ರಾಜ್ಯ ಸರಕಾರದಿಂದ ರೈತರ ಸಾಲಮನ್ನಾ ಘೋಷಣೆ

Update: 2017-06-21 12:55 GMT

ಬೆಂಗಳೂರು, ಜೂ.21: ಸಹಕಾರಿ ಬ್ಯಾಂಕ್ ಗಳಲ್ಲಿನ ರೈತರ 50 ಸಾವಿರ ರೂ.ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಘೋಷಿಸಿದ್ದಾರೆ.

ಪ್ರತಿ ರೈತರ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಲಾಗುವುದು. ಇದರಿಂದ ರಾಜ್ಯ ಸರಕಾರಕ್ಕೆ 8,165 ಕೋಟಿ ರೂ. ಹೊರೆ ಬೀಳಲಿದೆ. ಜೂ.20ರವರೆಗಿನ ರೈತರ ಸಾಲಮನ್ನಾ ಮಾಡಲಾಗುವುದು. ಇದರಿಂದಾಗಿ ಸುಮಾರು 22,27,506 ರೈತರು ಪ್ರಯೋಜನ ಪಡೆಯಲಿದ್ದಾರೆ ಎಂದವರು ಹೇಳಿದರು.

ಬುಧವಾರ ವಿಧಾನಸಭೆಯಲ್ಲಿ ವಿವಿಧ ಇಲಾಖೆ ಬೇಡಿಕೆ ಮೇಲಿನ ಸುದೀರ್ಘ ಚರ್ಚೆಗೆ ಉತ್ತರ ನೀಡಿದ ಸಿದ್ದರಾಮಯ್ಯ, ರಾಜ್ಯದಲ್ಲಿನ ರೈತರು ಹಾಗೂ ಕೃಷಿಕರ ಹಿತದೃಷ್ಟಿಯಿಂದ 2017ರ ಜೂ.20ರ ವರೆಗೆ ಬಾಕಿ ಇರುವ ಎಲ್ಲ ರೈತರ 50 ಸಾವಿರ ರೂ. ವರೆಗಿನ ಬೆಳೆ ಸಾಲ ಮನ್ನಾ ಮಾಡಲಾಗುವುದು ಎಂದರು.

ಇದರಿಂದ ರಾಜ್ಯದ 22,27,506 ಮಂದಿ ರೈತರಿಗೆ ಅನುಕೂಲವಾಗಲಿದೆ. ರಾಜ್ಯ ಸರಕಾರದ ಬೊಕ್ಕಸಕ್ಕೆ 8,165 ಕೋಟಿ ರೂ.ಗಳಷ್ಟು ಹೊರೆಯಾಗಲಿದೆ ಎಂದ ಅವರು, ಯಾವುದೇ ವಿಳಂಬ ಮಾಡದೆ, ಕೂಡಲೇ ಈ ಸಂಬಂಧ ಆದೇಶ ಹೊರಡಿಸಲಾಗುವುದೆಂದು ಪ್ರಕಟಿಸಿದರು. ಇದಕ್ಕೆ ಆಡಳಿತ-ವಿಪಕ್ಷ ಸದಸ್ಯರು ಸೇರಿ ಎಲ್ಲ ಸದಸ್ಯರು ಮೇಜುತಟ್ಟಿ ಸ್ವಾಗತಿಸಿದರು.

ನಮ್ಮ ಗುರಿ ರೈತರು-ಬಡವರು: ರೈತರು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಸರ್ವಾಂಗೀಣ ಅಭಿವೃದ್ಧಿ ನಮ್ಮ ಗುರಿ. ಹೀಗಾಗಿ ನಾವು ಬಜೆಟ್ ಸಿದ್ಧತೆ ವೇಳೆ ಅವರೇ ನಮ್ಮ ಕಣ್ಣ ಮುಂದಿರುತ್ತಾರೆ. ಬಡವರ ಅಭಿವೃದ್ಧಿ ನಮ್ಮ ಆದ್ಯತೆ ಎಂದು ಸಿದ್ದರಾಮಯ್ಯ ಸ್ಮರಿಸಿದರು.
ರಾಜ್ಯದಲ್ಲಿನ ತೀವ್ರ ಸ್ವರೂಪದ ಬರ ಸ್ಥಿತಿ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ರಕ್ಷಣೆಗಾಗಿ 50ಸಾವಿರ ರೂ. ವರೆಗಿನ ಕೃಷಿ ಸಾಲಮನ್ನಾಕ್ಕೆ ತೀರ್ಮಾನಿಸಲಾಗಿದೆ ಎಂದ ಅವರು, ರಾಜ್ಯದ ಸಹಕಾರಿ ಬ್ಯಾಂಕುಗಳ ಮೂಲಕ 10,760 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.

ಬಿಜೆಪಿಗೆ ನೈತಿಕತೆ ಇಲ್ಲ: ಬೀಜ-ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿ ಹತ್ಯೆಗೈದ ಹಾಗೂ ರೈತರ ಸಾಲಮನ್ನಾ ಅಸಾಧ್ಯ ಎನ್ನುವ ಬಿಜೆಪಿಗೆ ರೈತರ ಸಾಲಮನ್ನಾಕ್ಕೆ ಆಗ್ರಹಿಸಿರುವ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಇದೇ ವೇಳೆ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ರೈತರು ಒಟ್ಟು 1,16,006 ಕೋಟಿ ರೂ.ಗಳಷ್ಟು ಸಾಲ ಮಾಡಿದ್ದು, ಆ ಪೈಕಿ 52 ಸಾವಿರ ಕೋಟಿ ರೂ.ಅಲ್ಪಾವಧಿ ಸಾಲ. ಸಹಕಾರ ಬ್ಯಾಂಕುಗಳ ಮೂಲಕ 10,760 ಕೋಟಿ ರೂ.ಗಳನ್ನು ರೈತರಿಗೆ ನೀಡಲಾಗಿದೆ. ಉಳಿದ 42 ಸಾವಿರ ಕೋಟಿ ರೂ.ರಾಷ್ಟ್ರೀಕೃತ ಬ್ಯಾಂಕುಗಳು ನೀಡಿದ್ದು, ಅದು ಶೇ.80ರಷ್ಟಿದೆ. ಅದನ್ನು ಕೇಂದ್ರ ಮನ್ನಾ ಮಾಡಬೇಕೆಂದು ಮನವಿ ಮಾಡಿದರು.

ಚುನಾವಣೆಗೆ ಮೊದಲು ನಾವು ಸಾಲಮನ್ನಾ ಆಶ್ವಾಸನೆಯನ್ನು ನೀಡಿರಲಿಲ್ಲ. ಆದರೂ, ಸತತ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ದೃಷ್ಟಿಯಿಂದ ಹಾಗೂ ರೈತರು, ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರ ಒತ್ತಾಯದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಆರ್‌ಬಿಐ ಗವರ್ನರ್ ರೈತರ ಸಾಲಮನ್ನಾ ಘೋಷಿಸಿದರೆ ಆರ್ಥಿಕ ಸ್ಥಿತಿ ಹದಗೆಡಲಿದೆ ಎಂದು ಹೇಳಿದ್ದಾರೆ. ಆದರೆ, ಕಾರ್ಪೋರೇಟ್ ಸಂಸ್ಥೆಗಳ ಸಾವಿರಾರು ಕೋಟಿ. ರೂ. ಎನ್‌ಪಿಎಲ್ ಮನ್ನಾ ಮಾಡಲಾಗಿದೆ. ಕೇಂದ್ರ ಸರಕಾರ ರೈತರ ಸಾಲಮನ್ನಾಕ್ಕೆ ನೆರವು ನೀಡುವುದಿಲ್ಲ ಎಂದಿರುವುದು ಸರಿಯಲ್ಲ ಎಂದು ಸಿದ್ಧರಾಮಯ್ಯ ಆಕ್ಷೇಪಿಸಿದರು.

ಶೆಟ್ಟರ್ ಸಿಎಂ ಆಗಿದ್ದ ವೇಳೆ ಸಾಲಮನ್ನಾ ಘೋಷಿಸಿದ್ದರು. ಆ ಮೊತ್ತವನ್ನು ತಮ್ಮ ಆಡಳಿತಾವಧಿಯಲ್ಲಿ ತೀರಿಸಲಾಯಿತು. ಕೇಂದ್ರದ ಯುಪಿಎ ಸರಕಾರದ ಅವಧಿಯಲ್ಲಿ 72 ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಮಾಡಲಾಗಿತ್ತು ಎಂದು ಸಿದ್ಧರಾಮಯ್ಯ ಉಲ್ಲೇಖಿಸಿದರು.

ಯುಪಿ ಇನ್ನೂ ಆದೇಶ ಹೊರಡಿಸಿಲ್ಲ: ಉತ್ತರ ಪ್ರದೇಶ ಚುನಾವಣೆಯಲ್ಲಿ ರೈತರ ಸಾಲಮನ್ನಾ ಆಶ್ವಾಸನೆ ನೀಡಿ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ 36 ಸಾವಿರ ಕೋಟಿ ರೂ.ಸಾಲಮನ್ನಾ ಘೋಷಣೆ ಮಾಡಿದ್ದಾರೆ. ಆದರೆ, ಈ ವರೆಗೂ ಆದೇಶವೇ ಹೊರಡಿಸಿಲ್ಲ ಎಂದು ಟೀಕಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರೈತರ ಸಾಲಮನ್ನಾ ಘೋಷಿಸಿದ್ದು, ಪರಿಶೀಲನೆಗೆ ಒಂದು ಸಮಿತಿ ರಚನೆ ಮಾಡಿದ್ದಾರೆ. ಅಲ್ಲಿಯೂ ಇನ್ನೂ ಆದೇಶವನ್ನೆ ಹೊರಡಿಸಿಲ್ಲ. ಪಂಜಾಬ್ ಮುಖ್ಯಮಂತ್ರಿ ಸಾಲಮನ್ನಾ ಘೋಷಣೆ ಮಾಡಿದೆ ಎಂದು ಸಿದ್ಧರಾಮಯ್ಯ ತಿಳಿಸಿದರು.
ಕೇಂದ್ರ ಸರಕಾರ ಇನ್ನಾದರೂ, ರೈತರ ಸಾಲಮನ್ನಾ ಘೋಷಣೆ ಮಾಡಬೇಕು. ಆ ಮೂಲಕ ಸಂಕಷ್ಟದಲ್ಲಿ ಸಿಲುಕಿರುವ ಎಲ್ಲ ರೈತರಿಗೆ ನೆರವಾಗಬೇಕೆಂದು ಮನವಿ ಮಾಡಿದ ಸಿದ್ದರಾಮಯ್ಯ, ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲಮನ್ನಾಕ್ಕೆ ಬಿಜೆಪಿ ಮುಖಂಡರು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಕೋರಿದರು.

ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ನಮ್ಮ ಹೋರಾಟಕ್ಕೆ ಗೌರವ ನೀಡಿ ಸಿಎಂ ಸಿದ್ದರಾಮಯ್ಯ ಸಹಕಾರ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಶೇ.75ರಷ್ಟು ಸಾಲಮನ್ನಾ ಮಾಡಿದ್ದು, ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಕೇಂದ್ರ ಸರಕಾರವು ಸುಮಾರು 45 ಸಾವಿರ ಕೋಟಿ ರೂ.ಸಾಲ ನೀಡಿದೆ. ಅದನ್ನು ಮನ್ನಾ ಮಾಡುವ ಸವಾಲು ಪ್ರಧಾನಿ ಮೋದಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮುಂದಿದೆ ಎಂದರು.

ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಜು.10ರಂದು ಲಕ್ಷಾಂತರ ರೈತರೊಂದಿಗೆ ಬೃಹತ್ ಚಳವಳಿ ಹಮ್ಮಿಕೊಳ್ಳುವುದಾಗಿ ಬಿಜೆಪಿ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿತ್ತು. ಅದರ ಪ್ರತಿಫಲವಾಗಿ ಸಿಎಂ ಸಿದ್ದರಾಮಯ್ಯ ನಮ್ಮ ಆಗ್ರಹಕ್ಕೆ ಮಣಿದು ರೈತರ 50 ಸಾವಿರ ರೂ.ವರೆಗಿನ ಸಾಲಮನ್ನಾ ಮಾಡಿದ್ದಾರೆ. ಇದರಿಂದಾಗಿ, 8 ಸಾವಿರ ಕೋಟಿ ರೂ. ಹೊರೆಯಾಗುತ್ತದೆ ಎಂದಿದ್ದಾರೆ. ಈ ಸರಕಾರದ ಅವಧಿಯಲ್ಲೆ ರೈತರ ಸಾಲಮನ್ನಾ ಆಗಲಿ, ಅದನ್ನು ಮುಂದಿನ ಸರಕಾರದ ಮೇಲೆ ಹೊರೆ ಹೊರಿಸುವುದು ಬೇಡ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದರು.

ರೈತರ ಸಾಲ ಮನ್ನಾ ಮಾಡಿರುವ ರಾಜ್ಯ ಸರಕಾರ ಅಷ್ಟಕ್ಕೆ ಹಿಗ್ಗುವ ಅಗತ್ಯವಿಲ್ಲ. ಈ ವಿಚಾರದಲ್ಲಿ ನಾವು ಸರಕಾರಕ್ಕೆ ಒತ್ತಾಯ ಮಾಡಿದ್ದೆವು. ಕೇಂದ್ರ ಸರಕಾರವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಮ್ಮ ರಾಜದ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಲಿ ಎಂದು ಎನ್.ಎಚ್.ಕೋನರೆಡ್ಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News