ವೈದ್ಯಕೀಯ, ಎಂಜಿನಿಯರಿಂಗ್, ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ: ಸಂಪುಟ ಆಸ್ತು

Update: 2017-07-19 15:08 GMT

ಬೆಂಗಳೂರು, ಜು. 19: ಪ್ರಸಕ್ತ ಸಾಲಿನಲ್ಲಿ ಸರಕಾರಿ ಹಾಗೂ ಅನುದಾನಿತ ವೈದ್ಯಕೀಯ, ಎಂಜಿನಿಯರಿಂಗ್, ಪದವಿ, ಪಾಲಿಟೆಕ್ನಿಕ್ ಕಾಲೇಜು ಪ್ರವೇಶ ಪಡೆದು ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಾರ್ಷಿಕ 2.50ಲಕ್ಷ ರೂ.ಗಿಂತ ಕಡಿಮೆ ಆದಾಯ ಮಿತಿ ಇರುವ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.

ಬುಧವಾರ ವಿಧಾನಸಭೆ ಸಂಪುಟ ಸಭಾ ಮಂದಿರದಲ್ಲಿ ಸಿಎಂ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇಲ್ಕಂಡ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಜಯಚಂದ್ರ ತಿಳಿಸಿದರು. ಆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 300 ಕೋಟಿ ರೂ.ವೆಚ್ಚದಲ್ಲಿ ರಾಜ್ಯದಲ್ಲಿನ 1.50ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲಾಗುವುದು ಎಂದರು.

ಬರದ ಮೇಲೆ ಬರೆ..! ಬರ ಪೀಡಿತ ಪ್ರದೇಶ ಎಂದು ಘೋಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು ಎಂದು ಅವರು ವಿವರಿಸಿದರು.

ಈ ಹಿಂದೆ ಸತತವಾಗಿ 4 ವಾರ ಮಳೆ ಇಲ್ಲದೆ ಒಣ ಹವೆ ಇದ್ದಲ್ಲಿ ಬರ ಪೀಡಿತ ಪ್ರದೇಶ ಎಂದು ಘೋಷಿಸಬಹುದಾಗಿತ್ತು. ಆದರೆ, ಇದೀಗ ಕೇಂದ್ರ ಹೊಸ ಮಾರ್ಗ ಸೂಚಿ ನಿಗದಿಪಡಿಸಿದ್ದು, ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದ ಮಳೆಯಾಗಿರಬೇಕು. ಅಂತರ್ಜಲದ ಪ್ರಮಾಣದಲ್ಲಿನ ಕುಸಿತವನ್ನೂ ಗಮನದಲ್ಲಿಸಿಕೊಂಡು ಬರಪೀಡಿತ ಪ್ರದೇಶ ಘೋಷಿಸಲು ನಿರ್ಧರಿಸಬೇಕು. ಇದನ್ನು ನೋಡಿದರೆ ಕೇಂದ್ರ ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಯತ್ನಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

 ಕಳೆದ ಸಾಲಿನ ಹಿಂಗಾರು ಹಂಗಾಮಿನಲ್ಲಿ ರಾಜ್ಯದ 160 ತಾಲೂಕುಗಳು ಬರ ಪೀಡಿತ ಎಂದು ಘೋಷಿಸಲಾಗಿತ್ತು. ಆದರೆ, ಬದಲಾದ ಮಾರ್ಗಸೂಚಿಯ ನೂತನ ಮಾನದಂಡಗಳನ್ನು ಅನ್ವಯಿಸಿದರೆ, ಬರ ಪೀಡಿತ ಎಂದು ಘೋಷಿಸಲು 38 ತಾಲೂಕುಗಳು ಮಾತ್ರ ಅರ್ಹತೆ ಪಡೆಯುತ್ತವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮೇಲೆ ಉಂಟಾಗುವ ಪರಿಣಾಮದ ಸಮಗ್ರ ಚಿತ್ರಣವನ್ನು ವರಿಸಿ ಬದಲಾವಣೆ ಮಾಡಿರುವ ಮಾರ್ಗಸೂಚಿಗಳ ಮರು-ಪರಿಶೀಲನೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿತು ಎಂದು ಅವರು ವಿವರಿಸಿದರು.

ಮಳೆ ಕೊರತೆ: ಜೂನ್ ಮತ್ತು ಜುಲೈ ತಿಂಗಳಲ್ಲಿ ಮಲೆನಾಡು ಪ್ರದೇಶವನ್ನೂ ಒಳಗೊಂಡಂತೆ ರಾಜ್ಯದೆಲ್ಲೆಡೆ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ಕರಾವಳಿ, ಕೊಡಗು, ಮಲೆನಾಡಿನ ಕೆಲ ಪ್ರದೇಶಗಳಲ್ಲಿ ಎರಡು ದಿನಗಳಿಂದ ಮಳೆ ಆಗುತ್ತಿರುವುದು ನೆಮ್ಮದಿ ತಂದಿದೆ. ತುಮಕೂರು, ಹಾಸನದಲ್ಲಿ ಪ್ರಾರಂಭಿಸಲಾಗಿದ್ದ ಗೋಶಾಲೆಗಳು ಸ್ಥಗಿತಗೊಂಡಿವೆೆ. ಆದರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಗೋಶಾಲೆಗಳು ನಡೆಯುತ್ತಿವೆ. ಹೈನುಗಾರಿಕೆಯಲ್ಲಿ ತೊಡಗಿರುವವರು ನೀರಾವರಿ ಪಂಪ್‌ಸೆಟ್‌ಗಳ ನೆರವಿನಿಂದ ಮೇವು ಉತ್ಪಾದಿಸಲು ಬೀಜಗಳನ್ನು ವಿತರಿಸಲಾಗಿದೆ ಎಂದರು.

ಪರಿಹಾರದ ಬೇಡಿಕೆ:  ಇತ್ತೀಚೆಗೆ ಆಶಾಡ ಗಾಳಿಯಿಂದ ಉಂಟಾಗಿರುವ ಅನಾಹುತಕ್ಕೂ ಪರಿಹಾರ ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಮನ ಸಲ್ಲಿಸಲು ಸಂಪುಟ ತೀರ್ಮಾನಿಸಿದೆ. ತೆಂಗು ಇಳುವರಿಯಲ್ಲಿ ಶೇ.33ರಷ್ಟು ಅಂದರೆ 1.20 ಲಕ್ಷ ಹೆಕ್ಟೇರ್ ಹಾಗೂ ಅಡಿಕೆ ಇಳುವರಿಯಲ್ಲಿ ಶೇ.31ರಷ್ಟು ಅಂದರೆ 39 ಸಾವಿರ ಹೆಕ್ಟೇರ್ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News