ಕೋರ್ಟ್‌ನಲ್ಲಿ ಮುಖಭಂಗ: ಬಿಜೆಪಿ ಮುಖಂಡರ ರಾಜೀನಾಮೆ

Update: 2017-07-19 04:49 GMT

ಚಂಡೀಗಢ, ಜು.19: ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ನೇಮಕ ಮಾಡಿದ್ದ ನಾಲ್ಕು ಮಂದಿ ಮುಖ್ಯ ಸಂಸದೀಯ ಕಾರ್ಯದರ್ಶಿಗಳ ನೇಮಕಾತಿಯನ್ನು ಪಂಜಾಬ್- ಹರ್ಯಾಣ ಹೈಕೋರ್ಟ್ ರದ್ದು ಮಾಡಿದ್ದರಿಂದ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಬಿಜೆಪಿ, ನಾಲ್ವರ ರಾಜೀನಾಮೆಗೆ ಸೂಚನೆ ನೀಡಿದೆ.

ಹರ್ಯಾಣದ ಮುಖ್ಯ ಸಂಸದೀಯ ಕಾರ್ಯದರ್ಶಿಗಳಾದ ಶ್ಯಾಮ್‌ಸಿಂಗ್, ಭಕ್ಷೀಸ್‌ಸಿಂಗ್ ವಿರ್ಕ್, ಸೀಮಾ ತ್ರಿಖಾ ಹಾಗೂ ಕಮಲ್ ಗುಪ್ತಾ ಅವರ ರಾಜೀನಾಮೆಗೆ ಸೂಚಿಸಿರುವ ಪಕ್ಷದ ಮುಖಂಡರು, ಹೈಕೋರ್ಟ್ ನಿರ್ಧಾರವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸದಿರಲು ನಿರ್ಧರಿಸಿದ್ದಾರೆ.

ಮುಖ್ಯ ಸಂಸದೀಯ ಕಾರ್ಯದರ್ಶಿಗಳ ನೇಮಕಾತಿಯನ್ನು ರದ್ದುಪಡಿಸಿ ಆದೇಶ ನೀಡಿದ್ದ ಹೈಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ, ತನ್ನ ಆದೇಶಕ್ಕೆ ಮೂರು ವಾರ ತಡೆ ನೀಡಿ, ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತ್ತು. ಆದರೆ ಮೇಲ್ಮನವಿ ಸಲ್ಲಿಸದಿರಲು ಪಕ್ಷ ನಿರ್ಧರಿಸಿ, ಸಿಪಿಎಸ್‌ಗಳ ರಾಜೀನಾಮೆಗೆ ಸೂಚನೆ ನೀಡಿದೆ.

ಖಟ್ಟರ್ ಸರ್ಕಾರ, 2015ರ ಜುಲೈನಲ್ಲಿ ಮುಖ್ಯ ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಿದ್ದ ನಾಲ್ಕು ಮಂದಿ ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ಸೂಚನೆಯಂತೆ ರಾಜೀನಾಮೆ ನೀಡಿದ್ದಾಗಿ ಬಂಧೀಖಾನೆ, ಕಂದಾಯ ಹಾಗೂ ಪುನರ್ವಸತಿ ಇಲಾಖೆಗಳ ಸಿಪಿಎಸ್ ಆಗಿರುವ ಶ್ಯಾಮ್‌ಸಿಂಗ್ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News