ದಕ್ಷಿಣ ಭಾರತದ ವಿರೋಧ ಎದುರಿಸಲೇಬೇಕು: ಎಚ್.ಆಂಜನೇಯ ಎಚ್ಚರಿಕೆ

Update: 2017-07-07 13:08 GMT

ಬೆಂಗಳೂರು, ಜು.7: ಕೇಂದ್ರ ಸರಕಾರ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡುವ ನೆಪದಲ್ಲಿ ಹಿಂದುಳಿದ ವರ್ಗಗಳಿಗಿರುವ ಮೀಸಲಾತಿ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಮೊಟಕುಗೊಳಿಸುವಂತಹ ಹುನ್ನಾರ ನಡೆಸಿದರೆ ದಕ್ಷಿಣ ಭಾರತದ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಏರ್ಪಡಿಸಿದ್ದ ಸಂವಿಧಾನದ 123ನೇ ತಿದ್ದುಪಡಿ ಮಸೂದೆಯ ಸಾಧಕ ಬಾಧಕಗಳ ಕುರಿತು ದಕ್ಷಿಣ ಭಾರತದ ಹಿಂದುಳಿದ ಆಯೋಗಗಳ ಅಧ್ಯಕ್ಷರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರ ಸಂವಿಧಾನದ 123ನೆ ಕಾಲಂಗೆ ತಿದ್ದುಪಡಿ ತಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಿರುವುದು ಸ್ವಾಗತಿಸುತ್ತೇವೆ. ಆದರೆ, ಕೇಂದ್ರ ಸರಕಾರ ಒಂದನ್ನು ಕೊಟ್ಟು ಹಲವು ಹಕ್ಕುಗಳನ್ನು ಕಸಿಯುವಂತಹ ಕೆಲಸಕ್ಕೆ ಮುಂದಾಗಿದೆ. ಹೀಗಾಗಿ 123ನೆ ತಿದ್ದುಪಡಿ ಮಸೂದೆ ಕುರಿತು ವ್ಯಾಪಕ ಚರ್ಚೆಯಾಗಬೇಕಾಗಿದೆ ಎಂದು ಅವರು ತಿಳಿಸಿದರು.

ಪ್ರಸ್ತುತ ಪ್ರತಿ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ಆಯೋಗವು ತನ್ನ ರಾಜ್ಯಕ್ಕೆ ಅನುಗುಣವಾಗಿ ಹಿಂದುಳಿದ ಸಮುದಾಯದ ಪಟ್ಟಿಯನ್ನು ತಯಾರಿಸಿ, ಆ ಮೂಲಕ ಸೌಲಭ್ಯಗಳನ್ನು ನೀಡುತ್ತಾ ಬರುತ್ತಿವೆ. ಆದರೆ, ಕೇಂದ್ರ ಸರಕಾರ ಈಗ ಜಾರಿ ಮಾಡಲು ಉದ್ದೇಶಿಸಿರುವ 123ನೆ ತಿದ್ದುಪಡಿಯಲ್ಲಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಒಂದೇ ಪಟ್ಟಿಯನ್ನು ತಯಾರಿಸಿರುವುದು ಒಕ್ಕೂಟ ವ್ಯವಸ್ಥೆ ಧಕ್ಕೆ ತರುವಂತಹದ್ದಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ಮಾತನಾಡಿ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಗಳನ್ನು ರಚಿಸುವಂತೆ 1992ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಇದರ ಅನುಗುಣವಾಗಿ 1993ರಲ್ಲಿ ಹಿಂದುಳಿದ ಆಯೋಗಗಳನ್ನು ರಚಿಸಿ, ಹಲವು ಹಕ್ಕುಗಳನ್ನು ನೀಡಲಾಗಿತ್ತು. ಈಗ ಕೇಂದ್ರ ಸರಕಾರ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ನೆಪದಲ್ಲಿ ರಾಜ್ಯಗಳಿಗಿರುವ ಹಿಂದುಳಿದ ಆಯೋಗದ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ವಿಷಾದಿಸಿದರು.

ರಾಜ್ಯಗಳ ಹಿಂದುಳಿದ ವರ್ಗಗಳ ಆಯೋಗ ರಚಿಸಿಕೊಂಡಿರುವ ಹಿಂದುಳಿದ ಸಮುದಾಯದ ಪಟ್ಟಿಯ ಆಧಾರದ ಮೇಲೆಯೇ ಸೌಲಭ್ಯಗಳನ್ನು ನೀಡಬೇಕು. ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಹಿಂದುಳಿದ ಸಮುದಾಯಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ ರಾಜ್ಯಗಳ ಹಿಂದುಳಿದ ಆಯೋಗದ ಅಭಿಪ್ರಾಯವನ್ನು ಕಡ್ಡಾಯವಾಗಿ ಕೇಳಬೇಕು. ಹೀಗೆ ಒಕ್ಕೂಟ ವ್ಯವಸ್ಥೆಗೆ ಪೂರಕವಾಗುವಂತಹ ಅಂಶಗಳನ್ನು ಸೇರಿಸಿದ ನಂತರವೇ ರಾಷ್ಟ್ರೀಯ ಹಿಂದುಳಿದ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕೆಂದು ಅವರು ಒತ್ತಾಯಿಸಿದರು.

ಸಭೆಯಲ್ಲಿ ದಕ್ಷಿಣ ಭಾರತದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ನ್ಯಾ.ಕೆ.ಎಲ್.ಮಂಜುನಾಥ್(ಆಂಧ್ರಪ್ರದೇಶ), ನ್ಯಾ.ಜಿ.ಶಿವರಾಜನ್(ಕೇರಳ), ನ್ಯಾ.ಮೋಹನ್(ಪುದಚೇರಿ), ನ್ಯಾ.ಎಂ.ಎಸ್.ಜನಾರ್ದನ್(ತಮಿಳುನಾಡು), ನ್ಯಾ.ಬಿ.ಎಸ್.ರಾಮುಲು(ತೆಲಂಗಾಣ) ಹಾಗೂ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿ ವಿ.ಎ.ಕುಮಾರ್, ಸದಸ್ಯ ಕೆ.ಎನ್.ಲಿಂಗಪ್ಪ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News