ಉತ್ತರಪ್ರದೇಶ ವಿಧಾನಸಭೆಯಲ್ಲಿ ಸ್ಫೋಟಕ ಪತ್ತೆ

Update: 2017-07-14 07:17 GMT

ಲಕ್ನೋ, ಜು.14: ಉತ್ತರಪ್ರದೇಶದ ವಿಧಾನಸಭೆಯೊಳಗೆ ಗುರುವಾರ ಬಿಳಿ ಪೌಡರ್ ಇರುವ ಪ್ಯಾಕೇಟ್‌ವೊಂದು ಪತ್ತೆಯಾಗಿದ್ದು, ಇದೊಂದು ಸ್ಫೋಟಕ ಪೌಡರ್ ಎಂದು ಗೊತ್ತಾಗಿದೆ. ವಿಧಾನಸಭೆಯಲ್ಲಿ ಭದ್ರತಾ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಪ್ರಸ್ತುತ ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದು ಗುರುವಾರ ಸಮಾಜವಾದಿ ಪಕ್ಷದ ಶಾಸಕ ಮನೋಜ್ ಪಾಂಡೆಯ ಆಸೀನರಾಗಿದ್ದ ಸೀಟಿನ ಅಡಿಯಲ್ಲಿ ಸುಮಾರು 150 ಗ್ರಾಂ ತೂಕದ ಪೌಡರ್ ಇರುವ ಪ್ಯಾಕೇಟ್‌ವೊಂದು ಪತ್ತೆಯಾಗಿತ್ತು. ಭದ್ರತಾ ಅಧಿಕಾರಿಗಳು ತಕ್ಷಣವೇ ಪಾಕೇಟ್‌ನ್ನು ವಶಪಡಿಸಿಕೊಂಡಿದ್ದು, ಪೌಡರ್‌ನಲ್ಲಿರುವ ಅಂಶವನ್ನು ಪತ್ತೆಹಚ್ಚಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಪಿಇಟಿಎನ್ ರಾಸಾಯನಿಕವಿರುವ ಪ್ಲಾಸ್ಟಿಕ್ ಸ್ಪೋಟಕ ಪೌಡರ್ ಇದಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ ಪತ್ತೆ ಹಚ್ವಿದೆ.

"ವಿಧಾನಸಭೆಯಲ್ಲಿ 150 ಗ್ರಾಂ ತೂಕದ ಸ್ಫೋಟಕ ಪತ್ತೆಯಾಗಿರುವುದು ಚಿಂತಾಜನಕ ವಿಷಯ. ಪಿಇಟಿಎನ್ ಅಪಾಯಕಾರಿ ರಾಸಾಯನಿಕವಾಗಿದ್ದು, 50 ಗ್ರಾಂನಷ್ಟಿರುವ ಪೌಡರ್‌ನಿಂದ ಕಟ್ಟಡವೊಂದನ್ನು ಉರುಳಿಸಬಹುದು. ಈ ಪೌಡರ್‌ನ್ನು ಮಹಾಯುದ್ಧಗಳಲ್ಲಿ ಬಳಸಲಾಗುತ್ತದೆ. ಈ ಪೌಡರ್‌ನಿಂದ ಉತ್ತರಪ್ರದೇಶದ ವಿಧಾನಸಭೆಯನ್ನು ಕೆಡವಲು ಸಾಧ್ಯವಿದೆ. ಈ ಕೃತ್ಯದ ಹಿಂದೆ ಯಾರಿದ್ದಾರೆಂದು ಇನ್ನಷ್ಟೇ ಪತ್ತೆಯಾಗಬೇಕಾಗಿದೆ. ಅಸೆಂಬ್ಲಿಯ ಆವರಣದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪಾಸ್ ಇಲ್ಲದೇ ಯಾರಿಗೂ ಪ್ರವೇಶ ನೀಡದಂತೆ ತಾಕೀತು ಮಾಡಲಾಗಿದೆ. ಸದನದ ಎಲ್ಲ ಸದಸ್ಯರ ಸುರಕ್ಷತೆಯೂ ನಮ್ಮ ಆದ್ಯತೆಯಾಗಿದೆ'' ಎಂದು ಆದಿತ್ಯನಾಥ್ ಹೇಳಿದ್ದಾರೆ.

 ಉತ್ತರಪ್ರದೇಶ ಅಸೆಂಬ್ಲಿ ಅಧಿವೇಶನ ಈ ವಾರ ಆರಂಭವಾಗಿದ್ದು, ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ತನ್ನ ಮೊದಲ ಬಜೆಟ್‌ನ್ನು ಮಂಡಿಸಲು ಉದ್ದೇಶಿಸಿದೆ.

ವಿಸ್ಫೋಟಕ ಪೌಡರ್ ಅಸೆಂಬ್ಲಿಯೊಳಗೆ ಹೇಗೆ ಬಂತು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಉತ್ತರಪ್ರದೇಶ ವಿಧಾನಸಭೆಗೆ ಪ್ರವೇಶಿಸಬೇಕಾದರೆ ಹಲವು ಹಂತದ ಸುರಕ್ಷಾ ಬೇಲಿಯನ್ನು ದಾಟಬೇಕಾಗುತ್ತದೆ.

"ವಿಧಾನಸಭೆಯಲ್ಲಿ ವಿಸ್ಪೋಟಕ ಪತ್ತೆಯಾಗಿದ್ದು ಚಿಂತೆಯ ವಿಷಯವಾಗಿದ್ದು, ವಿಧಾನಸಭೆಗೆ ಸುರಕ್ಷತೆ ನೀಡದವರು ಜನರಿಗೆ ಸುರಕ್ಷತೆ ನೀಡುತ್ತಾರೆಯೇ? ಎಂದು ಕಾಂಗ್ರೆಸ್ ನೇತಾರ ಅಖಿಲೇಶ್ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News