ಜಿಎಸ್‌ಟಿ ಕುರಿತ ವಿಶೇಷ ಮಧ್ಯರಾತ್ರಿ ಸಭೆಯಲ್ಲಿ ಪಾಲ್ಗೊಳ್ಳದಿರಲು ಕಾಂಗ್ರೆಸ್ ನಿರ್ಧಾರ

Update: 2017-06-29 13:01 GMT

ಹೊಸದಿಲ್ಲಿ, ಜೂ.29: ಜಿಎಸ್‌ಟಿ ಅನುಷ್ಠಾನದ ಕುರಿತು ಜೂನ್ 30ರ ಮಧ್ಯರಾತ್ರಿ ಸರಕಾರ ಆಯೋಜಿಸಿರುವ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳದಿರಲು ಕಾಂಗ್ರೆಸ್ ನಿರ್ಧರಿಸಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇತರ ಹಿರಿಯ ಸದಸ್ಯರೊಡನೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪಕ್ಷದ ಹಿರಿಯ ವಕ್ತಾರ ಸತ್ಯವೃತ ಚತುರ್ವೇದಿ ತಿಳಿಸಿದ್ದಾರೆ.

 ಈ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಕಾಂಗ್ರೆಸ್ ಪಕ್ಷ ಗೊಂದಲದಲ್ಲಿತ್ತು. ಈ ಕುರಿತು ಇತರ ಪಕ್ಷಗಳ ಜೊತೆ ವ್ಯಾಪಕ ಮಾತುಕತೆಯನ್ನೂ ನಡೆಸಿತ್ತು. ಇದೀಗ ಪಾಲ್ಗೊಳ್ಳದಿರುವ ಬಗ್ಗೆ ಪಕ್ಷ ನಿರ್ಧರಿಸಿದ್ದು ಇತರ ಪಕ್ಷಗಳೂ ಇದೇ ನಿಲುವನ್ನು ತಳೆಯುವ ನಿರೀಕ್ಷೆಯಿದೆ. ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಟಿಎಂಸಿ ಈಗಾಗಲೇ ಪ್ರಕಟಿಸಿದೆ.

  ಇದೀಗ ಬಿಜೆಪಿ ತನ್ನ ವಶಕ್ಕೆ ಪಡೆದುಕೊಂಡಿರುವ ಜಿಎಸ್‌ಟಿ ಕಾಂಗ್ರೆಸ್‌ನ ಕಲ್ಪನೆಯ ಕೂಸಾಗಿರುವ ಕಾರಣ ಸಭೆಯಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ ಎಂದು ಹಲವು ಹಿರಿಯ ಮುಖಂಡರು ಅಭಿಪ್ರಾಯ ಸೂಚಿಸಿದ್ದರು. ಆದರೆ ಜಿಎಸ್‌ಟಿಯನ್ನು ತರಾತುರಿಯಿಂದ ಅನುಷ್ಠಾನಗೊಳಿಸುತ್ತಿರುವ ಕಾರಣ ಎಲ್ಲಾ ಅಂಶಗಳನ್ನೂ ಪರಿಗಣಿಸಲಾಗಿಲ್ಲ. ಇದರಿಂದ ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಜಿಎಸ್‌ಟಿ ಕುರಿತ ವಿಶೇಷ ಮಧ್ಯರಾತ್ರಿ ಸಭೆಯಲ್ಲಿ ಪಾಲ್ಗೊಳ್ಳುವುದು ಬೇಡ ಎಂದು ಇತರ ಕೆಲವು ಮುಖಂಡರು ಅನಿಸಿಕೆ ವ್ಯಕ್ತಪಡಿಸಿದ್ದರು.

  ಅಲ್ಲದೆ 1947ರ ಆಗಸ್ಟ್ 14ರಂದು ಮಧ್ಯರಾತ್ರಿ ಭಾರತದ ಪ್ರಥಮ ಪ್ರಧಾನಿ ಜವಹರ್‌ಲಾಲ್ ನೆಹ್ರೂ ಮಾಡಿದ್ದ ‘ಅದೃಷ್ಟದೊಂದಿಗೆ ಸಮಾಗಮ’ ಭಾಷಣವನ್ನು , ಜೂನ್ 30ರ ಮಧ್ಯರಾತ್ರಿಯ ಭಾಷಣದಲ್ಲಿ ಮೋದಿ ಅನುಸರಿಸಲಿದ್ದಾರೆ ಎಂಬ ನಿರೀಕ್ಷೆಯಿದ್ದು ಈ ಬಗ್ಗೆ ಕಾಂಗ್ರೆಸ್ ಅತೃಪ್ತಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

   ಎಡಪಕ್ಷಗಳೂ ಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿವೆ. ವಿಪಕ್ಷ ಸ್ಥಾನದಲ್ಲಿದ್ದಾಗ ಜಿಎಸ್‌ಟಿಯನ್ನು ವಿರೋಧಿಸಿದ್ದ ಬಿಜೆಪಿ ಈಗ ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಲು ಕಾರಣವೇನು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರಶ್ನಿಸಿದ್ದಾರೆ.

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಜೂನ್ 30ರ ಮಧ್ಯರಾತ್ರಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಜಾಗಟೆಯೊಂದನ್ನು ಬಾರಿಸುವ ಮೂಲಕ ಜಿಎಸ್‌ಟಿ ಅನುಷ್ಠಾನಗೊಂಡಿರುವುದನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ. ಪ್ರಧಾನಿ ಮೋದಿ ಪ್ರಧಾನ ಭಾಷಣ ಮಾಡಲಿದ್ದಾರೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ನಿರೀಕ್ಷೆಯಿದ್ದು, ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಹಾಗೂ ದೇವೇಗೌಡರನ್ನೂ ಆಹ್ವಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News