ಅಮೆರಿಕಾ ಮಿಲಿಟರಿಯಲ್ಲಿ ಇನ್ನು ಲೈಂಗಿಕ ಅಲ್ಪಸಂಖ್ಯಾತರಿಗಿಲ್ಲ ಯಾವುದೇ ಸ್ಥಾನ

Update: 2017-07-27 07:36 GMT

ವಾಷಿಂಗ್ಟನ್ ,ಜು.27: ಅಮೆರಿಕಾದ ಮಿಲಿಟರಿ ಸೇವೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ನಿಷೇಧ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಘೋಷಿಸಿದ್ದಾರೆ. ಅವರ ಈ ನಿರ್ಧಾರ ಅವರ ಪಕ್ಷದ ಕೆಲವರಿಗೆ ಸಂತಸ ತಂದಿರಬಹುದಾದರೂ ಈಗಾಗಲೇ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.

ಸಲಿಂಗಿಗಳ, ತೃತೀಯ ಲಿಂಗಿಗಳ  ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುವುದಾಗಿ ಅಧ್ಯಕ್ಷೀಯ ಹುದ್ದೆಗೆ ಪೈಪೋಟಿಯಲ್ಲಿದ್ದಾಗ ಟ್ರಂಪ್  ಹೇಳಿರುವಾಗ ಅವರ ಬುಧವಾರದ ಹೇಳಿಕೆ ಸಾಕಷ್ಟು ಆಶ್ಚರ್ಯ ಹುಟ್ಟಿಸಿದೆಯಲ್ಲದೆ ನಾಗರಿಕ ಹಕ್ಕು ಹೋರಾಟ ಕಾರ್ಯಕರ್ತರಿಂದ ಟೀಕೆಗಳಿಗೂ ಗುರಿಯಾಗಿದೆ.

ಆದರೆ ಈಗಾಗಲೇ ಮಿಲಿಟರಿ ಸೇವೆಯಲ್ಲಿರುವ  ತೃತೀಯ ಲಿಂಗಿಗಳನ್ನು ಕೆಲಸದಿಂದ ತೆಗೆದು  ಹಾಕಲಾಗುವುದೇ ಎಂಬ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಟ್ರಂಪ್ ಅವರ ವಕ್ತಾರೆ ಸಾರಾ ಸ್ಯಾಂಡರ್ಸ್ ಬುಧವಾರ ಹೇಳಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತರನ್ನು ಮಿಲಿಟರಿ ಸೇವೆಗಳಿಂದ ಹೊರಗಿಡುವ ಮೂಲಕ ಟ್ರಂಪ್ ಅವರು ಹಿಂದಿನ ಒಬಾಮ ಆಡಳಿತದ ನೀತಿಯ ವಿರುದ್ಧ ಹೋಗಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರನ್ನು ಮಿಲಿಟರಿಯ ಯಾವುದೇ ಹುದ್ದೆಗೆ ಸೇರಿಸಲಾಗುವುದಿಲ್ಲ. ಅವರಿಂದಾಗಿ ಉಂಟಾಗುವ ವೈದ್ಯಕೀಯ ವೆಚ್ಚಗಳನ್ನು  ಭರಿಸಲೂ ಸರಕಾರ ಸಿದ್ಧವಿಲ್ಲ, ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ತಮ್ಮ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಬಹಳಷ್ಟು ಚರ್ಚೆ ಬಳಿಕ ಟ್ರಂಪ್ ಈ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ.

ಆದರೆ ಲೈಂಗಿಕ ಅಲ್ಪಸಂಖ್ಯಾತ ಸಿಬ್ಬಂದಿಯ ವೈದ್ಯಕೀಯ ವೆಚ್ಚಗಳು ತೀರಾ ಅಲ್ಪ ಎಂದು  ಟ್ರಂಪ್ ಅವರ ಟೀಕಾಕಾರರು ವಾದಿಸುತ್ತಿದ್ದಾರೆ.

ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಈ ವರ್ಷದ ಫೆಬ್ರವರಿಯಲ್ಲಿ ಅವರು ಲೈಂಗಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸುರಕ್ಷತೆಗೆ  ಒಬಾಮ ಆಡಳಿತ ಕೈಗೊಂಡಿದ್ದ ಕೆಲ ಕ್ರಮಗಳನ್ನು ಹಿಂದೆಗೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News