ಬ್ರಿಕ್ಸ್‌ನಲ್ಲಿ ಮೋದಿ-ಕ್ಸಿ ಮಾತುಕತೆ

Update: 2017-07-07 15:56 GMT

 ಹೊಸದಿಲ್ಲಿ, ಜು.7: ಸಿಕ್ಕಿಂ ಗಡಿಯಲ್ಲಿ ಭಾರತ ಹಾಗೂ ಚೀನಾ ಪಡೆಗಳ ನಡುವಿನ ಸಂಘರ್ಷ ಸ್ಥಿತಿ ಉದ್ವಿಗ್ವತೆಗೆ ತಲುಪಿರುವ ಮಧ್ಯೆ, ಇತ್ತ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ನಾಯಕರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿರುವುದು, ಯುದ್ಧ ಭೀತಿಯ ಕಾರ್ಮೋಡವು ದೂರ ಸರಿಯುವ ಭರವಸೆ ಮೂಡಿದಂತಾಗಿದೆ. ಎಲ್ಲಾ ಪ್ರಾದೇಶಿಕ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಬೇಕೆಂದು ಚೀನಿ ಅಧ್ಯಕ್ಷ ಪಿಂಗ್ ಸಭೆಯಲ್ಲಿ ಕರೆ ನೀಡಿರುವುದು, ಗಡಿಯಲ್ಲಿ ನೆಲೆಸಿರುವ ಉದ್ವಿಗ್ನತೆಯ ವಾತಾವರಣ ತುಸು ಶಮನಗೊಂಡಿದೆ.

    ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರು ಬ್ರಿಕ್ಸ್ ನಾಯಕರ ಸಮಾವೇಶದಲ್ಲಿ ಮಾತನಾಡುತ್ತಾ ಪ್ರಾದೇಶಿಕ ಸಂಘರ್ಷ ಹಾಗೂ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸುವುದಕ್ಕೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಹೆಚ್ಚು ಉತ್ತೇಜನ ನೀಡಬೇಕೆಂದು ಹೇಳಿದರು. ಭಾರತವು ಬ್ರಿಕ್ಸ್ ನಾಯಕತ್ವ ವಹಿಸಿದ್ದ ಅವಧಿಯಲ್ಲಿ ಸಂಘಟನೆಯು ಹೊಸ ಚೈತನ್ಯವನ್ನು ಪಡೆದುಕೊಂಡಿತ್ತೆಂದೂ ಕ್ಸಿ ಸ್ಮರಿಸಿದರು.

 ಬ್ರಿಕ್ಸ್ ನಾಯಕರ ಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ಕ್ಸಿಜಿನ್‌ಪಿಂಗ್ ಮುಗುಳ್ನಗುತ್ತಾ ಪರಸ್ಪರ ಹಸ್ತಲಾಘವ ಮಾಡುತ್ತಿರುವ ದೃಶ್ಯಗಳ ಛಾಯಾಚಿತ್ರಗಳನ್ನು ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ಟ್ವೀಟ್ ಮಾಡಿದ್ದಾರೆ.

  ಹ್ಯಾಂಬರ್ಗ್‌ನಲ್ಲಿ ಉಭಯನಾಯಕರ ನಡುವೆ ಮಾತುಕತೆ ನಡೆಯುವ ಸಾಧ್ಯತೆಯಿಲ್ಲವೆಂದು ಗುರುವಾರ ಚೀನಿ ವಿದೇಶಾಂಗ ಅಧಿಕಾರಿಗಳು ತಿಳಿಸಿದ್ದರು. ಸಿಕ್ಕಿಂ ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಉಭಯದೇಶಗಳ ನಡುವೆ ಮಾತುಕತೆಗೆ ಯೋಗ್ಯವಾದ ವಾತಾವರಣವಿಲ್ಲವೆಂದು ಅವರು ತಿಳಿಸಿರುವುದು ಭಾರೀ ಆತಂಕಕ್ಕೆ ಕಾರಣವಾಗಿತ್ತು.

ಮೋದಿ ಹಾಗೂ ಕ್ಸಿ ಸುಮಾರು ಐದು ನಿಮಿಷಗಳ ಕಾಲ ಚರ್ಚಿಸಿದರೆಂದು ಟಿವಿ ವಾಹಿನಿಗಳು ವರದಿ ಮಾಡಿವೆ.

 ಬ್ರಿಕ್ಸ್ ನಾಯಕರ ಸಮಾವೇಶ (ಬ್ರೆಝಿಲ್, ರಶ್ಯ,ಭಾರತ, ಚೀನಾ ಹಾಗೂ ದ.ಆಫ್ರಿಕ)ದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಭಯನಾಯಕರು ವಹಿಸುತ್ತಿರುವ ಪಾತ್ರಗಳನ್ನು ಪರಸ್ಪರ ಪ್ರಶಂಸಿಸಿದರು

      ಬ್ರಿಕ್ಸ್ ಸಭೆಯಲ್ಲಿ ಭಾಷಣ ಮಾಡಿದ ಮೋದಿ ಅವರು ಅಧ್ಯಕ್ಷ ಕ್ಸಿ ಅವರ ಅಧ್ಯಕ್ಷತೆಯಡಿ ಬ್ರಿಕ್ಸ್ ಹೊಸ ವೇಗವನ್ನು ಪಡೆದುಕೊಳ್ಳುತ್ತಿದೆಯೆಂದು ಶ್ಲಾಘಿಸಿದರು ಹಾಗೂ ಚೀನಾದ ಆತಿಥ್ಯದಲ್ಲಿ ಕ್ಸಿಯಾಮೆನ್‌ನಲ್ಲಿ ನಡೆಯಲಿರುವ 9 ಬ್ರಿಕ್ಸ್ ಶೃಂಗಸಭೆಗಾಗಿ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರಿಗೆ ಶುಭಾಶಯಗಳನ್ನು ಕೋರಿದರು ಮತ್ತು ತನ್ನ ಸಂಪೂರ್ಣ ಸಹಕಾರವನ್ನು ಘೋಷಿಸಿದರು ’’ ಎಂದು ಭಾರತದ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.ಭಯೋತ್ಪಾದನೆಗೆ ಆರ್ಥಿಕ ನೆರವು, ಭಯೋತ್ಪಾದಕರ ಸುರಕ್ಷಿತ ತಾಣಗಳು ಹಾಗೂ ಭಯೋತ್ಪಾದನೆಯ ಬೆಂಬಲಿಗರು ಹಾಗೂ ಪ್ರಾಯೋಜಕರನ್ನು ಅಮೂಲಾಗ್ರವಾಗಿ ಮಟ್ಟಹಾಕಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದರು. ಜಾಗತಿಕ ಆರ್ಥಿಕತೆಯನ್ನು ಉತ್ತೇಜಿಸಲು ಬ್ರಿಕ್ಸ್ ನಾಯಕರು ಶ್ರಮಿಸಬೇಕೆಂದು ಅವರು ಹೇಳಿದರು. ಜಿಎಸ್‌ಟಿ ಸೇರಿದಂತೆ ತನ್ನ ಸರಕಾರವು ಜಾರಿಗೆ ತಂದಿರುವ ಹಲವಾರು ಸುಧಾರಣೆಗಳ ಬಗ್ಗೆಯೂ ಮೋದಿ ಬ್ರಿಕ್ಸ್ ನಾಯಕರ ಗಮನಸೆಳೆದರು. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಬ್ರಿಕ್ಸ್ ಒಂದು ಬಲವಾದ ಧ್ವನಿಯಾಗಿದೆ ಎಂದರು. ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಗಳನ್ನು ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆಯಿಂದ ನಿಷೇಧಿಸಬೇಕೆಂದು ಮೋದಿ ಜಿ20 ರಾಷ್ಟ್ರಗಳಿಗೆ ಕರೆ ನೀಡಿದರು. ಆಫ್ರಿಕನ್ ರಾಷ್ಟ್ರಗಳ ಅಭಿವೃದ್ಧಿಗೆ ಬ್ರಿಕ್ ನಾಯಕರು ಆದ್ಯತೆ ನೀಡುವಂತೆಯೂ ಮೋದಿ ಆಗ್ರಹಿಸಿದರು.

ಹ್ಯಾಂಬರ್ಗ್‌ನಲ್ಲಿ ನಡೆಯುತ್ತಿರುವ ಜಿ20 ರಾಷ್ಟ್ರಗಳ ಶೃಂಗಸಭೆಯ ಅಂಗವಾಗಿ ಬ್ರಿಕ್ಸ್ ರಾಷ್ಟ್ರಗಳ ನಾಯಕರ ಸಮಾವೇಶವನ್ನು ಏರ್ಪಡಿಸಲಾಗಿತ್ತು.

ಎಲ್ಲಾ ಪ್ರಾದೇಶಿಕ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಬೇಕಾಗಿದೆ

-ಕ್ಸಿ ಜಿನ್ ಪಿಂಗ್

ಕ್ಸಿ ಅವರ ನಾಯಕತ್ವದಲ್ಲಿ ಬ್ರಿಕ್ಸ್ ಸಕಾರಾತ್ಮಕವಾದ ವೇಗದೊಂದಿಗೆ ಪ್ರಗತಿಪಥದಲ್ಲಿ ಸಾಗುತ್ತಿದೆ

-ನರೇಂದ್ರ ಮೋದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News