ನಕಲಿ ಪೋಸ್ಟ್ ಟ್ವೀಟ್ ಮಾಡಿ ‘ಕಲಾಂ ಮಾತುಗಳು’ ಎಂದ ಪರೇಶ್ ರಾವಲ್

Update: 2017-07-04 07:57 GMT

ಹೊಸದಿಲ್ಲಿ,ಜು.4 : ಕೆಲ ದಿನಗಳ ಹಿಂದಷ್ಟೇ ಲೇಖಕಿ ಅರುಂಧತಿ ರಾಯ್ ಅವರನ್ನು ಗುರಿಯಾಗಿಸಿ ವಿವಾದಾತ್ಮಕ ಟ್ವೀಟ್ ಒಂದನ್ನು ಮಾಡಿ ಸುದ್ದಿಯಾಗಿದ್ದ ನಟ ಹಾಗೂ ಬಿಜೆಪಿ ಸಂಸದ ಪರೇಶ್ ರಾವಲ್ ಇದೀಗ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರದ್ದೆಂದು ಹೇಳಲಾದ ಆದರೆ ಕಲಾಂ ಹೇಳಿಲ್ಲದ ಮಾತುಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

ವಾಟ್ಸ್ ಆ್ಯಪ್ ನಲ್ಲಿ ವೈರಲ್ ಆಗಿದ್ದ ಈ ಪೋಸ್ಟ್ ನ ಸತ್ಯಾಸತ್ಯತೆ ಅರಿಯದ ಪರೇಶ್ ಢೋಂಗಿ ಉದಾರವಾದಿಗಳೆಂದು ಹೇಳಿಕೊಂಡವರಿಗೆ ಪಾಠ ಕಲಿಸಬೇಕೆಂದು ಹೊರಟು ತಾವೇ "ಕೋಲು ಕೊಟ್ಟು ಪೆಟ್ಟು ತಿನ್ನುವಂತಹ" ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಚಿತ್ರ ಸಹಿತ ಅವರ ಮಾತುಗಳ ಉಲ್ಲೇಖವಿರುವ ಪೋಸ್ಟ್ ಒಂದನ್ನು ಟ್ವೀಟ್ ಮಾಡಿದ್ದರು. ಆದರೆ ಇದು ನಕಲಿ ವಾಟ್ಸ್ ಆಪ್ ಸಂದೇಶವೊಂದರಿಂದ ಆಯ್ದದ್ದಾಗಿತ್ತು. ಅದರಲ್ಲಿ ಹೀಗೆ ಬರೆಯಲಾಗಿತ್ತು - ‘‘ನನ್ನನ್ನು ಪಾಕಿಸ್ತಾನ ತನ್ನತ್ತ ಸೆಳೆಯಲು ಪ್ರಯತ್ನಿಸಿತ್ತು. ನನಗೆ ಈ ದೇಶದ ಜವಾಬ್ದಾರಿ ನೀಡಲಾಗಿದೆ. ನನಗೆ ಇಸ್ಲಾಂನ ಜವಾಬ್ದಾರಿ ನೀಡಲಾಗಿದೆ. ನನಗೆ ಕುರ್ ಆನ್ ನ ಜವಾಬ್ದಾರಿ ನೀಡಲಾಯಿತು ಆದರೆ ನಾನು ನನ್ನ ಮಾತೃಭೂಮಿಗೆ ಯಾವುದೇ ರೀತಿಯಲ್ಲಿ ದ್ರೋಹವೆಸಗುವುದಿಲ್ಲ ನನ್ನ ಕರ್ತವ್ಯದಿಂದ ವಿಮುಖನಾಗುವುದು ನನ್ನ ದೇಶ ಹಾಗೂ ನನ್ನ ಧರ್ಮ ಎರಡಕ್ಕೂ ಕೆಟ್ಟ ಹೆಸರು ಬಂದಂತೆ’’ ಎಂದು ಹೇಳಿ ಕೆಳಗೆ ಕಲಾಂ ಅವರ ಹೆಸರು ನೀಡಲಾಗಿತ್ತು.

ಇದಕ್ಕೆ ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದು, ಈ ಟ್ವೀಟ್ ಪೋಸ್ಟ್ ಮಾಡಲು ಕಾರಣವೇನೆಂದು ಒಬ್ಬರು ಕೇಳಿದ್ದರೆ, ಇನ್ನೊಬ್ಬರು ಅಂರ್ತಜಾಲದಲ್ಲಿ ಒಂದು ಚಿತ್ರ ಹಾಗೂ ಒಂದು ಉಲ್ಲೇಖ ಅದರ ಬದಿಯಲ್ಲಿದೆಯೆಂದ ಮಾತ್ರಕ್ಕೆ ಎಲ್ಲವನ್ನೂ ನಂಬಿ ಬಿಡುವಂತಿಲ್ಲ ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News