​ಜಿಎಸ್‌ಟಿ: ಔಷಧಿಗಳಿಗೆ ಎರಡು ತಿಂಗಳು ವಿನಾಯಿತಿ

Update: 2017-07-02 03:51 GMT

ಹೊಸದಿಲ್ಲಿ, ಜು.2: ದೇಶದಲ್ಲಿ ಜಿಎಸ್‌ಟಿ ತೆರಿಗೆ ನಿನ್ನೆಯಿಂದ ಅಸ್ತಿತ್ವಕ್ಕೆ ಬಂದಿದ್ದರೂ, ರೋಗಿಗಳು ಅಗತ್ಯ ಔಷಧಿಗಳನ್ನು ಇನ್ನೂ ಒಂದು ತಿಂಗಳ ಕಾಲ ಜಿಎಸ್‌ಟಿಪೂರ್ವ ದರದಲ್ಲೇ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಔಷಧಗಳ ಪರಿಷ್ಕೃತ ದರದ ಬದಲಾಗಿ ಈಗಾಗಲೇ ಮೆಡಿಕಲ್‌ಗಳಲ್ಲಿರುವ ಹಳೆಯ ಎಂಆರ್‌ಪಿ ದರದಲ್ಲೇ ಖರೀದಿಸಬಹುದಾಗಿದೆ.

ಮೆಡಿಕಲ್‌ಗಳಿಗೆ ಹೊಸ ಬ್ಯಾಚ್ ನಂಬರ್‌ನ ಔಷಧಿಗಳು ಬರುವವರೆಗೆ ಹಳೆ ದರದಲ್ಲೇ ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಹಳೆಯ ಔಷಧಿಗಳು ಮುಗಿಯುವವರೆಗೆ ಅಂದರೆ ಸುಮಾರು ಎರಡು ತಿಂಗಳ ಕಾಲ ಗರಿಷ್ಠ ಮಾರಾಟ ಬೆಲೆಯಲ್ಲಿ ಮಾರಾಟ ಮಾಡಲು ಅವಕಾಶ ಇರುತ್ತದೆ. ಹೊಸ ದರ ನಮೂದಿಸಿದ ಔಷಧಗಳು ಆಗಸ್ಟ್ ವೇಳೆಗೆ ಮಾರುಕಟ್ಟೆ ತಲುಪುವ ನಿರೀಕ್ಷೆ ಇದೆ. ಇನ್ಸುಲಿನ್, ಕಿಡ್ನಿ ಸಂಬಂಧಪಟ್ಟ ಹಾಗೂ ಕ್ಯಾನ್ಸರ್‌ನಂಥ ಚಿಕಿತ್ಸೆಗೆ ತುರ್ತು ನಿಗಾ ಉತ್ಪನ್ನಗಳು, ವೈರಸ್ ನಿರೋಧಕ ಔಷಧಗಳ ಬೆಲೆ ಜಿಎಸ್‌ಟಿ ಜಾರಿ ಬಳಿಕ ಕಡಿಮೆಯಾಗಲಿದೆ.

ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿರುವ ಔಷಧಿಗಳಿಗೆ ಶೇಕಡ 12 ಹಾಗೂ ಇನ್ಸುಲಿನ್ ಮತ್ತಿತರ ತುರ್ತು ಅಗತ್ಯದ ಉತ್ಪನ್ನಗಳಿಗೆ ಶೇಕಡ 5ರಷ್ಟು ಜಿಎಸ್‌ಟಿ ನಿಗದಿಪಡಿಸಲಾಗಿದೆ. ಔಷಧ ಕಂಪೆನಿಗಳ ತೆರಿಗೆ ಹೊಣೆಗಾರಿಕೆ ಹೆಚ್ಚುವ ಹಿನ್ನೆಲೆಯಲ್ಲಿ ಎನ್‌ಎಲ್‌ಇಎಂ ಔಷಧಗಳ ಬೆಲೆ ಶೇಕಡ 2.29ರಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಈ ಬಗ್ಗೆ ರಾಷ್ಟ್ರೀಯ ಫಾರ್ಮಸ್ಯೂಟಿಕಲ್ಸ್ ಪ್ರೈಸಿಂಗ್ ಅಥಾರಿಟಿ ಖಚಿತ ಲೆಕ್ಕಾಚಾರ ನಡೆಸುತ್ತಿದೆ.

ಜಿಎಸ್‌ಟಿ ಜಾರಿಗೆ ಬಂದ ಬಳಿಕದ ಹೊಸ ಬೆಲೆಗಳನ್ನು ಕೂಡಾ ಎನ್‌ಪಿಪಿಎ ನಿರ್ಧರಿಸಲಿದೆ. ಜಿಎಸ್‌ಟಿ ಯುಗದಲ್ಲಿ ಕೂಡಾ ಶೇಕಡ 78ರಷ್ಟು ಔಷಧಿಗಳ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇಲ್ಲ ಎಂದು ಮೂಲಗಳು ಹೇಳಿವೆ. ಯಾವುದೇ ಔಷಧಿಗಳ ಲಭ್ಯತೆ ಇಲ್ಲದಿದ್ದಲ್ಲಿ ವಾಟ್ಸ್‌ಆ್ಯಪ್ ಮೂಲಕ 9695736333ಗೆ ಮಾಹಿತಿ ನೀಡಬಹುದು ಎಂದು ಎನ್‌ಪಿಪಿಎ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News