'ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದ ಕತ್ತಿ ಕಾಳಗ ದೃಶ್ಯ ಚಿತ್ರೀಕರಣದಲ್ಲಿ ಕಂಗನಾಗೆ ಕತ್ತಿಯೇಟು: ಆಸ್ಪತ್ರೆಗೆ ದಾಖಲು

Update: 2017-07-20 07:35 GMT

ಹೊಸದಿಲ್ಲಿ, ಜು. 20: ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರ ಮಣಿಕರ್ಣಿಕಾ- 'ದಿ ಕ್ವೀನ್ ಆಫ್ ಝಾನ್ಸಿ' ಚಿತ್ರಕ್ಕಾಗಿ ಕತ್ತಿ ಕಾಳಗದ ಚಿತ್ರೀಕರಣದ ಸಂದರ್ಭ ನಟಿ ಕಂಗನಾ ರನೌತ್ ಗೆ ಕತ್ತಿಯೇಟು ಹಣೆಗೆ ತಗುಲಿ ಆಕೆ ತೀವ್ರ ಗಾಯ ಹಾಗೂ ರಕ್ತಸ್ರಾವದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಕೆ ಅಪೋಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಹಣೆಗೆ 15 ಹೊಲಿಗೆಗಳನ್ನು ವೈದ್ಯರು ಹಾಕಿದ್ದಾರಲ್ಲದೆ ಆಕೆ ಮುಂದಿನ ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಉಳಿಯಬೇಕೆಂದು ವೈದ್ಯರು ಹೇಳಿದ್ದಾರೆ.

ಚಿತ್ರ ನಿರ್ಮಾಪಕ ಕಮಲ್ ಜೈನ್ ಅವರ ಪ್ರಕಾರ ಕಂಗನಾ ಅವರು ಈ ತೀವ್ರ ಕತ್ತಿ ಕಾಳಗದ ದೃಶ್ಯಕ್ಕೆ ಬಾಡಿ ಡಬಲ್ ಉಪಯೋಗಿಸಲು ನಿರಾಕರಿಸಿದ್ದರು. ಆದರೆ ದೃಶ್ಯಕ್ಕಾಗಿ ಹಲವಾರು ಸುತ್ತಿನ ಅಭ್ಯಾಸ ನಡೆಸಿದ ಹೊರತಾಗಿಯೂ ಚಿತ್ರೀಕರಣದ ವೇಳೆ ನಿಹಾರ್ (ಪಾಂಡ್ಯ) ಆಕೆಯತ್ತ ಕತ್ತಿ ಬೀಸಿದಾಗ ಆಕೆ ಕೂಡಲೇ ತಲೆಯನ್ನು ಬಾಗಿಸಬೇಕಿತ್ತಿ. ಕಂಗನಾ ತಲೆ ಬಗ್ಗಿಸಿದರೂ ಕತ್ತಿ ಆಕೆಯ ಹಣೆಗೆ ಕ್ಷಣಮಾತ್ರದಲ್ಲಿ ತಾಗಿ ರಕ್ತ ಜಿನುಗಿತ್ತು. ಶೂಟಿಂಗ್ ಸ್ಥಳದಿಂದ ಆಸ್ಪತ್ರೆಗೆ 30 ನಿಮಿಷಗಳ ಹಾದಿಯಿದ್ದರೂ ನೋವು ಹಾಗೂ ರಕ್ತಸ್ರಾವದ ಹೊರತಾಗಿಯೂ ಕಂಗನಾ ಧೈರ್ಯದಿಂದಿದ್ದರು. ನಿಹಾರ್ ಆಕೆಯಲ್ಲಿ ಕ್ಷಮೆಯಾಚಿಸಿದರೂ ಆತನನ್ನು ಕಂಗನಾ ಸಮಾಧಾನ ಪಡಿಸಿದರು ಎಂದು ಜೈನ್ ಹೇಳಿದ್ದಾರೆ.

ಈ ಅವಘಡದಿಂದಾಗಿ ಕಂಗನಾ ಹಣೆಯಲ್ಲಿ ಕಲೆ ಮೂಡಬಹುದಾದರೂ, ಈ ಚಿತ್ರಕ್ಕಾಗಿ ಈ ಕಲೆಯೊಂದಿಗೆಯೇ ಚಿತ್ರೀಕರಣ ನಡೆಸುವುದಾಗಿ ಕಂಗನಾ ಹೇಳಿದ್ದಾರೆನ್ನಲಾಗಿದೆ.

‘‘ಝಾನ್ಸಿ ರಾಣಿ ದಿಟ್ಟ ಹೋರಾಟಗಾರ್ತಿಯಾಗಿದ್ದಳು. ನಾನು ಈ ಕಲೆಯೊಂದಿಗೆ ಹೆಮ್ಮೆಯಿಂದ ಝಾನ್ಸಿ ರಾಣಿಯಾಗಿ ಕಾಣಿಸುತ್ತೇನೆ,’’ ಎಂದು ಕಂಗನಾ ಹೇಳಿದ್ದಾರೆಂದು ಮೂಲವೊಂದು ತಿಳಿಸಿದೆ.

ಮುಂದಿನ ವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿರುವ ಕಂಗನಾ ಚಿತ್ರೀಕರಣ ಪೂರ್ತಿಗೊಂಡ ನಂತರ ಕಾಸ್ಮೆಟಿಕ್ ಸರ್ಜರಿಗೊಳಗಾಗಬಹುದೆಂದು ನಿರೀಕ್ಷಿಸಲಾಗಿದೆ. ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ ಮುಂದಿನ ವರ್ಷದ ಎಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News