ಸಂಸ್ಕೃತಿ ಸಚಿವರ ಮೇಲೆ ಮಾನನಷ್ಟ ಮೊಕದ್ದಮೆ ಯಾಕೆ ಹೂಡಬಾರದು?

Update: 2017-07-08 04:30 GMT

ಸಂಸ್ಕೃತಿ ಎಂದರೆ ಏನು? ಒಂದು ದೇಶದ ಆಚಾರ, ವಿಚಾರ, ಆಹಾರ ಪರಂಪರೆಗಳ ವೌಲ್ಯಗಳನ್ನು ನಾವು ಸಂಸ್ಕೃತಿಯೆಂದು ಒಪ್ಪಿಕೊಂಡಿದ್ದೇವೆ. ಭಾರತದಂತಹ ವೈವಿಧ್ಯಮಯ ಸಂಸ್ಕೃತಿಯುಳ್ಳ ದೇಶದಲ್ಲಿ ಒಂದೇ ಸಂಸ್ಕೃತಿಯನ್ನು ಯಾರ ಮೇಲೂ ಹೇರಬಾರದು. ವೈವಿಧ್ಯತೆಯ ಮೂಲಕವೇ ಏಕತೆಯನ್ನು ಕಂಡುಕೊಂಡಿರುವ ಭಾರತದಲ್ಲಿ, ಎಲ್ಲ ಸಮುದಾಯಗಳ ಆಚರಣೆಗಳಿಗೂ ಸಮಾನ ಗೌರವ ನೀಡಬೇಕಾಗುತ್ತದೆ. ಒಂದು ಸಂಸ್ಕೃತಿ ಮೇಲು, ಇನ್ನೊಂದು ಸಂಸ್ಕೃತಿ ಕೀಳು ಎಂದು ಭಾವಿಸುವ ಮನಸ್ಥಿತಿ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಅಪಾಯಕಾರಿ ಸನ್ನಿವೇಶಗಳನ್ನು ನಿರ್ಮಾಣ ಮಾಡುತ್ತದೆ.

ಬಟ್ಟೆ, ಉಡುಪು, ಹಬ್ಬ, ಆಚರಣೆ ಮಾತ್ರವಲ್ಲ ಆಹಾರಗಳಿಗೂ ಇದು ಅನ್ವಯಿಸುತ್ತದೆ. ಮೇಲ್ಜಾತಿಯ ಜನರು ಸೇವಿಸುವ ಆಹಾರ ಶ್ರೇಷ್ಠ, ಕೆಳಜಾತಿಯವರು ಸ್ವೀಕರಿಸುವ ಆಹಾರ ಕೀಳು ಎನ್ನುವ ಚಿಂತನೆ ಪರೋಕ್ಷವಾಗಿ ಅಸ್ಪಶ್ಯತೆಯನ್ನು, ಮೇಲು ಕೀಳು ಎನ್ನುವ ಭೇದ ಭಾವವನ್ನು ಎತ್ತಿ ಹಿಡಿಯುತ್ತದೆ. ಭಾರತದಲ್ಲಿ ಸಸ್ಯಾಹಾರ ಸೇವಿಸುವ ಸಮುದಾಯ ಬಹಳ ಸಣ್ಣದು. ಆದರೂ ಈ ದೇಶದ ಬಹುಸಂಖ್ಯಾತ ಜನರು ಆ ಸಣ್ಣ ಸಮುದಾಯದ ಆಹಾರ ಪದ್ಧತಿಗೆ ಪೂರ್ಣ ಗೌರವವನ್ನು ನೀಡುತ್ತಾ ಬಂದಿದ್ದಾರೆ. ಕೆಲವರು ಸಸ್ಯಾಹಾರಿಗಳನ್ನು ‘ಪುಳಿಚಾರ್’ ಎಂದು ನಿಂದಿಸುವುದು ಪರೋಕ್ಷವಾಗಿ ಜಾತಿ ನಿಂದನೆಯಾಗಿದೆ. ಅದನ್ನು ಮಾಂಸಾಹಾರಿಗಳು ಮಾಡಿದರೂ ತಪ್ಪೆ. ಸಸ್ಯಾಹಾರಿಗಳೂ ಭಾಗವಹಿಸಬಹುದಾದ ಹಲವು ಕಾರ್ಯಕ್ರಮಗಳಲ್ಲಿ ಮಾಂಸಾಹಾರಿಗಳು ತಮ್ಮ ಆಹಾರವನ್ನು ಬದಿಗಿಟ್ಟು ಸಸ್ಯಾಹಾರಕ್ಕೆ ಆದ್ಯತೆ ನೀಡುವುದು ಸಮಾಜದಲ್ಲಿ ನಡೆಯುತ್ತಾ ಬರುತ್ತಿವೆ.

ತಮ್ಮ ಆಹಾರದಿಂದ ಸಸ್ಯಾಹಾರಿಗಳಿಗೆ ಮುಜುಗರವಾಗುವುದು ಬೇಡ ಎನ್ನುವ ಸೌಹಾರ್ದ ಚಿಂತನೆ ಇಲ್ಲಿ ಕೆಲಸ ಮಾಡಿದೆ. ಹೇಗೆ ಶೇ. 10ರಷ್ಟಿರುವ ಸಸ್ಯಾಹಾರ ಸಂಸ್ಕೃತಿಯನ್ನು ಮಾಂಸಾಹಾರಿಗಳು ಗೌರವಿಸುತ್ತಾ ಬಂದಿದ್ದಾರೆಯೋ ಹಾಗೆಯೇ ಶೇ.90ರಷ್ಟಿರುವ ಮಾಂಸಾಹಾರಿಗಳ ಆಹಾರ ಸಂಸ್ಕೃತಿಯನ್ನು ಗೌರವಿಸುವುದೂ ಅತ್ಯಗತ್ಯವಾಗಿದೆ. ಜಗತ್ತಿನಲ್ಲೇ ಅತೀ ಹೆಚ್ಚು ಜನರು ಸೇವಿಸುವ ಆಹಾರ ಮಾಂಸಾಹಾರ. ಎಲ್ಲ ರೀತಿಯ ಪೌಷ್ಟಿಕಾಂಶಗಳ ಮೂಲಕ ಜಗತ್ತನ್ನು ಅತೀ ಹೆಚ್ಚು ಆರೋಗ್ಯ ಪೂರ್ಣವಾಗಿಟ್ಟಿರುವುದು, ಜನರನ್ನು ಪುಷ್ಟಿವಂತರನ್ನಾಗಿ ಮಾಡಿದ ಹಿರಿಮೆ ಈ ಆಹಾರಕ್ಕಿದೆ. ಮಾಂಸಾಹಾರ ಸಂಸ್ಕೃತಿ ಅತ್ಯಂತ ಪ್ರಾಚೀನವಾದುದು. ವಿಜ್ಞಾನ ಇದನ್ನು ಸರ್ವ ರೀತಿಯಲ್ಲಿ ಒಪ್ಪಿಕೊಂಡಿದೆ. ಸಸ್ಯಾಹಾರ ಮತ್ತು ಮಾಂಸಾಹಾರದ ಸಮನ್ವತೆಯ ಮೂಲಕ ಮನುಷ್ಯನ ಬೆಳವಣಿಗೆ ಸಾಗುತ್ತಾ ಬಂದಿದೆ.

ಆದರೂ ಒಂದು ಸಣ್ಣ ಸಮುದಾಯ ಸಸ್ಯಾಹಾರವನ್ನೇ ಪ್ರಧಾನ ಆಹಾರವಾಗಿ ಸ್ವೀಕರಿಸುತ್ತಿದ್ದು, ಮಾಂಸಾಹಾರವನ್ನು ನಿರಾಕರಿಸುತ್ತಿದೆ. ಆಹಾರ ಅವರ ಹಕ್ಕು. ಆದುದರಿಂದ ಅವರು ಮಾಂಸಾಹಾರವನ್ನು ಸೇವಿಸಬೇಕು ಎಂದು ಒತ್ತಾಯಿಸುವುದು ತಪ್ಪಾಗುತ್ತದೆ. ಇದೇ ಸಂದರ್ಭದಲ್ಲಿ, ತಾವು ಮಾಂಸಾಹಾರ ಸೇವಿಸುವುದಿಲ್ಲ ಎನ್ನುವ ಕಾರಣಕ್ಕಾಗಿ ಮಾಂಸಾಹಾರಿಗಳ ಆಹಾರ ಹಕ್ಕಿನ ಮೇಲೆ ಹಸ್ತಕ್ಷೇಪ ನಡೆಸುವುದೂ ತಪ್ಪು. ಮಾಂಸಾಹಾರ ಸೇವಿಸಿದ ಸಮುದಾಯವನ್ನು ಹೀನಾಯ ದೃಷ್ಟಿಯಿಂದ ನೋಡುವುದು ಪರೋಕ್ಷವಾಗಿ ಅವರ ಸಂಸ್ಕೃತಿ, ಪರಂಪರೆಯನ್ನು ಅವಮಾನಿಸಿದಂತೆ. ಇದು ಜಾತಿವಾದವೇ ಆಗಿದೆ. ಆಹಾರ ಅಸ್ಪಶ್ಯತೆಯನ್ನು ವಿರೋಧಿಸಿ ಇತ್ತೀಚೆಗೆ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಗೋಮಾಂಸ ಸೇವಿಸಿ ಉದ್ಘಾಟಿಸಲಾಯಿತು. ಯಾರೆಲ್ಲ ಗೋಮಾಂಸ ತಮ್ಮ ಆಹಾರವೆಂದು ಬಗೆದಿದ್ದಾರೆಯೋ ಅವರಷ್ಟೇ ಗೋಮಾಂಸವನ್ನು ಸೇವಿಸಿದ್ದಾರೆ. ಯಾರನ್ನೂ ಇಲ್ಲಿ ಗೋಮಾಂಸ ತಿನ್ನುವಂತೆ ಒತ್ತಾಯ ಮಾಡಿಲ್ಲ. ಅಥವಾ ಸಸ್ಯಾಹಾರವನ್ನು ಸೇವಿಸಬೇಡಿ ಎಂಬ ಸಂದೇಶವೂ ಇಲ್ಲಿರಲಿಲ್ಲ. ಗೋಮಾಂಸವನ್ನು ಈ ದೇಶದ ದಲಿತರು, ಮುಸ್ಲಿಮರು, ಕ್ರೈಸ್ತರು, ಶೂದ್ರರು ಸೇವಿಸುತ್ತಾ ಬರುತ್ತಿದ್ದಾರೆ. ಅದು ಅವರ ಪ್ರಮುಖ ಆಹಾರ ಸಂಸ್ಕೃತಿಯೂ ಆಗಿದೆ. ಈ ದೇಶದ ಕೇರಳ, ಈಶಾನ್ಯ ಭಾಗದಲ್ಲಿ ಬ್ರಾಹ್ಮಣರೂ ಮಾಂಸಾಹಾರ ಸೇವಿಸುವ ಪರಂಪರೆ ಇದೆ. ಹಿಂದೂಗಳೂ ಗೋಮಾಂಸ ಸೇವಿಸುತ್ತಾರೆ ಎಂದು ಸ್ವತಃ ಪೇಜಾವರ ಶ್ರೀಗಳೇ ಹೇಳಿದ್ದಾರೆ. ಅದು ಅವರ ಆಹಾರ ಸಂಸ್ಕೃತಿ. ಅದನ್ನು ಗೌರವಿಸುವುದೆಂದರೆ ಭಾರತದ ಪ್ರಾಚೀನ ಸಂಸ್ಕೃತಿಯನ್ನು ಗೌರವಿಸಿದಂತೆ. ಈ ದೇಶದಲ್ಲಿ ಹಂದಿ ತಿನ್ನದವರಿದ್ದಾರೆ. ಹಾಗೆಂದು ಉಳಿದವರೂ ತಿನ್ನಬಾರದು ಎಂದರೆ ಆಗುತ್ತದೆಯೇ? ಹೀಗಿರುವಾಗ, ಮೈಸೂರಿನಲ್ಲಿ, ಪ್ರಗತಿಪರರು, ಸಾಮಾಜಿಕ ಹೋರಾಟಗಾರರು ಜೊತೆ ಸೇರಿ ಮಾಂಸಾಹಾರವನ್ನು ಸೇವಿಸಿದ್ದಾರೆ.

ಅವರೇನೂ ಅಲ್ಲೇ ಮಾಂಸವನ್ನು ಕಸಾಯಿ ಮಾಡಿ ಬೇಯಿಸಿ ತಿನ್ನಲಿಲ್ಲ. ಹೊರಗಿನಿಂದ ತಂದು ತಿಂದಿದ್ದಾರೆ. ಈ ದೇಶದಲ್ಲಿ ಗೋಮಾಂಸ ತಿನ್ನಬಾರದು ಎನ್ನುವ ಕಾನೂನೇ ಇಲ್ಲ. ಕಸಾಯಿಖಾನೆಯ ಕುರಿತಂತೆ, ಗೋಹತ್ಯೆಯ ಕುರಿತಂತೆ ಕೆಲವು ನಿರ್ಬಂಧಗಳು ಇವೆಯೇ ಹೊರತು, ಗೋಮಾಂಸ ಆಹಾರವನ್ನು ಯಾವುದೇ ಸಮಾರಂಭದಲ್ಲಿ ತಿನ್ನಲು ಕಾನೂನು ಅನುಮತಿ ನೀಡುತ್ತದೆ. ಹೀಗಿರುವಾಗ, ಮೈಸೂರಿನಲ್ಲಿ ಗೋಮಾಂಸ ಸೇವಿಸಿದ ಪ್ರಕರಣದ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ವಿಚಿತ್ರವಾದ ಆದೇಶವೊಂದನ್ನು ಹೊರಡಿಸಿದ್ದಾರೆ. ‘ಇಲಾಖೆಯಿಂದ ಅನುಮತಿ ಪಡೆದ ಸಂಸ್ಥೆ ನಡೆಸಿದ ಕಾರ್ಯಕ್ರಮವೊಂದರಲ್ಲಿ ಗೋಮಾಂಸ ತಿಂದಿದ್ದು ಸರಿಯಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ. ಗೋಮಾಂಸವೆಂದರೆ ಯಾವುದೇ ಮದ್ಯ, ಸಿಗರೇಟು, ಗಾಂಜಾಗಳಂತೆ ದುಶ್ಚಟವಲ್ಲ. ಅದು ಅಪ್ಪಟ ಪೌಷ್ಟಿಕ ಆಹಾರ. ಈ ದೇಶದ ಬಹುಸಂಖ್ಯಾತರು ಸೇವಿಸುವ ಆಹಾರ. ಮತ್ತು ಆ ಆಹಾರವನ್ನು ಸೇವಿಸಬಾರದು ಎನ್ನುವ ಯಾವ ನಿಷೇಧವೂ ದೇಶದಲ್ಲಿಲ್ಲ.

ಹೀಗಿರುವಾಗ ಸಂಸ್ಕೃತಿ ಸಚಿವೆ ತನ್ನ ಆದೇಶದ ಮೂಲಕ ಏನನ್ನು ವ್ಯಕ್ತಪಡಿಸುತ್ತಾ ಇದ್ದಾರೆ? ಗೋಮಾಂಸ ಸೇವಿಸುವುದು ಹೀನಾಯವೆಂದು ಪರೋಕ್ಷವಾಗಿ ಅವರ ಆದೇಶ ಹೇಳುತ್ತಿಲ್ಲವೇ? ಅಂದರೆ ಗೋಮಾಂಸ ಸೇವಿಸುವ ಸಮುದಾಯ ಹೀನ ಮತ್ತು ಸಸ್ಯಾಹಾರ ಸೇವಿಸುವ ಸಮುದಾಯ ಶ್ರೇಷ್ಠ ಎಂಬ ಮನಸ್ಥಿತಿಯನ್ನು ಅವರು ಹೊಂದಿರುವುದು ಸ್ಪಷ್ಟವಾಗಿಲ್ಲವೇ? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೇವಲ ಸಸ್ಯಾಹಾರಿಗಳು ನೀಡುವ ತೆರಿಗೆಯಿಂದ ನಡೆಯುವ ಸಂಸ್ಥೆಯೆ? ಗೋಮಾಂಸಾಹಾರಿಗಳು ಕೀಳು ಸಂಸ್ಕೃತಿಯವರಾಗಿರುವುದರಿಂದ ಅವರ ತೆರಿಗೆಯ ಹಣವನ್ನು ಸಂಸ್ಕೃತಿ ಇಲಾಖೆ ತೆಗೆದುಕೊಳ್ಳಬಾರದಲ್ಲವೇ?

ಸಂಸ್ಕೃತಿ ಇಲಾಖೆಯ ಸಚಿವರು, ಗೋಮಾಂಸ ತಿನ್ನುವುದು ನಿಯಮ ಬಾಹಿರ ಎಂಬ ಹೇಳಿಕೆಯನ್ನು ಯಾವ ಕಾರಣದಿಂದ ನೀಡಿದರು ಎನ್ನುವುದನ್ನು ನಾಡಿನ ಜನತೆಗೆ ಸ್ಪಷ್ಟಪಡಿಸಬೇಕಾಗಿದೆ. ಈ ಮೂಲಕ ಆಹಾರ ಸಂಸ್ಕೃತಿಯನ್ನು ನಿಂದಿಸಿರುವ, ಗೋಮಾಂಸಾಹಾರಿಗಳನ್ನು ಕೇವಲವಾಗಿ ಕಂಡಿರುವ ಉಮಾಶ್ರೀಯವರು ಪರೋಕ್ಷವಾಗಿ ಈ ನಾಡಿನ ಬಹುಸಂಸ್ಕೃತಿಗೆ ಅವಮಾನ ಮಾಡಿದ್ದಾರೆ. ಇದಕ್ಕಾಗಿ ಸಚಿವರು ಶೋಷಿತ ಜನರ ಕ್ಷಮೆಯಾಚಿಸಬೇಕು. ಇಲ್ಲವಾದರೆ, ತಮ್ಮ ಆಹಾರವನ್ನು ಅವಮಾನಿಸಿದ್ದಕ್ಕಾಗಿ, ಆ ಮೂಲಕ ಜಾತೀಯತೆಯ ಮನಸ್ಥಿತಿಯನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಈ ನಾಡಿನ ಗೋಮಾಂಸಾಹಾರಿಗಳು ಉಮಾಶ್ರೀ ಮೇಲೆ ಮೊಕದ್ದಮೆ ಹೂಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News