ಬಿಜೆಪಿಯ ಜಾತಿ, ಧರ್ಮದ ರಾಜಕೀಯವನ್ನು ತಡೆಯೋಣ: ಕೆಪಿಸಿಸಿ ಸಭೆಯಲ್ಲಿ ಸಿದ್ದರಾಮಯ್ಯ

Update: 2017-07-21 11:57 GMT

ಬೆಂಗಳೂರು, ಜು.21: ಸರ್ಕಾರವನ್ನು ಟೀಕಿಸಲು ಬಿಜೆಪಿಯವರರಿಗೆ ಯಾವುದೇ ವಿಷಯಗಳಿಲ್ಲ. ಹೀಗಾಗಿ ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಅದನ್ನು ತಡೆಯಲು ನಮ್ಮವರು ಸಜ್ಜಾಗಬೇಕು. ಇದು ಅತ್ಯಂತ ಅವಶ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಮುಖಂಡರಿಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ನಾವು ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸೋಣ. ಹೇಳಿಕೊಳ್ಳಲು ಬಿಜೆಪಿಯವರು ಯಾವುದೇ ಸಾಧನೆ ಮಾಡಿಲ್ಲ. ಹೀಗಾಗಿ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಾರೆ ಎಂದು ಸಿದ್ದರಾಮಯ್ಯ ಕಟಕಿಯಾಡಿದರು.

ಅಧಿಕಾರದಲ್ಲಿ ಇದ್ದಾಗ ದಲಿತರಿಗೆ ಬಿಜೆಪಿ ಏನೂ ಕೊಡುಗೆ ನೀಡಿಲ್ಲ. ಈಗ ದಲಿತರ ಮನೆಗೆ ಭೇಟಿ ನೀಡುವ ನಾಟಕ ಆಡುತ್ತಿದ್ದಾರೆ. ದಲಿತರ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇಲ್ಲ. ಸಾಮಾಜಿಕ ನ್ಯಾಯಕ್ಕೆ, ಜಾತ್ಯತೀತ ವಾದಕ್ಕೆ ಅವರು ಯಾವಾಗಲೂ ವಿರುದ್ಧ. ಆ ಬದ್ಧತೆ ಇರುವುದು ಕಾಂಗ್ರೆಸಿಗೆ ಮಾತ್ರ ಎಂದರು.

*ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಬಿಜೆಪಿ ರಾಜಕೀಯ
ಇಂದಿರಾ ಕ್ಯಾಂಟೀನ್ ವಿಚಾರದಲ್ಲೂ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಬಡವರಿಗಾಗಿ ಮಾಡಿರುವ ಯೋಜನೆ ವಿಚಾರದಲ್ಲೂ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಸಿದ್ದರಾಮಯ್ಯ, ಇದು ಚುನಾವಣಾ ವರ್ಷ. ಹೀಗಾಗಿ ಪದಾಧಿಕಾರಿಗಳ ಮೇಲೆ ನಿರೀಕ್ಷೆ ಹೆಚ್ವಿದೆ. ನಮ್ಮ ಮುಂದೆ ಇರುವ ಸವಾಲು ಎಂದರೆ ಪಕ್ಷವನ್ನು ಬಲಪಡಿಸುವುದು, ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿರಲಿ ಎಂದರು.

 ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News