ಆಝಂ ಖಾನ್ ವಿರುದ್ಧ ದೇಶದ್ರೋಹ ಪ್ರಕರಣ

Update: 2017-07-01 07:13 GMT

ಮೀರತ್,ಜು.1: ಇತ್ತೀಚೆಗೆ ಭಾರತೀಯ ಸೈನಿಕರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ವಿರುದ್ಧ ಬಿಜ್ನೂರ್‌ನ ಚಂದಪುರ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಪ್ರಕರಣ ದಾಖಲಾಗಿದೆ.

ಐಪಿಸಿ ಸೆಕ್ಷನ್‌ಗಳಾದ 124(ದೇಶದ್ರೋಹ), 131(ದಂಗೆಗೆ ಕುಮ್ಮಕ್ಕು) ಹಾಗೂ 505(ಅವಹೇಳನಕಾರಿ ಹೇಳಿಕೆ)ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ಅಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಪ್ರಾಂತ ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್‌ನ ಅನಿಲ್ ಪಾಂಡೆ ನೀಡಿರುವ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿತ್ತು.

ಗಡಿಯಲ್ಲಿ ಯುದ್ದದ ವಾತಾವರಣ ಸೃಷ್ಟಿಯಾಗಿದೆ. ಮತ್ತೊಂದೆಡೆ ಮಹಿಳೆಯರು ಯೋಧರ ಗುಪ್ತಾಂಗವನ್ನು ಕತ್ತರಿಸಿ ಕೊಲೆ ಮಾಡಿದ್ದಾರೆ. ಮಹಿಳೆಯರು ಹೀಗೆ ಮಾಡಲು ಕಾರಣವೇನೆಂಬ ಬಗ್ಗೆ ಯೋಚಿಸಬೇಕಾಗಿದೆ. ತಮ್ಮ ಮೇಲಿನ ಅತ್ಯಾಚಾರಕ್ಕೆ ಪ್ರತಿಯಾಗಿ ಮಹಿಳೆಯರು ಈ ಕೃತ್ಯ ಮುಂದಾಗಿದ್ದಾರೆ. ಇದು ದೇಶಕ್ಕೆ ಅವಮಾನ ಎಂದು ಇತ್ತೀಚೆಗೆ ರಾಂಪುರದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಆಝಂ ಖಾನ್ ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.

ಇದೇ ವೇಳೆ ಶಹಜಾನ್‌ಪುರ ಜಿಲ್ಲೆಯ ವಿಎಚ್‌ಪಿಯ ಸಂಯೋಜಕ ರಾಜೇಶ್‌ಕುಮಾರ್ ಅವಸ್ತಿ ಎಂಬಾತ ಸಮಾಜವಾದಿ ನಾಯಕ ಖಾನ್ ನಾಲಿಗೆ ಕತ್ತರಿಸುವವರಿಗೆ 50 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News