ರಾಜಧಾನಿಯಲ್ಲಿ ಪ್ರತಿದಿನ ಕ್ಷಯದಿಂದ ಸಾಯುವವರೆಷ್ಟು ಗೊತ್ತೇ?

Update: 2017-07-27 04:28 GMT

ಹೊಸದಿಲ್ಲಿ, ಜು. 27: ರಾಷ್ಟ್ರ ರಾಜಧಾನಿಯಲ್ಲಿ ಕ್ಷಯರೋಗವು ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದ್ದು, ಪ್ರತಿದಿನ 10 ಮಂದಿ ಕ್ಷಯದಿಂದಾಗಿ ಸಾಯುತ್ತಿದ್ದಾರೆ. ಈ ಪೈಕಿ ಶೇಕಡ 47ರಷ್ಟು ಮಂದಿ 15 ರಿಂದ 47 ವರ್ಷದವರು ಎನ್ನುವುದು ಇನ್ನೂ ಆತಂಕಕಾರಿ ವಿಚಾರ.

2014 ಮತ್ತು 2015ರಲ್ಲಿ ದೆಹಲಿಯಲ್ಲಿ ಕ್ಷಯದಿಂದ ಮೃತಪಟ್ಟಿರುವ ಸರಾಸರಿ ಸಂಖ್ಯೆಯನ್ನು ವಿಶ್ಲೇಷಿಸಿದ ಪ್ರಜ್ಞಾ ಫೌಂಡೇಷನ್ ಎಂಬ ಸ್ವಯಂಸೇವಾ ಸಂಸ್ಥೆ ಈ ಅಂಕಿ ಅಂಶಗಳನ್ನು ಪ್ರಕಟಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಯುವ ಕ್ಷಯರೋಗಿಗಳ ಅಂಕಿ ಅಂಶವನ್ನು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಈ ಎನ್‌ಜಿಒ ಪಡೆದಿತ್ತು.

"ವಾಸ್ತವವಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಏಕೆಂದರೆ ಈಗ ದೊರಕಿರುವುದು ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಆಗಿರುವ ಸಾವಿನ ಅಂಕಿ ಅಂಶ ಮಾತ್ರ. ಶೇಕಡ 60ರಷ್ಟು ಸಾವುಗಳು ಮಾತ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಆಗುತ್ತಿವೆ. ಕೇಂದ್ರ ಸರ್ಕಾರ ನಿರ್ವಹಿಸುತ್ತಿರುವ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಸಾವಿನ ಸಂಖ್ಯೆಯನ್ನೂ ಸೇರಿಸಿದರೆ ಈ ಪ್ರಮಾಣ ಮತ್ತಷ್ಟು ಹೆಚ್ಚಬಹುದು" ಎಂದು ಯೋಜನಾ ನಿರ್ದೇಶಕ ಮಿಲಿಂದ್ ಮಾಕ್ಸೆ ಹೇಳಿದ್ದಾರೆ.

ಉತ್ತರ ಮಹಾನಗರ ಪಾಲಿಕೆಯ ರೋಹಿಣಿ ವಲಯದಲ್ಲೇ ಶೇಕಡ 33ರಷ್ಟು ಸಾವು ಸಂಭವಿಸುತ್ತಿದೆ ಎಂದು ವಿವರಿಸಿದ್ದಾರೆ. ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಶೇಕಡ 11 ಹಾಗೂ ಕರೋಲ್‌ಭಾಗ್‌ನಲ್ಲಿ ಶೇಕಡ 8ರಷ್ಟು ಕ್ಷಯರೋಗದಿಂದ ಸಾವು ಸಂಭವಿಸುತ್ತಿದೆ.

ದೆಹಲಿಯಲ್ಲಿ 2014ರಲ್ಲಿ 73,096, 2015ರಲ್ಲಿ 83,028 ಹಾಗೂ 2016ರಲ್ಲಿ 68,169 ಕ್ಷಯರೋಗ ಪ್ರಕರಣಗಳು ವರದಿಯಾಗಿವೆ.

2014 ಮತ್ತು 2015ರಲ್ಲಿ ಕ್ರಮವಾಗಿ 4,350 ಹಾಗೂ 3,635 ಮಂದಿ ಕ್ಷಯದಿಂದ ಮೃತಪಟ್ಟಿದ್ದಾರೆ. 2016ರ ಸಾವಿನ ಸಂಖ್ಯೆ ಲಭ್ಯವಾಗಿಲ್ಲ ಎಂದು ಎನ್‌ಜಿಒ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News