ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ಎಸ್ಸಿ, ಎಸ್ಟಿ, ಒಬಿಸಿ ಕೋಟಾ ನೀಡಲು ಬಿಡುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

Update: 2024-04-30 16:03 GMT

ನರೇಂದ್ರ ಮೋದಿ | PC  : PTI 

ಹೈದರಾಬಾದ್ : ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಒಬಿಸಿಗಳು ಮತ್ತು ಇತರ ವಂಚಿತ ಗುಂಪುಗಳ ಮೀಸಲಾತಿಯನ್ನು ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ನೀಡಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತೆಲಂಗಾಣದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಮತ್ತು ಇತರೆ ವಂಚಿತ ವರ್ಗಗಳ ಮೀಸಲಾತಿ ಕೋಟಾವನ್ನು ನೀಡಲು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಗಳನ್ನು ಮತ್ತೊಮ್ಮೆ ಟೀಕಿಸಿದರು.

ಮಂಗಳವಾರ ತೆಲಂಗಾಣದ ಜಹೀರಾಬಾದ್ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಅವರು (ಕಾಂಗ್ರೆಸ್) ತಮ್ಮ ವೋಟ್ ಬ್ಯಾಂಕ್ಗಾಗಿ ಸಂವಿಧಾನವನ್ನು ಅವಮಾನಿಸಲು ಬಯಸುತ್ತದೆ. ಆದರೆ ನಾನು ಬದುಕಿರುವವರೆಗೂ ಮುಸ್ಲಿಮರಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಮತ್ತು ಇತರೆ ವಂಚಿತ ವರ್ಗಗಳ ಮೀಸಲಾತಿ ಕೋಟಾವನ್ನು ನೀಡಲು ಬಿಡುವುದಿಲ್ಲ” ಎಂದರು.

ಈ ಹಿಂದೆಯೂ, ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಮುಸ್ಲಿಮರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುತ್ತಿವೆ ಮತ್ತು ಮೀಸಲಾತಿ ವಂಚಿತ ಜಾತಿಗಳ ಕೋಟಾವನ್ನು ಕಡಿಮೆ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು. ಮುಸ್ಲಿಂ ಸಮುದಾಯವನ್ನು ರಾಜ್ಯ ಒಬಿಸಿ ಪಟ್ಟಿಗೆ ಸೇರಿಸುವ ಕರ್ನಾಟಕ ಸರ್ಕಾರದ ನಿರ್ಧಾರದ ಕುರಿತು ಅವರು ಮಾತನಾಡಿದರು.

“ಒಂದು ಕಾಲದಲ್ಲಿ ಜಗತ್ತು ಪ್ರಗತಿ ಹೊಂದುತ್ತಿದ್ದಾಗ ಭಾರತವು ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಸಂಕೋಲೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಜಗತ್ತು ಆರ್ಥಿಕವಾಗಿ ಪ್ರಗತಿ ಹೊಂದುತ್ತಿದ್ದರೂ, ಭಾರತವು ತನ್ನ ನೀತಿಗಳಿಂದ ಅಭಿವೃದ್ದಿಯಲ್ಲಿ ಹಿಂದಿತ್ತು. ಭಾರತವನ್ನು ಕಷ್ಟದ ದಿನಗಳಿಂದ ಎನ್ಡಿಎ ನೇತೃತ್ವದ ಸರಕಾರವು ಹೊರತಂದಿದೆ. ಆದರೆ ಕಾಂಗ್ರೆಸ್ ಮತ್ತೆ ದೇಶವನ್ನು ಹಳೆಯ ಕೆಟ್ಟ ದಿನಗಳಿಗೆ ಕೊಂಡೊಯ್ಯಲು ಬಯಸಿದೆ” ಎಂದು ಜಹೀರಾಬಾದ್ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದರು.

ಕಾಂಗ್ರೆಸ್ ಮತಬ್ಯಾಂಕ್ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದ ಪ್ರಧಾನಿ, ಪಕ್ಷವು ಇತರ ಧರ್ಮಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಆರೋಪಿಸಿದರು.’ಹೈದರಾಬಾದ್ನಲ್ಲಿ ಮತ ಬ್ಯಾಂಕ್ಗೆ ಧಕ್ಕೆಯಾಗಬಾರದು ಎಂದು ರಾಮನವಮಿ ಮೆರವಣಿಗೆಯನ್ನೂ ನಿಷೇಧಿಸಿತ್ತು’ ಎಂದು ಹೇಳಿದರು.

“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಶೇಕಡಾ 55 ರಷ್ಟು ಪಿತ್ರಾರ್ಜಿತ ಆಸ್ತಿಯನ್ನು ತೆರಿಗೆಯಾಗಿ ಸಂಗ್ರಹಿಸಲು ಯೋಜಿಸುತ್ತಿದೆ" ಎಂದು ಪ್ರಧಾನಿ ಮೋದಿ ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News