ಮಾಜಿ ಸಿಎಂ ಧರಂ ಸಿಂಗ್ ವಿಧಿವಶ

Update: 2017-07-27 13:17 GMT

ಬೆಂಗಳೂರು, ಜು.27: ರಾಜ್ಯದ ಮಾಜಿ ಮುಖ್ಯಮಂತ್ರಿ ಎನ್. ಧರಂ ಸಿಂಗ್ (81) ಹೃದಯಾಘಾತದಿಂದ ಗುರುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಧರಂ ಸಿಂಗ್ ಕೆಲ ದಿನಗಳ ಹಿಂದಷ್ಟೇ ನಗರದ ವಿಕ್ರಮ್‌ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರ ಆರೋಗ್ಯ ಸ್ಥಿತಿ ಸುಧಾರಿಸಿತ್ತು. ಆದರೆ ಮತ್ತೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುರುವಾರ ಮೃತಪಟ್ಟಿದ್ದಾರೆ.

1936ರ ಡಿಸೆಂಬರ್ 25ರಂದು ಜನಿಸಿದ ಧರಂ ಸಿಂಗ್, 2004ರಿಂದ 2006ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 

1936, ಡಿ.25ರಂದು ಜೀವರ್ಗಿ ತಾಲೂಕಿನ ನೆಲೋಗಿಯಲ್ಲಿ ಜನಿಸಿದ್ದ ಧರಂ ಸಿಂಗ್ 1972ರಿಂದ 2004ರ  ತನಕ  ಸತತ 8 ಬಾರಿ ಶಾಸಕರಾಗಿದ್ದರು.. 1980ರಲ್ಲಿ ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ್ದರು. 2009ರಲ್ಲಿ ಬೀದರ್ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು 2013ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ,2006-07ರ ತನಕ ಕರ್ನಾಟಕ ವಿಧಾನಸಭೆಯ ವಿಪಕ್ಷ ನಾಯಕರಾಗಿ ಸೇವೆ ಸಲ್ಲಿಸಿದ್ದರು.

ಮೇ 28, 2004ರಿಂದ  ಫೆ.3, 2006ರ ತನಕ ಕಾಂಗ್ರೆಸ್ &ಜೆಡಿಎಸ್ ಮೈತ್ರಿಕೂಟದ ಸರಕಾರದಲ್ಲಿ ಮುಖ್ಯ ಮಂತ್ರಿಯಾಗಿದ್ದರು. ಧರಂಸಿಂಗ್ ಅವರು   ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದ ದೇವರಾಜ್ ಅರಸ್, ಆರ್.ಗುಂಡೂರಾವ್, ಎಸ್.ಬಂಗಾರಪ್ಪ,  ಎಂ.ವೀರಪ್ಪ ಮೊಯ್ಲಿ ಮತ್ತು ಎಂಎಸ್ ಕೃಷ್ಣ  ಸರಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ನಾಳೆ ಕಲಬುರುಗಿಯಲ್ಲಿ  ಸಕಲ ಸರಕಾರಿ ಗೌರವದೊಂದಿಗೆ ಮೃತದೇಹದ ಅಂತ್ಯಕ್ರಿಯೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News