ನರ್ಸಿಂಗ್ ಕಾಲೇಜುಗಳು ಐಎನ್‌ಸಿ ಅನುಮತಿ ಪಡೆಯಬೇಕಾದ ಅಗತ್ಯವಿಲ್ಲ

Update: 2017-07-22 15:42 GMT

ಬೆಂಗಳೂರು, ಜು.22: ರಾಜ್ಯದಲ್ಲಿರುವ ನರ್ಸಿಂಗ್ ಕಾಲೇಜುಗಳಿಗೆ ಭಾರತೀಯ ಶುಶ್ರೂಷ ಪರಿಷತ್ತಿನ(ಐಎನ್‌ಸಿ) ಅನುಮತಿ ಪಡೆಯಬೇಕಾದ ಅವಶ್ಯಕತೆ ಇಲ್ಲದಿದ್ದರೂ ಅನಗತ್ಯ ಆದೇಶ ನೀಡಿ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ ಎಂದು ರಾಜ್ಯ ನರ್ಸಿಂಗ್ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟ ಆರೋಪಿಸಿದೆ.

ರಾಜ್ಯಾದ್ಯಂತ 440 ಡಿಪ್ಲೊಮ ನರ್ಸಿಂಗ್ ಸಂಸ್ಥೆಗಳು ಹಾಗೂ 340 ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಅಡಿಯಲ್ಲಿನ ಪದವಿ ಕಾಲೇಜುಗಳಿವೆ. ಇಷ್ಟಲ್ಲದೆ, ಕ್ರೈಸ್ತ ಹಾಗೂ ಅಲ್ಪಸಂಖ್ಯಾತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಈ ಶಿಕ್ಷಣ ಸಂಸ್ಥೆಗಳಿಂದ ವಾರ್ಷಿಕವಾಗಿ ಸಾವಿರಾರು ವಿದ್ಯಾರ್ಥಿಗಳು ನರ್ಸಿಂಗ್ ಮುಗಿಸಿಕೊಂಡು ಹೊರಹೋಗುತ್ತಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಎಸ್.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿರುವ ನರ್ಸಿಂಗ್ ಕೋರ್ಸ್ ಸಂಸ್ಥೆಗಳು ಭಾರತೀಯ ಶುಶ್ರೂಷ ಪರಿಷತ್ತು(ಐಎನ್‌ಸಿ)ನಿಂದ ಅನುಮತಿ ಪಡೆದ ರಾಜೀವ್‌ಗಾಂಧಿ ವಿಶ್ವವಿದ್ಯಾಲಯ ದಿಂದ ಬಿಎಸ್ಸಿ ಹಾಗೂ ಎಂಎಸ್ಸಿ ನರ್ಸಿಂಗ್ ಪದವಿ ಕಾಲೇಜುಗಳು ಹಾಗೂ ಡಿಪ್ಲೋಮೋ ನರ್ಸಿಂಗ್‌ಗೆ ಕರ್ನಾಟಕ ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಿಂದ ಅನುಮತಿ ಪಡೆಯುತ್ತವೆ. ಆದರೆ, ಐಎನ್‌ಸಿ ಕೇವಲ ಶೈಕ್ಷಣಿಕ ಅರ್ಹತೆ ದೃಢೀಕರಣ ಮಾತ್ರ ನೀಡುತ್ತದೆ ಎಂದು ಹೇಳಿದರು.

ಆದರೆ, ಇತ್ತೀಚಿಗೆ ಅಧಿಕಾರ ವಹಿಸಿಕೊಂಡ ಪರಿಷತ್ತಿನ ಅಧ್ಯಕ್ಷ ಟಿ.ದಿಲೀಪ್ ಕುಮಾರ್, ದೇಶದ ಎಲ್ಲ ನರ್ಸಿಂಗ್ ಕಾಲೇಜು ಮತ್ತು ಶಾಲೆಗಳು ಐಎನ್‌ಸಿನಿಂದ ಅನುಮತಿ ಪಡೆಯಬೇಕು ಎಂದು ಆದೇಶ ಹೊರಡಿಸಿ, ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. 1947ರ ಕಲಂ ಮತ್ತು ಸೆಕ್ಷನ್ 10 ಮತ್ತು 11 ಅನ್ವಯ ರಾಜ್ಯಗಳಲ್ಲಿರುವ ನರ್ಸಿಂಗ್ ಕಾಲೇಜು ಮತ್ತು ದ್ಯಾರ್ಥಿಗಳಿಗೆ ಆಯಾ ರಾಜ್ಯಗಳ ಸರಕಾರ ಮತ್ತು ಆರೋಗ್ಯ ವಿಶ್ವದ್ಯಾಲಯಗಳು ಮಾನ್ಯತೆ ಪತ್ರ ನೀಡುವ ಅಧಿಕಾರವಿದೆ ಎಂಬ ವಿಷಯವನ್ನು ಮರೆಮಾಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಣಮಟ್ಟದ ಪಠ್ಯ, ಶಿಕ್ಷಣ ಕೋರ್ಸ್‌ಗಳ ರಚನೆಯಷ್ಟೇ ಐಎನ್‌ಸಿ ಕೆಲಸ. ಆದರೆ, ಇಲ್ಲದ ನಿಯಮವನ್ನು ಸೃಷ್ಟಿಸುವ ಮೂಲಕ ಕಾನೂನು ಉಲ್ಲಂಘಿಸಿ ಕೆಲಸ ಮಾಡುತ್ತಿದೆ. ಒಂದು ವೇಳೆ ಎಲ್ಲ ನರ್ಸಿಂಗ್ ಕೋರ್ಸ್‌ಗಳಿಗೆ ಐಎನ್‌ಸಿ ಅನುಮತಿ ಮುಖ್ಯವೆಂದರೆ, ಮೊದಲು ಕಾಯ್ದೆ ತಿದ್ದುಪಡಿ ಮಾಡಲಿ ಎಂದ ಅವರು, ಕೂಡಲೇ ಐಎನ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಗೊಂದಲ ಮಾಹಿತಿಯನ್ನು ತೆಗೆಯಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News