ಬಾಲಕನಿಗೆ ಚಿತ್ರಹಿಂಸೆ ನೀಡಿ ಹತ್ಯೆ

Update: 2017-07-13 04:54 GMT

ಹೊಸದಿಲ್ಲಿ, ಜು.13: ಒಂಬತ್ತು ವರ್ಷದ ಪುಟ್ಟ ಬಾಲಕನನ್ನು ಚಿತ್ರಹಿಂಸೆ ನೀಡಿ ಕೊಂದ ಅಮಾನವೀಯ ಘಟನೆ ನಗರದ ಪುಲ್ ಪ್ರಹ್ಲಾದಪುರದಲ್ಲಿ ಬೆಳಕಿಗೆ ಬಂದಿದೆ.

ಬಾಲಕನ ಮೈತುಂಬಾ ಸಿಗರೇಟ್‌ನಿಂದ ಸುಟ್ಟ ಗಾಯಗಳಿದ್ದು, ನಗ್ನ ಸ್ಥಿತಿಯಲ್ಲಿ ಇಲ್ಲಿನ ಉದ್ಯಾನವನವೊಂದರಲ್ಲಿ ಮೃತದೇಹ ಪತ್ತೆಯಾಗಿದೆ. ಈ ಪೈಶಾಚಿಕ ಘಟನೆ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ.

ಬಾಲಕನ ಮೈಮೇಲೆ ಸುಡುವ ಸಿಗರೇಟ್‌ನಿಂದ ಚುಚ್ಚಿದ ಆಳವಾದ ಸುಟ್ಟಗಾಯಗಳಿದ್ದು, ಸಾವಿಗೆ ಇದೇ ಕಾರಣ ಎಂದು ಶಂಕಿಸಲಾಗಿದೆ. ಬಾಲಕನನ್ನು ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆಯೇ ಅಥವಾ ಲೈಂಗಿಕವಾಗಿ ದೌರ್ಜನ್ಯ ನಡೆದಿದೆಯೇ ಎನ್ನುವುದು ಅಟಾಪ್ಸಿ ಪರೀಕ್ಷೆಯ ಬಳಿಕ ಗೊತ್ತಾಗಬೇಕಿದೆ ಎಂದು ಆಗ್ನೇಯ ವಲಯದ ಡಿಸಿಪಿ ರೊಮಿಲ್ ಬಾನಿಯಾ ಹೇಳಿದ್ದಾರೆ.

ಬಾಲಕನ ದೇಹದಲ್ಲಿರುವ ಇತರ ಗಾಯಗಳನ್ನು ನೋಡಿದಾಗ ಬಾಲಕನನ್ನು ಸ್ಕ್ರೂಡ್ರೈವರ್ ಅಥವಾ ಚೂಪಾದ ಮಂಜುಗಡ್ಡೆಯಿಂದ ಚುಚ್ಚಿ ಸಾಯಿಸಿರುವ ಸಾಧ್ಯತೆ ಇದೆ ಎಂದು ಕುಟುಂಬದವರು ದೂರಿದ್ದಾರೆ. ದೇಹದಲ್ಲಿ ಆಳವಾದ ಗಾಯಗಳಿದ್ದು, ಈ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಡಿಸಿಪಿ ಹೇಳಿದ್ದಾರೆ.

ನತದೃಷ್ಟ ಬಾಲಕ ಮಂಗಳವಾರ ಸ್ನೇಹಿತರ ಜತೆ ಆಡಲು ಹೋಗಿದ್ದ. ಸಂಜೆ ವೇಳೆ ಮಳೆ ಬರಲಾರಂಭಿಸಿದ್ದರಿಂದ ಬಹುಶಃ ಆತ ಎಲ್ಲೋ ನಿಂತಿರಬೇಕು. ಮಳೆ ಕಡಿಮೆಯಾದ ಬಳಿಕ ಮರಳುತ್ತಾನೆ ಎಂದು ಮನೆಯವರು ವಿಶ್ವಾಸದಲ್ಲಿದ್ದರು. ನೆರೆಹೊರೆಯವರ ಸಹಾಯದಿಂದ ಆತನನ್ನು ಹುಡುಕಿದರೂ ಎಲ್ಲೂ ಪತ್ತೆಯಾಗಲಿಲ್ಲ. ರಾತ್ರಿ 10:30ರ ವೇಳೆಗೆ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿದ್ದ ಉದ್ಯಾನವನದಲ್ಲಿ  ಮೃತದೇಹ ಪತ್ತೆಯಾಗಿದೆ.

ಪೊದೆಗಳ ನಡುವೆ ನಗ್ನವಾಗಿ ಬಿದ್ದಿದ್ದ ಶವವನ್ನು ನೋಡಿದ ಸಾರ್ವಜನಿಕರೊಬ್ಬರು ಮಾಹಿತಿ ನೀಡಿದರು. ಇಂಥ ಪೈಶಾಚಿಕ ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಪುಲ್ ಪ್ರಹ್ಲಾದ್‌ಪುರ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿದೆ. ಆ ಪ್ರದೇಶದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಇದುವರೆಗೆ ಯಾವುದೇ ಮಹತ್ವದ ಸುಳಿವು ಸಿಕ್ಕಿಲ್ಲ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News