ಸೆಸ್ ತುಟ್ಟಿಯಾದರೂ ತುಟಿ ಸುಡದ ಸಿಗರೇಟ್ !

Update: 2017-07-18 04:17 GMT

ಹೊಸದಿಲ್ಲಿ, ಜು. 18: ಜಿಎಸ್‌ಟಿ ವ್ಯವಸ್ಥೆಯಡಿ ಕಡಿಮೆ ತೆರಿಗೆ ದರ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಸಿಗರೇಟ್ ಮೇಲೆ ವಿಧಿಸುವ ಸೆಸ್ ಹೆಚ್ಚಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ. ಇದರಿಂದಾಗಿ ಸಿಗರೇಟ್ ಉತ್ಪಾದಕರಿಗೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಿದ್ದ ವಾರ್ಷಿಕ 5000 ಕೋಟಿ ರೂ. ತೆರಿಗೆ ಉಳಿತಾಯದ ಪ್ರಯೋಜನ ಲಭ್ಯವಾಗುವುದಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ

ಜಿಎಸ್‌ಟಿ ವ್ಯವಸ್ಥೆ ಜಾರಿಗೊಂಡ ಬಳಿಕ ನಡೆದ ಮೊದಲ ಸಭೆಯಲ್ಲಿ ಸೆಸ್ ಹೆಚ್ಚಳ ನಿರ್ಧಾರ ಕೈಗೊಳ್ಳಲಾಗಿದೆ. ಆದಾಗ್ಯೂ ಸಿಗರೇಟ್‌ನ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

ಆರಂಭದಲ್ಲಿ ಗರಿಷ್ಠ ಎಂದರೆ ಶೇಕಡ 28ರಷ್ಟು ಜಿಎಸ್‌ಟಿ ತೆರಿಗೆಯನ್ನು ಸಿಗರೇಟ್ ಮೇಲೆ ವಿಧಿಸಲಾಗಿತ್ತು. ಇದಲ್ಲದೆ ಜಿಎಸ್‌ಟಿ ವ್ಯವಸ್ಥೆ ಆರಂಭದಿಂದ ರಾಜ್ಯಗಳಿಗಾಗುವ ನಷ್ಟವನ್ನು ಭರ್ತಿ ಮಾಡುವ ನಿಧಿ ಸ್ಥಾಪಿಸುವ ಸಲುವಾಗಿ ಹೆಚ್ಚುವರಿ ಸೆಸ್ ವಿಧಿಸಲಾಗಿತ್ತು. ಸಿಗರೇಟ್ ಮೌಲ್ಯದ ಶೇಕಡ 5ರ ಸೆಸ್ ಜತೆಗೆ ಸಿಗರೇಟ್‌ನ ಉದ್ದವನ್ನು ಆಧರಿಸಿ, 1000 ಸಿಗರೇಟ್‌ಗಳಿಗೆ ಹೆಚುವರಿ ದರ ನಿಗದಿಪಡಿಸಲಾಗಿತ್ತು ಎಂದು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಜೇಟ್ಲಿ ವಿವರಿಸಿದರು.

ಇದೀಗ ಜಿಎಸ್‌ಟಿ ದರ ಶೇಕಡ 28 ಮತ್ತು ಒಟ್ಟು ಮೌಲ್ಯದ ಶೇಕಡ 5ರಷ್ಟು ಸೆಸ್ ಮುಂದುವರಿಯಲಿದ್ದು, 1000 ಸಿಗರೇಟ್‌ಗಳ ಮೇಲೆ ವಿಧಿಸುತ್ತಿದ್ದ ದರದಲ್ಲಿ 485- 792 ರೂ. ಹೆಚ್ಚಳ ಮಾಡಲಾಗಿದೆ ಎಂದು ಜೇಟ್ಲಿ ವಿವರಿಸಿದ್ದಾರೆ.

65 ಮಿಲಿಮೀಟರ್ ಉದ್ದದ 1000 ಸಿಗರೇಟ್‌ಗಳ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು 1,591 ರೂ.ಗಳಿಂದ 2,076 ರೂ.ಗಳಿಗೆ ಹೆಚ್ಚಲಿದೆ. ಫಿಲ್ಟರ್ ಮಾಡದ 65ರಿಂದ 70 ಮಿಲಿಮೀಟರ್ ಉದ್ದದ ಸಿಗರೇಟ್‌ಗಳಿಗೆ ಹೊಸ ಸುಂಕ ದರ ಮೌಲ್ಯದ ಶೇಕಡ 5 ಮತ್ತು 1000 ಸಿಗರೇಟ್‌ಗಳಿಗೆ 3,668 ರೂ. ಆಗಲಿದೆ. ಈ ಹಿಂದೆ ಇದು ಶೇಕಡ 5 ಮತ್ತು 2,876 ರೂ. ಆಗಿತ್ತು.

ಹಿಂದೆ ಇದ್ದ ಕೇಂದ್ರೀಯ ಅಬ್ಕಾರಿ ತೆರಿಗೆ, ರಾಜ್ಯ ಮೌಲ್ಯವರ್ಧಿತ ತೆರಿಗೆ ಮತ್ತು ಇತರ ಎಲ್ಲ ಸೆಸ್‌ಗಳ ದರಕ್ಕಿಂತ ಜಿಎಸ್‌ಟಿ ಹಾಗೂ ಸೆಸ್ ದರ ಕಡಿಮೆಯಾದ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಇದರಿಂದಾಗಿ ವಾರ್ಷಿಕ 5 ಸಾವಿರ ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ. ಇಲ್ಲದಿದ್ದರೆ ಈ ಲಾಭ ಉತ್ಪಾದನಾ ಕಂಪನಿಗಳ ಪಾಲಾಗುತ್ತಿತ್ತು ಇಲ್ಲವೇ ಸಿಗರೇಟ್ ದರ ಇಳಿಕೆಯಾಗುತ್ತಿತ್ತು ಎಂದು ಜೇಟ್ಲಿ ಅಂಕಿ ಅಂಶ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News