ಮುಂಬೈ ಕಟ್ಟಡ ದುರಂತ: ತಾಯಿ-ಮಗಳ ಜೀವ ಉಳಿಸಿದ ಗಣೇಶನ ಭಾವಚಿತ್ರ!

Update: 2017-07-26 06:25 GMT

 ಮುಂಬೈ, ಜು.26: ಮಂಗಳವಾರ ದಿಢೀರ್ ಕುಸಿದು ಬಿದ್ದಿರುವ ಘಾಟ್‌ಕೋಪರ್‌ನ ಸಿದ್ದಿ ಸಾಯಿ ಹೌಸಿಂಗ್ ಸೊಸೈಟಿಯಲ್ಲಿ ನೆಲೆಸಿರುವ ತಾಯಿ-ಮಗಳು ಗಣೇಶನ ಫೋಟೊದಿಂದಾಗಿ ಜೀವ ಉಳಿಸಿಕೊಂಡಿದ್ದಾರೆ.

ಮಗಳನ್ನು ಶಾಲೆಯಿಂದ ಮನೆಗೆ ಕರೆ ತರಲು ಹೊರಟಿದ್ದ ತಾಯಿ ಮನೆಗೆ ಬರುವ ಹಾದಿಯಲ್ಲಿ ಗಣೇಶನ ಫೋಟೊ ತರಲು ಅಂಗಡಿಗೆ ತೆರಳಿದ್ದರು. ಗಣೇಶನ ಫೋಟೊದೊಂದಿಗೆ ಮನೆಗೆ ವಾಪಸಾದಾಗ ಅವರು ನೆಲೆಸಿದ್ದ ಕಟ್ಟಡವೇ ಧರಾಶಾಯಿಯಾಗಿತ್ತು. ಮಹಿಳೆಯು ಪತಿ ಹಾಗೂ ಮಾವನೊಂದಿಗೆ ಕಟ್ಟಡದಲ್ಲಿ ವಾಸವಾಗಿದ್ದು, ಪತಿ ಹಾಗೂ ಮಾವ ಕೆಲಸಕ್ಕೆ ತೆರಳಿದ್ದ ಕಾರಣ ಮನೆಯ ಯಾವೊಬ್ಬ ಸದಸ್ಯನಿಗೆ ಏನೂ ಆಗಿಲ್ಲ.

67ರ ಹರೆಯದ ಲಾಲ್‌ಚಂದ್ ರಾಮಚಂದಾನಿ ಅವರು ಕಟ್ಟಡ ಕುಸಿದು ಬೀಳುವ ಕೆಲವೇ ನಿಮಿಷದ ಮೊದಲು ಮನೆಯಿಂದ ಹೊರ ಹೋಗಿದ್ದರು. ಕಟ್ಟಡದಿಂದ 50 ಹೆಜ್ಜೆ ಇಟ್ಟಿದ್ದ ಲಾಲ್‌ಚಂದ್‌ಗೆ ಬಿಲ್ಡಿಂಗ್ ಗಿರ್‌ಗಯಾ(ಕಟ್ಟಡ ಬಿತ್ತು) ಎಂದು ಜನರು ಚೀರಾಡುತ್ತಿದ್ದ ಶಬ್ಬ ಕೇಳಿಸಿತು. ಅವರು ಹಿಂತಿರುಗಿ ನೋಡುವಷ್ಟರಲ್ಲಿ ಕಟ್ಟಡ ಕುಸಿದು ಬಿದ್ದಿದೆ. ನಾಲ್ಕನೆ ಅಂತಸ್ತಿನಲ್ಲಿ ವಾಸಿಸುತ್ತಿರುವ ಲಾಲ್‌ಚಂದ್‌ರ ಪತ್ನಿ ಗೀತಾ ಅವಶೇಷಗಳಡಿ ಪತ್ತೆಯಾಗಿದ್ದು, ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ತೆಗೆ ದಾಖಲಿಸಲಾಗಿದೆ.

 "ನನ್ನ ಪತ್ನಿಯ ಪರಿಸ್ಥಿತಿ ಗಂಭೀರವಾಗಿದೆ. ಕೆಳ ಅಂತಸ್ತಿನಲ್ಲಿ ವಾಸಿಸುತ್ತಿದ್ದವರು ಸತ್ತಿರಬಹುದು ಇಲ್ಲವೇ ಗಂಭೀರ ಗಾಯಗೊಂಡಿರಬಹುದು. ತಳ ಮಾಳಿಗೆಯಲ್ಲಿ ದುರಸ್ತಿ ಕಾರ್ಯ ಮಾಡುತ್ತಿದ್ದ ಶಿವಸೇನೆ ನಾಯಕ ಸುನೀಲ್ ಶಿತಾಪ್‌ರಿಂದ ಇಷ್ಟೇಲ್ಲಾ ದುರಂತ ನಡೆದಿದೆ. ನಾವು ಪದೇಪದೇ ಎಚ್ಚರಿಕೆ ನೀಡಿದರೂ ನಮ್ಮ ಮಾತನ್ನು ಆತ ಕಿವಿಗೆ ಹಾಕಿಕೊಳ್ಳಲಿಲ್ಲ'' ಎಂದು ಲಾಲ್‌ಚಂದ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News