದೆ ಬಂದದ್ದು 1959ರಲ್ಲಿ, ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದದ್ದು 1974ರಲ್ಲಿ. ಆದರೆ, ಇನ್ನು ಈ ಕಾನೂನಿನ ಅನ್ವಯ ಭೂಮಿ ಪಡೆಯಲು ರೈತರು ಅರ್ಜಿ ಸಲ್ಲಿಸಿಲ್ಲ ಅಂದರೆ ಅದಕ್ಕೆ ಯಾರು ಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇಷ್ಟು ವರ್ಷಗಳ ಕಾಲ ಅವರನ್ನು ಪ್ರತಿನಿಧಿಸಿದ ಶಾಸಕರೆ ಇದಕ್ಕೆ ಕಾರಣವಲ್ಲವೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಇನಾಮತಿ ಕಾಯ್ದೆಗೆ ಸಂಬಂಧಿಸಿದ 2500 ಎಕರೆ ಭೂಮಿ ಲಭ್ಯವಿದೆ. ಆದರೆ, ಈವರೆಗೆ ಯಾರೂ ಅರ್ಜಿ ಹಾಕಿಲ್ಲ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಒಬ್ಬ ಸರ್ವೆಯರ್ ತಿಂಗಳಿಗೆ ಕನಿಷ್ಠ 23 ಪೋಡಿ ಪ್ರಕರಣಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ. ಇನ್ನಾರು ತಿಂಗಳಲ್ಲಿ ಪೋಡಿ ಪ್ರಕರಣಗಳನ್ನು ಸರಿಪಡಿಸಲಾಗುವುದು. ಪೋಡಿ ಮುಕ್ತ ರಾಜ್ಯ ನನ್ನ ಕಲ್ಪನೆ. ಅನೇಕ ಬದಲಾವಣೆಗಳು ಆಗುತ್ತಿವೆ. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ಮುಗಿಸುತ್ತೇನೆ ಎಂದು ಅವರು ತಿಳಿಸಿದರು.

ರಾಜ್ಯ ಸರಕಾರ ಬರಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಿದೆ. ಕುಡಿಯುವ ನೀರು ಪೂರೈಕೆಗೆ ಹಣದ ಕೊರತೆಯಿಲ್ಲ. ಪ್ರತಿ ಜಿಲ್ಲಾಧಿಕಾರಿ ಬಳಿ ಈಗಲೂ 8-10 ಕೋಟಿ ರೂ.ಗಳು ಲಭ್ಯವಿದೆ. ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಬರಪರಿಹಾರ ನಿಧಿಯನ್ನು 22.70 ಲಕ್ಷ ರೈತರಿಗೆ ವಿತರಿಸಲಾಗಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ಆಧಾರ್ ಸಂಖ್ಯೆ ಜೋಡಣೆಯಿಂದ ಇನ್ನು 77 ಸಾವಿರ ರೈತರಿಗೆ ಪರಿಹಾರ ವಿತರಣೆ ವಿಳಂಬವಾಗಿದೆ. ಇನ್ನು 8-10 ದಿನಗಳಲ್ಲಿ ರೈತರಿಗೆ ಬಾಕಿ ಪರಿಹಾರ ವಿತರಿಸ ಲಾಗುವುದು. ಇಲ್ಲದಿದ್ದಲ್ಲಿ, ಜಿಲ್ಲಾಧಿಕಾರಿ ಮೂಲಕ ಚೆಕ್ ಮುಖಾಂತರ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಆಡಳಿತ ವ್ಯವಸ್ಥೆಯಲ್ಲಿ ಸೃಜನಶೀಲತೆ ಬರಬೇಕು. ತಹಶೀಲ್ದಾರ್‌ಗಳ ಕೊರತೆಯಿದೆ. ಕೆಳಹಂತದ ಅಧಿಕಾರಿಗಳಿಂದ ಕೆಲಸ ತೆಗೆಸುವ ಆತ್ಮವಿಶ್ವಾಸ ಹಿರಿಯ ಅಧಿಕಾರಿಗಳಲ್ಲಿ ಬರಬೇಕು. ಗ್ರಾಮಲೆಕ್ಕಿಗರು ಪ್ರತಿವರ್ಷ ಸ್ಥಳಕ್ಕೆ ಭೇಟಿ ನಿಖರ ಮಾಹಿತಿಯನ್ನು ಪಹಣಿಯಲ್ಲಿ ನಮೂದು ಮಾಡಬೇಕು.
ಕಂದಾಯ ಇಲಾಖೆಯ ದಾಖಲೆಗಳ ನಿರ್ವಹಣೆಯಲ್ಲಿ ನಾವು ಹಾದಿ ತಪ್ಪಿದ್ದೇವೆ. ಆಡಳಿತ ವ್ಯವಸ್ಥೆಯಲ್ಲಿ ಬಿಗಿ ತಪ್ಪಿದ ವಾತಾವರಣವಿದೆ. ಗ್ರಾಮಲೆಕ್ಕಿಗರು ತಾಲೂಕು ಕೇಂದ್ರಗಳು ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಕಾರ್ಯಕ್ಷೇತ್ರದಲ್ಲಿ ವಾಸಿಸುವಂತೆ ವಸತಿ, ಕಚೇರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.


ಸಕಾಲ ಯೋಜನೆಯಡಿ ಶೇ.90ರಷ್ಟು ಸಾಧನೆಯಾಗಿದೆ. ಗ್ರಾಮ ಸಭೆಗಳು ಕಾಲಕಾಲಕ್ಕೆ ನಡೆಯುತ್ತಿವೆ. ಇದರಿಂದಾಗಿ, ಜನಸಾಮಾನ್ಯರ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತಿವೆ. ಸರ್ವೇಯರ್‌ಗಳ ಕೊರತೆಯಿಂದಾಗಿ ಪೋಡಿ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂದು ಅವರು ಹೇಳಿದರು.
ಒಂದು ಸಾವಿರ ಸರ್ವೇಯರ್‌ಗಳನ್ನು ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೆ 400-500 ಮಂದಿ ನಿವೃತ್ತ ಸರ್ವೇಯರ್‌ಗಳನ್ನು ಮರು ನೇಮಕ ಮಾಡಿಕೊಳ್ಳಲು ಉದ್ದೇಶಿಸಿದ್ದು, ಈಗಾಗಲೆ 300 ಮಂದಿ ಲಭ್ಯವಿದ್ದಾರೆ. ಪಕ್ಕಾ ಪೋಡಿ ಕೆಲಸವನ್ನು ಚುರುಕಿನಿಂದ ಕೈಗೊಳ್ಳಲಾಗುತ್ತಿದ್ದು, 1 ವರ್ಷದಲ್ಲಿ ಗರಿಷ್ಠ ಸಾಧನೆ ಮಾಡಲು ಪ್ರಯತ್ನಿಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.


ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನೀಡುವ ಸರಕಾರದ ಆಶಯದಂತೆ ನಾವು ನಡೆಯುತ್ತಿದ್ದು, ಆಡಳಿತದಲ್ಲಿ ಭ್ರಷ್ಟಾಚಾರ ಕಡಿಮೆಯಾಗಬೇಕು. ಬಗರ್‌ಹುಕುಂನ 5 ಲಕ್ಷ ಅರ್ಜಿಗಳು ಬಾಕಿಯಿತ್ತು. ಇದೀಗ 2 ಲಕ್ಷ ಅರ್ಜಿಗಳು ಬಾಕಿಯಿದ್ದು, ಇನ್ನೆರೆಡು ಮೂರು ತಿಂಗಳಲ್ಲಿ ಇತ್ಯರ್ಥಪಡಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News