​ಮೊಬೈಲ್ ದರೋಡೆಕೋರನಿಂದ ಮಾಲಕನ ಖಾತೆಗೆ ಸೆಲ್ಫಿ ಅಪ್‌ಲೋಡ್

Update: 2017-07-06 04:46 GMT

ಗ್ರೇಟರ್ ನೋಯ್ಡ, ಜು. 6: ಇದೊಂದು ವಿಚಿತ್ರ ಪ್ರಕರಣ. ಮನೋಜ್ ಶರ್ಮಾ ಎಂಬವರ ಮೊಬೈಲ್ ಅಪಹರಿಸಿದ್ದ ದರೋಡೆಕೋರನೋರ್ವ ಇದೀಗ ಅವರದ್ದೇ ಗೂಗಲ್ ಡ್ರೈವ್ ಖಾತೆಗೆ ಸೆಲ್ಫಿಗಳನ್ನು ಅಪ್‌ಲೋಡ್ ಮಾಡುತ್ತಿದ್ದಾನೆ. ಇದನ್ನು ಪೊಲೀಸರ ಗಮನಕ್ಕೆ ತಂದರೂ, ಇದುವರೆಗೂ ಆತನನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ.

ಜೂನ್ 12ರಂದು ನೋಯ್ಡ ಸೆಕ್ಟರ್-10ರಲ್ಲಿ ಬೈಕ್‌ನಲ್ಲಿ ಬಂದ ದರೋಡೆಕೋರರು ಶರ್ಮಾ ಅವರ ಮೊಬೈಲ್ ಕಿತ್ತುಕೊಂಡು ಪರಾರಿಯಾದರು. ಇದೀಗ ಆ ಪೈಕಿ ಓರ್ವ, ಮನೋಜ್ ಶರ್ಮಾ ಅವರ ಗೂಗಲ್ ಡ್ರೈವ್ ಖಾತೆಗೆ ಸೆಲ್ಫಿ ಕ್ಲಿಕ್ಕಿಸಿ ಅಪ್‌ಲೋಡ್ ಮಾಡುತ್ತಿದ್ದಾನೆ. ಫೋನ್‌ನ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ ಮೂಲಕ ಆ ಮೊಬೈಲ್ ಇರುವ ಪ್ರದೇಶ ಪತ್ತೆಯಾಗಿದ್ದರೂ, ದರೋಡೆಕೋರರು ಮಾತ್ರ ಇನ್ನೂ ಸೆರೆ ಸಿಕ್ಕಿಲ್ಲ.

ಕಳವಾದ ಒಪ್ಪೊ ಎಫ್-3 ಸೆಲ್ಫಿ ಎಕ್ಸ್‌ಫರ್ಟ್ ಮೊಬೈಲ್‌ನ ಬೆಲೆ 20 ಸಾವಿರ ರೂ. ಎಂದು ಶರ್ಮಾ ಹೇಳಿದ್ದಾರೆ. "ಸೆಲ್ಫಿ ಸೇರಿದಂತೆ ಎಲ್ಲ ಫೋಟೊಗಳನ್ನು ಗೂಗಲ್ ಡ್ರೈವ್‌ಗೆ ಜೋಡಿಸಿದ್ದೇನೆ. ಇದೀಗ ದರೋಡೆಕೋರನಿಂದ ನನ್ನ ಖಾತೆಗೆ ಆತನ ಸೆಲ್ಫಿ ಚಿತ್ರಗಳು ಅಪ್‌ಲೋಡ್ ಆಗುತ್ತಿವೆ. ಆತ ಗಾಜಿಯಾಬಾದ್‌ನ ಖೋಡಾ ಪ್ರದೇಶದಲ್ಲಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದರೂ, ಕ್ರಮ ಕೈಗೊಂಡಿಲ್ಲ" ಎನ್ನುವುದು ಅವರ ಅಳಲು.

"ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ಮೊಬೈಲ್ ಅಪಹರಿಸಿದರು. ಸೆಕ್ಟರ್ 12ರ ಸಿಗ್ನಲ್‌ನಲ್ಲಿ ಅವರನ್ನು ಪತ್ತೆ ಮಾಡಿ, ಗುಂಪಿನ ಇಬ್ಬರನ್ನು ಹಿಡಿದಿದ್ದೆ. ಆಗ ಮೂರನೇ ವ್ಯಕ್ತಿ ಬಂದು ಮತ್ತೆ ನನ್ನ ಮೊಬೈಲ್ ಕಿತ್ತುಕೊಂಡು ಪರಾರಿಯಾದ. ಟ್ರಾಫಿಕ್ ಸಿಗ್ನಲ್ ಬಳಿಯೇ ಇಷ್ಟೆಲ್ಲ ನಡೆಯುತ್ತಿದ್ದರೂ, ಯಾರೂ ನೆರವಿಗೆ ಬರಲಿಲ್ಲ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News