ಕೋವಿಂದ್ ಮುಂದಿರುವ ಸವಾಲು

Update: 2017-07-27 04:06 GMT

14ನೆ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿ ರಾಮನಾಥ ಕೋವಿಂದ್ ಅವರು ಮಾಡಿರುವ ಭಾಷಣ, ಅವರ ಮುಂದಿನ ನಡೆ ಹೇಗಿರಬಹುದು ಎನ್ನುವುದರ ಸೂಚನೆಯನ್ನು ನೀಡಿದೆ. ದಲಿತ ಸಮುದಾಯದಿಂದ ಬಂದಿರುವ ಕೋವಿಂದ್, ತನ್ನ ಭಾಷಣದಲ್ಲಿ ಆರೆಸ್ಸೆಸ್‌ಗೆ ಸಲ್ಲಬೇಕಾದುದನ್ನು ಸಲ್ಲಿಸಿದ್ದಾರೆ. ತಾನು ರಾಷ್ಟ್ರಪತಿಯಾಗುವುದಕ್ಕೆ ಮುಖ್ಯ ಕಾರಣ ಆರೆಸ್ಸೆಸ್ ಎಂದು ಅವರು ನಂಬಿ, ತನ್ನ ಭಾಷಣವನ್ನು ಮಾಡಿದಂತಿದೆ. ಪರಿಣಾಮವಾಗಿಯೇ ಅವರು ಗಾಂಧಿಯ ಜೊತೆಜೊತೆಗೆ ದೀನ್ ದಯಾಳ್ ಉಪಾಧ್ಯಾಯ ಅವರನ್ನು ನೆನೆದಿದ್ದಾರೆ.

ಆದರೆ ಅವರನ್ನು ಇಂತಹದೊಂದು ಮಹತ್ತರವಾದ ಸ್ಥಾನಕ್ಕೇರಿಸಲು ಕಾರಣರಾಗಿರುವ ಅಂಬೇಡ್ಕರ್‌ರನ್ನು ತನ್ನ ಮಾತಿನಲ್ಲಿ ದೊಡ್ಡ ಧ್ವನಿಯಲ್ಲಿ ನೆನೆಯಲು ಮರೆತಿದ್ದಾರೆ. ದೀನ್ ದಯಾಳ್ ಉಪಾಧ್ಯಾಯ ಅವರ ಚಿಂತನೆ, ಈ ದೇಶದ ಸಂವಿಧಾನವನ್ನು ಮಾನ್ಯ ಮಾಡುವುದಿಲ್ಲ ಎನ್ನುವುದನ್ನು ಮರೆತಿದ್ದಾರೆ. ಗಾಂಧಿ ಒಂದು ದಾರಿಯಾದರೆ ದೀನ್ ದಯಾಳ್ ಇನ್ನೊಂದು ದಾರಿ. ಜನಸಂಘದ ಉದ್ದೇಶ ಹಿಂದುತ್ವದ ಹೆಸರಿನಲ್ಲಿ ದೇಶದಲ್ಲಿ ಮನುವಾದಿ ಸಂವಿಧಾನವನ್ನು ಸ್ಥಾಪಿಸುವುದು. ಹಾಗೆ ಸ್ಥಾಪಿಸಿದ್ದೇ ಆದರೆ ಕೋವಿಂದ್‌ರ ಸ್ಥಾನ ಎಲ್ಲಿರುತ್ತದೆ ಎನ್ನುವುದು ಅವರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ದಲಿತರು ಇಂದು ದೇಶದಲ್ಲಿ ರಾಜಕೀಯ ಶಕ್ತಿಯಾಗಿ ಮುಂದೆ ಬಂದಿದ್ದರೆ ಅದಕ್ಕೆ ಕಾರಣ ಅಂಬೇಡ್ಕರ್, ಕಾನ್ಶೀರಾಂರಂತಹ ನಾಯಕರ ತ್ಯಾಗ, ಬಲಿದಾನಗಳು.

ಆ ಶಕ್ತಿಗೆ ಮಣಿದು ಕೋವಿಂದ್‌ರನ್ನು ಇಂದು ಆರೆಸ್ಸೆಸ್ ರಾಷ್ಟ್ರಪತಿಯನ್ನಾಗಿಸಿದೆಯೇ ಹೊರತು, ದಲಿತರ ಮೇಲಿನ ಪ್ರೀತಿಯಿಂದಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಮನುವಾದಿ ಅಜೆಂಡಾಗಳನ್ನು ಜಾರಿಗೊಳಿಸಲು ಕೋವಿಂದ್‌ರ ಜಾತಿಯನ್ನು ಅದು ಗುರಾಣಿಯಾಗಿ ಮಾಡಿಕೊಳ್ಳಲಿದೆ. ಆದುದರಿಂದಲೇ ಈ ಸ್ಥಾನ ಕೋವಿಂದ್‌ರ ವೈಯಕ್ತಿಕ ಲಾಭವೇ ಹೊರತು ಅದರಿಂದ ಇಡೀ ದಲಿತ ಸಮುದಾಯದ ಹಿತಾಸಕ್ತಿಗೆ ಹಾನಿಯಾಗುವ ಸಾಧ್ಯತೆಯನ್ನು ನಾವು ಅಲ್ಲಗಳೆಯುವಂತಿಲ್ಲ. ನಾಳೆ ಕೋವಿಂದ್‌ರನ್ನೇ ಮುಂದಿಟ್ಟುಕೊಂಡು ದಲಿತರ ಮೀಸಲಾತಿಯ ವಿರುದ್ಧ ಆರೆಸ್ಸೆಸ್ ಸಂಚು ನಡೆಸಿದರೆ ಇಡೀ ದಲಿತ ಸಮುದಾಯ ಅದನ್ನು ಅಸಹಾಯಕವಾಗಿ ನೋಡಬೇಕಾದಂತಹ ಸನ್ನಿವೇಶ ನಿರ್ಮಾಣವಾಗಬಹುದು. ತನ್ನ ಭಾಷಣದಲ್ಲಿ ಜನಸಂಘದ ನಾಯಕ ದೀನ್ ದಯಾಳ್ ಅವರನ್ನು ಸ್ಮರಿಸುವ ಮೂಲಕ, ಅಂತಹದೊಂದು ಸಂಚಿಗೆ ಸುಲಭವಾಗಿ ಬಲಿಯಾಗುವ ಸೂಚನೆಯನ್ನು ಕೋವಿಂದ್ ನೀಡಿದ್ದಾರೆ.
 ವೈವಿಧ್ಯದಲ್ಲಿ ಏಕತೆಯನ್ನು ತಮ್ಮ ಭಾಷಣದಲ್ಲಿ ಕೋವಿಂದ್ ಪ್ರಸ್ತಾಪಿಸಿರುವುದು ಒಂದು ಆಶಾದಾಯಕ ಅಂಶವಾಗಿದೆ.

ಆದರೆ ಇದೇ ಸಂದರ್ಭದಲ್ಲಿ ದೇಶದಲ್ಲಿ ನಡೆಯುತ್ತಿರುವುದು ಅದಕ್ಕೆ ವ್ಯತಿರಿಕ್ತವಾದುದು ಎನ್ನುವುದು ಅವರ ಗಮನದಲ್ಲಿರಬೇಕಾಗಿದೆ. ಮುಖ್ಯವಾಗಿ ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆಯೊಳಗೆ ಹಸ್ತಕ್ಷೇಪ ಮಾಡಲು ಹೊರಟಿದೆ. ಹಿಂದಿ ಹೇರಿಕೆಯ ಮೂಲಕ ಪ್ರಾದೇಶಿಕ ವೈವಿಧ್ಯವನ್ನು ನಾಶ ಮಾಡಲು ಹೊರಟಿದೆ. ಉತ್ತರ ಭಾರತ-ದಕ್ಷಿಣ ಭಾರತ ಎಂಬ ಬಿರುಕು ಹೆಚ್ಚುತ್ತಿದೆ. ಬಿಜೆಪಿ ಮತ್ತು ಆರೆಸ್ಸೆಸ್ ಪ್ರತಿಪಾದಿಸುತ್ತಿರುವ ಹಿಂದುತ್ವ ರಾಷ್ಟ್ರೀಯತೆ, ಅಂತಿಮವಾಗಿ ದೇಶದ ಎಲ್ಲ ವೈವಿಧ್ಯಗಳನ್ನು ನಾಶ ಮಾಡುವ ಉದ್ದೇಶವನ್ನೇ ಹೊಂದಿದೆ. ಕೋವಿಂದ್ ಅವರು ಯಾವ ವೈವಿಧ್ಯವನ್ನು ಹಾಡಿ ಹೊಗಳಿದರೋ, ಅದು ಬರೇ ಮಾತಿಗಷ್ಟೇ ಸೀಮಿತವಾಗಿ ಉಳಿಯಬಾರದು.

ದೇಶದ ಬಹುತ್ವಕ್ಕೆ ಧಕ್ಕೆ ಬಂದಾಗ ಕೋವಿಂದ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ ಎನ್ನುವುದನ್ನು ದೇಶ ಕಾಯುತ್ತಿದೆ. ಈ ದೇಶವನ್ನು ಕಟ್ಟುವಲ್ಲಿ ದೀನ್ ದಯಾಳ್ ಉಪಾಧ್ಯಾಯ ಅವರ ಪಾತ್ರವೇನು ಎನ್ನುವುದನ್ನು, ವೈವಿಧ್ಯತೆಗೆ ಅವರ ಕೊಡುಗೆಯೇನು ಎನ್ನುವುದನ್ನೂ ಭಾಷಣದಲ್ಲಿ ಅವರು ಸ್ಪಷ್ಟಪಡಿಸಿದ್ದಿದ್ದರೆ ಜನರಿಗೆ ಅವರ ಮಾತು, ನಡೆ ಇನ್ನಷ್ಟು ಸ್ಪಷ್ಟವಾಗುತ್ತಿತ್ತೇನೋ. ತಮ್ಮ ಮಾತಿನ ಸಂದರ್ಭದಲ್ಲಿ ನೆಹರೂ ಅವರ ಹೆಸರನ್ನು ತಪ್ಪಿಯೂ ಉಲ್ಲೇಖಿಸಲಿಲ್ಲ. ಪ್ರಪ್ರಥಮ ಪ್ರಧಾನಿಯಾಗಿ ನೆಹರೂ ಅವರು ಈ ದೇಶವನ್ನು ಕಟ್ಟುವಲ್ಲಿ ವಹಿಸಿದ ಪಾತ್ರ ಅನನ್ಯವಾದುದು. ಛಿದ್ರವಾಗಿ ಬಿದ್ದಿದ್ದ ದೇಶವನ್ನು ಜಾತ್ಯತೀತತೆಯ ಒಂದೇ ತೆಕ್ಕೆಗೆ ತಂದು, ಅಭಿವೃದ್ಧಿಯ ಮಾರ್ಗದಲ್ಲಿ ಮುನ್ನಡೆಸಿದ ಅವರ ಕೊಡುಗೆಯನ್ನು ಸ್ಮರಿಸದೇ ಇರುವ ರಾಷ್ಟ್ರಪತಿಯವರ ಭಾಷಣ ಅಪೂರ್ಣವಾಗಿದೆ. ಅವರು ನೆಹರೂರವರ ಹೆಸರನ್ನು ಉದ್ದೇಶಪೂರ್ವಕವಾಗಿಯೇ ಬಿಟ್ಟಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಆ ಮೂಲಕ ರಾಷ್ಟ್ರಪತಿಯಾಗಿ ಯಾವುದೇ ಸಿದ್ಧಾಂತ, ಪಕ್ಷದ ಹೊರಗೆ ನಿಂತು ಕೆಲಸ ಮಾಡಬೇಕಾದ ಹೊಣೆಗಾರಿಕೆಯನ್ನು ಅವರು ಆರಂಭದಲ್ಲೇ ಮರೆತಂತಾಗಿದೆ.


  ಈ ದೇಶದ ವೈವಿಧ್ಯ ನಿಂತಿರುವುದು ಆರೆಸ್ಸೆಸ್‌ನ ನಾಯಕರಿಂದಲ್ಲ. ನೆಹರೂ, ಠಾಗೋರ್‌ರಂತಹ ಮಹಾನ್ ಚಿಂತಕರ ದೆಸೆಯಿಂದ ಭಾರತ ಇಂದು ವಿಶ್ವದಲ್ಲೇ ಮಹಾನ್ ದೇಶವಾಗಿ ಮೂಡಿ ಬಂದಿದೆ. ಆದರೆ ದುರದೃಷ್ಟವಶಾತ್ ಇಂದು ನೆಹರೂ, ಠಾಗೋರ್, ಗಾಂಧಿಯ ಚಿಂತನೆಗಳನ್ನು ವ್ಯವಸ್ಥಿತವಾಗಿ ಅಳಿಸುವ ಪ್ರಯತ್ನವೊಂದು ನಡೆಯುತ್ತಿದೆ. ಅದರ ಭಾಗವಾಗಿಯೇ ಪಠ್ಯ ಪುಸ್ತಕಗಳು ವಿರೂಪಗೊಳ್ಳುತ್ತವೆ. ಅರ್ಹರು ಪಠ್ಯ ಪುಸ್ತಕಗಳಿಂದ ಕಾಣೆಯಾಗಿ ಆ ಜಾಗದಲ್ಲಿ ಅಪಾತ್ರರು ಬಂದು ಕೂರುತ್ತಿದ್ದಾರೆ.

ಆರೆಸ್ಸೆಸ್ ನಾಯಕರೊಬ್ಬರು ಈ ಕುರಿತಂತೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ‘ಪಠ್ಯ ಪುಸ್ತಕದಲ್ಲಿದ್ದ ಠಾಗೋರ್ ಚಿಂತನೆಗಳನ್ನು ಅಳಿಸಬೇಕು, ಉರ್ದು ಭಾಷೆಯ ಕುರಿತ ಪದವನ್ನು ತೆಗೆದು ಹಾಕಬೇಕು’ ಎಂದು ಅವರು ಕರೆ ಕೊಟ್ಟಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಈ ದೇಶಕ್ಕೆ ನೊಬೆಲ್ ಬಹುಮಾನ ತಂದುಕೊಟ್ಟ ಮಹಾನ್ ಕವಿ ರವೀಂದ್ರ ನಾಥ ಠಾಗೋರ್. ಅವರ ವಿಶ್ವಮಾನವ ತತ್ವ, ಆರೆಸ್ಸೆಸ್‌ನ ಹಿಂದುತ್ವ ರಾಷ್ಟ್ರೀಯತೆಯ ತತ್ವಕ್ಕೆ ವಿರುದ್ಧವಾದುದು. ಆದುದರಿಂದಲೇ ಆರೆಸ್ಸೆಸ್ ನಾಯಕರಿಗೆ ಠಾಗೋರ್‌ರ ಚಿಂತನೆಗಳು ಗಂಟಲ ಮುಳ್ಳಾಗಿವೆ. ಉರ್ದು ಈ ದೇಶದ ಸಾಹಿತ್ಯ ಜಗತ್ತಿಗೆ ಕೊಟ್ಟಿರುವ ಕೊಡುಗೆಯನ್ನು ಅಳಿಸಿ ಹಾಕುವುದು ಅಷ್ಟು ಸುಲಭ ಸಂಗತಿಯಲ್ಲ.

ದೇಶದ ಇತಿಹಾಸ, ವರ್ತಮಾನದಲ್ಲಿ ಅವಿನಾಭಾವವಾಗಿ ಬೆಸೆದಿರುವ ಉರ್ದುವನ್ನು ಪಠ್ಯಗಳಿಂದ ಅಳಿಸುವುದೆಂದರೆ, ವೈವಿಧ್ಯತೆಯನ್ನು ಅಳಿಸುವುದೆಂದೇ ಅರ್ಥ. ಇದೇ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗಾಂಧೀಜಿ, ನೆಹರೂ ಅವರ ಹೆಸರುಗಳನ್ನೇ ಕಿತ್ತು ಹಾಕುವ ಪ್ರಯತ್ನ ನಡೆಯುತ್ತಿದೆ. ಸರಿ, ಆ ಜಾಗದಲ್ಲಿ ಯಾವ ಹೆಸರನ್ನು ತುರುಕಿಸುತ್ತಾರೆ? ಮಹಿಳೆಗೆ ಇಂಗ್ಲಿಷ್ ಶಿಕ್ಷಣವನ್ನು ನೀಡಿದರೆ ಸಮಾಜಕ್ಕೆ ಅಪಾಯ, ಮಹಿಳೆ ಶಿಕ್ಷಣ ಪಡೆಯಬಾರದು ಎಂದು ಪ್ರತಿಪಾದಿಸಿದ ಬಾಲಗಂಗಾಧರ ತಿಲಕರ ಹೆಸರನ್ನು ಅಲ್ಲಿ ಜೋಡಿಸಲಾಗುತ್ತದೆ. ಬ್ರಿಟಿಷರಿಗೆ ಶರಣಾಗತರಾಗಿದ್ದ ವಿನಾಯಕ ದಾಮೋದರ ಸಾವರ್ಕರ್, ಸ್ವಾತಂತ್ರ ಹೋರಾಟದಲ್ಲಿ ಯಾವತ್ತೂ ಭಾಗವಹಿಸದ ಆರೆಸ್ಸೆಸ್ ನಾಯಕರ ಹೆಸರುಗಳನ್ನು, ವಿಜ್ಞಾನದ ಹೆಸರಲ್ಲಿ ಜ್ಯೋತಿಷಿಗಳನ್ನೂ, ಪುರಾಣ ಕಟ್ಟುಕತೆಗಳನ್ನು ಮಕ್ಕಳಿಗೆ ಬೋಧಿಸಿದರೆ ಆ ಮೂಲಕ ನಿರ್ಮಾಣವಾಗುವ ಭಾರತದ ಭವಿಷ್ಯ ಎಷ್ಟು ಭೀಕರವಾಗಿರುತ್ತದೆ ಎನ್ನುವ ಅರಿವು ರಾಷ್ಟ್ರಪತಿಗೆ ಇರಬೇಕಾಗುತ್ತದೆ.


ಮುಂದಿನ ದಿನಗಳಲ್ಲಿ ಈ ದೇಶದ ಸಂವಿಧಾನ, ಪ್ರಜಾಸತ್ತೆ ಭಯಾನಕವಾದ ಅಗ್ನಿ ಪರೀಕ್ಷೆಗೆ ಒಳಗಾಗಲಿದೆ. ಇಂತಹ ಸಂದರ್ಭದಲ್ಲಿ, ಆ ಸವಾಲನ್ನು ಎದುರಿಸಿ ದೇಶದ ವೈವಿಧ್ಯ, ಜಾತ್ಯತೀತತೆಯನ್ನು ಕಾಯುವಂತಹ ರಾಷ್ಟ್ರಪತಿ ನಮಗೆ ಬೇಕಾಗಿದೆ. ಕೋವಿಂದ್ ನಿಧಾನಕ್ಕಾದರೂ ತನ್ನ ಮುಂದಿರುವ ಸವಾಲನ್ನು ಅರ್ಥಮಾಡಿಕೊಂಡು, ಆರೆಸ್ಸೆಸ್ ಹಿತಾಸಕ್ತಿಯನ್ನು ಬದಿಗಿಟ್ಟು ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡುವಂತಾಗಲಿ ಎನ್ನುವುದು ಪ್ರಜಾಸತ್ತೆಯ ಮೇಲೆ ನಂಬಿಕೆ ಇಟ್ಟಿರುವ ಎಲ್ಲರ ಆಶಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News