‘ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ’: ಜಂಟಿ ಸದನ ಸಮಿತಿಗೆ ಶಿಫಾರಸು

Update: 2017-06-20 14:56 GMT

ಬೆಂಗಳೂರು, ಜೂ. 20: ಖಾಸಗಿ ವೈದ್ಯಕೀಯ ಸಂಸ್ಥೆಗಳ ‘ನಿಯಂತ್ರಣ’ ಉದ್ದೇಶಕ್ಕಾಗಿ ರೂಪಿಸಿದ್ದ ಮಹತ್ವದ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ-2017’ ಅನ್ನು ‘ಜಂಟಿ ಸದನ ಸಮಿತಿ’ ಪರಿಶೀಲನೆಗೆ ಕಳುಹಿಸಲು ವಿಧಾನಸಭೆಯಲ್ಲಿ ನಿರ್ಧರಿಸಲಾಗಿದೆ.

ಮಂಗಳವಾರ ವಿಧಾನಸಭೆಯಲ್ಲಿ ವಿಧೇಯಕದ ಕುರಿತು ಆಡಳಿತ ಮತ್ತು ವಿಪಕ್ಷ ಸದಸ್ಯರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿ, ಸುದೀರ್ಘ ಚರ್ಚೆಯ ಬಳಿಕ ಬಹುತೇಕ ಸದಸ್ಯರ ಅಭಿಪ್ರಾಯದಂತೆ ಆರೋಗ್ಯ ಸಚಿವ ರಮೇಶ್ ಕುಮಾರ್, ವಿಧೇಯಕವನ್ನು ಜಂಟಿ ಸದನ ಸಮಿತಿಗೆ ಕಳುಹಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದರು.

ರಾಜ್ಯ ಸರಕಾರಕ್ಕೆ ಈ ವಿಧೇಯಕವನ್ನು ತರಾತುರಿಯಲ್ಲಿ ಅಂಗೀಕರಿಸಬೇಕು ಎಂಬ ಒಣಪ್ರತಿಷ್ಠೆಯಿಲ್ಲ. ಇಡೀ ಸದನ ಈ ವಿಧೇಯಕಕ್ಕೆ ಸಹಮತ ವ್ಯಕ್ತಪಡಿಸಿರುವುದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಜಂಟಿ ಸದನ ಸಮಿತಿಯು ನಾಲ್ಕು ವಾರಗಳಲ್ಲಿ ಈ ವಿಧೇಯಕವನ್ನು ಪರಾಮರ್ಶಿಸಲಿ. ಅಗತ್ಯವಿದ್ದರೆ ಇನ್ನೂ ಒಂದು ವಾರ ಹೆಚ್ಚು ಸಮಯ ತೆಗೆದುಕೊಳ್ಳಲಿ ಎಂದು ರಮೇಶ್‌ಕುಮಾರ್ ಹೇಳಿದರು.

ವಿಧಾನಪರಿಷತ್ತಿನ ಸಭಾಪತಿಯೊಂದಿಗೆ ಚರ್ಚೆ ಮಾಡಿ, ಇದೇ ಅಧಿವೇಶನದಲ್ಲಿ ಜಂಟಿ ಸದನ ಸಮಿತಿಯನ್ನು ರಚಿಸುವುದು ಉತ್ತಮ ಎಂದು ರಮೇಶ್‌ಕುಮಾರ್ ಹೇಳಿದರು. ಸಚಿವರ ಮನವಿಯ ಹಿನ್ನೆಲೆಯಲ್ಲಿ ಸ್ಪೀಕರ್ ಕೆ.ಬಿ.ಕೋಳಿವಾಡ, ಈ ವಿಧೇಯಕವನ್ನು ಜಂಟಿ ಸದನ ಸಮಿತಿಯ ಪರಾಮರ್ಶೆಗೆ ವಹಿಸುವುದಾಗಿ ಸದನದಲ್ಲಿ ಪ್ರಕಟಿಸಿದರು.

ವಿಧೇಯಕದಲ್ಲೇನಿದೆ: ರೋಗಿಗಳ ಕುಂದುಕೊರತೆಯ ಪರಿಹಾರಕ್ಕಾಗಿ ಜಿಲ್ಲಾ ಅಥವಾ ಮಹಾನಗರ ಕುಂದುಕೊರತೆ ಪರಿಹಾರ ಸಮಿತಿಯನ್ನು ರಚಿಸುವುದು. ಖಾಸಗಿ ವೈದ್ಯಕೀಯ ಸಂಸ್ಥೆಗಳು ಪ್ರತಿಯೊಂದು ವರ್ಗದ ಚಿಕಿತ್ಸೆಗೆ ಸಂಗ್ರಹಿಸಬೇಕಾದ ದರಗಳು ಅಥವಾ ಶುಲ್ಕಗಳನ್ನು ನಿಗದಿಪಡಿಸಲು ರಾಜ್ಯ ಸರಕಾರಕ್ಕೆ ಅಧಿಕಾರವನ್ನು ನೀಡುವುದು ಮತ್ತು ತಜ್ಞರ ಸಮಿತಿಯ ಶಿಫಾರಸ್ಸಿನ ಮೇರೆಗೆ ಬೇರೆ ಬೇರೆ ವರ್ಗದ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಬೇರೆ ಬೇರೆ ದರಗಳನ್ನು ಅಧಿಸೂಚಿಸುವುದು.

ರಾಜ್ಯ ಸರಕಾರವು ನಿಗದಿಪಡಿಸಿದುದಕ್ಕಿಂತ ಹೆಚ್ಚಿನ ದರಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳು ಸಂಗ್ರಹಿಸಿದ್ದಲ್ಲಿ, 25 ಸಾವಿರ ರೂ.ಗಳಿಂದ 5 ಲಕ್ಷ ರೂ.ಗಳವರೆಗೆ ದಂಡವನ್ನು ವಿಧಿಸಬಹುದಾಗಿದೆ. ಆದರೆ, ವೈದ್ಯರಿಗೆ ಕಾರವಾಸ ವಿಧಿಸುವ ಅಂಶವನ್ನು ಕಾಯ್ದೆಯಿಂದ ಹಿಂಪಡೆಯಲಾಗಿದೆ.

ನೋಂದಣಿ ಪ್ರಾಧಿಕಾರವನ್ನು ಪುನರ್ ರಚಿಸುವುದು. ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯಿಂದ ಅಥವಾ ರೋಗಿಯ ಪ್ರತಿನಿಧಿಯಿಂದ ಮುಂಗಡ ಪಾವತಿಯನ್ನು ಒತ್ತಾಯಪಡಿಸುವಂತಿಲ್ಲ. ಸಂಬಂಧಪಟ್ಟ ವ್ಯಕ್ತಿಗೆ ಮೃತ ದೇಹವನ್ನು ಹಸ್ತಾಂತರಿಸುವ ಸಮಯದಲ್ಲಿ ಯಾವುದೇ ಬಾಕಿ ಮೊತ್ತಕ್ಕೆ ಒತ್ತಾಯಿಸದೇ ತರುವಾಯದಲ್ಲಿ ಬಾಕಿಗಳನ್ನು ಸಂಗ್ರಹಿಸುವುದು.

 ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸ್ಪರ್ಧೆಯಿದೆ. ಬಡವರಿಗೆ ಆಗುತ್ತಿರುವ ಶೋಷಣೆ ತಪ್ಪಿಸಬೇಕಿದೆ. ಜೊತೆಗೆ, ವೈದ್ಯರಲ್ಲಿರುವ ಆತಂಕವನ್ನು ದೂರ ಮಾಡಬೇಕಿದೆ. ಜಿಲ್ಲಾ ಪಂಚಾಯಿತಿ ಸಿಇಓ, ಡಿಎಚ್‌ಓಗಳನ್ನು ನೋಂದಣಿ ಪ್ರಾಧಿಕಾರಕ್ಕೆ ನೇಮಕ ಮಾಡುವುದರಿಂದ ‘ವಸೂಲಿ’ ಪ್ರಕ್ರಿಯೆ ಆರಂಭಗೊಳ್ಳಬಹುದು. ಆರೋಗ್ಯ ಕ್ಷೇತ್ರದ ಸುಧಾರಣೆ ಸಂಬಂಧ ನ್ಯಾ.ವಿಕ್ರಮ್‌ಜೀತ್‌ಸೇನ್ ನೇತೃತ್ವದ ಸಮಿತಿ ಮಾಡಿರುವ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಿ. ಈ ವಿಧೇಯಕವು ಪ್ರಾಮಾಣಿಕ ವೈದ್ಯರಲ್ಲಿನ ಭಯವನ್ನು ದೂರ ಮಾಡಬೇಕು. ಭ್ರಷ್ಟರ ಪಾಲಿಗೆ ಬ್ರಹ್ಮಾಸ್ತ್ರವಾಗಬೇಕು.

-ಜಗದೀಶ್ ಶೆಟ್ಟರ್, ವಿರೋಧ ಪಕ್ಷದ ನಾಯಕ

‘ವೈದ್ಯರ ಮೇಲೆ ಹಲ್ಲೆ-ದೌರ್ಜನ್ಯಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆ(ತಿದ್ದುಪಡಿ) ವಿಧೇಯಕ ಜಾರಿಗೆ ಬಂದರೆ ಅದರ ದುರ್ಬಳಕೆ ಆಗುವ ಸಾಧ್ಯತೆ ಇದೆ. ವೈದ್ಯಕೀಯ ವೃತ್ತಿಯೊಂದು ನೈಪುಣ್ಯತೆಯುಳ್ಳದ್ದು, ಅದಕ್ಕೆ ಮಾನವೀಯತೆ ದೃಷ್ಟಿ ನೀಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಹತ್ತು ಸಾವಿರ ನರ್ಸಿಂಗ್ ಹೋಮ್‌ಗಳಿದ್ದು, ಕಾಯ್ದೆ ಮೂಲಕ ಭಯದ ವಾತಾವರಣ ಸೃಷ್ಟಿ ಸರಿಯಲ್ಲ’

-ಡಾ.ಎ.ಬಿ.ಮಾಲಕರೆಡ್ಡಿ ಆಡಳಿತ ಪಕ್ಷದ ಹಿರಿಯ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News