ನಾಶವಾಗುತ್ತಿರುವ ಅರಣ್ಯವನ್ನು ಕಾಪಾಡಿ

Update: 2017-06-28 19:00 GMT

ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ ಅವ್ಯಾಹತವಾಗಿ ನಡೆದಿದೆ. ಅರಣ್ಯ ಸಂಪತ್ತನ್ನು ರಕ್ಷಿಸಬೇಕಾದ ನಮ್ಮ ಸರಕಾರಗಳೇ ಕಾಡಿನ ನಾಶಕ್ಕೆ ಕಾರಣವಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಕರ್ನಾಟಕದಲ್ಲಿ 1995-2014ರ ಕಾಲಾವಧಿಯಲ್ಲಿ ಅರಣ್ಯ ಅತಿಕ್ರಮಣದ ಪ್ರಮಾಣ 42 ಸಾವಿರ ಎಕರೆಯಿಂದ 2 ಲಕ್ಷ ಎಕರೆಯವರೆಗೆ ಏರಿದೆ ಎಂದು ಮಹಾಲೇಖಪಾಲರ(ಸಿಎಜಿ) ವರದಿಯಿಂದ ತಿಳಿದುಬರುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ, ನಮ್ಮನ್ನಾಳುವ ಸರಕಾರಗಳೇ ಅರಣ್ಯ ನಾಶಕ್ಕೆ ಕಾರಣವಾಗುತ್ತಿವೆ. ಅರಣ್ಯ ಒತ್ತುವರಿ ಬಗ್ಗೆ ಸರಕಾರದ ಮೃದು ಧೋರಣೆಯಿಂದ ಪ್ರತಿವರ್ಷ ಒತ್ತುವರಿ ಪ್ರಮಾಣ ಹೆಚ್ಚುತ್ತಲೇ ಇದೆ.

ಉದ್ಯಮಪತಿಗಳೊಂದಿಗೆ ಶಾಮೀಲಾಗಿರುವ ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಅರಣ್ಯ ಒತ್ತುವರಿಗೆ ಕುಮ್ಮಕ್ಕು ನೀಡುತ್ತಲೇ ಇದ್ದಾರೆ. ಇದನ್ನು ತಡೆಯಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಂರಕ್ಷಿತ ಅರಣ್ಯ ಪ್ರದೇಶ ಕೂಡಾ ಸುರಕ್ಷಿತವಾಗಿಲ್ಲ. ಅಲ್ಲಿಯೂ ಅರಣ್ಯ ಒತ್ತುವರಿ ಪ್ರಕರಣಗಳು ವರದಿಯಾಗುತ್ತಿವೆ. ಸಂರಕ್ಷಿತ ಅರಣ್ಯ ಪ್ರದೇಶಗಳನ್ನು ಕಾಪಾಡಲು ಸೂಕ್ತವಾದ ಭದ್ರತಾ ಸಿಬ್ಬಂದಿ ಸರಕಾರದ ಬಳಿ ಇಲ್ಲ. ಈಗ ಇರುವ ಅರಣ್ಯ ಸಿಬ್ಬಂದಿಗೆ ಸುಸಜ್ಜಿತ ಆಯುಧಗಳಿಲ್ಲ. ಇನ್ನೊಂದೆಡೆ ಒತ್ತುವರಿ ಮಾಡಿಕೊಂಡ ಅರಣ್ಯ ಭೂಮಿಯನ್ನು ಸಕ್ರಮ ಮಾಡಬೇಕೆಂದು ಸರಕಾರದ ಮೇಲೆ ಒತ್ತಡ ಬರುತ್ತಲೇ ಇದೆ. ಅದಕ್ಕಾಗಿ ಚಳವಳಿಗಳೂ ನಡೆಯುತ್ತಿವೆ. ಡೀಮ್ಡ್ ಅರಣ್ಯ ಪಟ್ಟಿಯಿಂದ 5 ಲಕ್ಷ ಹೆಕ್ಟೇರ್ ಭೂಮಿಯನ್ನು ಹೊರಗಿಡುವುದು ಅಗತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿರುವುದು ಆತಂಕಕಾರಿಯಾಗಿದೆ.

ಈ ದೇಶದಲ್ಲಿ ಅರಣ್ಯವನ್ನು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದವರು ಅಲ್ಲಿ ತಲೆಮಾರುಗಳಿಂದ ನೆಲೆಸಿರುವ ಆದಿವಾಸಿಗಳು. ಕಾಡಿನಲ್ಲೇ ಬದುಕನ್ನು ಕಟ್ಟಿಕೊಂಡಿರುವ ಗಿರಿಜನರು ಅತ್ಯಂತ ಜೋಪಾನವಾಗಿ ತಮಗೆ ಆಸರೆ ನೀಡಿದ ಕಾಡನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಕಾಡನ್ನು ಕಾಪಾಡಿಕೊಂಡು ಬಂದ ಈ ಆದಿವಾಸಿಗಳನ್ನು ಅಲ್ಲಿಂದ ಎತ್ತಂಗಡಿ ಮಾಡಿ ತಮ್ಮ ಲಾಭಕೋರ ಚಟುವಟಿಕೆಗಳಿಗಾಗಿ ಕಾಡನ್ನು ಬಳಸಿಕೊಳ್ಳಲು ಬಲಾಢ್ಯ ಶಕ್ತಿಗಳು ಯತ್ನಿಸುತ್ತಿವೆ. ಈಗಾಗಲೇ ಅನೇಕ ಕಡೆ ಕಾಡಿನಲ್ಲಿರುವ ಗಿಡಮರಗಳನ್ನು ಕಡಿದು ಇವರು ಭೂಮಿಯನ್ನು ಅತಿಕ್ರಮಿಸಿದ್ದಾರೆ. ಹೀಗೆ ಅತಿಕ್ರಮಿಸಿಕೊಂಡ ಭೂಮಿಯನ್ನು ಸಕ್ರಮಗೊಳಿಸಬೇಕೆಂದು ಸರಕಾರದ ಮೇಲೆ ಇವರು ಒತ್ತಡ ಹೇರುತ್ತಿದ್ದಾರೆ. ಸರಕಾರ ಕೂಡಾ ಈ ಒತ್ತಡಕ್ಕೆ ಮಣಿಯುತ್ತಾ ಬಂದಿದೆ.

ನಮ್ಮ ರಾಜ್ಯದ ಚಿಕ್ಕಮಗಳೂರು, ಕೊಡಗು ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಅರಣ್ಯ ಒತ್ತುವರಿ ಪ್ರಮಾಣ ಹೆಚ್ಚಿದೆ. ಇದು ಸಾಲದೆಂಬಂತೆ ರಾಜ್ಯದ ಆರು ಸಂರಕ್ಷಿತ ಅರಣ್ಯ ಪ್ರದೇಶಗಳ ಸುತ್ತ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳು ನಾಯಿಕೊಡೆಗಳಂತೆ ತಲೆಎತ್ತಿವೆ. ಪ್ರಭಾವಿ ಉದ್ಯಮಪತಿಗಳು ಮತ್ತು ರಾಜಕಾರಣಿಗಳು ಸರಕಾರದ ಮೇಲೆ ಒತ್ತಡ ಹೇರಿ ಕಾಡಿನಲ್ಲಿ ತಲೆ ಎತ್ತಿರುವ ವಿಹಾರ ಧಾಮಗಳಿಗೆ ಅನುಮತಿ ಪಡೆದುಕೊಳ್ಳುತ್ತಿದ್ದಾರೆ. ನಾನಾ ಕಾರಣಗಳಿಂದಾಗಿ ಸರಕಾರ ಇವರ ಒತ್ತಡಕ್ಕೆ ಮಣಿಯುತ್ತಿರುವುದರಿಂದ ದಿನದಿಂದ ದಿನಕ್ಕೆ ಅರಣ್ಯ ನಾಶವಾಗುತ್ತಲೇ ಇದೆ.

ಈ ವಿಹಾರಧಾಮಗಳಿಂದಾಗಿ ವರ್ಷದಿಂದ ವರ್ಷಕ್ಕೆ ಅರಣ್ಯದ ಪ್ರಮಾಣ ಕಿರಿದಾಗುತ್ತಾ ಬಂದಿದೆ. ಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಇದರಿಂದ ಹೆಚ್ಚಾಗುತ್ತಿದೆ. ಕಾಡಿನಲ್ಲಿ ಆಸರೆ ತಪ್ಪಿದ ಮತ್ತು ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಹುಲಿ, ಚಿರತೆ ಮತ್ತು ಆನೆಗಳು ನಾಡಿಗೆ ಬಂದು ಹಾವಳಿ ಮಾಡಿ ಹೋಗುತ್ತವೆ. ಅದನ್ನು ನಾವು ಕಾಡು ಪ್ರಾಣಿಗಳ ಹಾವಳಿ ಎನ್ನುತ್ತೇವೆ. ಆದರೆ, ವಾಸ್ತವವಾಗಿ ಮನುಷ್ಯರೇ ಕಾಡಿಗೆ ನುಗ್ಗಿ ಅಲ್ಲಿ ವಿಹಾರ ತಾಣಗಳನ್ನು ನಿರ್ಮಿಸಿ ಕಾಡು ಪ್ರಾಣಿಗಳ ನೆಮ್ಮದಿಗೆ ಭಂಗ ಉಂಟುಮಾಡಿದ್ದಾರೆ. ಹೀಗಾಗಿ ಕಾಡು ಪ್ರಾಣಿಗಳು ನೆಲೆ ತಪ್ಪಿ ನಗರ ಮತ್ತು ಹಳ್ಳಿಗಳಿಗೆ ನುಗ್ಗುತ್ತಿವೆ. ಅಷ್ಟೇ ಅಲ್ಲದೇ, ಅರಣ್ಯ ನಾಶದಿಂದಾಗಿ ಮಳೆಯ ಅಭಾವ ಹಾಗೂ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಪದೇ ಪದೇ ನಮ್ಮ ನಾಡನ್ನು ಬರಗಾಲ ಬಾಧಿಸುತ್ತಿದೆ. ಆದರೂ ಅರಣ್ಯವನ್ನು ಕಾಪಾಡಲು ನಾವು ಯಾವುದೇ ಕ್ರಮವನ್ನು ಕೈಗೊಂಡಿಲ್ಲ.

ನಮ್ಮ ದೇಶದ ದಟ್ಟ ಅರಣ್ಯ ಪ್ರದೇಶಗಳಿರುವ ಛತ್ತೀಸ್‌ಗಡ ಮತ್ತು ಜಾರ್ಖಂಡ್‌ಗಳಲ್ಲಿ ಅಮೂಲ್ಯ ಖನಿಜ ಸಂಪತ್ತಿದೆ. ಈ ಅಮೂಲ್ಯ ಖನಿಜ ಸಂಪತ್ತಿನ ಮೇಲೆ ದೇಶ ವಿದೇಶದ ಬಹುರಾಷ್ಟ್ರೀಯ ಕಂಪೆನಿಗಳು ಕಣ್ಣು ಹಾಕಿವೆ. ಇಲ್ಲಿ ಗಣಿಗಾರಿಕೆ ನಡೆಸಲು ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪೆನಿಗಳೊಂದಿಗೆ ನಮ್ಮ ಕೇಂದ್ರ ಸರಕಾರ ಒಪ್ಪಂದ ಮಾಡಿಕೊಂಡಿದೆ. ನಮ್ಮ ರಾಜ್ಯದಲ್ಲೂ ಸದ್ದುಗದ್ದಲವಿಲ್ಲದೇ ಗುಜರಾತ್‌ನ ಕೆಲ ಉದ್ಯಮಿಗಳು ಗಣಿಗಾರಿಕೆಯಲ್ಲಿ ತೊಡಗಿದ್ದಾರೆಂಬ ವರದಿಗಳಿವೆ.

ಈ ಗಣಿಗಾರಿಕೆಯಿಂದಾಗಿ ನಮ್ಮ ಅಮೂಲ್ಯವಾದ ನದಿ ಮೂಲಗಳಿಗೂ ಧಕ್ಕೆ ಉಂಟಾಗುತ್ತಿದೆ. ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಗಣಿಗಾರಿಕೆಗೆ ಅಡ್ಡಿಯಾಗಿರುವುದರಿಂದ ಅವರನ್ನು ಹೊರದಬ್ಬಿ ಆ ಅರಣ್ಯ ಪ್ರದೇಶಗಳನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಬಿಟ್ಟುಕೊಡಲು ಸರಕಾರ ಪ್ರಯತ್ನಿಸುತ್ತಲೇ ಇದೆ. ಆದರೆ, ಛತ್ತೀಸ್‌ಗಡ ಮುಂತಾದ ಕಡೆ ಆದಿವಾಸಿಗಳಿಂದ ತೀವ್ರ ಪ್ರತಿರೋಧ ಬರುತ್ತಿದೆ. ಈ ಪ್ರತಿರೋಧವನ್ನು ನಕ್ಸಲೀಯ ಚಳವಳಿಯೆಂದು ಬಿಂಬಿಸಿ ಅದನ್ನು ಹತ್ತಿಕ್ಕಲು ಸರಕಾರ ಯತ್ನಿಸುತ್ತಿದೆ. ಅಲ್ಲಿ ಮಾನವ ಹಕ್ಕುಗಳು ಉಲ್ಲಂಘನೆ ಪ್ರಕರಣಗಳೂ ನಡೆದಿವೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಅನೇಕ ಬಾರಿ ಮಧ್ಯಪ್ರವೇಶ ಮಾಡಿದರೂ ಅಲ್ಲಿನ ಜನರಿಗೆ ನ್ಯಾಯ ದೊರಕಿಲ್ಲ.

ಅರಣ್ಯ ರಕ್ಷಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಸರಕಾರ ಹೇಳಿಕೊಳ್ಳುತ್ತಿದೆ. ‘ಹಸಿರು ಬೆಳೆಸಿ ಹಸಿರು ಉಳಿಸಿ’ ಎಂಬ ಘೋಷಣೆಗಳಿರುವ ಭಿತ್ತಿಪತ್ರಗಳನ್ನು ಸರಕಾರ ಕಾಡಿನಲ್ಲಿ ಅಂಟಿಸುತ್ತಿದೆ. ಆದರೆ, ಅರಣ್ಯವನ್ನು ದೇವರೆಂದು ಪೂಜಿಸಿಕೊಂಡು ಬಂದ ಆದಿವಾಸಿಗಳ ಮೇಲೆ ದಬ್ಬಾಳಿಕೆ ಮಾಡಿ ಅವರನ್ನೇ ಕಾಡಿನಿಂದ ಹೊರಗೆ ಹಾಕಿ ಪ್ರಭಾವಿ ವ್ಯಕ್ತಿಗಳಿಗೆ ಕಾಡನ್ನು ಬಿಟ್ಟುಕೊಡಲು ಮಸಲತ್ತು ನಡೆಸುತ್ತಲೇ ಇದೆ. ನಮ್ಮ ದೇಶದ ಅರಣ್ಯ ನಾಶಕ್ಕೆ ಕಾರಣರಾದವರು ಸಾಮಾನ್ಯ ಜನರಲ್ಲ. ಆದಿವಾಸಿಗಳೂ ಅಲ್ಲ. ಆದರೆ, ಪ್ರಭಾವಿ ರಾಜಕಾರಣಿಗಳು ಹಾಗೂ ಉದ್ಯಮಿಗಳು ಮತ್ತು ಸಿರಿವಂತರಿಗಾಗಿ ನಿರ್ಮಿಸಿದ ವಿಹಾರಧಾಮಗಳಿಂದಾಗಿ, ಗಣಿಗಾರಿಕೆ ಚಟುವಟಿಕೆಗಳಿಂದಾಗಿ ಅರಣ್ಯ ನಾಶವಾಗುತ್ತಿದೆ. ಸರಕಾರದ ಉನ್ನತ ಸ್ಥಾನದಲ್ಲಿ ಕುಳಿತವರೊಂದಿಗೆ ಸ್ನೇಹವನ್ನು ಸಂಪಾದಿಸಿರುವ ಉದ್ಯಮಿಗಳು ಸರಕಾರದ ಅನುಮತಿ ಇಲ್ಲದೆ ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಹೋಂಸ್ಟೇ ಮತ್ತು ರೆಸಾರ್ಟ್‌ಗಳನ್ನು ನಿರ್ಮಿಸಿ ಕಾಡಿನ ನಾಶಕ್ಕೆ ಕಾರಣರಾಗುತ್ತಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ತಲೆಯೆತ್ತಿರುವ 44 ವಿಹಾರಧಾಮಗಳಿಗೆ ಅರಣ್ಯ ಇಲಾಖೆಯ ಅನುಮತಿ ಇಲ್ಲ ಎಂಬುದು ತಿಳಿದುಬಂದಿದೆ. ಆದರೂ ಅವುಗಳನ್ನು ಮುಚ್ಚಿಸುವ ತಾಕತ್ತು ಯಾರಿಗೂ ಇಲ್ಲ. ಹೀಗಾಗಿ ಯಾರ ಅನುಮತಿ ಇಲ್ಲದ್ದಿದ್ದರೂ ಅವು ನಿರಾತಂಕವಾಗಿ ಕಾರ್ಯಾಚರಿಸುತ್ತಿವೆ. ಸರಕಾರ ಇನ್ನಾದರೂ ಎಚ್ಚರ ವಹಿಸಿ ಅರಣ್ಯವನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕು. ಇದೇ ರೀತಿ ಅರಣ್ಯ ನಾಶದ ಪ್ರಮಾಣ ಹೆಚ್ಚಿದರೆ ಮುಂದೊಂದು ದಿನ ನಮ್ಮ ದೇಶವೂ ಸೊಮಾಲಿಯಾದಂತೆ ಬರಡು ಪ್ರದೇಶವಾಗುತ್ತದೆ ಎಂಬುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಜನಪರ ಸಂಘಟನೆಗಳು ಸರಕಾರದ ಮೇಲೆ ಒತ್ತಡ ತರಲು ಚಳವಳಿಗಳನ್ನು ರೂಪಿಸಬೇಕು.

ಆದರೆ, ವಿಷಾದದ ಸಂಗತಿಯೆಂದರೆ ನಾಡಿನ ಅರಣ್ಯ ಸಂಪತ್ತನ್ನು ರಕ್ಷಿಸಲು ಹೋರಾಡಬೇಕಾದ ಯುವಕರು ಇವತ್ತು ಕೋಮುವಾದಿ ಸಂಘಟನೆಗಳ ಬಲೆಗೆ ಬಿದ್ದು ಪರಸ್ಪರ ಸಂಘರ್ಷಕ್ಕೆ ಇಳಿದಿದ್ದಾರೆ. ಅರಣ್ಯ ರಕ್ಷಣೆ ಬರೀ ಸರಕಾರದ ಕರ್ತವ್ಯವಲ್ಲ. ಸಾರ್ವಜನಿಕರು, ಮಠಾಧಿಪತಿಗಳು, ಸ್ವಯಂ ಸೇವಾ ಸಂಘಟನೆಗಳು, ನಾಗರಿಕ ಸಂಘಟನೆಗಳು ಒಂದಾಗಿ ಅರಣ್ಯ ರಕ್ಷಣೆಗೆ ಮುಂದಾಗಬೇಕು. ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ಸುಂದರ್‌ಲಾಲ್ ಬಹುಗುಣ ಅವರ ನೇತೃತ್ವದಲ್ಲಿ ಜನಸಾಮಾನ್ಯರು ಸಂಘಟಿತರಾಗಿ ತಮ್ಮ ರಾಜ್ಯದ ಅರಣ್ಯ ಪ್ರದೇಶವನ್ನು ಉಳಿಸಿಕೊಂಡಿದ್ದನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲದಕ್ಕೂ ಸರಕಾರವನ್ನೇ ಇದಿರು ನೋಡದೆ ಜನಪರ ಸಂಘಟನೆಗಳು ಅರಣ್ಯ ರಕ್ಷಣೆಗಾಗಿಯೇ ಕಾರ್ಯಸೂಚಿಯನ್ನು ರಚಿಸಿಕೊಂಡು ಹೋರಾಟಕ್ಕಿಳಿಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News