ಅಂಬೇಡ್ಕರ್ ಋಣ ಕೋವಿಂದ್ ಮೇಲಿದೆ

Update: 2017-07-21 18:43 GMT

‘‘... ಸಂವಿಧಾನ ಎಷ್ಟೇ ಒಳ್ಳೆಯದಾಗಿರಲಿ, ಅದನ್ನು ಜಾರಿಗೊಳಿಸುವ ಜನ ಕೆಟ್ಟವರಾದರೆ ಸಂವಿಧಾನ ಅಪ್ರಯೋಜಕವಾಗುತ್ತದೆ. ಒಂದು ಕೆಟ್ಟ ಸಂವಿಧಾನವೂ ಸಹ ಉತ್ತಮರ ಕೈಗಳಲ್ಲಿ ಜನಹಿತಕಾರಿಯೇ ಆಗಬಹುದು’’ 14ನೆ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗಿರುವ ರಾಮ್‌ನಾಥ್ ಕೋವಿಂದ್ ಅವರು ಅಂಬೇಡ್ಕರ್ ಅವರ ಮೇಲಿನ ಮಾತನ್ನು ಎದೆಯೊಳಗಿಟ್ಟುಕೊಂಡೇ ತನ್ನ ಸ್ಥಾನವನ್ನು ಸ್ವೀಕರಿಸಬೇಕಾಗಿದೆ.

ಸಾಧಾರಣವಾಗಿ ರಾಷ್ಟ್ರಪತಿ ಸ್ಥಾನವೆನ್ನುವಾಗ ಅದನ್ನು ‘ರಬ್ಬರ್ ಸ್ಟಾಂಪ್’ ಎಂದು ವ್ಯಂಗ್ಯವಾಡುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಆದರೆ ಯಾವುದೇ ಸ್ಥಾನ ಅದರದ್ದೇ ಆದ ಕೆಲವು ದೌರ್ಬಲ್ಯಗಳ ಜೊತೆಗೇ ಘನತೆ, ಸಾಮರ್ಥ್ಯವನ್ನೂ ಹೊಂದಿರುತ್ತದೆ. ಆ ಸ್ಥಾನದ ಮೇಲೆ ಕುಳಿತವನ ವ್ಯಕ್ತಿತ್ವ, ಮುತ್ಸದ್ದಿತನದಿಂದಲೇ ಆ ಸ್ಥಾನದ ಮಹತ್ವ ಜಗತ್ತಿಗೆ ಪರಿಚಯವಾಗುತ್ತದೆ. ಇದು ರಾಷ್ಟ್ರಪತಿಯ ಸ್ಥಾನಕ್ಕಷ್ಟೇ ಸೀಮಿತವಾಗಬೇಕಾಗಿಲ್ಲ.

ಚುನಾವಣಾ ಆಯೋಗಕ್ಕಿರುವ ಶಕ್ತಿಯನ್ನು ರಾಜಕಾರಣಿಗಳಿಗೆ ಮೊತ್ತ ಮೊದಲ ಬಾರಿಗೆ ಪರಿಚಯಿಸಿಕೊಟ್ಟವರು ಟಿ. ಎನ್. ಶೇಷನ್. ಈ ದೇಶದಲ್ಲಿ ಚುನಾವಣಾ ಆಯೋಗವೆನ್ನುವುದೊಂದಿದೆ ಮತ್ತು ಅದಕ್ಕೂ ಕೆಲವು ಅಧಿಕಾರಗಳಿವೆ ಎನ್ನುವುದು ಶೇಷನ್ ಅವರಿಂದ ದೇಶಕ್ಕೆ ಗೊತ್ತಾಯಿತು. ಅಂದರೆ ತನ್ನ ಸ್ಥಾನಕ್ಕಿರುವ ಅಧಿಕಾರವನ್ನು ಸರ್ವರೀತಿಯಲ್ಲಿ ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಅದರ ಘನತೆಯನ್ನು ಅವರು ಎತ್ತಿ ಹಿಡಿದರು. ಕರ್ನಾಟಕಕ್ಕೆ ಬಂದರೆ, ಇಲ್ಲಿ ಲೋಕಾಯುಕ್ತ ಸ್ಥಾನವೆನ್ನುವುದು ರಾಜಕಾರಣಿಗಳ ಪಂಜರದ ಗಿಣಿಯಾಗಿತ್ತು. ಆದರೆ ಮೊದಲ ಬಾರಿಗೆ ವೆಂಕಟಾಚಲಯ್ಯ ಮೂಲಕ ಆ ಸ್ಥಾನ ಮಾಧ್ಯಮಗಳಲ್ಲಿ ಸುದ್ದಿಯಾಗತೊಡಗಿತು. ಅಧಿಕಾರಿಗಳೂ ಲೋಕಾಯುಕ್ತ ಶಕ್ತಿಗೆ ಅಂಜತೊಡಗಿದರು. ಸಂತೋಷ್ ಹೆಗ್ಡೆ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಹೇಗೆ ಲೋಕಾಯುಕ್ತ ಒಬ್ಬ ಮುಖ್ಯಮಂತ್ರಿಯನ್ನೇ ಕೆಳಗಿಳಿಸಿತು ಎನ್ನುವುದನ್ನು ನಾವು ನೋಡಿದ್ದೇವೆ.

ಅಂತೆಯೇ, ರಾಷ್ಟ್ರಪತಿ ಸ್ಥಾನದ ಘನತೆ ಏನು, ಅಧಿಕಾರವೇನು ಎನ್ನುವುದನ್ನು, ಅದನ್ನು ಏರಿದವರ ವ್ಯಕ್ತಿತ್ವದ ಆಧಾರದ ಮೇಲೆಯೇ ನಿರ್ಣಯಿಸಬೇಕಾಗುತ್ತದೆ. ಆದುದರಿಂದ ರಾಷ್ಟ್ರಪತಿಯಾಗಿ ಎಷ್ಟರಮಟ್ಟಿಗೆ ಅದರ ಸೀಮಿತ ಅಧಿಕಾರಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಕೋವಿಂದ್ ಅವರ ಯಶಸ್ಸು ಮತ್ತು ದೇಶದ ಒಳಿತು ನಿಂತಿದೆ. ದಲಿತ ನಾಯಕನೊಬ್ಬ ರಾಷ್ಟ್ರಪತಿಯಂತಹ ಉನ್ನತ ಸ್ಥಾನಕ್ಕೇರಿದ ಈ ಹೊತ್ತಿನಲ್ಲಿ ಅದಕ್ಕಾಗಿ ಸಂಭ್ರಮ ಪಡಬೇಕೋ ಬೇಡವೋ ಎಂಬ ಸ್ಥಿತಿಯಲ್ಲಿ ನಿಂತಿದೆ ದೇಶದ ತಳಸ್ತರದ ಜನತೆ. ಕೋವಿಂದ್ ಅವರಿಗೆ ದಲಿತ ಹಿನ್ನೆಲೆಯಿದ್ದಿರಬಹುದು, ಆದರೆ ಅವರನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿರುವುದು ದಲಿತ ವಿರೋಧಿ ವೌಲ್ಯಗಳ ತಳಹದಿಯಲ್ಲಿ ನಿಂತಿರುವ ಆರೆಸ್ಸೆಸ್.

ಮನುವಾದವನ್ನು ಪುನರ್ ಸ್ಥಾಪಿಸುವುದನ್ನೇ ತನ್ನ ಅಜೆಂಡಾ ಮಾಡಿಕೊಂಡಿರುವ, ಅಂಬೇಡ್ಕರ್ ಆಶಯವಾಗಿರುವ ಮೀಸಲಾತಿಯನ್ನು ಯಾವ ಕಾರಣಕ್ಕೂ ಒಪ್ಪಲು ಸಿದ್ಧವಿಲ್ಲದ, ಜಾತಿ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಆರೆಸ್ಸೆಸ್ ದಲಿತನೊಬ್ಬನನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ ಎಂದರೆ, ಸಂಭ್ರಮ ಪಡಲು ಇರುವುದಕ್ಕಿಂತ ಆತಂಕ ಪಡುವುದಕ್ಕೆ ಸಾಕಷ್ಟು ಕಾರಣಗಳಿವೆ. ರಾಮ್‌ನಾಥ್ ಅವರಿಗೆ ದಲಿತ ಹಿನ್ನೆಲೆಯಿರಬಹುದು. ಆದರೆ ಯಾವುದೇ ದಲಿತ ಆಂದೋಲನವನ್ನು ರೂಪಿಸಿರುವ ಹಿನ್ನೆಲೆ ಅವರಿಗಿಲ್ಲ. ಈ ದೇಶದಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದಾಗ ಅದರ ವಿರುದ್ಧ ಅವರು ಪ್ರಬಲವಾಗಿ ಧ್ವನಿಯೆತ್ತಿದ ಉದಾಹರಣೆಯಿಲ್ಲ. ಆರೆಸ್ಸೆಸ್‌ಗೆ ಕೇವಲ ಅವರ ದಲಿತ ಹೆಸರು ಮತ್ತು ಜಾತಿ ಬೇಕಾಗಿತ್ತೇ ಹೊರತು, ದಲಿತ ಪರವಾಗಿರುವ ಚಿಂತನೆ ಅಲ್ಲ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕಾಗಿದೆ. ಆರೆಸ್ಸೆಸ್‌ನ ಹಿನ್ನೆಲೆಯಿಂದ ಕೋವಿಂದ್ ಬಂದಿದ್ದಾರೆ ಎಂದರೆ, ಅವರು ಆ ಸಂಘಟನೆಯ ಜಾತೀಯತೆಯ ನಿಲುವಿಗೆ ತಲೆ ಬಾಗಿದ್ದಾರೆ ಎಂದು ಅರ್ಥ.

ಅದು ಸ್ಪಷ್ಟವಾದ ಬಳಿಕವೇ ಅವರನ್ನು ಈ ಮಹತ್ವದ ಸ್ಥಾನಕ್ಕೆ ಆರಿಸಲಾಗಿದೆ. ಇಂದು ದೇಶದಲ್ಲಿ ದಲಿತ ಸಮುದಾಯ ಸಂಘಟಿತವಾಗಿ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯದೇ ಇದ್ದಿದ್ದರೆ, ರಾಜಕೀಯವಾಗಿ ಸಬಲ ಶಕ್ತಿಗಳಾಗದೇ ಇದ್ದಿದ್ದರೆ ಬಿಜೆಪಿ ಒಬ್ಬ ದಲಿತ ಅಭ್ಯರ್ಥಿಯನ್ನು ರಾಷ್ಟ್ರಪತಿ ಸ್ಥಾನಕ್ಕೆ ಖಂಡಿತವಾಗಿಯೂ ಆರಿಸುತ್ತಿರಲಿಲ್ಲ. ಅಂದರೆ ದಲಿತರ ವಿರುದ್ಧ ದಲಿತರನ್ನೇ ಮುಖಾಮುಖಿಯಾಗಿಸುವ ಉದ್ದೇಶದಿಂದ ಆರೆಸ್ಸೆಸ್ ಕೋವಿಂದ್ ಅವರನ್ನು ಅಭ್ಯರ್ಥಿಯನ್ನಾಗಿ ಆರಿಸಿದೆ. ಈ ಕಾರಣಕ್ಕಾಗಿಯೇ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸುವ ಕೋವಿಂದ್ ಅವರ ಹೊಣೆಗಾರಿಕೆ, ಸವಾಲು ಬಹುದೊಡ್ಡದು. ಒಬ್ಬ ದಲಿತನನ್ನೇ ಆರೆಸ್ಸೆಸ್ ಮುಂದಿಟ್ಟಿದೆ ಎಂದರೆ ಅದರರ್ಥ, ಮುಂದಿನ ದಿನಗಳಲ್ಲಿ ದಲಿತ ವಿರೋಧಿ ನಿಲುವುಗಳನ್ನು ಜಾರಿಗೊಳಿಸಲು ಆರೆಸ್ಸೆಸ್ ಕೋವಿಂದ್ ಅವರನ್ನೇ ಗುರಾಣಿಯಾಗಿ ಬಳಸಿಕೊಳ್ಳಲಿದೆ.

ಇದು ಒಂದು ರೀತಿ, ಮೀನು ಹಿಡಿಯುವುದಕ್ಕಾಗಿ ಗಾಳದಲ್ಲಿ ಎರೆಹುಳವನ್ನು ಸಿಲುಕಿಸಿದಂತೆಯೇ ಆಗಿದೆ. ಮೀನಿಗೆ ಎರೆಹುಳವನ್ನು ಆಹಾರವಾಗಿ ಕೊಡುವಂತೆ ನಟಿಸಿ ಮೀನನ್ನು ಬಲಿ ಹಾಕುವ ತಂತ್ರವನ್ನು ಆರೆಸ್ಸೆಸ್ ಅನುಸರಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದುದರಿಂದ ಈ ಎರೆಹುಳದ ಆಸೆಯಿಂದ ದಲಿತ ಸಮುದಾಯ ತಮ್ಮ ಹಿತಾಸಕ್ತಿಯನ್ನು ಬಲಿಕೊಟ್ಟರೆ ಭವಿಷ್ಯದಲ್ಲಿ ಅದರ ಮೇಲೆ ಬೀರುವ ಪರಿಣಾಮ ಬಹುದೊಡ್ಡದಾಗಬಹುದು. ಇಂದು ಕೋವಿಂದ್ ಅವರನ್ನು ರಾಷ್ಟ್ರಪತಿಯಂತಹ ಉನ್ನತ ಸ್ಥಾನಕ್ಕೇರಿಸಿರುವುದು ಆರೆಸ್ಸೆಸ್ ಅಥವಾ ಬಿಜೆಪಿ ಸರಕಾರವಲ್ಲ. ಬದಲಿಗೆ ಅಂಬೇಡ್ಕರ್ ರಚಿಸಿರುವ ಸಂವಿಧಾನ ಎನ್ನುವುದನ್ನು ಕೋವಿಂದ್ ಅವರು ನೆನಪಲ್ಲಿಟ್ಟುಕೊಳ್ಳಬೇಕಾಗಿದೆ. ಇದೇ ಸಂದರ್ಭದಲ್ಲಿ ಆರೆಸ್ಸೆಸ್‌ಗೆ ಅಂಬೇಡ್ಕರ್ ಸಂವಿಧಾನದ ಮೇಲೆ ನಂಬಿಕೆಯಿಲ್ಲ ಎನ್ನುವುದೂ ಅವರ ಗಮನದಲ್ಲಿರಬೇಕು.

ಕೋವಿಂದ್‌ರಂತಹ ದಲಿತ ನಾಯಕನನ್ನೇ ಬಳಸಿ ಸಂವಿಧಾನದ ಆಶಯಗಳ ವಿರುದ್ಧ ಆರೆಸ್ಸೆಸ್ ದಾಳಿ ನಡೆಸಬಹುದು ಮತ್ತು ಈ ದಾಳಿಗೆ ಪ್ರಜಾಸತ್ತಾತ್ಮಕವಾಗಿ ಎದುರಾಗುವ ಪ್ರತಿದಾಳಿಯನ್ನು ಕೋವಿಂದ್ ಅವರನ್ನು ಮುಂದಿಟ್ಟು ಎದುರಿಸಬಹುದು. ಆದುದರಿಂದ, ಕೋವಿಂದ್ ಅವರು ರಾಷ್ಟ್ರಪತಿಯಾಗಿ ಆರೆಸ್ಸೆಸ್‌ನ ಹಿತಾಸಕ್ತಿಗಿಂತ ಸಂವಿಧಾನದ ಹಿತಾಸಕ್ತಿಯನ್ನು ಕಾಪಾಡಲು ಸರ್ವ ರೀತಿಯಲ್ಲಿ ಪ್ರಯತ್ನಿಸಿ ಸಂವಿಧಾನದ ಮೇಲಿರುವ ತನ್ನ ಋಣವನ್ನು ತೀರಿಸಬೇಕಾಗಿದೆ. ಈ ಹಿಂದೆ ದಲಿತ ಹಿನ್ನೆಲೆಯಿಂದ ಬಂದಿದ್ದ ಕೆ. ಆರ್.ನಾರಾಯಣನ್ ತಮ್ಮ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಸರಕಾರವನ್ನು ಎದುರು ಹಾಕಿಕೊಳ್ಳಲೂ ಅವರು ಹಿಂಜರಿದಿರಲಿಲ್ಲ. ಸದ್ಯದ ಸಂದರ್ಭದಲ್ಲಿ ಸಂವಿಧಾನ ಭಾರೀ ಅಪಾಯದಲ್ಲಿದೆ.

ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಾಶ ಮಾಡಿ ‘ಹಿಂದುತ್ವ’ದ ತಳಹದಿಯಲ್ಲಿ ದೇಶವನ್ನು ಪುನಃಸ್ಥಾಪಿಸುವ ಸಂಚೊಂದು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೋವಿಂದ್ ಮುಳ್ಳಿನ ಕುರ್ಚಿಯ ಮೇಲೆ ಕೂರಲು ಹೊರಟಿದ್ದಾರೆ. ಹೇಗೆ ಕಾಶ್ಮೀರದಲ್ಲಿ ಸೇನೆ ಕಾಶ್ಮೀರಿಯೊಬ್ಬನನ್ನು ಜೀಪಿಗೆ ಕಟ್ಟಿ ಪ್ರತಿಭಟನಾಕಾರರ ವಿರುದ್ಧ ಗುರಾಣಿಯಾಗಿ ಬಳಸಿಕೊಂಡಿತೋ, ಅಂತಹದೇ ಒಂದು ಕಾರ್ಯತಂತ್ರವನ್ನು ಆರೆಸ್ಸೆಸ್ ಕೂಡ ದೇಶದ ವಿರುದ್ಧ ಹಮ್ಮಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರಾಷ್ಟ್ರಪತಿಯೆನ್ನುವ ಕುರ್ಚಿಯಲ್ಲಿ ದಲಿತನನ್ನು ಕುಳ್ಳಿರಿಸಿ ಹಿಂಬದಿಯಿಂದ ದಲಿತರೆಡೆಗೆ, ಶೋಷಿತರೆಡೆಗೆ ಆರೆಸ್ಸೆಸ್ ಬಾಣ ಬಿಡುವ ಎಲ್ಲ ಸಾಧ್ಯತೆಗಳಿವೆ.

ಇಂತಹ ಸನ್ನಿವೇಶವನ್ನು ಎದುರಿಸಲು ಕೋವಿಂದ್ ಅವರು ಈಗಲೇ ಸಿದ್ಧತೆಯನ್ನು ನಡೆಸಬೇಕಾಗಿದೆ. ಆರೆಸ್ಸೆಸ್‌ನ ಸಂವಿಧಾನವಿರೋಧಿ ಸಂಚುಗಳನ್ನು ಸಮರ್ಥವಾಗಿ ಎದುರಿಸಿ, ವಿಫಲಗೊಳಿಸಿ ಸಂವಿಧಾನವನ್ನು ರಕ್ಷಿಸುವುದು ಅವರ ಮುಖ್ಯ ಗುರಿಯಾಗಬೇಕು. ಆ ಮೂಲಕ ಅಂಬೇಡ್ಕರ್ ಮತ್ತು ಸಂವಿಧಾನದ ಋಣವನ್ನು ಕೋವಿಂದ್ ತೀರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News