ಖಾಸಗಿ ವೈದ್ಯಕೀಯ ಮಸೂದೆ ಮರು ಪರಿಶೀಲನೆ ಅಗತ್ಯ

Update: 2017-06-20 18:36 GMT

ಇಂದು ದೇಶವನ್ನು ಆಳುತ್ತಿರುವುದು ಕಾರ್ಪೊರೇಟ್ ಶಕ್ತಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಆಳುವವರು ಕಾರ್ಪೊರೇಟ್‌ವಲಯದ ಸೂತ್ರಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಪ್ರಜಾಸತ್ತೆಯನ್ನು ಹೈಜಾಕ್ ಮಾಡಿರುವ ಈ ಶಕ್ತಿ, ಆರ್ಥಿಕ ನೀತಿಗಳನ್ನು ತಮ್ಮ ಮೂಗಿನ ನೇರಕ್ಕೆ ಸ್ವಯಂ ರೂಪಿಸಿ, ಅದನ್ನು ಆಳುವವರ ಮೂಲಕ ಜಾರಿಗೆ ತರುತ್ತಿದೆ. ಈ ಕಾರಣದಿಂದಲೇ ಜನಪರವೆಂದು ಸರಕಾರ ಯಾವ ಕಾನೂನನ್ನು ಜಾರಿಗೆ ತಂದರೂ ಅದರ ಕುರಿತಂತೆ ಅನುಮಾನಗಳನ್ನು ವ್ಯಕ್ತಪಡಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಕಪ್ಪು ಹಣ ನಿರ್ಮೂಲನೆ ಮಾಡುತ್ತೇನೆ ಎಂದು ‘ನೋಟು ನಿಷೇಧ’ ಜಾರಿಗೊಳಿಸಿದ ಮೋದಿ ಅಂತಿಮವಾಗಿ ಅದನ್ನು ‘ನಗದು ರಹಿತ’ ವ್ಯವಹಾರದ ಭಾಗವೆಂದು ಪರಿವರ್ತಿಸಿದರು. ಈ ನಗದು ರಹಿತ ವ್ಯವಹಾರದಿಂದ ಲಾಭ ಪಡೆದುಕೊಂಡಿರುವುದು ಕಾರ್ಪೊರೇಟ್ ಶಕ್ತಿಗಳು. ಬಹುತೇಕ ಸಣ್ಣ ಸಣ್ಣ ಉದ್ದಿಮೆಗಳು ನೋಟು ನಿಷೇಧದ ಪರಿಣಾಮವಾಗಿ ನೆಲಕಚ್ಚಿದವು. ನೋಟು ನಿಷೇಧದ ಬಳಿಕ ಡಿಜಿಟಲ್ ವ್ಯವಹಾರ ಹೆಚ್ಚಿದೆ ಎಂದು ಬ್ಯಾಂಕುಗಳು ಹೇಳುತ್ತವೆಯಾದರೂ, ಅದರ ಲಾಭ ಯಾರಿಗೆ ಹೋಗುತ್ತದೆ ಎನ್ನುವುದರ ಕುರಿತಂತೆ ವೌನವಾಗಿವೆ. ಅಕ್ಕಿ, ಬೇಳೆಯಂತಹ ಅಗತ್ಯ ವಸ್ತುಗಳಿಗೂ ಬೃಹತ್ ಸೂಪರ್ ಬಝಾರ್‌ಗಳನ್ನು ನೆಚ್ಚಿಕೊಳ್ಳುವ ಸ್ಥಿತಿ ಜನಸಾಮಾನ್ಯರದು. ಇದರ ಪರಿಣಾಮವಾಗಿ ಸಣ್ಣ ಪುಟ್ಟ ದಿನಸಿ ಅಂಗಡಿಗಳು ನೊಣ ಹೊಡೆಯುವಂತಾಗಿದೆ.

ಇತ್ತೀಚೆಗೆ ಭಾವನೆಗಳನ್ನು ಬಂಡವಾಳವಾಗಿಸಿಕೊಂಡು ಸರಕಾರ ಜಾರಿಗೆ ತಂದ ಗೋಮಾರಾಟ ನಿಯಂತ್ರಣ ಕಾಯ್ದೆಯನ್ನೇ ತೆಗೆದುಕೊಳ್ಳೋಣ. ಇದರ ನೇರ ದುಷ್ಪರಿಣಾಮವನ್ನು ಅನುಭವಿಸುತ್ತಿರುವುದು ಸಣ್ಣ ಹಟ್ಟಿಗಳನ್ನು ಹೊಂದಿರುವ ಗ್ರಾಮೀಣ ರೈತರು. ಹಾಗೆಯೇ ಪಟ್ಟಣ ಪ್ರದೇಶಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿರುವ ಕಸಾಯಿಖಾನೆಗಳು ಮುಚ್ಚುವಂತಹ ಸ್ಥಿತಿ ನಿರ್ಮಾಣವಾದವು. ಆದರೆ ಇದೇ ಸಂದರ್ಭದಲ್ಲಿ ಬೃಹತ್ ಫಾರ್ಮ್‌ಗಳಿಗೆ ಯಾವ ಧಕ್ಕೆಯೂ ಉಂಟಾಗಲಿಲ್ಲ. ಈ ಫಾರ್ಮ್‌ಗಳಿಂದ ಬೃಹತ್ ಕಸಾಯಿ ಖಾನೆಗಳು ಧಾರಾಳವಾಗಿ ಗೋವುಗಳನ್ನು ಅಧಿಕೃತವಾಗಿ ಪಡೆದುಕೊಳ್ಳಬಹುದು. ಅಂದರೆ ಗೋಮಾಂಸ ಪೂರೈಕೆಯ ಸಂಪೂರ್ಣ ಲಾಭವನ್ನು ಬೃಹತ್ ಕಂಪೆನಿಗಳಿಗೆ ನೀಡುವ ಹುನ್ನಾರವಲ್ಲದೆ ಇನ್ನೇನೂ ಅಲ್ಲ. ಜೊತೆಗೆ ಹೈನೋದ್ಯಮವನ್ನು ಗ್ರಾಮೀಣ ರೈತರ ಕೈಯಿಂದ ಕಸಿದು ಬೃಹತ್ ಫಾರ್ಮ್‌ಗಳಿಗೆ, ಬೃಹತ್ ಕಂಪೆನಿಗಳಿಗೆ ವರ್ಗಾಯಿಸುವ ದುರುದ್ದೇಶವಿದೆ.

ಇಂತಹ ಹೊತ್ತಿನಲ್ಲಿ, ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ’ಯನ್ನು ಜಾರಿಗೊಳಿಸಲು ಸರಕಾರ ಹೊರಟಾಗ ಅದರ ಕುರಿತಂತೆ ಅನುಮಾನಗಳು ಏಳುವುದು ಸಹಜವಾಗಿದೆ. ಈ ಮಸೂದೆ ವೈದ್ಯರ ಮೇಲೆ ನಿಯಂತ್ರಣವನ್ನು ಹೊಂದುವ ಉದ್ದೇಶವನ್ನು ಹೊಂದಿದೆ ಎಂದು ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ. ಜನಸಾಮಾನ್ಯರನ್ನು ಸುಲಿಯುತ್ತಿರುವ ಖಾಸಗಿ ವೈದ್ಯರಿಗೆ ಲಗಾಮುಹಾಕುವ ಉದ್ದೇಶವನ್ನು ಮಸೂದೆ ಹೊಂದಿದೆ ಎನ್ನುವ ಸಚಿವರ ಕಾಳಜಿ ಎಲ್ಲ ರೀತಿಯಲ್ಲೂ ಶ್ಲಾಘನಾರ್ಹ.

ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಸುಲಿಯುವ, ಶೋಷಿಸುವ, ದಾರಿ ತಪ್ಪಿಸುವ ಕುರಿತಂತೆ ದೂರುಗಳು ವ್ಯಾಪಕವಾಗಿವೆ. ಸೇವೆಯ ಹೆಸರಿನಲ್ಲೇ ಸರ್ವ ಸವಲತ್ತುಗಳನ್ನು ಪಡೆಯುತ್ತಾ ಅದನ್ನು ಸಂಪೂರ್ಣ ವ್ಯಾಪಾರವಾಗಿಸಿದ ಹೆಗ್ಗಳಿಕೆ ವೈದ್ಯರಿಗೇ ಸಲ್ಲಬೇಕು. ಹಾಗೊಮ್ಮೆ ಹೀಗೊಮ್ಮೆ ವೈದ್ಯರ ಜೊತೆಗೆ ರೋಗಿಯ ಕುಟುಂಬ ಜಗಳಕ್ಕೆ ನಿಂತರೆ, ಅವರ ಮೇಲೆ ಗೂಂಡಾಕಾಯ್ದೆ ಬಳಸಲು ಒತ್ತಾಯಿಸುವ ಈ ವಿದ್ಯಾವಂತರು, ವೈದ್ಯಕೀಯ ವೃತ್ತಿಯನ್ನು, ಅದರ ವೌಲ್ಯವನ್ನು ಗಾಳಿಗೆ ತೂರಿ, ರೋಗಿಗಳನ್ನು ವಿವಿಧ ರೀತಿಯಲ್ಲಿ ವಂಚಿಸುವ ವೈದ್ಯರು, ಆಸ್ಪತ್ರೆಗಳ ಬಗ್ಗೆ ಕಣ್ಣಿದ್ದೂ ಕುರುಡರಾಗುತ್ತಾರೆ.

ಈ ಸಂದರ್ಭದಲ್ಲಿ ‘ರೋಗಿಗಳು ನ್ಯಾಯಾಲಯಕ್ಕೆ ದೂರು ನೀಡಲು’ ಸಲಹೆ ನೀಡುತ್ತಾರೆ. ತಮ್ಮ ಮೇಲೆ ನಡೆದ ಹಲ್ಲೆಗೆ ಒಂದಾಗುವ ಖಾಸಗಿ ವೈದ್ಯರು, ತಮ್ಮ ವೈದ್ಯರಿಂದಲೇ ಆಗುತ್ತಿರುವ ವೃತ್ತಿ ದ್ರೋಹವನ್ನು ಯಾಕೆ ತಡೆಯಲು ಒಂದಾಗಬಾರದು? ಸರಕಾರದ ಅಪಾರ ಸೌಲಭ್ಯಗಳನ್ನು ಪಡೆದುಕೊಂಡು ಸೇವೆಯ ಹೆಸರಿನಲ್ಲಿ ಪ್ರತಿಜ್ಞೆಯನ್ನು ಸ್ವೀಕರಿಸುವ ಬಹಳಷ್ಟು ವೈದ್ಯರು, ಈ ಕ್ಷೇತ್ರವನ್ನು ಸಂಪೂರ್ಣ ವಾಣಿಜ್ಯೀಕರಣಗೊಳಿಸಿರುವುದರ ಪರಿಣಾಮವಾಗಿಯೇ ‘ಖಾಸಗಿ ವೈದ್ಯರ ಮೇಲೆ ನಿಯಂತ್ರಣ’ದ ಬಗ್ಗೆ ಜನರು ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವುದು. ಆದರೆ ಇದೇ ಸಂದರ್ಭದಲ್ಲಿ, ಒಂದು ದೊಡ್ಡ ವೈದ್ಯಕೀಯ ಬಳಗ ಪ್ರಾಮಾಣಿಕವಾಗಿ, ಬದ್ಧತೆಯಿಂದ ಕೆಲಸ ಮಾಡುತ್ತಿರುವುದನ್ನೂ ನಾವು ಅಲ್ಲಗಳೆಯುವಂತಿಲ್ಲ.

ಗ್ರಾಮೀಣ ಮತ್ತು ನಗರ, ಪಟ್ಟಣ ಪ್ರದೇಶಗಳಲ್ಲಿರುವ ಸಣ್ಣ ಪುಟ್ಟ ಆಸ್ಪತ್ರೆಗಳು ಜನ ಸಾಮಾನ್ಯರ ಪಾಲಿಗೆ ಒಂದು ವರದಾನವೇ ಆಗಿದೆ. ಒಂದೆಡೆ ಸರಕಾರಿ ಆಸ್ಪತ್ರೆಗಳು ಎಕ್ಕುಟ್ಟಿ ಹೋಗಿವೆ. ಬೃಹತ್ ಕಾರ್ಪೊರೇಟ್ ಆಸ್ಪತ್ರೆಗಳು ಶ್ರೀಮಂತರನ್ನಷ್ಟೇ ಉದ್ದೇಶಿಸಿ ತೆರೆದುಕೊಳ್ಳುತ್ತಿವೆ. ಇಂತಹ ಹೊತ್ತಿನಲ್ಲಿ ಜನಸಾಮಾನ್ಯರಿಗೆ ತಕ್ಷಣ ಎಟಕುವುದು ಸಣ್ಣ ಆಸ್ಪತ್ರೆಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.

‘ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ’ ನಾಳೆ ವಿವಿಧ ಬಿಗಿ ಕಾನೂನುಗಳ ಮೂಲಕ ಒಂದೊಂದೇ ಸಣ್ಣ ಆಸ್ಪತ್ರೆಗಳನ್ನು ಮುಚ್ಚಿಸುತ್ತಾ ಹೋದರೆ ಅದರ ನೇರ ಬಲಿಪಶುಗಳು ಮಧ್ಯಮವರ್ಗದ ಜನರು ಮತ್ತು ಫಲಾನುಭವಿಗಳು ಕಾರ್ಪೊರೇಟ್ ಆಸ್ಪತ್ರೆಗಳು. ಈ ಹಿನ್ನೆಲೆಯಲ್ಲಿಯೇ ‘ನೋಟು ನಿಷೇಧ’ವನ್ನು ಆರಂಭದಲ್ಲಿ ಕಣ್ಣು ಮುಚ್ಚಿ ಸ್ವೀಕರಿಸಿ ಮೋಸ ಹೋದಂತೆ, ವಿಧೇಯಕವನ್ನು ಕಣ್ಣು ಮುಚ್ಚಿ ನಂಬುವುದು ಸದ್ಯದ ದಿನಗಳಲ್ಲಿ ಅಪಾಯಕಾರಿ. ಆದುದರಿಂದ ಈ ವಿಧೇಯಕದ ಕುರಿತಂತೆ ಸಣ್ಣ, ಮಧ್ಯಮ ಆಸ್ಪತ್ರೆಗಳ ವೈದ್ಯರ ಮಾತುಗಳನ್ನು ಆಲಿಸುವ ಅಗತ್ಯವೂ ಇದೆ.

ಈ ಕಾಯ್ದೆಯಲ್ಲಿ ಸರಕಾರಿ ಆಸ್ಪತ್ರೆಗಳನ್ನು ಹೊರಗಿಟ್ಟಿರುವುದನ್ನು ಖಾಸಗಿ ವೈದ್ಯರು ಪ್ರಶ್ನಿಸಿದ್ದಾರೆ. ಒಂದೆಡೆ ಸರಕಾರಿ ಆಸ್ಪತ್ರೆಗಳನ್ನು ಸಾಯಿಸುತ್ತಾ ಅದನ್ನು ಬೃಹತ್ ಆಸ್ಪತ್ರೆಗಳಿಗೆ ಒಪ್ಪಿಸುವುದು, ಮಗದೊಂದೆಡೆ ಸಣ್ಣ ಹಾಗೂ ಮಧ್ಯಮ ಆಸ್ಪತ್ರೆಗಳನ್ನು ಕಾನೂನುಗಳ ಉರುಳಲ್ಲಿ ಸಿಲುಕಿಸಿ ಮುಚ್ಚಿಸುವಂತೆ ಮಾಡಿ ರೋಗಿಗಳನ್ನು ಕಾರ್ಪೊರೇಟ್ ಆಸ್ಪತ್ರೆಗಳಿಗೆ ಹಾಗೂ ಪತಂಜಲಿಯಂತಹ ಆಯುರ್ವೇದಿಕ್ ಬಾಬಾಗಳಿಗೆ ಒಪ್ಪಿಸುವುದು ಮಸೂದೆಯ ತಂತ್ರ ಎಂದು ಅವರು ವಾದಿಸುತ್ತಿದ್ದಾರೆ. ಈ ವಾದದಲ್ಲಿ ಹುರುಳಿಲ್ಲದೇ ಇಲ್ಲ.

ಕಾನೂನು ಆಸ್ಪತ್ರೆಗಳನ್ನು ಉನ್ನತಗೊಳಿಸುವುದಕ್ಕಿರಬೇಕೇ ಹೊರತು, ಸಂಪೂರ್ಣ ಮುಚ್ಚಿಸುವುದಕ್ಕಲ್ಲ. ಹಾಗೆಯೇ ಸರಕಾರಿ ಆಸ್ಪತ್ರೆಗಳನ್ನು ಮೇಲೆತ್ತುವ ಮತ್ತು ಸಂಪೂರ್ಣ ಆಧುನೀಕರಣಗೊಳಿಸಿ ಜನಸಾಮಾನ್ಯರಿಗೆ ಒದಗಿಸಲು ಸರಕಾರ ಯಾಕೆ ಆಸಕ್ತಿಯನ್ನು ವಹಿಸಿಲ್ಲ? ಸರಕಾರದ ಬಹುತೇಕ ಯೋಜನೆಗಳು ಜಾರಿಗೊಳ್ಳುವುದು ಬೃಹತ್ ಆಸ್ಪತ್ರೆಗಳಲ್ಲಿ ಮಾತ್ರ. ವಿವಿಧ ವಿಮಾ ಯೋಜನೆಗಳನ್ನು ದುರುಪಯೋಗಗೊಳಿಸುವ ಮೂಲಕವೇ ಬೃಹತ್ ಆಸ್ಪತ್ರೆಗಳು ಕೋಟಿಗಟ್ಟಲೆ ಸಂಪಾದಿಸುತ್ತಿವೆ.

ಇಂತಹ ಹೊತ್ತಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ತೆರೆದುಕೊಳ್ಳುವ ಸಣ್ಣ ಪುಟ್ಟ ಆಸ್ಪತ್ರೆಗಳಿಗೆ ಇಲ್ಲದ ಕಾನೂನಿನ ಗುಮ್ಮನನ್ನು ತೋರಿಸಿ ಬೆದರಿಸಿ ಮುಚ್ಚಿಸಿದರೆ ಅದರ ಅಂತಿಮ ಪರಿಣಾಮವನ್ನು ಅನುಭವಿಸುವುದು ಜನಸಾಮಾನ್ಯರೇ ಆಗಿದ್ದಾರೆ. ಆದುದರಿಂದ ವಿಧೇಯಕದ ಅಂಗೀಕಾರವನ್ನು ಮುಂದೂಡಿರುವುದು ಉತ್ತಮ ನಡೆಯಾಗಿದೆ. ವಿಧೇಯಕದಲ್ಲಿ ಸಣ್ಣ, ಮಧ್ಯಮ ಆಸ್ಪತ್ರೆಗಳನ್ನು ಇನ್ನಷ್ಟು ಜನಸಾಮಾನ್ಯರಿಗೆ ಹತ್ತಿರವಾಗಿಸುವಂತಹ ಸಲಹೆ ಸೂಚನೆಗಳನ್ನು ನೀಡುವ ಅಗತ್ಯವಿದೆ. ಇನ್ನಷ್ಟು ವೈದ್ಯಕೀಯ ತಜ್ಞರಿಂದ ಸಲಹೆಗಳನ್ನು ಸ್ವೀಕರಿಸಿ ಸಾಧಕ ಬಾಧಕಗಳನ್ನು ವಿವೇಚಿಸಿ ಬಳಿಕ ಅದನ್ನು ಜಾರಿಗೊಳಿಸುವ ಬಗ್ಗೆ ಸರಕಾರ ಆಲೋಚಿಸಬೇಕು. ಇಲ್ಲವಾದರೆ ಜನಸಾಮಾನ್ಯರ ಸ್ಥಿತಿ, ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News