ಆಕ್ರಮಣಕಾರಿ ನಾಯಿಗೆ ಹೊಡೆದ ಗುಂಡಿಗೆ ಬಾಲಕ ಬಲಿ

Update: 2017-06-23 10:15 GMT

ಲಾಸ್ ಏಂಜಲಿಸ್, ಜೂ. 23: ಆಕ್ರಮಣಕಾರಿ ನಾಯಿಯೊಂದನ್ನು ಗುರಿಯಾಗಿಸಿ ಲಾಸ್ ಏಂಜಲಿಸ್ ಕೌಂಟಿ ಶರಿಫ್ ಅವರ ಸಹಾಯಕರು ಹಾರಿಸಿದ ಗುಂಡೊಂದು ಆಕಸ್ಮಿಕವಾಗಿ 17 ವರ್ಷದ ಬಾಲಕನೊಬ್ಬನಿಗೆ ತಾಗಿ ಆತ ಮೃತಪಟ್ಟ ಘಟನೆ ವರದಿಯಾಗಿದೆ. ಗುಂಡು ಆ ಬಾಲಕನ ಎದೆಯೊಳಗೆ ಹೊಕ್ಕಿತ್ತೆಂದು ಹೇಳಲಾಗಿದೆ.

ಗುರುವಾರ ರಾತ್ರಿ ಆಕ್ರಮಣಕಾರಿ ನಾಯಿಯನ್ನು ಹೊಡೆದುರುಳಿಸಲು ಅಧಿಕಾರಿಗಳು ಗುಂಡು ಹಾರಿಸಿದಾಗ ಕತ್ತಲಿನ ಅದೇ ಪ್ರದೇಶದಲ್ಲಿದ್ದ ಹುಡುಗ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲವೆನ್ನಲಾಗಿದೆ. ಗುಂಡು ನೆಲಕ್ಕಪ್ಪಳಿಸಿ ಬಾಲಕನಿಗೆ ತಾಗಿತ್ತೆನ್ನಲಾಗಿದೆ. ಅಧಿಕಾರಿಯೊಬ್ಬರೂ ಈ ಸಂದರ್ಭ ಗಾಯಗೊಂಡಿದ್ದಾರೆ.

ಮೃತ ಬಾಲಕನನ್ನು ಅರ್ಮಾಂಡ ಗಾರ್ಸಿಯಾ ಎಂದು ಗುರುತಿಸಲಾಗಿದ್ದು ಆತ ಆರ್ ರೆಕ್ಸ್ ಪ್ಯಾರಿಸ್ ಹೈಸ್ಕೂಲ್, ಪಾಮ್‌ಡೇಲ್ ಇಲ್ಲಿನ ವಿದ್ಯಾರ್ಥಿಯಾದ್ದ.
ಸ್ಥಳೀಯ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆಯುತ್ತಿದ್ದ ಪಾರ್ಟಿಯೊಂದರಲ್ಲಿ ಜೋರಾಗಿ ಗದ್ದಲವಾಗುತ್ತಿದೆಯೆಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಲ್ಲಿಗೆ ಬಂದಿದ್ದಾಗ ನಾಯಿ ಅವರ ಮೇಲೆರಗಿ ಅವರಲ್ಲೊಬ್ಬರಿಗೆ ಕಚ್ಚಿತ್ತು. ಆಗ ಆ ಬಾಲಕ ಆ ನಾಯಿಯನ್ನು ಕಟ್ಟಡದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರೂ ನಂತರ ಮತ್ತೊಮ್ಮೆ ನಾಯಿ ಪೊಲೀಸರ ಮೇಲೆ ದಾಳಿ ನಡೆಸಿದಾಗ ಗುಂಡು ಹಾರಾಟ ನಡೆದು ಬಾಲಕ ಪ್ರಾಣ ಕಳೆದುಕೊಳ್ಳುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News