ಇಸ್ರೇಲ್ ಜೊತೆ ಸಂಬಂಧ: ಸ್ವತಂತ್ರ ವಿದೇಶಾಂಗ ನೀತಿಗೆ ತಿಲಾಂಜಲಿ

Update: 2017-07-12 18:33 GMT

ಸ್ವತಂತ್ರ ಭಾರತ ಈವರೆಗೆ ನಡೆದುಬಂದ ದಾರಿಯನ್ನು ಬಿಟ್ಟು ತಮ್ಮದೇ ಅಡ್ಡ ಹಾದಿಯಲ್ಲಿ ದೇಶವನ್ನು ಸಾಗಿಸಲು ಯತ್ನಿಸುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರಕಾರ ವಿದೇಶಾಂಗ ಧೋರಣೆಯಲ್ಲೂ ಮಾರ್ಪಾಟುಗಳನ್ನು ಮಾಡಲು ಹೊರಟಿದೆ. ಅಧಿಕಾರಕ್ಕೆ ಬಂದ ಹೊಸದರಲ್ಲಿ ಏಕಾಏಕಿಯಾಗಿ ಯೋಜನಾ ಆಯೋಗವನ್ನು ರದ್ದುಪಡಿಸಲಾಯಿತು. ಯೋಜನಾ ಆಯೋಗದ ಬದಲಿಗೆ ನೀತಿ ಆಯೋಗವನ್ನು ರಚಿಸಲಾಯಿತು.

ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವನ್ನು ಸಂಘಪರಿವಾರದ ತಾಣವನ್ನಾಗಿ ಮಾಡಲು ಹೋಗಿ ಕೈಸುಟ್ಟುಕೊಂಡಿತು. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೇಮುಲಾ ಎಂಬ ಪ್ರತಿಭಾವಂತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ನಿರ್ಮಾಣ ಮಾಡಲಾಯಿತು. ಪುಣೆಯ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಕೈಹಾಕಿ ಯಾವುದೇ ಅರ್ಹತೆ ಇಲ್ಲದ ಸಂಘ ಪರಿವಾರದ ವ್ಯಕ್ತಿಯನ್ನು ನಿರ್ದೇಶಕನನ್ನಾಗಿ ಮಾಡಿತು. ಇದಕ್ಕೆ ಅಲ್ಲಿನ ವಿದ್ಯಾರ್ಥಿಗಳಿಂದ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಆಂತರಿಕವಾಗಿ ಇಂತಹ ಪ್ರಮಾದಗಳನ್ನು ಎಸಗುವ ಜೊತೆಗೆ ವಿದೇಶಾಂಗ ನೀತಿಯಲ್ಲೂ ಸಂಘಪರಿವಾರದ ನಿರ್ದೇಶನದಂತೆ ಈ ಸರಕಾರ ಕಾರ್ಯ ನಿರ್ವಹಿಸುತ್ತಿದೆ.

ಇತ್ತೀಚೆಗೆ ಇಸ್ರೇಲ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಕಳೆದ ಏಳು ದಶಕಗಳಿಂದ ನಮ್ಮ ದೇಶ ಅನುಸರಿಸಿಕೊಂಡು ಬಂದ ಸ್ವತಂತ್ರ ವಿದೇಶಾಂಗ ನೀತಿಗೆ ಎಳ್ಳುನೀರು ಬಿಟ್ಟುಬಂದರು. ಇಸ್ರೇಲ್ ಎಂಬ ದೇಶದ ಅಸ್ತಿತ್ವದ ಬಗ್ಗೆ ಭಾರತ ನೆಹರೂ ಕಾಲದಿಂದಲೂ ಪ್ರಶ್ನಿಸುತ್ತಾ ಬಂದಿದೆ. ಫೆಲೆಸ್ತೀನ್ ಪ್ರಜೆಗಳನ್ನು ಹೊರದಬ್ಬಿ ಅವರ ತಾಯ್ನಿಡನ್ನು ಅಪಹರಣ ಮಾಡಿದ ಯಹೂದಿಗಳು ಜನಾಂಗೀಯ ದ್ವೇಷದ ಆಧಾರದ ಮೇಲೆ ತಮ್ಮ ದೇಶವನ್ನು ಕಟ್ಟಿಕೊಂಡರು. ಅಮೆರಿಕ ಹೊರತು ಪಡಿಸಿ ಜಗತ್ತಿನ ಎಲ್ಲ ದೇಶಗಳು ಇದನ್ನು ವಿರೋಧಿಸುತ್ತಾ ಬಂದಿವೆ.

ಆರಂಭದಲ್ಲಿ ಭಾರತ ಸೇರಿದಂತೆ ಬಹುತೇಕ ದೇಶಗಳು ಇಸ್ರೇಲ್ ಜೊತೆಗೆ ರಾಜತಾಂತ್ರಿಕ ಸಂಬಂಧವನ್ನೂ ಹೊಂದಿರಲಿಲ್ಲ. ಸಂಯುಕ್ತ ರಾಷ್ಟ್ರ ಸಂಸ್ಥೆ ಕೂಡಾ ಇಸ್ರೇಲ್‌ಗೆ ಮಾನ್ಯತೆ ನೀಡಿರಲಿಲ್ಲ. ಇಂತಹ ಒಂದು ದೇಶಕ್ಕೆ ಭಾರತದ ಪ್ರಧಾನಿಯೊಬ್ಬರು ಪ್ರಥಮ ಬಾರಿ ಭೇಟಿ ನೀಡಿದ್ದಾರೆ. ಭಾರತದ ಪ್ರಧಾನಿಗಾಗಿ ತಾವು 70 ವರುಷಗಳಿಂದ ಕಾಯುತ್ತಿದ್ದೆವು ಎಂದು ಇಸ್ರೇಲ್ ಪ್ರಧಾನಿ ಹೇಳಿದ್ದಾರೆ. ಇಸ್ರೇಲ್‌ನೊಂದಿಗೆ ಸಂಬಂಧ ಸುಧಾರಿಸಿಕೊಳ್ಳುವ ಬಗ್ಗೆ ಆಸಕ್ತಿ ಹೊಂದಿರುವ ಕೇಂದ್ರದ ಬಿಜೆಪಿ ಸರಕಾರ ತಮ್ಮ ನೆಲೆಯನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವ ಫೆಲೆಸ್ತೀನ್ ಜನರ ಬಗ್ಗೆ ನಿರ್ಲಕ್ಷ ಧೋರಣೆ ತಾಳಿದೆ.

ಇಸ್ರೇಲ್‌ಗೆ ಹೋದ ಪ್ರಧಾನಿ ಆ ದೇಶದೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಟ ಸೇರಿದಂತೆ ಸುಮಾರು ಏಳು ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಂಡು ಬಂದಿದ್ದಾರೆ. ವಿಶೇಷವಾಗಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ. ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಫೆಲೆಸ್ತೀನ್ ಜನತೆಯ ಮೇಲೆ ಕಳೆದ ಐವತ್ತು ವರ್ಷಗಳಿಂದ ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ದುರಾಕ್ರಮಣ ಮತ್ತು ಬಾಂಬ್ ದಾಳಿಗೆ ಸಾವಿರಾರು ಮಂದಿ ಬಲಿಯಾಗಿದ್ದಾರೆ. ಈ ಬಲಿದಾನದ ಆನಂತರವೂ ಅವರ ಬದುಕು ಸುರಕ್ಷಿತವಾದ ನೆಲೆಯನ್ನು ಕಂಡುಕೊಂಡಿಲ್ಲ.

ಫೆಲೆಸ್ತೀನಿಯರ ಹೋರಾಟವನ್ನು ದಶಕಗಳ ಕಾಲ ಮುನ್ನಡೆಸಿದ ಯಾಸರ್ ಅರಫಾತ್ ಅವರ ಸಾವು ಕೂಡಾ ಸಂದೇಹಾಸ್ಪದವಾಗಿತ್ತೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂತಲೇ, ಭಾರತ ಮುಂಚಿನಿಂದಲೂ ಫೆಲೆಸ್ತೀನ್ ಜನತೆಯ ಹೋರಾಟವನ್ನು ಬೆಂಬಲಿಸುತ್ತಾ ಬಂದಿದೆ. ಆದರೆ, ಆರೆಸ್ಸೆಸ್ ಮತ್ತು ಅದರ ರಾಜಕೀಯ ವೇದಿಕೆಯಾದ ಬಿಜೆಪಿ ಇಸ್ರೇಲ್‌ನ ಓಲೈಕೆಯಲ್ಲಿ ತೊಡಗಿವೆ. ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಇಸ್ರೇಲ್ ಜೊತೆ ಸಂಬಂಧ ಸುಧಾರಿಸುವ ಯತ್ನ ನಡೆದಿತ್ತು. ಆದರೆ, ಅದು ಕೈಗೂಡಿರಲಿಲ್ಲ. ಈಗಿನ ಪ್ರಧಾನಿ ನರೇಂದ್ರ ಮೋದಿ ಸಂಘಪರಿವಾರದ ಕಟ್ಟಾ ಸ್ವಯಂಸೇವಕರಾಗಿರುವುದರಿಂದ ನಾಗಪುರದ ಆರೆಸ್ಸೆಸ್ ಕೇಂದ್ರ ಕಚೇರಿಯಿಂದ ಬರುವ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಇಸ್ರೇಲ್ ಜೊತೆ ಮೋದಿ ಮಾಡಿಕೊಂಡ ಒಪ್ಪಂದದ ಸ್ವರೂಪ ಬಹಿರಂಗವಾಗಿಲ್ಲ. ಭಯೋತ್ಪಾದನೆ ವಿರುದ್ಧದ ಹೋರಾಟದ ಬಗ್ಗೆ ಸ್ಪಷ್ಟವಾದ ವಿವರಗಳು ಯಾರಿಗೂ ಗೊತ್ತಿಲ್ಲ. ಸ್ವತಃ ಭಯೋತ್ಪಾದಕ ರಾಷ್ಟ್ರವಾದ ಇಸ್ರೇಲ್, ನಿರಾಶ್ರಿತರಾದ ಫೆಲೆಸ್ತೀನಿಯರನ್ನು ಹತ್ತಿಕ್ಕುವುದೇ ಭಯೋತ್ಪಾದಕ ವಿರೋಧಿ ಹೋರಾಟ ಎಂದು ಭಾವಿಸಿದಂತಿದೆ. ಇಸ್ರೇಲ್‌ನ ದುರಾಕ್ರಮಣ ನೀತಿಯನ್ನು ಮುಂಚಿನಿಂದಲೂ ವಿರೋಧಿಸುತ್ತಾ ಬಂದಿದ್ದ ಭಾರತ ಅದರೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧವನ್ನು ಹೊಂದಿರಲಿಲ್ಲ. ಆದರೆ, 90ರ ದಶಕದಲ್ಲಿ ಸಮಾಜವಾದಿ ಸೋವಿಯತ್ ರಶ್ಯದ ಪತನದೊಂದಿಗೆ ಜಗತ್ತಿನ ಎಲ್ಲ ದೇಶಗಳಲ್ಲಿ ಜಾಗತೀಕರಣದ ಪ್ರಭಾವ ಹೆಚ್ಚಾದ ಬಳಿಕ 1991ರಲ್ಲಿ ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧಕ್ಕೆ ನಾಂದಿ ಹಾಡಲಾಯಿತು.

ಅಮೆರಿಕದ ಒತ್ತಡಕ್ಕೆ ಮಣಿದ ನರಸಿಂಹ ರಾವ್ ಇಸ್ರೇಲ್‌ನೊಂದಿಗೆ ಸಂಬಂಧ ಸುಧಾರಿಸಲು ಮುಂದಾದರು. ಆದರೂ ಫೆಲೆಸ್ತೀನಿಯರ ಹೋರಾಟದ ಬಗ್ಗೆ ನಕಾರಾತ್ಮಕ ಧೋರಣೆ ಹೊಂದಿರಲಿಲ್ಲ. ಆದರೆ, ಈಗಿನ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ಗೆ ಹೋದರೂ, ಫೆಲೆಸ್ತೀನ್‌ಗೆ ಭೇಟಿ ನೀಡುವ ಸೌಜನ್ಯವನ್ನೂ ತೋರಲಿಲ್ಲ. ಜಗತ್ತಿನ ಎಲ್ಲ ದೇಶಗಳಲ್ಲಿನ ಶೋಷಿತರ ಹೋರಾಟಕ್ಕೆ ಬೆಂಬಲ ನೀಡುವ ಭಾರತದ ವಿದೇಶಾಂಗ ನೀತಿಗೆ ತಿಲಾಂಜಲಿ ನೀಡಿದ ಮೋದಿ ಜನಾಂಗೀಯವಾದಿ ಮತ್ತು ಆಕ್ರಮಣಕಾರಿಯಾದ ಇಸ್ರೇಲ್ ಜೊತೆಗೆ ಸಂಬಂಧ ಬಲಪಡಿಸಲು ಇನ್ನಿಲ್ಲದ ಆಸಕ್ತಿ ತೋರಿಸಿದ್ದಾರೆ.

ಫೆಲೆಸ್ತೀನಿಯರ ಸ್ವಯಂ ಆಡಳಿತದ ಹಕ್ಕನ್ನು ಭಾರತ ನೆಹರೂ ಕಾಲದಿಂದಲೂ ಪ್ರತಿಪಾದಿಸುತ್ತಿದೆ. ಫೆಲೆಸ್ತೀನಿಯರು ತಮ್ಮ ಮಾತೃಭೂಮಿಗಾಗಿ ನಡೆಸಿದ ಶಾಂತಿಯುತ ಚಳವಳಿಯನ್ನು ಭಾರತ ಬೆಂಬಲಿಸುತ್ತಾ ಬಂದಿದೆ. ಆದರೆ, ಜಗತ್ತಿನಲ್ಲಿ ಜಾಗತೀಕರಣದ ಬಳಿಕ ಹಲವಾರು ಬದಲಾವಣೆಗಳಾದವು. ಆಗ ಫೆಲೆಸ್ತೀನ್ ಚಳವಳಿಗೆ ಹಿನ್ನಡೆಯಾಯಿತು. ಜಗತ್ತಿಗೆಲ್ಲಾ ಮಾನವ ಹಕ್ಕುಗಳ ಬಗ್ಗೆ ಉಪದೇಶ ನೀಡುವ ಅಮೆರಿಕ ತನ್ನ ಮಾತೃಭೂಮಿಯಲ್ಲಿ ಬದುಕುವ ಹಕ್ಕಿಗಾಗಿ ಶಾಂತಿಯುತವಾಗಿ ಹೋರಾಡುತ್ತಿದ್ದ ಫೆಲೆಸ್ತೀನ್ ಜನರನ್ನು ಹತ್ತಿಕ್ಕಲು ಇಸ್ರೇಲ್‌ಗೆ ಸಕಲ ನೆರವನ್ನು ನೀಡುತ್ತಾ ಬಂದಿತು.

ಅಮೆರಿಕದ ಸಾಮ್ರಾಜ್ಯಶಾಹಿ ಒಂದೆಡೆ ಇಸ್ರೇಲ್‌ಗೆ ಬೆಂಬಲ ನೀಡುತಾ,್ತ ಇನ್ನೊಂದೆಡೆ ಇರಾಕ್ ಮತ್ತು ಲಿಬಿಯಾಗಳನ್ನು ನಾಶ ಮಾಡಿತು. ಸದ್ದಾಂ ಹುಸೇನ್ ಮತ್ತು ಕರ್ನಲ್ ಗದ್ದಾಫಿ ಸಾವಿನ ಆನಂತರ ಈ ಎರಡೂ ದೇಶಗಳು ಅಸ್ಥಿರತೆಯಿಂದ ವಿನಾಶದ ಅಂಚಿಗೆ ಬಂದು ನಿಂತಿವೆ. ಇನ್ನೊಂದೆಡೆ ದಿಕ್ಕು ತಪ್ಪಿದ ಫೆಲೆಸ್ತೀನ್ ಚಳವಳಿ ನೆಲೆ ಕಳೆದುಕೊಂಡು ಅಂಧಕಾರದಲ್ಲಿದೆ. ಇಂತಹ ಸನ್ನಿವೇಶದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಹಾಗೂ ಸ್ವಾತಂತ್ರಕ್ಕಾಗಿ ಧ್ವನಿ ಎತ್ತಿದ ಫೆಲೆಸ್ತೀನ್ ಜನತೆಯ ಪರವಾಗಿದ್ದ ಭಾರತದ ವಿದೇಶಾಂಗ ನೀತಿಯನ್ನು ಬುಡಮೇಲು ಮಾಡಿ ಮೋದಿ, ದುರಾಕ್ರಮಣಕಾರಿ ಇಸ್ರೇಲ್ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.

ಅತ್ಯಂತ ವಿಷಾದದ ಸಂಗತಿಯೆಂದರೆ ವಿದೇಶಾಂಗ ನೀತಿಯಲ್ಲಿ ಉಂಟಾದ ಈ ಬದಲಾವಣೆಗಳ ಬಗ್ಗೆ ಭಾರತದಲ್ಲಿ ಆಂತರಿಕವಾಗಿ ಅಂತಹ ಪ್ರತಿರೋಧ ಕಂಡುಬರುತ್ತಿಲ್ಲ. ಅಮೆರಿಕದಲ್ಲಿ ಟ್ರಂಪ್ ಆಧ್ಯಕ್ಷರಾಗಿದ್ದಾರೆ. ಭಾರತದಲ್ಲಿ ಮೋದಿ ಪ್ರಧಾನಿಯಾಗಿದ್ದಾರೆ. ನೆಲೆ ಕಳೆದುಕೊಂಡು ಹೋರಾಡುತ್ತಿರುವ ಫೆಲೆಸ್ತೀನ್ ಜನರ ಪರವಾಗಿ ಜಗತ್ತಿನ ಯಾವ ದೇಶವೂ ಇಲ್ಲದಂತಾಗಿದೆ. ಅದೇನೇ ಇದ್ದರೂ ಭಾರತದ ಸ್ವತಂತ್ರ ವಿದೇಶಾಂಗ ನೀತಿಗೆ ತಿಲಾಂಜಲಿ ನೀಡಿದ ಬಿಜೆಪಿ ನೇತೃತ್ವದ ಸರಕಾರದ ನಿಲುವು ಖಂಡನೀಯವಾಗಿದೆ. ಇಂತಹ ಒಪ್ಪಂದವನ್ನು ಮಾಡಿಕೊಳ್ಳುವ ಮುನ್ನ ಸರ್ವಪಕ್ಷ ಸಭೆಯನ್ನು ನಡೆಸುವ ಸೌಜನ್ಯವನ್ನು ಕೂಡಾ ಪ್ರಧಾನಮಂತ್ರಿ ತೋರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News