ಐಐಟಿ ಪ್ರವೇಶ: ಸುಪ್ರೀಂಕೋರ್ಟ್ ತಡೆಯಾಜ್ಞೆ ತೆರವು

Update: 2017-07-11 04:44 GMT

ಹೊಸದಿಲ್ಲಿ, ಜು.11: ಜೆಇಇ (ಅಡ್ವಾನ್ಸ್‌ಡ್) ಪರೀಕ್ಷೆಯ ಮೆರಿಟ್ ಲಿಸ್ಟ್‌ಗೆ ಅನುಗುಣವಾಗಿ ಐಐಟಿ, ಎನ್‌ಐಟಿ, ಐಐಟಿ ಹಾಗೂ ಸರ್ಕಾರಿ ಅನುದಾನದ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಪ್ರಕ್ರಿಯೆಗೆ ತಡೆ ವಿಧಿಸಿ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ತೆರವು ಮಾಡಿದೆ. ಇದರಿಂದ ಪ್ರವೇಶ ಪ್ರಕ್ರಿಯೆ ಬಗ್ಗೆ ಇದ್ದ ಅನಿಶ್ಚಿತತೆ ಅಂತ್ಯವಾಗಿದೆ.

ನ್ಯಾಯಮೂರ್ತಿ ದೀಪಕ್ ಮಿಶ್ರ, ಎ.ಎಂ.ಖನ್ವೀಲ್ಕರ್ ಹಾಗೂ ಎಂ.ಎಂ.ಶಾಂತನಗೌಡರ್ ಅವರನ್ನು ಒಳಗೊಂಡ ನ್ಯಾಯಪೀಠ ಜುಲೈ 7ರಂದು ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ. ಈ ತಡೆಯಾಜ್ಞೆಯ ಪರಿಣಾಮವಾಗಿ ಪ್ರವೇಶ ಪ್ರಕ್ರಿಯೆ ಹಾಗೂ ಕೌನ್ಸಿಲಿಂಗ್‌ಗೆ ತೊಡಕುಂಟಾಗಿತ್ತು. ವಿದ್ಯಾರ್ಥಿಗಳಿಗೆ 18 ಬೋನಸ್ ಅಂಕ ನೀಡಿದ ಕ್ರಮವನ್ನು ನ್ಯಾಯಾಲಯ ಪ್ರಶ್ನಿಸಿತ್ತು.

2005ರಲ್ಲಿ ಈ ಸಂಬಂಧ ನೀಡಿದ್ದ ತೀರ್ಪಿನಲ್ಲಿ ಸುಪ್ರೀಂಕೋರ್ಟ್, ತಪ್ಪು ಪ್ರಶ್ನೆಗಳನ್ನು ನೀಡಿದ್ದಕ್ಕಾಗಿ ವಿದ್ಯಾಥಿಗಳಿಗೆ ಕೃಪಾಂಕ ನೀಡುವುದಾದರೆ, ಅಂಥ ಪ್ರಶ್ನೆಗಳಿಗೆ ಉತ್ತರಿಸಲು ಯಾರು ಪ್ರಯತ್ನಿಸಿದ್ದಾರೋ ಅಂಥ ವಿದ್ಯಾರ್ಥಿಗಳಿಗೆ ಮಾತ್ರ ನೀಡಬೇಕು ಎಂದು ಸೂಚಿಸಿತ್ತು. ತಪ್ಪು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾದ ಹಿನ್ನೆಲೆಯಲ್ಲಿ ಋಣಾತ್ಮಕ ಅಂಕ ನೀಡಬಾರದು ಎಂದು ಸೂಚಿಸಿತ್ತು. ಈಗಾಗಲೇ 33 ಸಾವಿರ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಮುಗಿದ ಹಿನ್ನೆಲೆಯಲ್ಲಿ ಇನ್ನಷ್ಟು ಗೊಂದಲಗಳಿಗೆ ಕಾರಣವಾಗಬಾರದು ಎಂಬ ಕಾರಣಕ್ಕೆ ತಡೆಯಾಜ್ಞೆ ತೆರವುಗೊಳಿಸಿದೆ.

ಅಂತಿಮವಾಗಿ ಬೋನಸ್ ಅಂಕಗಳನ್ನು ರದ್ದು ಮಾಡಿ ಮೆರಿಟ್ ಪಟ್ಟಿ ಪರಿಷ್ಕರಿಸಬೇಕು ಎಂದು ಕೆಲ ವಿದ್ಯಾರ್ಥಿಗಳು ಮಾಡಿದ ಮನವಿಯನ್ನು ಕೋರ್ಟ್ ತಳ್ಳಿಹಾಕಿದೆ. ಪರೀಕ್ಷೆ ತೆಗೆದುಕೊಂಡ ಎಲ್ಲ 1.56 ಲಕ್ಷ ವಿದ್ಯಾರ್ಥಿಗಳಿಗೆ ಬೋನಸ್ ಅಂಕ ನೀಡಲಾಗಿತ್ತು. ಆದರೆ ತಪ್ಪು ಪ್ರಶ್ನೆಯನ್ನು ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್, ಇಂಥ ಪ್ರತಿಷ್ಠಿತ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವಲ್ಲಿ ಭವಿಷ್ಯದಲ್ಲಿ ಇಂಥ ಪ್ರಮಾದಗಳು ಆಗಬಾರದು ಎಂದು ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News