ಪಾಕ್ ಜಯಕ್ಕೆ ಸಂಭ್ರಮಿಸಿದ್ದು ಯಾರು ಎಂದು ದೂರು ಕೊಟ್ಟವನಿಗೇ ಗೊತ್ತಿಲ್ಲ !

Update: 2017-06-23 06:49 GMT

ಭೋಪಾಲ್ ,ಜೂ.23: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸಾಧಿಸಿದ ಜಯವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆಂಬ ಆರೋಪದಲ್ಲಿ ಮಧ್ಯ ಪ್ರದೇಶದ ಬುರ್ಹಾನಪುರ್ ಜಿಲ್ಲೆಯ ಮೋಹದ್ ಎಂಬ ಗ್ರಾಮದಲ್ಲಿನ 15 ಮಂದಿಯ ವಿರುದ್ಧ ದೇಶದ್ರೋಹದ ಆರೋಪದ ಮೇಲೆ ಬಂಧಿಸಿದ ನಂತರ ಅವರ ಮೇಲಿನ ಆರೋಪಗಳನ್ನು ಕೈಬಿಡಲಾಗಿದ್ದರೆ, ವಾಸ್ತವದಲ್ಲಿ ದೂರು ನೀಡಿದ್ದ ಸುಭಾಶ್ ಲಕ್ಷ್ಮಣ್ ಕೊಲಿ ಸಹಿತ ಆ ಗ್ರಾಮದ ಯಾರು ಕೂಡ ಅಲ್ಲಿ ಪಟಾಕಿ ಸದ್ದು  ಅಥವಾ ಪಾಕ್ ಪರ ಯಾ ಭಾರತ ವಿರೋಧಿ ಘೋಷಣೆ ಕೇಳಿಲ್ಲ.

ನಾನು ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಹೇಳುವ ಕೊಲಿ, ತಾನು ಘೋಷಣೆ ಕೂಗಿದ್ದಕ್ಕಾಗಿ ಪೊಲೀಸರು ವಶಪಡಿಸಿಕೊಂಡ ನೆರೆಮನೆಯ ವ್ಯಕ್ತಿಯೊಬ್ಬರ ಸಹಾಯಕ್ಕಾಗಿ ರವಿವಾರ ರಾತ್ರಿ ಠಾಣೆಗೆ ಹೋಗಿದ್ದೆ ಎಂದು ಹೇಳುತ್ತಾರೆ. ‘‘ನನಗೆ ಯಾವುದೇ ಘೋಷಣೆ ಕೇಳಿರಲಿಲ್ಲ. ಪಟಾಕಿ ಬಗ್ಗೆಯೂ ನಾನು ದೂರಿರಲಿಲ್ಲ. ಪೊಲೀಸರು ಸುಮ್ಮನೆ ನನ್ನನ್ನು ಸಾಕ್ಷಿಯನ್ನಾಗಿಸಿದ್ದಾರೆ. ನಾನೀಗ ಸಾಕ್ಷಿ ಹೇಳಲು ಸಿದ್ಧನಿದ್ದೇನೆ ಆದರೆ ನ್ಯಾಯಾಲಯದಲ್ಲಿ ಮಾತ್ರ. ಪೊಲೀಸರು ನನಗೆ ಹಾನಿಯುಂಟು ಮಾಡಬಹುದೆನ್ನುವ ಭಯ ನನಗಿದೆ,’’ ಎಂದು ಡಿಶ್ ಆಂಟೆನಾ ದುರಸ್ತಿ ನಡೆಸುವವರಾದ ಕೊಲಿ ಹೇಳುತ್ತಾರೆ.

ಈ ಗ್ರಾಮದ ಹದಿನೈದು ಮಂದಿಯ ವಿರುದ್ಧದ ದೇಶದ್ರೋಹದ ಆರೋಪ ಕೈಬಿಡಲಾಗಿದೆಯಾದರೂ ಅವರಿನ್ನೂ ಜೈಲಿನಲ್ಲಿಯೇ ಇದ್ದಾರೆ ಹಾಗೂ ಅವರ ವಿರುದ್ಧ ಮತೀಯ ಸಾಮರಸ್ಯಕ್ಕೆ ಹಾನಿಗೈದ ಆರೋಪದ ಮೇಲೆ ಸೆಕ್ಷನ್ 153ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಈ ಹಿಂದೆ ಈ ಗ್ರಾಮದಿಂದ ಕ್ರಿಕೆಟ್ ಪಂದ್ಯಗಳಿಗೆ ಕಳುಹಿಸಲಾಗುತ್ತಿದ್ದ ಟಾರ್ಗೆಟ್ ಎಂಬ ತಂಡದಲ್ಲಿ ಎರಡೂ ಸಮುದಾಯಗಳ ಆಟಗಾರರಿರುತ್ತಿದ್ದರು.ಆದರೆ ಈ ಘಟನೆಯಿಂದ ಗ್ರಾಮದಲ್ಲಿ ಎರಡೂ ಸಮುದಾಯಗಳ ನಡುವೆ ಸಂಬಂಧಗಳಲ್ಲಿ ಬಿರುಕು ಮೂಡಿರುವುದು ಸ್ಪಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News