ಮಳೆ,ಮೇವಿನ ಕೊರತೆಯಿಂದ ಗೋಶಾಲೆಯಲ್ಲಿನ 25 ಆಕಳುಗಳ ಸಾವು

Update: 2017-07-07 15:17 GMT

ಕುರುಕ್ಷೇತ್ರ(ಹರ್ಯಾಣ),ಜು.7: ನಿರಂತರ ಮಳೆ ಮತ್ತು ಮೇವಿನ ಅಲಭ್ಯತೆಯಿಂದಾಗಿ ಕುರುಕ್ಷೇತ್ರದ ಮಥನಾ ಗ್ರಾಮದಲ್ಲಿರುವ ಸರಕಾರಿ ಗೋಶಾಲೆಯಲ್ಲಿನ ಕನಿಷ್ಠ 25 ಆಕಳು ಗಳು ಸಾವನ್ನಪ್ಪಿವೆ.

ನಿರಂತರ ಮಳೆಯಿಂದಾಗಿ ಗೋಶಾಲೆಯಲ್ಲಿ ನೀರು ನುಗ್ಗಿದ್ದು, ಜವುಗು ನೆಲದಲ್ಲಿ ಸೃಷ್ಟಿಯಾಗಿದ್ದ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡು ಹಲವು ಆಕಳುಗಳು ಸಾವನ್ನಪ್ಪಿವೆ. ಹಸಿವೆಯಿಂದ ಕೆಲವು ಆಕಳುಗಳು ಸತ್ತಿದ್ದರೆ, ಇನ್ನು ಹಲವಾರು ಅನಾರೋಗ್ಯ ಪೀಡಿತವಾಗಿವೆ ಎಂದು ಗ್ರಾಮದ ಮುಖ್ಯಸ್ಥ ಕಿರಣ್ ಬಾಲಾ ಹೇಳಿದರು.

ಪರಿಸ್ಥಿತಿಯನ್ನು ಪರಿಶೀಲಿಸಲು ಹರ್ಯಾಣ ಗೋಸೇವಾ ಆಯೋಗದ ಅಧ್ಯಕ್ಷ ಭಾನಿದಾಸ್ ಮಂಗ್ಲಾ ಮತ್ತು ಜಿಲ್ಲಾಡಳಿತದ ಕೆಲವು ಅಧಿಕಾರಿಗಳು ಗುರುವಾರ ಈ ಗೊಶಾಲೆಗೆ ಭೇಟಿ ನೀಡಿದ್ದರು.

 ಅನಾರೋಗ್ಯ ಪೀಡಿತ ಆಕಳುಗಳನ್ನು ಕರ್ನಾಲ್ ಗೋಶಾಲೆಗೆ ಸ್ಥಳಾಂತರಿಸುವಂತೆ ಉಪ ವಿಭಾಗಾಧಿಕಾರಿ ನರೀಂದರ್ ಪಾಲ್ ಮಲಿಕ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಗೋಶಾಲೆಯ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಉಳಿದ ಜಾನುವಾರುಗಳನ್ನು ಜಿಲ್ಲೆಯಲ್ಲಿನ ಇತರ 20 ಗೋಶಾಲೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದರು.

 ಜಿಲ್ಲಾಡಳಿತವು ಗ್ರಾಮ ಪಂಚಾಯತ್‌ಗೆ ಸೇರಿದ ಏಳೂವರೆ ಎಕರೆ ಜಾಗದಲ್ಲಿ ಈ ಗೋಶಾಲೆಯನ್ನು ನಿರ್ಮಿಸಿದ್ದು, 600ಕ್ಕೂ ಅಧಿಕ ಆಕಳುಗಳಿವೆ. ಇಲ್ಲಿ ಸೌಲಭ್ಯಗಳ ಕೊರತೆಯಿದೆ. ಹೆಚ್ಚಿನ ಆಕಳುಗಳಿಗೆ ಮೇವು ಮತ್ತು ಕುಡಿಯಲು ನೀರೂ ಇಲ್ಲದ ಸ್ಥಿತಿಯಿದೆ ಎಂದು ಸರಕಾರಿ ಗೋಶಾಲೆಗಳಿಗೆ ಮೇವು ಪೂರೈಸುವ ಶ್ರೀಕೃಷ್ಣ ಗೋಶಾಲಾದ ಮಾಜಿ ಅಧ್ಯಕ್ಷ ಅಶೋಕ್ ಪಪ್ನೇಜಾ ತಿಳಿಸಿದರು.

ಗ್ರಾಮ ಪಂಚಾಯತ್ ಮತ್ತು ಪಶು ಸಂಗೋಪನಾ ಇಲಾಖೆ ಜಂಟಿಯಾಗಿ ಈ ಗೋಶಾಲೆಯನ್ನು ನಿರ್ವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News