ಯೂನಿರ್ವಸಲ್ ಹೆಲ್ತ್ ಕವರೇಜ್‌ ಯೋಜನೆ ಶೀಘ್ರ ಜಾರಿ: ರಮೇಶ್‌ಕುಮಾರ್‌

Update: 2017-07-03 14:57 GMT

ಬೆಂಗಳೂರು, ಜು. 3: ಬಿಪಿಎಲ್-ಎಪಿಎಲ್ ಎಂಬ ವರ್ಗೀಕರಣವಿಲ್ಲದೆ ರಾಜ್ಯದಲ್ಲಿನ 1.30 ಕೋಟಿ ಕುಟುಂಬಗಳ ಎಲ್ಲರಿಗೂ ಆರೋಗ್ಯ ಸೌಲಭ್ಯ ಕಲ್ಪಿಸಲು ‘ಆರೋಗ್ಯ ಭಾಗ್ಯ’ (ಯೂನಿರ್ವಸಲ್ ಹೆಲ್ತ್ ಕವರೇಜ್) ಯೋಜನೆಯನ್ನು ಶೀಘ್ರದಲ್ಲೆ ಜಾರಿಗೆ ತರಲಾಗುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ವಿಧಾನ ಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು. ಎಲ್ಲ ವರ್ಗದವರಿಗೂ ಆರೋಗ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಇಲಾಖೆಯಲ್ಲಿ ಲಭ್ಯರುವ ಹಣದಲ್ಲಿಯೆ ಸರಕಾರಿ ಆಸ್ಪತ್ರೆಗಳಲ್ಲಿ ಆಧಾರ್ ಸಂಖ್ಯೆ ಜೋಡಣೆ ಮೂಲಕ ಉಚಿತ ಚಿಕಿತ್ಸೆ, ಉಚಿತ ಔಷಧಿ ವಿತರಿಸುವ ಮಹಾತ್ವಾಕಾಂಕ್ಷಿ ಯೋಜನೆ ಇದಾಗಿದೆ ಎಂದು ಹೇಳಿದರು.

ಬಿಪಿಎಲ್, ಎಪಿಎಲ್ ಎಂಬ ಯಾವುದೇ ತಾರತಮ್ಯವಿಲ್ಲದೆ ಎಲ್ಲರ ಆರೋಗ್ಯ ರಕ್ಷಣೆ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಕೇವಲ ಆಧಾರ್ ಸಂಖ್ಯೆ ಜೋಡಣೆ ಆಧಾರದ ಮೇಲೆ ಈ ಸೌಲಭ್ಯವನ್ನು ಪ್ರತಿಯೊಬ್ಬರೂ ಪಡೆಯಬಹುದಾಗಿದೆ ಎಂದು ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.

ಯಶಸ್ವಿನಿ, ರಾಜೀವ್ ಆರೋಗ್ಯ ಭಾಗ್ಯ ಸೇರಿದಂತೆ ವಿವಿಧ ಯೋಜನೆಗಳನ್ನು ಒಂದೆಡೆ ಕ್ರೋಡೀಕರಿಸಿ ಯುನಿವರ್ಸಲ್ ಹೆಲ್ತ್ ಕಾರ್ಡ್ ಯೋಜನೆಯಡಿ ಆರೋಗ್ಯ ಸಂರಕ್ಷಣಾ ಸೌಲಭ್ಯಗಳನ್ನು ಕಲ್ಪಿಸಲು ಸರಕಾರ ದೃಢಸಂಕಲ್ಪಮಾಡಿದೆ ಎಂದು ಅವರು ಹೇಳಿದರು.

ಆರೋಗ್ಯ ಯೋಜನೆಗಳಿಗೆ ಆರೋಗ್ಯ ಇಲಾಖೆ 1,022 ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಅದೇ ಹಣದಲ್ಲಿ ಆರೋಗ್ಯ ಭಾಗ್ಯ ಯೋಜನೆ ರೂಪಿಸಲಿದ್ದೇವೆ ಎಂದ ಅವರು, ಎಲ್ಲ ವರ್ಗದ ಜನರ ಆರೋಗ್ಯ ರಕ್ಷಣೆಗೆ ಸರಕಾರ ಬದ್ಧ ಎಂದು ಘೋಷಿಸಿದರು.

ರಾಜ್ಯದ ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸಿಟಿಸ್ಕ್ಯಾನ್, ಎಕ್ಸ್‌ರೇ, ಎಂಆರ್‌ಐ ಸ್ಕ್ಯಾನ್ ಸೇರಿ ಎಲ್ಲ ಉಪಕರಣಗಳನ್ನು 1-2 ತಿಂಗಳಲ್ಲಿ ಅಳವಡಿಸಿ ಸಾರ್ವಜನಿಕರಿಗೆ ಉಚಿತವಾಗಿ ಈ ಸೌಲಭ್ಯ ಒದಗಿಸಲಾಗುವುದು. ಖಾಸಗಿಯವರು ಒಂದು ಡಯಾಲಿಸಿಸ್‌ಗೆ 1,200 ರೂ.ನಿಂದ 1,300 ರೂ. ಪಡೆಯುತ್ತಾರೆ. ಸಿಟಿಸ್ಕಾನ್, ಎಂಆರ್‌ಐಗೆ 7 ಸಾವಿರ ರೂ.ನಿಂದ 8 ಸಾವಿರ ರೂ.ಪಡೆಯುತ್ತಾರೆ. ಆದರೆ, ಸರಕಾರಿ ಆಸ್ಪತ್ರೆಗಳಲ್ಲಿ ಇದನ್ನು ಉಚಿತವಾಗಿ ಮಾಡಲಾಗುವುದು ಎಂದರು.

ಸರಕಾರಿ ವೈದ್ಯಕೀಯ ಕಾಲೇಜುಗಳಿಲ್ಲದ ವಿಜಯಪುರ, ರಾಮನಗರ, ಕೋಲಾರ, ದಾವಣಗೆರೆ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆದು, ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದ ಅವರು, ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ಕ್ರಮ ವಹಿಸಲಾಗಿದೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ: ಯುನಿರ್ವಸಲ್ ಹೆಲ್ತ್ ಕವರೇಜ್ ಯೋಜನೆ ಅಡಿ ಆಪತ್ ಕಾಲದಲ್ಲಿ ಜೀವ ರಕ್ಷಣೆ ಮಾಡಲು ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯವಿಲ್ಲದಿದ್ದರೆ ಅಂತಹ ರೋಗಿಗಳು ಖಾಸಗಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಅವರಿಂದ ಮುಂಗಡ ಹಣ ಕೇಳಬಾರದು. ಮೊದಲು ಚಿಕಿತ್ಸೆ ನೀಡಬೇಕು. ರೋಗಿ ದಾಖಲಾದ ವಿಚಾರವನ್ನು ಆನ್‌ಲೈನ್ ಮೂಲಕ ನಮಗೆ ತಿಳಿಸಿದರೆ ಅವರಿಗೆ ಚಿಕಿತ್ಸಾ ವೆಚ್ಚವನ್ನು ಸರಕಾರ ಮಂಜೂರಿ ಮಾಡಲಿದೆ ಎಂದು ಅವರು ಹೇಳಿದರು.

ರಾಜ್ಯದ 6.5 ಕೋಟಿ ಜನರ ಆರೋಗ್ಯ ರಕ್ಷಣೆ ಮಾಡುವುದು ಸರಕಾರದ ಉದ್ದೇಶವಾಗಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಲೋಪದೋಷಗಳನ್ನು ಸರಿಪಡಿಸಲಾಗುವುದು. ರಾತ್ರೋರಾತ್ರಿ ಸುಧಾರಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News