ಮಾನವ ಸರಪಳಿ ರಚಿಸಿ ಸಮುದ್ರದಲ್ಲಿ ಮುಳುಗುತ್ತಿದ್ದ ಕುಟುಂಬವನ್ನು ರಕ್ಷಿಸಿದ 80 ಅಪರಿಚಿತರು.....!

Update: 2017-07-12 09:58 GMT

ಪನಾಮಾ(ಅಮೆರಿಕಾ),ಜು.12: ಜು.8ರಂದು ಸಂಜೆ ಪನಾಮಾ ಕಡಲ ತೀರದಲ್ಲಿ ವಿಹಾರಕ್ಕೆ ತೆರಳಿದ್ದ ಯುವದಂಪತಿ ಡೆರೆಕ್ ಸಿಮನ್ಸ್ ಮತ್ತು ಜೆಸ್ಸಿಕಾ ಸಿಮನ್ಸ್‌ಗೆ ಬೀಚ್‌ನಲ್ಲಿದ್ದ ಜನರು ಕಡಲಿನತ್ತ ನೋಡುತ್ತಿದ್ದುದು ಕಣ್ಣಿಗೆ ಬಿದ್ದಿತ್ತು. ಕಡಲ ತೀರಕ್ಕೆ ಶಾರ್ಕ್ ಬಂದಿರಬಹುದು, ಅದಕ್ಕೇ ಜನರು ಕುತೂಹಲದಿಂದ ನೊಡುತ್ತಿದ್ದಾರೆ ಎಂದು ಅವರು ಮೊದಲು ಭಾವಿಸಿದ್ದರು. ಆಗ ಅವರ ಕಣ್ಣಿಗೆ ಬಿದ್ದಿದ್ದು ಬೋರ್ಡ್‌ವಾಕ್ ಅಥವಾ ಕಡಲ ಬದಿಯಲ್ಲಿ ಕಟ್ಟಿಗೆಯಿಂದ ನಿರ್ಮಿಸಿದ್ದ ಕಾಲುದಾರಿಯಿಂದ ಬೆಳಗುತ್ತಿದ್ದ ಫ್ಲಾಷ್‌ಲೈಟ್‌ಗಳು, ಒಂದು ಪೊಲೀಸ್ ಟ್ರಕ್ ಮತ್ತು ಕಡಲ ತೀರದಿಂದ ಸುಮಾರು 100 ಯಾರ್ಡ್‌ಗಳ ದೂರದಲ್ಲಿ ರಭಸದ ಅಲೆಗಳಿಗೆ ಸಿಲುಕಿ ಮುಳುಗೇಳುತ್ತ ನೆರವಿಗಾಗಿ ಕೂಗಾಡುತ್ತಿದ್ದ ಹತ್ತು ಜನರು.

ನಾಲ್ವರು ವಯಸ್ಕರು ಮತ್ತು ಇಬ್ಬರು ಎಳೆಯ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಜನರು ಮತ್ತು ಇತರ ನಾಲ್ವರನ್ನು ಪ್ರಕ್ಷುಬ್ಧ ಅಲೆಗಳು ಕಡಲೊಳಗೆ ಎಳೆದೊಯ್ದಿದ್ದವು!

‘‘ಈ ಜನರು ಇಂದು ಮುಳುಗುವುದಿಲ್ಲ. ಅಂತಹ ದುರಂತ ಸಂಭವಿಸುವುದಿಲ್ಲ. ನಾವು ಅವರನ್ನು ರಕ್ಷಿಸುತ್ತೇವೆ ’’ ಎಂದು ತನ್ನೊಳಗೇ ದೃಢವಾಗಿ ಹೇಳಿಕೊಂಡ ಜೆಸ್ಸಿಕಾ ಗಂಡ ಡೆರೆಕ್‌ನನ್ನು ಎಳೆದುಕೊಂಡು ಕಡಲಿನತ್ತ ಧಾವಿಸಿದ್ದಳು.

ಜೆಸ್ಸಿಕಾ ನಿಷ್ಣಾತ ಈಜುಗಾರ್ತಿಯಾಗಿದ್ದಳು ಮತ್ತು ಎಂತಹುದೇ ಪ್ರತಿಕೂಲ ಸಂದರ್ಭದಲ್ಲಿಯೂ ಎದೆಗುಂದುವ ಸ್ವಭಾವ ಅವಳದಾಗಿರಲಿಲ್ಲ. ಅದಾಗಲೇ ಈಜು ಗೊತ್ತಿದ್ದ ಕೆಲವರು ಕಡಲಲ್ಲಿ ಮುಳುಗೇಳುತ್ತಿದ್ದವರನ್ನು ತಲುಪಲು ಪ್ರಯತ್ನಿಸಿದ್ದರಾದರೂ ಪ್ರತಿ ಬಾರಿಯೂ ವಿಫಲರಾಗಿದ್ದರು ಮತ್ತು ಅಲ್ಲಿ ಜನರು ಸೇರುತ್ತಲೇ ಇದ್ದರು.

ಅಲ್ಲಿ ಆ ವೇಳೆ ಜೀವರಕ್ಷಕರು ಕರ್ತವ್ಯದಲ್ಲಿರಲಿಲ್ಲ ಮತ್ತು ಅಲ್ಲಿದ್ದ ಪೊಲೀಸರು ರಕ್ಷಣಾ ದೋಣಿಯ ಆಗಮನಕ್ಕಾಗಿ ಕಾಯುತ್ತಿದ್ದರು. ಬೀಚ್‌ನಲ್ಲಿದ್ದ ಜನರ ಬಳಿ ಯಾವುದೇ ರಕ್ಷಣಾ ಸಾಧನಗಳಿರಲಿಲ್ಲ. ಅಲ್ಲಿದ್ದುದೆಂದರೆ ಕೇವಲ ಬೂಗೀ ಬೋರ್ಡ್‌ಗಳು,ಸರ್ಫ್ ಬೋರ್ಡ್‌ಗಳು ಮತ್ತು ಅಲ್ಲಿದ್ದವರ ಕೈ-ಕಾಲುಗಳು.....

‘ಮಾನವ ಸರಪಳಿ ರಚಿಸಿ’ ಎಂದು ಜೆಸ್ಸಿಕಾ ಕೂಗಿದ್ದು ಕಡಲಿನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ರಾಬರ್ಟಾ ಉರ್ಸ್ರೆ(34)ಗೆ ಕೇಳಿಸಿತ್ತು. ಅದರೆ ಆಕೆಗೆ ತಾವು ಬದುಕುತ್ತೇವೆ ಎಂಬ ಯಾವ ಭರವಸೆಯೂ ಉಳಿದಿರಲಿಲ್ಲ. ಅದಾಗಲೇ ಆ ಹತ್ತು ಜನರು ಸುಮಾರು 20 ನಿಮಿಷಗಳ ಕಾಲ ಅಲೆಗಳ ನಡುವೆ ಸಿಕ್ಕಿಬಿದ್ದಿದ್ದರು.

ಉರ್ಸ್ರೆಯ ಪುತ್ರರಾದ ನೋಹ್(11) ಮತ್ತು ಸ್ಟೀಫನ್(8) ತಮ್ಮ ಬೂಗಿ ಬೋರ್ಡ್ ಗಳ ಮೇಲೆ ಅಲೆಗಳನ್ನು ಬೆನ್ನಟ್ಟುತ್ತ ಕಡಲಿನಲ್ಲಿ ಮುಳುಗಿದ್ದರು. ನೀರಿನಲ್ಲಿ ಮುಳುಗೇಳುತ್ತಿದ್ದ ಮಕ್ಕಳನ್ನು ಮೊದಲು ನೋಡಿದವರು ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳಲು ಪನಾಮಾ ಸಿಟಿಗೆ ಬಂದಿದ್ದ ತಬಾತಾ ಮನ್ರೋ ಮತ್ತು ಆತನ ಪತ್ನಿ ಬ್ರಿಟನಿ. ಕಡಲಿಗಿಳಿದು ಈಜುತ್ತ ಸಾಗಿದ ಈ ದಂಪತಿ ಮಕ್ಕಳ ಬೂಗಿ ಬೋರ್ಡ್‌ಗಳನ್ನು ಹಿಡಿದುಕೊಂಡು ಅವರನ್ನು ತೀರದತ್ತ ಎಳೆಯಲು ಪ್ರಯತ್ನಿಸಿದ್ದರಾದರೂ ಸಾಧ್ಯವಾಗಿರಲಿಲ್ಲ. ಬದಲು ಬ್ರಿಟನಿ ಮುಳುಗುವ ಅಪಾಯಕ್ಕೆ ಸಿಲುಕಿದ್ದಳು. ಆಕೆಯ ರಕ್ಷಣೆಗೆ ಯತ್ನಿಸಿದ್ದ ಮನ್ರೋ ಕೂಡ ಅಲೆಗಳ ನಡುವೆ ಸಿಕ್ಕಿಹಾಕಿಕೊಂಡಿದ್ದ. ಈಜುತ್ತ ತೀರದತ್ತ ಬರಲು ಅವರು ಪ್ರಯತ್ನಿಸಿದ್ದರಾದರೂ ಸಾಧ್ಯವಾಗಿರಲಿಲ್ಲ. ಸುಮಾರು ಹತ್ತು ನಿಮಿಷಗಳ ಬಳಿಕ ಕೆಲವು ಯುವಕರು ಸರ್ಫ್ ಬೋರ್ಡ್‌ನೊಂದಿಗೆ ಬಂದು ಬ್ರಿಟನಿಯನ್ನು ರಕ್ಷಿಸಿದ್ದರು.

 ಮಕ್ಕಳನ್ನು ರಕ್ಷಿಸಲು ಉರ್ಸ್ರೆ, ಆಕೆಯ ಸೋದರಳಿಯ, 67ರ ಹರೆಯದ ತಾಯಿ, 31ರ ಹರೆಯದ ಗಂಡ ಕಡಲಿಗೆ ಹಾರಿದ್ದರು. ಅಪರಿಚಿತ ದಂಪತಿ ಕೂಡ ನೀರಿಗೆ ಹಾರಿದ್ದರು. ಎಲ್ಲರೂ ಈಜಲಾಗದೇ ಮುಳುಗೇಳುತ್ತಿದ್ದರು.

 ಇತ್ತ ತೀರದಲ್ಲಿ ಪರಸ್ಪರರಿಗೆ ಪರಿಚಯವೇ ಇಲ್ಲದಿದ್ದ 80ಕ್ಕೂ ಹೆಚ್ಚು ಜನರು ಮಾನವ ಸರಪಳಿಯನ್ನು ರಚಿಸಿದ್ದರು ಮತ್ತು ಆ ಸರಪಳಿ ಕಡಲಿನೊಳಗೆ ಸಾಗಿತ್ತು. ನೀರಿಗೆ ಹಾರಿದ ಜೆಸ್ಸಿಕಾ ಮತ್ತು ಡೆರೆಕ್ ಈಜುತ್ತ ಮಾನವ ಸರಪಳಿಯನ್ನು ದಾಟಿ ಉರ್ಸ್ರೆ ಕುಟುಂಬದ ಬಳಿಗೆ ತಲುಪಿದ್ದರು. ಮೊದಲು ಮಕ್ಕಳನ್ನು ನೀರಿನಿಂದ ಮೇಲಕ್ಕೆತ್ತಿ ಮಾನವ ಸರಪಳಿಯ ಕೊನೆಯಲ್ಲಿದ್ದ ವ್ಯಕ್ತಿಗೆ ನೀಡಿದ್ದರು. ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ದಾಟುತ್ತ ಆ ಮಕ್ಕಳು ಸುರಕ್ಷಿತವಾಗಿ ತೀರವನ್ನು ಸೇರಿಕೊಂಡಿದ್ದರು. ಬಳಿಕ ಒಬ್ಬೊಬ್ಬರಾಗಿ ಉಳಿದ ವರನ್ನು ರಕ್ಷಿಸಲಾಯಿತು. ಆದರೆ ಮುಳುಗೇಳುತ್ತಿದ್ದ ಉರ್ಸ್ರೆಯ ತಾಯಿ ಬಾರ್ಬರಾ ಫ್ರಾಂಝ್‌ಗೆ ನೀರಿನಲ್ಲಿಯೇ ತೀವ್ರ ಹೃದಯಾಘಾತವಾಗಿತ್ತು. ಒಂದು ಹಂತದಲ್ಲಿ ಆಕೆ ತನ್ನನ್ನು ಸಾಯಲು ಬಿಡಿ,ನಿಮ್ಮ ಜೀವ ಉಳಿಸಿಕೊಳ್ಳಿ ಎಂದು ಜೆಸ್ಸಿಕಾಗೆ ಹೇಳಿದ್ದಳು. ಆದರೆ ಛಲ ಬಿಡದ ಜೆಸ್ಸಿಕಾ ಮತ್ತು ಡೆರೆಕ್ ಆಕೆಯನ್ನು ರಕ್ಷಿಸುವಲ್ಲಿ ಕೊನೆಗೂ ಯಶಸ್ವಿಯಾಗಿ ದ್ದರು. ಬೀಚ್‌ನಲ್ಲಿದ್ದ ಜನರೆಲ್ಲ ಚಪ್ಪಾಳೆ ತಟ್ಟುತ್ತ ಅವರ ಯಶಸ್ಸನ್ನು ಸ್ವಾಗತಿಸಿದ್ದರು.

 ತೀವ್ರ ಅಸ್ವಸ್ಥಗೊಂಡಿದ್ದ ಎಲ್ಲರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗಳಿಗೆ ಮರಳಿದ್ದಾರೆ. ಬಾರ್ಬರಾ ಮಾತ್ರ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಮೊದಲು ಜೆಸ್ಸಿಕಾ-ಡೆರೆಕ್‌ರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸುವ ಬಯಕೆ ವ್ಯಕ್ತಪಡಿಸಿದ್ದಾಳೆ.

ತಮ್ಮ ರಕ್ಷಣೆಗೆ ಮುಂದಾಗಿದ್ದ ಅಷ್ಟೂ ಅಪರಿಚಿತರನ್ನು ಉರ್ಸ್ರೆ ನೆನೆಸಿಕೊಂಡಿದ್ದಾಳೆ. ಈ ಜಗತ್ತಿನಲ್ಲಿ ಒಳ್ಳೆಯ ಜನರಿದ್ದಾರೆ ಎನ್ನುವುದಕ್ಕೆ ಇದು ನಿದರ್ಶನ ಎಂದು ಆಕೆ ಉದ್ಗರಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News